ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಕರ್ನಾಟಕ ತಂಡದ ಆಯ್ಕೆ

ವಿಶೇಷ ವರದಿ
Last Updated 11 ಜನವರಿ 2017, 5:40 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದಲ್ಲಿ ಇದೇ 13ರಿಂದ ಆರಂಭಗೊಳ್ಳುವ 43ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್‌ ಟೂರ್ನಿಗೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಈ ಟೂರ್ನಿಗೆ ಕರ್ನಾಟಕ ತಂಡವನ್ನು ಬುಧವಾರ ನಗರದಲ್ಲಿ ಆಯ್ಕೆ ಮಾಡಲಾಗುತ್ತಿದೆ.

ವಾಲಿಬಾಲ್ ಫೆಡರೇಷನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಂದಕುಮಾರ್, ರಾಜ್ಯ ವಾಲಿಬಾಲ್ ಫೆಡರೇಷನ್ ಮುಖ್ಯಸ್ಥರು, ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳು ನಗರದ ಹಳೆ ಮಾಧ್ಯಮಿಕ ಶಾಲೆ ಮೈದಾನದಲ್ಲಿ ಸೇರಲಿದ್ದಾರೆ. ಇದೇ ವೇಳೆ ಅಂತಿಮವಾಗಿ ತಂಡವನ್ನು ಆಯ್ಕೆ ಮಾಡಲಾಗುವುದು’ ಎಂದು ಟೂರ್ನಿಯ ಸಂಚಾಲಕ ಮಹೀಬುಲ್ಲ ‘ಪ್ರಜಾವಾಣಿ’ಗೆ ತಿಳಿಸಿದರು.

48 ತಂಡಗಳ ನೋಂದಣಿ: 24 ರಾಜ್ಯಗಳ ಒಟ್ಟು 48 ಬಾಲಕ ಮತ್ತು ಬಾಲಕಿಯರ ತಂಡಗಳು ನೋಂದಣಿ ಮಾಡಿಕೊಂಡಿವೆ. 13ರ ಸಂಜೆ ಟೂರ್ನಿ ಉದ್ಘಾಟನೆಗೊಳ್ಳಲಿದೆ.
ಅಂದು ಮಾತ್ರ ಸಂಜೆ ಪಂದ್ಯಗಳು ನಡೆಯಲಿವೆ. ಉಳಿದಂತೆ ಬೆಳಿಗ್ಗೆ 8ರಿಂದ 11 ಹಾಗೂ ಸಂಜೆ 4ರಿಂದ ರಾತ್ರಿ 11ರವರೆಗೆ ಪಂದ್ಯಗಳು ನಡೆಯಲಿವೆ. ರೌಂಡ್‌ ರಾಬಿನ್ ಲೀಗ್‌, ನಾಕ್‌ಔಟ್‌, ಕ್ವಾರ್ಟರ್ ಫೈನಲ್, ಸೆಮಿಫೈನಲ್, ಫೈನಲ್ ಸೇರಿದ ಒಟ್ಟು 108 ಪಂದ್ಯಗಳು ನಡೆಯಲಿವೆ.

ಟೂರ್ನಿ ನಡೆಯುವ ಹಳೆ ಮಾಧ್ಯಮಿಕ ಶಾಲಾ ಮೈದಾನವನ್ನು ನವ ವಧುವಿನಂತೆ ಅಲಂಕರಿಸಲಾಗುತ್ತಿದೆ. ಮೈದಾನದ ಸುತ್ತಲಿನ ಗೋಡೆಗಳ ಮೇಲೆ ಕಲಾವಿದರು ಟೂರ್ನಿಯ ಶೀರ್ಷಿಕೆ ಬರೆಯುತ್ತಿದ್ದಾರೆ.

ಏಕಕಾಲಕ್ಕೆ ನಾಲ್ಕು ಪಂದ್ಯಗಳು ನಡೆಯುವಂತೆ, ಮೈದಾನದಲ್ಲಿ ವಿಶಾಲ ವಾದ ನಾಲ್ಕು ಅಂಕಣಗಳನ್ನು ನಿರ್ಮಿ ಸಲಾಗಿದೆ. ಇದರ ನಡುವೆ ಹೊನಲು ಬೆಳಕು ಪಸರಿಸುವ ಸೋಡಿಯಂ ವೇಪರ್ ದೀಪಗಳ ಅಳವಡಿಕೆಗೆ ಗುಜ್ಜುಗಳನ್ನು ನಡೆಲಾಗುತ್ತಿದೆ. ಸುಸಜ್ಜಿತ ನೆಲ ಹಾಸಿಗಾಗಿ ಚಿಕ್ಕಪುರ ಕೆರೆಯ ಮಣ್ಣನ್ನು ಹೊದೆಸಲಾಗಿದೆ.

15 ಸಾವಿರ ಪ್ರೇಕ್ಷಕರ ನಿರೀಕ್ಷೆ: ಪ್ರತಿ ಅಂಕಣದ ಸುತ್ತಲೂ ಪ್ರೇಕ್ಷಕರಿಗೆ ಆಸನದ ವ್ಯವಸ್ಥೆ ಇದೆ. ಪ್ರತಿ ಅಂಕಣದಲ್ಲಿ ಎರಡೂವರೆ ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡ ಲಾಗಿದೆ. 320 ಅಡಿ ಸುತ್ತಳತೆಯ ಗ್ಯಾಲರಿಯಲ್ಲಿ ಅಂದಾಜು 10 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಬಹುದು.

  ಪ್ರತಿ ಅಂಕಣಕ್ಕೆ ಎಂಟು ಹೈಮಾಸ್ಟ್‌ ದೀಪಗಳನ್ನು ಹಾಕಲಾಗುತ್ತಿದೆ. ಒಟ್ಟು 80 ದೀಪಗಳು ಅಂಕಣಗಳನ್ನು ಬೆಳಗಲಿವೆ. ಕೊನೆ ದಿನ ಗಾಯಕ ಕುಮಾರ್‌ ಸಾನು:  ಪಂದ್ಯಾವಳಿಯ ನಡುವೆ ಒಂದೂವರೆ ಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುತ್ತಿದೆ.

  ಆರು ದಿನಗಳ ಕಾಲ ನಿತ್ಯ ಸಂಜೆ 6ರಿಂದ 7.30ವರೆಗೆ ಸ್ಥಳೀಯ ಕಲಾವಿದರು ಮತ್ತು ಜಿಲ್ಲೆಯ ಹೊರಗಿನ ಕಲಾವಿದರಿಂದ ವೈವಿಧ್ಯಮಯ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿವೆ. 19ರಂದು ಅಂತಿಮ ಪಂದ್ಯ ನಡೆಯಲಿದ್ದು, ಅಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಖ್ಯಾತ ಗಾಯಕ ಕುಮಾರ್ ಸಾನು ಅವರ ತಂಡ ಸಂಗೀತ ರಸ ಸಂಜೆ ನಡೆಸಿಕೊಡಲಿದೆ.

ಸುಸಜ್ಜಿತ ವಸತಿ ವ್ಯವಸ್ಥೆ: ಟೂರ್ನಿಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳ ವಾಸ್ತವ್ಯಕ್ಕಾಗಿ ಎರಡು ಹೊಸ ಸರ್ಕಾರಿ ವಸತಿ ನಿಲಯಗಳನ್ನು ಸಜ್ಜುಗೊಳಿಸಲಾ­ಗಿದೆ. ಈ ಟೂರ್ನಿಗಾಗಿಯೇ ನಿರ್ಮಾಣ ಮಾಡಿದ ಕಟ್ಟಡಗಳಂತೆ ಕಾಣುತ್ತಿವೆ. ಉಳಿದಂತೆ ಪಂದ್ಯದ ರೆಫರಿಗಳು, ಫೆಡರೇಷನ್‌ ಮುಖ್ಯಸ್ಥರು ಹಾಗೂ ಗಣ್ಯರಿಗೆ ನಗರದ ವಿವಿಧ ಹೋಟೆಲ್‌ಗಳನ್ನು ಕಾಯ್ದಿರಿಸಲಾಗಿದೆ. ಹೀಗಾಗಿ ಟೂರ್ನಿ ನಡೆಯುವ ಆರು ದಿನಗಳ ಕಾಲ ನಗರದ ಎಲ್ಲ ಹೋಟೆಲ್– ಲಾಡ್ಜ್‌ಗಳು ಭರ್ತಿಯಾಗಿರಲಿವೆ.

ಚಿತ್ರದುರ್ಗ ದೇಸಿ ಕ್ರೀಡೆಗಳನ್ನು ಪೋಷಿಸುವ ನಾಡು ಇಲ್ಲಿ ವಾಲಿಬಾಲ್‌, ಕಬಡ್ಡಿ, ಕುಸ್ತಿಯಂತಹ ಪಂದ್ಯಾವಳಿಗಳಿಗೆ ಬಹುದೊಡ್ಡ ಇತಿಹಾಸವಿದೆ. ಈ ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿನಲ್ಲೂ ಅನುಭವಿ ವಾಲಿಬಾಲ್‌ ಪಟುಗಳಿದ್ದಾರೆ. ಹೀಗಾಗಿ ಟೂರ್ನಿಗೆ ಪ್ರೇಕ್ಷಕರು ಉತ್ತಮವಾಗಿ ಸ್ಪಂದಿಸಲಿದ್ದಾರೆ’ ಎಂದು ಮಹೀಬುಲ್ಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT