ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಟಪಟ ಪ್ರಶ್ನೆ: ಪಟಪಟನೆಯ ಉತ್ತರ

Last Updated 11 ಜನವರಿ 2017, 6:16 IST
ಅಕ್ಷರ ಗಾತ್ರ

ರಾಯಚೂರು:  ಚಟಪಟ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಅಷ್ಟೆ ಚುರುಕಿನಿಂದ ಉತ್ತರ ನೀಡಿದರು. ನಾ ಮುಂದು... ತಾ ಮುಂದು... ಎನ್ನುತ್ತ  ಕೈ ಎತ್ತಿ ಉತ್ತರ ಹೇಳಲು ತವಕಿಸಿದರು. –ಇದು ‘ಪ್ರಜಾವಾಣಿ’ ಬಳಗದಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ರಾಯಚೂರು ವಲಯ ಮಟ್ಟದ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’ನ ನೋಟ. ಈ ಸ್ಪರ್ಧೆಯಲ್ಲಿ 301 ಶಾಲೆಗಳ 600 ಮಕ್ಕಳು ಚುರುಕಿನಿಂದ ಭಾಗವಹಿಸಿದ್ದರು.

ಜಾಲಹಳ್ಳಿಯ ಎಂಡಿಆರ್‌ಎಸ್‌ ಪ್ರೌಢಶಾಲೆಯ ಸಣ್ಣರಂಗ ಮತ್ತು ಬಸವರಾಜ 70 ಅಂಕಗಳಿಸಿ ಜ. 21ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ವಿಜ್‌ಗೆ ಆಯ್ಕೆಯಾದರು. ಮಾನ್ವಿ ತಾಲ್ಲೂಕಿನ ಬಾಗಲವಾಡದ ಶ್ರೀಚನ್ನಬಸವೇಶ್ವರ ಪ್ರೌಢಶಾಲೆಯ ಸಿ.ಅಮರೇಶ ಮತ್ತು ದೇವರಾಜ 40 ಅಂಕಗಳಿಸಿ ಎರಡನೇ ಸ್ಥಾನ ಪಡೆದುಕೊಂಡರು. ರಾಯಚೂರಿನ ರೇಸ್‌ ಕಾನ್‌ಸೆಪ್ಟ್‌ ಶಾಲೆಯ ಬಿ ತಂಡದ ಜೀವನ್‌ ಮತ್ತು ಅಜಯ್‌  35 ಅಂಕಗಳಿಸಿ ಮೂರನೇ ಸ್ಥಾನ ಗಳಿಸಿದರು.

ಪ್ರಾಥಮಿಕ ಹಂತದಲ್ಲಿ 20 ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಲಿಖಿತವಾಗಿ ಉತ್ತರಿಸಿದರು. ವಿಜ್ಞಾನ, ಸಾಮಾನ್ಯಜ್ಞಾನ, ಸಿನಿಮಾ, ಚರಿತ್ರೆ, ಕ್ರೀಡೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಚಿತ್ರ, ವಿಡಿಯೊ, ಆಡಿಯೊ ಮೂಲಕವೂ ವಿದ್ಯಾರ್ಥಿಗಳ ಮುಂದೆ ಬಂದವು.

ಕ್ವಿಜ್‌ ಮಾಸ್ಟರ್‌ ಎನ್‌.ಸಿ. ರಾಘವ ಚಕ್ರವರ್ತಿ ಅವರು ರಂಗಮಂದಿರದಲ್ಲಿ ಮಕ್ಕಳ ಮಧ್ಯೆ ಓಡಾಡುತ್ತಾ ಕೆಲವು ಸುಳಿವುಗಳನ್ನು ನೀಡುತ್ತ ಮಕ್ಕಳನ್ನು ಹುರಿದುಂಬಿಸಿ ಪ್ರಶ್ನೆಗಳನ್ನು ಕೇಳಿದ್ದು ಮಕ್ಕಳಲ್ಲಿ ಉತ್ಸಾಹವನ್ನು ಇಮ್ಮಡಿಸಿತ್ತು.

ಮೊದಲ ಪ್ರಶ್ನೆ ‘ಬೊಂಬಿಕ್ಸ್‌ ಮೋರಿ’ ಕೀಟದ ತಯಾರಾಗುವ ಉತ್ಪನ್ನ ಯಾವುದು ಎಂದಾಗ ವೇದಿಕೆಯ ಬಲಭಾಗದ ಮಕ್ಕಳ ಒಂದು ಕೈ ಮೇಲೆತ್ತಿದರು. ಇವರಲ್ಲಿ ಗಂಗಾವತಿಯ ಗುರುಕಿರಣ ‘ರೇಷ್ಮೆ ಹುಳು’ ಎನ್ನುತ್ತಿದ್ದಂತೆ ಚಪ್ಪಾಳೆಯ ಮೊರೆತ ಕೇಳಿತು.

ವಿಶ್ವದ ಬಾಕ್ಸಿಂಗ್‌ ಸಂಸ್ಥೆಯ ಏಷ್ಯಾ ಪೆಸಿಫಿಕ್‌ ಮಿಡ್ಲವೇಟ್‌ ಚಾಂಪಿಯನ್‌ ಯಾರು ಎಂಬ ಪ್ರಶ್ನೆಗೆ ‘ವಿಜಯೇಂದರ್‌ ಸಿಂಗ್‌’ ಎಂಬ ಉತ್ತರವನ್ನು ವಿಜಯನಗರ ಪ್ರೌಢಶಾಲೆಯ ವಿದ್ಯಾರ್ಥಿ ನೀಡಿದ. ಬಜಾಜ್‌ ಚೇತಕ್‌ ಸ್ಕೂಟರ್‌ಗೆ ರಾಜನೊಬ್ಬನ ಕುದುರೆಯ ಹೆಸರಾದ ‘ಚೇತಕ್‌’ ಅನ್ನು ಇರಿಸಲಾಗಿತ್ತು.  ಆ ರಾಜ ಯಾರು ಎಂಬ ಪ್ರಶ್ನೆಗೆ ‘ರಾಣಾ ಪ್ರತಾಪಸಿಂಹ’ ಎಂದು ಮಕ್ಕಳು ಕ್ಷಣಮಾತ್ರದಲ್ಲಿ ಉತ್ತರಿಸಿದರು.

111 ಪದ್ಯಗಳಿರುವ ಕಾಳಿದಾಸನ  ಕಾವ್ಯದ ಹೆಸರೇನು ಎಂದು ಕೇಳಿದೊಡನೆಯೇ ಕವಿತಾಳದ ಅಮೃತ, ‘ಮೇಘದೂತ’ ಎಂದು ಫಟ್‌ ಎಂದು ಉತ್ತರ ನೀಡಿದಳು. ಹಿಂದಿಯ ‘ಸಂಘರ್ಷ’ ಸಿನಿಮಾದಲ್ಲಿ ನಟಿಸಿದ ಬಾಲನಟಿ ಈಗ ಪ್ರಸಿದ್ಧ ನಟಿ ಆಗಿದ್ದಾರೆ. ಆಕೆ ಯಾರು ಎಂಬ ಪ್ರಶ್ನೆ ಮುಂದಾದೊಡನೆ ವಿದ್ಯಾರ್ಥಿಯೊಬ್ಬ ‘ಅನುಷ್ಕಾ ಶರ್ಮಾ’ ಎಂದರೆ, ಜಾಲಹಳ್ಳಿಯ ಕರಿಷ್ಮಾ ‘ಅಲಿಯಾ ಭಟ್‌’ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡಳು.

ರಾಯಚೂರು ಭಾಗಕ್ಕೆ ಸಂಬಂಧಿಸಿದ ಪ್ರಶ್ನೆಯಾದ ತಿರುಪತಿಯ ದೇವಾಲಯದಲ್ಲಿ ಕೈಮುಗಿದು ನಿಂತಿರುವ ರಾಜ ದಂಪತಿ ಪ್ರತಿಮೆ ಯಾರದ್ದು ಎಂಬ ಪ್ರಶ್ನೆಗೆ ಉಡಮಗಲ್‌– ಖಾನಾಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ‘ಕೃಷ್ಣದೇವರಾಯ’ ಎಂದು ಉತ್ತರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು.

ದ್ವೈತ ಪಂಥದ ‘ನ್ಯಾಯಸುಧಾ’ ಗ್ರಂಥಕ್ಕೆ, ‘ಸುಧಾ ಪರಿಮಳಾ’ ಎಂಬ ಟಿಪ್ಪಣಿ ರಚಿಸಿದ ಸ್ವಾಮೀಜಿಯೊಬ್ಬರ ಕ್ಷೇತ್ರ ರಾಯಚೂರಿನ ಬಳಿಯಲ್ಲೆ ಇದೆ, ಅವರ ಹೆಸರೇನು ಎಂಬ ಪ್ರಶ್ನೆ ಬಂದೊಡನೆಯೇ ‘ಮಂತ್ರಾಲಯದ ರಾಘವೇಂದ್ರಸ್ವಾಮಿ’ ಎಂದು ಥಟ್ ಅಂತ ಉತ್ತರಿಸಿದ್ದು ನೀರಮಾನ್ವಿಯ ವಿದ್ಯಾರ್ಥಿನಿ.

ತನ್ನ ಆಸ್ಥಾನದಲ್ಲಿದ್ದ ಮಹೇಶ ದಾಸನಿಗೆ ಅಕ್ಬರ್‌ ನೀಡಿದ ಹೆಸರೇನು ಎಂಬ ರಾಘವ್‌ ಅವರ ಪ್ರಶ್ನೆಗೆ ‘ಕಾಳಿದಾಸ’ನೆಂದು ಒಬ್ಬ ವಿದ್ಯಾರ್ಥಿ ಹೇಳಿದಾಗ, ಅಲ್ಲ ಅದು ‘ಬೀರಬಲ್‌’ ಎಂಬ ಸರಿ ಉತ್ತರವನ್ನು ಯಾದಗಿರಿ ಬಾಲಕಿ ನೀಡಿದಳು.

ಕ್ರಿಕೆಟ್‌ ವೀಕ್ಷಕ ವಿವರಣೆಕಾರ ಹರ್ಷ ಬೋಗ್ಲೆ ಜೊತೆ ಸುಂದರ್‌ ಪಿಚೈ ಕುಳಿತದ್ದ ಚಿತ್ರವನ್ನು ತೋರಿಸಿ ಪಿಚೈ ಅವರು ಅಂತರರಾಷ್ಟ್ರೀಯ ಮಟ್ಟದ ಯಾವ ಪ್ರತಿಷ್ಠಿತ ಸಂಸ್ಥೆಯ ಸಿಇಒ ಎಂದು ಕೇಳಿದ ಪ್ರಶ್ನೆಗೆ ಯಾದಗಿರಿಯಿಂದ ಬಂದಿದ್ದ ರಾಜು ‘ಗೂಗಲ್‌’ ಎಂದು ಎಲ್ಲರಿಗಿಂತ ಮುಂಚೆಯೇ ಹೇಳಿದ.

ಅಮೆರಿಕೆಯಲ್ಲಿ ದೀಪಾವಳಿ ಕುರಿತ ಮಾತನಾಡಿದ ವ್ಯಕ್ತಿ ಯಾರು ಎಂಬ ಆಡಿಯೊ ಆಧಾರಿತ ಪ್ರಶ್ನೆಗೆ ‘ಬರಾಕ್‌ ಒಬಾಮ’ ಎಂಬ ಉತ್ತರ ಬಾಲಕಿಯರಿಂದ ಕೇಳಿ ಬಂತು. ಅನೇಕ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಿದ ವಿದ್ಯಾರ್ಥಿಗಳು ಹರಿಯಾಣದಲ್ಲಿರುವ ಮಹಾಭಾರತಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳ ಯಾವುದು ಎಂಬ ಪ್ರಶ್ನೆಗೆ ತಡಬಡಾಯಿಸಿದರು. ‘ಇಂದ್ರಪ್ರಸ್ಥ, ಮಹಾಬಲೇಶ್ವರ, ಹಸ್ತಿನಾವತಿ, ಪಾಂಡವಪ್ರಸ್ಥ, ಮಥುರ, ಪಾಂಡವಪುರ, ವಿರಾಟ ನಗರ’ ಎಂಬ ಉತ್ತರಗಳು ಬಂದವು. ಆದರೆ, ರಾಯಚೂರಿನ ಬಸವರಾಜ ‘ಕುರುಕ್ಷೇತ್ರ’ ಎಂದಾಗ ಜೋರಾದ ಚಪ್ಪಾಳೆ ಕೇಳಿತು.

ಬಾರ್ಕ್‌ ಲೋಗೊಗೆ ದೇಶದ ಸುಪ್ರಸಿದ್ಧ ವಿಜ್ಞಾನಿಯ ಹೆಸರನ್ನು ಆಧಾರಿಸಿ ಈ ಹೆಸರು ಇರಿಸಲಾಗಿದೆ. ಈ ವಿಜ್ಞಾನಿ ಯಾರು ಎಂಬುದಕ್ಕೆ ಕೆಲವರು ‘ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ’ ಅವರ ಹೆಸರು ಹೇಳಿದರೆ, ಸಿರವಾರದ ಶಾಲೆಯ ಬಾಲಕ ‘ಹೋಮಿ ಜಹಂಗೀರ್‌ ಬಾಬಾ’ ಎಂದು ದೃಢದನಿಯಲ್ಲಿ ಹೇಳಿದಾಗ ರಂಗಮಂದಿರದಲ್ಲಿ ಗಟ್ಟಿಯಾದ ಚಪ್ಪಾಳೆಯ ಸಪ್ಪಳವಾಯಿತು.

ಪಶ್ಚಿಮಘಟ್ಟದಲ್ಲಿ ಕಬ್ಬಿಣದ ಅದಿರು ತೆಗೆಯುತ್ತಿದ್ದ ಕಂಪೆನಿಯ ಹೆಸರು ಏನು ಎಂಬ ಪ್ರಶ್ನೆಗೆ ಅತ್ತನೂರಿನ ವಿದ್ಯಾರ್ಥಿ ‘ಕುದುರೆ ಮುಖ’ ಎಂದು ಉತ್ತರಿಸಿದರೆ, ನೀರಿನ ಮೇಲೆ ನಡೆಯುವ ಹಲ್ಲಿಯ ಅಡ್ಡ ಹೆಸರೇನು ಎಂಬ ಕಠಿಣವಾದ ಪ್ರಶ್ನೆಗೆ ವಿದ್ಯಾಭಾರತಿ ಶಾಲೆಯ ಪ್ರತೀಕ್‌ ‘ಜೀಸಸ್‌ ಕ್ರೈಸ್ಟ್ ಲಿಜಾರ್ಡ್‌ ’ಎಂದು ಹೇಳಿ ಮೆಚ್ಚಿಗೆಗೆ ಪಾತ್ರನಾದ.
ಇಂಗ್ಲಿಷ್‌ ವರ್ಣಮಾಲೆಯ ಮುಂದೆ ಸಂಕೇತ ಕುರಿತಾದ ಇನ್ನೊಂದು ಕ್ಲಿಷ್ಟವಾದ ಪ್ರಶ್ನೆಗೆ ಅನೇಕ ಮಕ್ಕಳು ‘ಬ್ರೈಲ್‌ ಲಿಪಿ, ಬ್ರಾಹ್ಮಿ ಲಿಪಿ’ ಎಂದು ಉತ್ತರ ನೀಡಿದರೆ, ರಾಯಚೂರಿನ ಅಜೇಶ್ ‘ಮೋರ್ಸ್‌ಕೋಡ್‌’ ಎಂದು ಕರಾರುವಾಕ್ಕಾಗಿ ಹೇಳಿದ.

ಬೆಂಗಳೂರಿನ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಪ್ರಸಿದ್ಧ ರಾಜಕಾರಣಿ ಯಾರು ಎಂದ ಪ್ರಶ್ನಿಸಿದ ರಾಘವ್‌, ಇವರು ಒಂದು ದೇಶದ ಪ್ರಧಾನಿ ಎಂಬ ಸುಳಿವನ್ನೂ ನೀಡಿದರು. ರಾಯಚೂರಿನ ವಿದ್ಯಾರ್ಥಿ ಭಾರತಿ ‘ತೆರೆಸಾ ಮೇ’ ಎಂದು ಹೇಳಿದಳು. ಇಂದಿನ (ಮಂಗಳವಾರ) ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಯಲ್ಲಿ ತೆರೆಸಾ ಮೇ ಅವರ ಚಿತ್ರ ಪ್ರಕಟವಾಗಿದೆ ನೋಡಿದಿರಾ ಎಂದು ರಾಘವ್‌ ಮಕ್ಕಳನ್ನು ಕೇಳಿದಾಗ ‘ಅಯ್ಯೋ ನೋಡಿದ್ದೆ... ಆದರೆ ನೆನಪಾಗಲಿಲ್ಲ’ ಎಂದು ವಿದ್ಯಾರ್ಥಿಗಳಿಬ್ಬರು ಕೈ ಕೈ ಹಿಸುಕಿಕೊಂಡರು.

ಅರ್ಜುನ ಮತ್ತು ದ್ರೋಣಾಚಾರ್ಯ ಎರಡೂ ಪ್ರಶಸ್ತಿಗಳನ್ನು ಪಡೆದ ಕ್ರೀಡಾಪಟುವಿನ ಭಾವಚಿತ್ರ ತೋರಿಸಿ ಕೇಳಿದ ಪ್ರಶ್ನೆಗೆ ‘ಗೋಸ್ವಾಮಿ, ಧನರಾಜ ಪಿಳ್ಳೆ’ ಎಂದು ಇಬ್ಬರು ವಿದ್ಯಾರ್ಥಿಗಳು ಹೇಳಿದರು. ಆದರೆ, ಸರಿಯಾದ ಉತ್ತರವನ್ನು ಶಕ್ತಿನಗರದ ಡಿವಿಎಸ್‌ ಶಾಲೆಯ ವಿದ್ಯಾರ್ಥಿನಿ ‘ಪಿ.ಗೋಪಿಚಂದ್‌’ ಎಂದು ನೀಡಿದಳು.  ರಾಯಚೂರು, ಕೊಪ್ಪಳ ಜಿಲ್ಲೆಗಳ ಅನೇಕ ಶಾಲೆಗಳು ಹಾಗೂ ಯಾದಗಿರಿ ಜಿಲ್ಲೆಯ ಕೆಲವು ಶಾಲೆ ಮತ್ತು ಕಲಬುರ್ಗಿಯ ಜಿಲ್ಲೆಯ ಒಂದು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕ್ವಿಜ್‌ ಮಾಸ್ಟರ್‌ ರಾಘವ್‌ ಚಕ್ರವರ್ತಿ ಜೊತೆಗೆ ಅರವಿಂದ ಶ್ರೀನಿವಾಸ ಇದ್ದರು. ‘ಪ್ರಜಾವಾಣಿ’ ಕಲಬುರ್ಗಿ ಬ್ಯೂರೊ ಮುಖ್ಯಸ್ಥ ಸುದೇಶ ದೊಡ್ಡಪಾಳ್ಯ, ಪ್ರಸರಣ ವಿಭಾಗದ ವ್ಯವಸ್ಥಾಪಕ ಮುರಳಿಧರ ಜಿ.ಎಸ್‌. ಇದ್ದರು.

ಅಂತಿಮ ಸುತ್ತಿಗೆ ಆಯ್ಕೆ ಆಗಿದ್ದು ಹೀಗೆ
ಪ್ರಾಥಮಿಕ ಸುತ್ತಿನಲ್ಲಿ ಅತಿಹೆಚ್ಚು (16) ಅಂಕಗಳಿಸಿದ ಸಿಂಧನೂರಿನ ಎಂಡಿಎನ್‌ ಫ್ಯೂಚರ್‌ ಶಾಲೆಯ ರಾಜೇಶ ಮತ್ತು ಶ್ರೇಯಸ್‌ ಮೊದಲ ತಂಡವಾಗಿ ಆಯ್ಕೆಯಾದರು. ಬಾಗಲವಾಡದ ಶ್ರೀಚನ್ನಬಸವೇಶ್ವರ ಪ್ರೌಢಶಾಲೆಯ ಸಿ.ಅಮರೇಶ ಮತ್ತು ದೇವರಾಜ, ರಾಯಚೂರಿನ ರೇಸ್‌ ಕಾನ್‌ಸೆಪ್ಟ್‌ ಶಾಲೆಯ ಬಿ ತಂಡದ ಜೀವನ್‌ ಮತ್ತು ಅಜಯ್‌ ಹಾಗೂ ಜಾಲಹಳ್ಳಿಯ ಎಂಡಿಎಆರ್‌ಎಸ್‌ ಸಣ್ಣರಂಗ ಮತ್ತು ಬಸವರಾಜ ಅವರ ತಂಡಗಳು ತಲಾ 15 ಅಂಕಗಳಿಸಿದವು. ರೇಸ್‌ ಕಾನ್‌ಸೆಪ್ಟ್‌ ಶಾಲೆ ಎ ತಂಡ, ವಿದ್ಯಾಭಾರತಿ ಶಾಲೆ, ಶಕ್ತಿನಗರದ ಕೆಪಿಸಿಎಲ್‌ನ ಡಿಎವಿ ಪಬ್ಲಿಕ್‌ ಶಾಲೆ, ಜೆಆರ್‌ಎಂ ಪ್ರೌಢಶಾಲೆಗಳು ತಲಾ 14 ಅಂಕ ಗಳಿಸಿದವು. ಈ ತಂಡದವರು ಸ್ಟಾರ್‌ ಗುರುತಿನ ಆರು ಪ್ರಶ್ನೆಗಳಲ್ಲಿ ಮೂರು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದರು. ಆಗ  ಪ್ರಶ್ನಾವಳಿಯ ಮೊದಲ ಮೂರ್ನಾಲ್ಕು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ತಂಡವನ್ನು ಆಯ್ಕೆ ಮಾಡುವ ಮಾರ್ಗ ಅನುಸರಿಸಲಾಯಿತು. ಇದರಿಂದ ರೇಸ್‌ ಕಾನ್‌ಸೆಪ್ಟ್‌ ಶಾಲೆಯ ರೋಹನ್‌ ಮತ್ತು ಸುಶಾಂತ್‌ (ಎ ತಂಡ) ಹಾಗೂ ವಿದ್ಯಾಭಾರತಿಯ ಸಿದ್ದೇಶ ಮತ್ತು ರಾಘವೇಂದ್ರ ಅವರಿಗೆ ಅದೃಷ್ಟ ಒಲಿಯಿತು.

ಸಭಿಕರಿಗೆ ಸಿಕ್ಕ ಅವಕಾಶ
ಎರಡನೇ ಹಂತ ಕ್ವಿಜ್‌ನ ಮೂರನೇ ಸುತ್ತಿನಲ್ಲಿ ಚಿತ್ರಗಳನ್ನು ಸಮೀಕರಿಸಿ ಕೇಳಿದ ಪ್ರಶ್ನೆಯಲ್ಲಿ ಇಂದಿರಾಗಾಂಧಿ, ಕೆಂಪೇಗೌಡ, ರಾಜೀವ್‌ಗಾಂಧಿ ಮತ್ತು ಸುಭಾಷ್‌ ಚಂದ್ರಬೋಸ್‌ ಅವರ ಚಿತ್ರವಿತ್ತು ಮತ್ತು ಇದು ವಿಮಾನ ನಿಲ್ದಾಣಗಳಿಗೆ ಸಂಬಂಧಿಸಿತ್ತು. ಸರಿಯಾದ ಉತ್ತರವನ್ನು ಯಾವುದೇ ತಂಡ ನೀಡಿದಿದ್ದಾಗ, ಸಭಿಕರ ಸಾಲಿನಲ್ಲಿದ್ದ ವಿದ್ಯಾರ್ಥಿಗಳು ಹುರುಪಿನಿಂದ ಉತ್ತರಿಸಿದರು.

‘ತುರಂತೊ’ ರೈಲಿನ ಹೊರಮೈಗೆ ವರ್ಣಚಿತ್ತಾರ ಮಾಡಿದವರು ಯಾರು ಎಂಬ ಕ್ಲಿಷ್ಟವಾದ ಪ್ರಶ್ನೆಗೆ ಆರೂ ತಂಡಗಳು ಉತ್ತರ ನೀಡಲಿಲ್ಲ. ಸಭಿಕರ ಸಾಲಿನಲ್ಲೂ ಅನೇಕರು ತಡಬಡಾಯಿಸಿದರು. ಕ್ವಿಜ್‌ ಮಾಸ್ಟರ್‌ ರಾಘವ್‌, ಅವರು ರಾಜಕಾರಣಿಯೂ ಹೌದು ಎಂಬ ಸುಳಿವನ್ನು ನೀಡಿದಾಗ ‘ಮಮತಾ ಬ್ಯಾನರ್ಜಿ’ ಎಂಬ ಉತ್ತರದ ಜೊತೆಗೆ ಕರತಾಡನವೂ ಕೇಳಿಬಂತು.

ಫೀಲ್ಡ್‌ ಮಾರ್ಷಲ್‌ ಗೌರವಕ್ಕೆ ಪಾತ್ರರಾದ ಮಾಣಿಕ್‌ ಷಾ ಅವರಿಗೆ ಸಂಬಂಧಿಸಿದ ಪ್ರಶ್ನೆಗೂ ಸಭಿಕರಿಂದಲೇ ಉತ್ತರ ದೊರೆತಾಗ ವೇದಿಕೆಯ ಮೇಲಿದ್ದ ಆರೂ ತಂಡಗಳು ಅಚ್ಚರಿಗೊಂಡವು.

ಕೆಪಿಟಿಸಿಎಲ್‌, ಬಿಎಚ್‌ಇಎಲ್‌ ಹಾಗೂ ರಾಜ್ಯದ ನಕ್ಷೆಯಲ್ಲಿ ರಾಯಚೂರು ಜಿಲ್ಲೆ ಗುರುತು ಮಾಡಿದ ಚಿತ್ರದ ಮುಖೇನ ಕೇಳಿದ ಪ್ರಶ್ನೆಗೂ ಸಭಿಕರಿಂದಲೇ ‘ಉಷ್ಣವಿದ್ಯುತ್‌ ಸ್ಥಾವರ’ ಎಂಬ ಉತ್ತರ ಬಂತು. ಆಗ ರಾಘವ್‌, ಅದಕ್ಕೆ ‘ರಾಯಚೂರು’ ಎಂಬ ಪದ ಸೇರಿಸಿ ಆರ್‌ಟಿಪಿಎಸ್‌ ಎಂದರು. ಈ ಪ್ರಶ್ನೆಗೆ ಬಜರ್‌ ಒತ್ತಿ ತಪ್ಪು ಉತ್ತರ ನೀಡಿದ ಎಂಡಿಎನ್‌ ಫ್ಯೂಚರ್‌ ಶಾಲೆಯ ತಂಡ ದೀರ್ಘಶ್ವಾಸದ ಉದ್ಗಾರ ತೆಗೆಯಿತು. ‘ಯಂಗ್‌ ಇಂಡಿಯಾ’ ಪತ್ರಿಕೆ ಸಂಪಾದಕರು ಯಾರು ಎಂಬ ಪ್ರಶ್ನೆಗೆ ಆರೂ ತಂಡಗಳು ಉತ್ತರ ನೀಡಲಿಲ್ಲ. ಪ್ರಶ್ನೆ ಸಭಿಕರಿಗೆ ವರ್ಗಾವಣೆ ಆಯಿತು. ‘ಮಹಾತ್ಮ ಗಾಂಧಿ’ ಎಂಬ ಉತ್ತರ ಬಂದೊಡನೆಯ ರಾಘವ್‌ ಸರಿಯಾದ ಉತ್ತರ ಎನ್ನುತ್ತ ಸ್ವತಃ ಚಪ್ಪಾಳೆ ತಟ್ಟಿದರು.

ಹರಿಯಾಣದಲ್ಲಿ ಪೊಲೀಸ್‌ ಅಧಿಕಾರಿಯಾದ ಕ್ರಿಕೆಟಿಗರೊಬ್ಬರ ಭಾವಚಿತ್ರವನ್ನು ತೋರಿಸಿ ಕೇಳಿದ ಪ್ರಶ್ನೆಗೆ ಎಂಡಿಎನ್‌ ಫ್ಯೂಚರ್‌ ಶಾಲೆಯ ತಂಡ ಉತ್ತರಿಸಲು ವಿಫಲವಾಯಿತು. ಆದರೆ, ಸಭಿಕರ ಸಾಲಿನಲ್ಲಿದ್ದ ವಿದ್ಯಾರ್ಥಿ ಜೋಗಿಂದರ್‌ ಶರ್ಮಾ ಎಂದು ಉತ್ತರಿಸಿದ. ಕ್ವಿಜ್‌ನ ಕಡೆಯ ಸುತ್ತಿನ ಬಜ್ಜರ್‌ ಪ್ರಶ್ನೆಗಳಲ್ಲಿ ರಾಜರವಿವರ್ಮನ ರಾಮಾಯಣದ ಚಿತ್ರಕಲೆ ಆಧರಿಸಿದ ಪ್ರಶ್ನೆಗೆ ಯಾವ ತಂಡವೂ ಉತ್ತರಿಸಲಿಲ್ಲ, ಕೊನೆಗೆ ಸಭಿಕರು ಸರಿ ಉತ್ತರ ನೀಡಿ ಮೆಚ್ಚುಗೆಗೆ ಪಾತ್ರರಾದರು.

‘ನನಗೂ ಉತ್ತರ ಗೊತ್ತಿರಲಿಲ್ಲ’
ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನಸಿಂಗ್‌ ರಾಥೋರ್‌ ಅವರೊಂದಿಗೆ ವಿದ್ಯಾರ್ಥಿಗಳಾದ ಈರಮ್ಮ, ಸಮ್ರಿನ್‌, ನವೀನ್‌  ಉದ್ಘಾಟಿಸಿದರು.

ದೀಪಬೆಳೆಗಿಸಲು ಮೂರು ವಿದ್ಯಾರ್ಥಿಗಳನ್ನು ಪ್ರಶ್ನೆಗೆ ಉತ್ತರ ಪಡೆಯುವ ಮೂಲಕ ಆಯ್ಕೆ ಮಾಡಿದನ್ನು ಮೆಚ್ಚಿಕೊಂಡ ಚೇತನಸಿಂಗ್, ‘ಈ ಪ್ರಶ್ನೆಗಳಲ್ಲಿ ಎರಡಕ್ಕೆ ನನಗೂ ಉತ್ತರ ಗೊತ್ತಿರಲಿಲ್ಲ’ ಎಂದರು. 

‘ವಿದ್ಯಾರ್ಥಿಗಳಲ್ಲಿನ ಆಸಕ್ತಿ ಅವರು ನೀಡುವ ಉತ್ತರವನ್ನು ಕೇಳಿದಾಗ ಜಿಲ್ಲೆಯಲ್ಲಿ ಜಾಗೃತಿಯ ಮಟ್ಟ ಚೆನ್ನಾಗಿದೆ. ಇದನ್ನು ಮತ್ತಷ್ಟು ಬೆಳೆಸಬೇಕು. ಇದಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿ. ಸ್ಪರ್ಧೆಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಚೆನ್ನಾಗಿ ಉತ್ತರಿಸಿ’ ಎಂದು ಶುಭ ಹಾರೈಸಿದರು.

ಮೊದಲು ಮೂರು ಸ್ಥಾನಗಳಿಸಿದ ತಂಡಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ.ಕೂರ್ಮಾರಾವ್‌,  ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಾಂಜನೇಯ ಮತ್ತು ರಾಯಚೂರಿನ ಈ ಕ್ವಿಜ್‌ನ ಸಹಪ್ರಾಯೋಜಕರಾದ ದಾವಣಗೆರೆಯ ಸರ್‌ ಎಂ.ವಿ. ಪಿಯು ಕಾಲೇಜಿನ ಅಧ್ಯಕ್ಷ ವಿ.ಆರ್‌.ನಾಯ್ಡು ಪ್ರಶಸ್ತಿ, ಪತ್ರ ಟ್ರೋಫಿ ಮತ್ತು ಮೆಡಲ್‌ಗಳನ್ನು ವಿತರಿಸಿದರು. 4, 5 ಮತ್ತು 6ನೇ ಸ್ಥಾನಗಳಿದ ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಕ್ವಿಜ್‌ ಆರಂಭಕ್ಕೂ ಮುನ್ನ ವಿದ್ಯಾಭಾರತಿ ಶಾಲೆಯ ವಿದ್ಯಾರ್ಥಿನಿಯರಾದ ಶ್ರೇಯಾ, ಪ್ರಾರ್ಥನಾ ಮತ್ತು ಸಂಜನಾ ಸುಶ್ರಾವ್ಯವಾಗಿ ಪ್ರಾರ್ಥನೆ ಹಾಡಿದರು.

ವಿದ್ಯಾರ್ಥಿಗಳು ಮತ್ತು ಶಿಕ್ಷಕರ  ಪ್ರತಿಕ್ರಿಯೆ
ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಎದುರಿಸಲು ಪ್ರಜಾವಾಣಿ ಕ್ವಿಜ್ ಮಾರ್ಗದರ್ಶನ ಆಗಲಿದೆ. ಜ್ಞಾನಾರ್ಜನೆಯ ಇಂತಹ ಕಾರ್ಯಕ್ರಮಗಳನ್ನು ವರ್ಷದಲ್ಲಿ ಎರಡು ಬಾರಿ ಆದರೂ ನಡೆಸಬೇಕು.
– ಅಬ್ದುಲ್‌, 9ನೇ ತರಗತಿ, ನವೋದಯ ಪಬ್ಲಿಕ್‌ ಶಾಲೆ, ರಾಯಚೂರು

ಪ್ರಜಾವಾಣಿ ಕ್ವಿಜ್‌ನಲ್ಲಿ ಪ್ರಶ್ನೆಗಳು ಅಷ್ಟೊಂದು ಕಠಿಣ ಮತ್ತು ಸುಲಭ ಎನ್ನುವಂತಿರಲಿಲ್ಲ. ಒಟ್ಟಿನಲ್ಲಿ ಈ ಕಾರ್ಯಕ್ರಮ ಬಹಳ ಉತ್ತಮವಾಗಿತ್ತು.
– ಅಲ್‌ಸೂರ್‌, 10ನೇ ತರಗತಿ, ಲಿಟ್ಲ್‌ಜೇಮ್ಸ್‌ ಶಾಲೆ, ರಾಯಚೂರು

ಪ್ರಶ್ನೆಗಳು ಕಠಿಣ, ಸ್ವಲ್ಪ ಸುಲಭವಾಗಿದ್ದವು. ಕ್ವಿಜ್‌ನಲ್ಲಿ ಭಾಗವಹಿಸಿದ್ದರಿಂದ ತುಂಬಾ ಸಂತೋಷವಾಗಿದೆ. ಈ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಬುದ್ಧಿಮಟ್ಟ ಹೆಚ್ಚಾಗುವಂತೆ ಮಾಡಿದೆ.
– ರಮೇಶ, 7ನೇ ತರಗತಿ, ವಿಜ್ಞಾನ ಎಜುಕೇಷನ್‌ ಶಾಲೆ, ರಾಯಚೂರು

ಕ್ವಿಜ್‌ ಬಹಳ ಚಾಲೆಂಜಿಂಗ್‌ ಆಗಿತ್ತು. ಪ್ರಶ್ನೆ ಪ್ರಶ್ನೆಗೂ ಉತ್ಸಾಹ ಹೆಚ್ಚಾಗುತ್ತಿತ್ತು. ಈ ಕಾರ್ಯಕ್ರಮ ವಿಚಾರ ಮಾಡುವ ಶಕ್ತಿ ಬೆಳೆಸುತ್ತದೆ. ಪ್ರತಿಭೆ ಹೊರಹಾಕಲು ಪ್ರಜಾವಾಣಿ ಒಳ್ಳೆಯ ಅವಕಾಶ ಮಾಡಿಕೊಟ್ಟಿದ್ದು ತುಂಬಾ ಖುಷಿಯಾಗಿದೆ.
– ಆರ್ಚನಾ, 10ನೇ ತರಗತಿ, ಮುನ್ನೂರು ಕಾಪು ಶಾಲೆ, ರಾಯಚೂರು

ಪ್ರಜಾವಾಣಿ ಕ್ವಿಜ್ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶ ಮಾಡಿಕೊಟ್ಟಿದೆ. ಕ್ವಿಜ್‌ಗಳಲ್ಲಿ ಭಾಗವಹಿಸುವುದರಿಂದ ಭಯ ಹೋಗಲಿದೆ. ಪ್ರತಿಭಾವಂತರನ್ನು ಗುರುತಿಸಲು ಈ ಕಾರ್ಯಕ್ರಮ ಒಳ್ಳೆಯ ವೇದಿಕೆ.
– ವಿಜಯಕುಮಾರ,  ಶಿಕ್ಷಕ, ಶಾರದಾ ವಿದ್ಯಾನಿಕೇತನ ಶಾಲೆ, ರಾಯಚೂರು

ಪ್ರಜಾವಾಣಿ ಕ್ವಿಜ್‌ ಕಾರ್ಯಕ್ರಮ ಮಕ್ಕಳಿಗೆ ಉತ್ತಮವಾದ ವೇದಿಕೆ. ಮಕ್ಕಳ ಬೆಳವಣಿಗೆಗೂ ಅನುಕೂಲ. ವಿದ್ಯಾರ್ಥಿಗಳು ಸರಿಯಾಗಿ ಅರ್ಥೈಸಿಕೊಂಡು ಉತ್ತರ ನೀಡಬೇಕು. ಇದು ಮಕ್ಕಳಲ್ಲಿ ಜ್ಞಾನ ಭಂಡಾರವನ್ನು ಹೆಚ್ಚಿಸುತ್ತದೆ.
- ರೇಣುಕಾ ಅತ್ತನೂರು, ಶಿಕ್ಷಕಿ, ಸರಸ್ವತಿ ವಿದ್ಯಾಮಂದಿರ, ಕೊಪ್ಪಳ

ವಿದ್ಯಾರ್ಥಿಗಳು ಪ್ರತಿಭೆಯನ್ನು ಹೊರಹಾಕಲು ಪ್ರಜಾವಾಣಿ ಕ್ವಿಜ್ ಒಳ್ಳೆಯ ವೇದಿಕೆ. ಸಾಮಾನ್ಯ ಜ್ಞಾನ, ಇತಿಹಾಸ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಆಗಿದೆ. ಈ ಕಾರ್ಯಕ್ರಮ ಚೆನ್ನಾಗಿ ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಓದಿನ ಬಗೆಗೂ ಆಸಕ್ತಿ ಬೆಳೆಯುತ್ತದೆ.
– ಶೈಲಜಾ, ಶಿಕ್ಷಕಿ, ಬಿವಿಆರ್‌ ಶಾಲೆ, ಮಾನ್ವಿ

ಇದು ಸ್ಪರ್ಧಾ ಮನೋಭಾವ ಬೆಳಸುತ್ತದೆ. ಎಲ್ಲ ಶಾಲೆಗಳ ಮಕ್ಕಳು ಭಾಗವಹಿಸಿದ್ದರಿಂದ ವಿದ್ಯಾರ್ಥಿಗಳ ಪ್ರತಿಭೆ ಓರೆಗೆ ಹಚ್ಚಿದಂತಾಗಿದೆ.
– ಚಂದ್ರಕಾಂತ ವೈದ್ಯ, ಶಿಕ್ಷಕ,  ವಿದ್ಯಾಭಾರತಿ ಶಾಲೆ, ರಾಯಚೂರು

ಶಾಲೆಗಳಲ್ಲಿ ವಿದ್ಯಾರ್ಥಿಗಳು ಸರಿಯಾದ ಸೌಕರ್ಯಗಳ ಕೊರತೆಯ ನಡುವೆ ವಿದ್ಯಾರ್ಜನೆ ಮಾಡಬೇಕಾಗಿದ್ದರಿಂದ ಕ್ವಿಜ್‌ನ ಪ್ರಶ್ನೆಗಳಿಗೆ ಉತ್ತರಿಸಲು  ಕಷ್ಟವಾಯಿತು.
– ಶ್ರೀದೇವಿ, ಶಿಕ್ಷಕಿ, ಮುನ್ನೂರು ಕಾಪು ಶಿಕ್ಷಣ ಸಂಸ್ಥೆ, ರಾಯಚೂರು

ಪ್ರಜಾವಾಣಿ ಕ್ವಿಜ್‌ ಅದ್ಭುತವಾಗಿ ನಡೆಸಲಾಯಿತು. ಇನ್ನೂ ಹೆಚ್ಚಿನ ಮಕ್ಕಳಿಗೆ ಅವಕಾಶ ಕಲ್ಪಿಸಿಕೊಡಬೇಕು.
– ಆದಿ ಬಸವನಗೌಡ, ಶಿಕ್ಷಕ, ಎಂಡಿಎನ್‌ ಫಿವ್‌ಚರ್‌ ಶಾಲೆ, ಸಿಂಧನೂರು

ಮೂರು ವರ್ಷಗಳಿಂದ ಪ್ರಜಾವಾಣಿ ಕ್ವಿಜ್‌ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಈ ಬಾರಿ ಪ್ರಶಸ್ತಿ ಪಡೆದಿರುವುದು ತುಂಬಾ ಖುಷಿಯಾಗಿದೆ. ಭವಿಷ್ಯದಲ್ಲಿ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪೂರಕವಾಗಿದೆ.
– ರಾಮಮ್ಮ, ಶಿಕ್ಷಕಿ, ಚನ್ನಬಸವೇಶ್ವರ ಶಾಲೆ, ಬಾಗಲವಾಡ,ಮಾನ್ವಿ ತಾಲ್ಲೂಕು

ಪ್ರಜಾವಾಣಿ ಕ್ವಿಜ್‌ ಕಾರ್ಯಕ್ರಮದಿಂದ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗಿದೆ. ಮಕ್ಕಳ ಜ್ಞಾನ ವೃದ್ಧಿಯಾಗಲು ಸಹಕಾರಿ ಆಗಿದೆ. ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದಲ್ಲಿ ನಡೆಸುವುದರಿಂದ ಮಕ್ಕಳಿಗೆ ಉಪಯೋಗವಾಗಲಿದೆ.
– ಮಕ್ಬೂಲ್‌ ಹುಸೇನ, ಶಿಕ್ಷಕ, ಶಾರದ ವಿದ್ಯಾನಿಕೇತನ ಶಾಲೆ, ಮಾನ್ವಿ

ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಯಲು ಪ್ರಜಾವಾಣಿ ಕ್ವಿಜ್ ಅತ್ಯಂತ ಉಪಕಾರಿಯಾಗಿದೆ. ಮುಂದಿನ ವಿದ್ಯಾಭ್ಯಾಸಕ್ಕೆ ಪ್ರಯೋಜನ ಆಗಲಿದೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಧೈರ್ಯ ಹೆಚ್ಚಾಗಲು ಈ ಕಾರ್ಯಕ್ರಮ ನೆರವಾಗಲಿದೆ.
– ಜಯಶ್ರೀ, ಪಾಲಕಿ, ಯರಮರಸ್‌ ಕ್ಯಾಂಪ್‌

ಪ್ರಜಾವಾಣಿ ಕ್ವಿಜ್ ಕಾರ್ಯಕ್ರಮ ಮಕ್ಕಳ ಬುದ್ಧಿಮಟ್ಟದ ಬೆಳವಣಿಗೆಗೆ ಉಪಯುಕ್ತವಾದ ಕಾರ್ಯಕ್ರಮ.  ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಮಕ್ಕಳು ಮಾಹಿತಿ ಪಡೆದುಕೊಂಡಿದ್ದಾರೆ.
– ಈರಣ್ಣ, ಪೋಷಕ, ರಾಯಚೂರು

ವರ್ಷವಿಡೀ ಪಠ್ಯದಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಪ್ರಜಾವಾಣಿ ಕ್ವಿಜ್‌ ಹೊಸ ರೀತಿಯ ಅನುಭವ ನೀಡಿತು. ಮಕ್ಕಳಲ್ಲಿರುವ ಶಕ್ತಿ ಏನೆಂಬುದನ್ನು ಈ ಕಾರ್ಯಕ್ರಮ ಪತ್ತೆ ಹಚ್ಚಿದೆ. ಪ್ರಜಾವಾಣಿ ಮಕ್ಕಳಿಗೆ ಒಳ್ಳೆಯ ವೇದಿಕೆಯನ್ನು ಕಲ್ಪಿಸಿಕೊಟ್ಟಿದಕ್ಕೆ ಧನ್ಯವಾದ.
– ಸುಮಾ, ಪೋಷಕಿ, ರಾಯಚೂರು

(10ಆರ್‌ಸಿಆರ್–ಕ್ವಿಜ್‌21) ಶ್ವೇತಾ ಖಾಸಗಿ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಕ್ಕೆ ನೀಡಿದಷ್ಟು ಒತ್ತನ್ನು ಇತಿಹಾಸಕ್ಕೆ ನೀಡುವುದಿಲ್ಲ. ಆದ್ದರಿಂದ ಖಾಸಗಿ ಶಾಲೆಗಳ ಮಕ್ಕಳಿಗೆ ಕ್ವಿಜ್‌ನ ಪ್ರಶ್ನೆಗಳು ಕಷ್ಟವಾಗಿದ್ದವು. ಆಯ್ಕೆ ಆಧಾರಿತ ಉತ್ತರಗಳನ್ನು ನೀಡಿದ್ದರೆ ಇನ್ನೂ ಅನುಕೂಲ ಆಗಿರುತ್ತಿತ್ತು. ಆದರೂ, ವಿದ್ಯಾರ್ಥಿಗಳು ಉತ್ತಮವಾಗಿ ಸ್ಪರ್ಧೆಯೊಡ್ಡಿದರು.
–ಶ್ವೇತಾ, ಪೋಷಕಿ, ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT