ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು ಹೆಚ್ಚಿದ ವಾಯುಮಾಲಿನ್ಯ; ಆತಂಕ

Last Updated 11 ಜನವರಿ 2017, 6:09 IST
ಅಕ್ಷರ ಗಾತ್ರ

ಸಿಂಧನೂರು: ವರ್ಷಗಳು ಉರುಳಿದಂತೆ ಸಿಂಧನೂರು ನಗರದ ಜನಸಂಖ್ಯೆಯು ಬೆಳೆಯುತ್ತಿದೆ. ಅದರಂತೆ ವಾಯುವಾಲಿನ್ಯವು ಸಹ ಜನಸಂಖ್ಯೆಯನ್ನೆ ಹಿಂಬಾಲಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.

1991ರ ಜನಗಣತಿ ಪ್ರಕಾರ ನಗರ ಪ್ರದೇಶದಲ್ಲಿ 49,000 ಇದ್ದ ಜನಸಂಖ್ಯೆ 2001ಕ್ಕೆ 61,262ಕ್ಕೆ ಏರಿತು. ನಂತರ 2011ರ ಜನಗಣತಿ ಹೊತ್ತಿಗೆ 75,837ಕ್ಕೆ ಹೆಚ್ಚಳವಾಯಿತು. ಪ್ರಸ್ತುತ ಜನಸಂಖ್ಯೆಯು ಅಂದಾಜು 80 ಸಾವಿರ ದಾಟಿದೆ. ಅಲ್ಲದೆ ಪ್ರತಿನಿತ್ಯ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದು ಹೋಗುವವರ ಸಂಖ್ಯೆ ಐದು ಸಾವಿರವಿದೆ. ಇದಲ್ಲದೆ ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದ್ದು, ಪ್ರತಿನಿತ್ಯ ನೂರಾರು ದೊಡ್ಡ ಪ್ರಮಾಣ ವಾಹನಗಳು ನಗರದ ಮೂಲಕವೇ ಸಂಚರಿಸುತ್ತವೆ.

ಅವುಗಳಿಂದ ಹೊರಬರುವ ಇಂಗಾಲದ ಡೈ ಆಕ್ಸೈಡ್ ಗಾಳಿಯಲ್ಲಿ ಕಲಬೆರೆಕೆಯಾಗಿ ಮಾಲಿನ್ಯ ಉಂಟು ಮಾಡುತ್ತಿದೆ. ರಸ್ತೆ ಸಾರಿಗೆ ಸಂಸ್ಥೆಯ ಅಂದಾಜು ಲೆಕ್ಕದ ಪ್ರಕಾರ 1,100 ಬಸ್‌ಗಳು, ನೂರಾರು ಲಾರಿಗಳು, 75 ಸಾವಿರ ಕಾರುಗಳು, 200 ಆಟೊಗಳು, ದ್ವಿಚಕ್ರ ವಾಹನಗಳಂತೂ ಲೆಕ್ಕಕ್ಕಿಲ್ಲದಂತೆ ನಗರದಲ್ಲಿ ಸಂಚಾರ ನಡೆಸುತ್ತವೆ. ರಸ್ತೆ ಸಾರಿಗೆ ನಿಯಂತ್ರಣ ಇಲಾಖೆಯ ಅಧಿಕಾರಿಗಳ ನಿಯಂತ್ರಣವಿಲ್ಲದಿರುವುದರಿಂದ ಇಪ್ಪತ್ತು ವರ್ಷದ ದ್ವಿಚಕ್ರ ವಾಹನಗಳು ಸಾರ್ವಜನಿಕರ ಮುಖಗಳಿಗೆ ರಾಚುವಂತೆ ಹೊಗೆ ಬಿಡುತ್ತಾ ಓಡಾಡುತ್ತಿವೆ.

ಲಾರಿ, ಟಾಟಾ ಏಸ್ ಮತ್ತು ಆಟೊಗಳಿಗೆ ಸೀಮೆ ಎಣ್ಣೆ, ಸಿಲಿಂಡರ್‌ ಅಳವಡಿಸಿ  ಓಡಿಸುತ್ತಿರುವುದರಿಂದ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಇನ್ನೂ ಹೆಚ್ಚಳವಾಗಿದೆ. ಈ ಮಧ್ಯೆ ನಗರದ ಪ್ರತಿಯೊಂದು ಓಣಿಗಳಲ್ಲಿ ಒಳಚರಂಡಿ ನಿರ್ಮಾಣ ಹಾಗೂ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳು ಚಾಲ್ತಿಯಲ್ಲಿರುವುದರಿಂದ ಪೈಪ್‌ಲೈನ್ ಹಾಕಲು ಅಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚದಿರುವುದರಿಂದ ಎಲ್ಲೆಂದರಲ್ಲಿ ದೂಳಿನ ಪ್ರಮಾಣ ಹೆಚ್ಚಾಗಿದೆ.

ನಗರದ ಮಹಿಬೂಬಿಯಾ ಕಾಲೊನಿ, ಪ್ರಶಾಂತ ನಗರದಲ್ಲಿ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ರಸ್ತೆಗಳ ಪಕ್ಕದಲ್ಲಿನ ತಿಪ್ಪೆಗುಂಡಿಗಳು ತಲೆ ಎತ್ತಿ ನಿಂತಿವೆ. ಅದಾಗ್ಯೂ ನಗರಸಭೆ ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ಮಾಡುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇಲ್ಲಿ ಕೆಲ ಗುಜರಿಗಳ ಮಾಲೀಕರು ಖಾಲಿ ಜಾಗದಲ್ಲಿ ವೈರ್‌ಗಳನ್ನು ಸುಡುವುದರಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ ಎಂದು ಬಡಾವಣೆಯ ಯುವಕರಾದ ಬಸವರಾಜ ಪೂಜಾರ್, ಅಂಭೋಜಿ ಮರಾಠ, ಯಮನಪ್ಪ, ನಾಗರಾಜ ದೂರಿದರು.

ಹಲವು ಕಾರಣಗಳಿಂದ ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ತಡೆಗಟ್ಟುವಲ್ಲಿ ರಸ್ತೆ ಸಾರಿಗೆ ನಿಯಂತ್ರಣ ಇಲಾಖೆಯ ಅಧಿಕಾರಿಗಳಾಗಲಿ, ವಾಯು ಮಾಲಿನ್ಯ ನಿಯಂತ್ರಣ ಅಧಿಕಾರಿಗಳಾಗಲಿ ಮತ್ತು ನಗರಸಭೆ ಪೌರಾಯುಕ್ತರಾಗಲಿ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ.
- ಡಿ.ಎಚ್.ಕಂಬಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT