ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿಗೆ ಬೆಂಬಲ ಬೆಲೆಗೆ ಒತ್ತಾಯ

ಅನುಮತಿ ಇಲ್ಲದೆ ಬೀದಿಗಿಳಿದು ರಸ್ತೆ ತಡೆ: ಪೊಲೀಸರೊಂದಿಗೆ ವಾಗ್ವಾದ
Last Updated 11 ಜನವರಿ 2017, 5:56 IST
ಅಕ್ಷರ ಗಾತ್ರ

ಚಿತ್ತಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೊಗರಿಗೆ ₹7,500 ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ತೊಗರಿ ಬೆಳೆಗಾರರ ಹೋರಾಟ ಸಮಿತಿ, ಆಲ್‌ ಇಂಡಿಯಾ ಕಿಸಾನ್‌ ಸಭಾ, ಹಸಿರು ಸೇನೆ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ರೈತರು, ತೊಗರಿ ಬೆಳೆಗಾರರು ಪಟ್ಟಣದ ಲಾಡ್ಜಿಂಗ್‌ ಕ್ರಾಸ್‌ನಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟನೆ ಮಾಡಿದರು.

ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ, ‘ದೇಶಕ್ಕೆ ಅನ್ನ ನೀಡುವ ರೈತರ ಬಗ್ಗೆ ಕಾಳಜಿ ವಹಿಸು­ವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿವೆ. ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಸರ್ಕಾರಗಳ ರೈತ ವಿರೋಧಿ ನೀತಿಯಿಂದ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಪಾತಾಳಕ್ಕೆ ಕುಸಿದು ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ತೊಗರಿ ಜತೆಗೆ ಹೆಸರು, ಉದ್ದು ಸೇರಿಸಿ ಕೆಎಂಎಫ್ ಮಾದರಿಯಲ್ಲಿ ತೊಗರಿ ಮಂಡಳಿ ಪುನರ್ ಸಂಘಟಿಸಿ ಬಲಪಡಿಸಬೇಕು. ರೈತರಿಗೆ ಅನುಕೂಲ ಆಗುವಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೊಗರಿ ಖರೀದಿ ಕೇಂದ್ರ ತೆರೆಯಬೇಕು. ನೆರೆ ಹಾವಳಿಯಿಂದ ಹಾನಿಯಾದ ರೈತರ ಬೆಳೆಗೆ ಪ್ರತಿ ಎಕರೆಗೆ ₹15 ಸಾವಿರ ಪರಿಹಾದ ಧನ ನೀಡಬೇಕು. ರೈತರ ಸಹಕಾರಿ ಹಾಗೂ ಬ್ಯಾಂಕ್ ಸಾಲ ಮನ್ನಾ ಮಾಡಬೇಕು. ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಬೇಳೆ ಕಾಳುಗಳ ಮೇಲೆ ಶೇ 30ರಷ್ಟು ಆಮದು ಶುಲ್ಕ ವಿಧಿಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತೊಗರಿ ಬೆಳೆ­ಗಾರರ ಹೋರಾಟ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಪೋಲಿಸ್ ಪಾಟೀಲ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಶೋಕ ಮ್ಯಾಗೇರಿ, ರಮೇಶ ಬಮ್ಮ ನಳ್ಳಿ, ಬಾಬಾಸೇಠ್‌, ಶಿವಶರಣರೆಡ್ಡಿ ಬಂಕಲಗಾ, ಸತೀಶ ಕಾಂತಾ, ಅನೀಲಕುಮಾರ ವಡ್ಡಡಗಿ, ವೀರುಗೌಡ ಪಾಟೀಲ್, ಮಲ್ಲಿಕಾರ್ಜುನ ಅಳ್ಳೋಳ್ಳಿ, ಸಿದ್ರಾಮಪ್ಪ ರೇಷ್ಮಿ, ಸಿದ್ರಾಮ ಬೋವಿ, ಹಮಾಲರ ಸಂಘದ ಅಧ್ಯಕ್ಷ ಯಲ್ಲಪ್ಪ ಕಾಶಿ, ಅಂಬರೀಶ ಸುಲೇಗಾಂವ ಇದ್ದರು.

ರಸ್ತೆ ತಡೆಯಿಂದ ಸಂಚಾರ ಸ್ಥಗಿತ: ತೊಗರಿಗೆ ಬೆಂಬಲ ನೀಡುವಂತೆ ಆಗ್ರಹಿಸಿ ದಿಢೀರ್‌ ಪ್ರತಿಭಟನೆ ನಡೆಸಿದ್ದರಿಂದ ಲಾಡ್ಜಿಂಗ್‌ ಕ್ರಾಸ್‌ನಲ್ಲಿ 40 ನಿಮಿಷಗಳವರೆಗೆ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ನೂರಾರು ವಾಹನಗಳು ಸಾಲಾಗಿ ನಿಂತಿದ್ದವು. ಅನುಮತಿ ಇಲ್ಲದೆ ರಸ್ತೆ ತಡೆ ನಡೆಸುತ್ತಿದ್ದರಿಂದ ಪೊಲೀಸರು ರಸ್ತೆ ತಡೆ ನಡೆಸದಂತೆ ತಡೆಯಲು ಮುಂದಾದಾಗ ಮಾತಿನ ವಾಗ್ವಾದ ನಡೆಯಿತು. ನಂತರ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಪ್ರತಿಭಟನೆ ಮುಂದುವರೆಸಲಾಯಿತು. ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬರೆದ ಮನವಿ ಪತ್ರವನ್ನು ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಮಲ್ಲೇಶಾ ತಂಗಾ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT