ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಗಳಿಗೆ ಪ್ರತಿಷ್ಠೆಯ ಚುನಾವಣೆ

ಜನವರಿ 12ರಂದು ಮತದಾನ; ಮುಖಂಡರಿಂದ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ
Last Updated 11 ಜನವರಿ 2017, 6:46 IST
ಅಕ್ಷರ ಗಾತ್ರ

ಅಣ್ಣಿಗೇರಿ: ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಡೆಯುತ್ತಿರುವ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಕಾವೇರುತ್ತಿದ್ದು ಸಾಮಾನ್ಯ ಮಹಿಳೆ­ಯರಿಗೆ ಮೀಸಲಾದ ಅಣ್ಣಿಗೇರಿ­ಯಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಎಪಿಎಂಸಿ ಚುನಾವಣೆಯು ಮೇಲ್ನೋ­ಟಕ್ಕೆ ಪಕ್ಷರಹಿತ ಚುನಾವಣೆ ಆಗಿದ್ದರೂ ಕಣಕ್ಕಿಳಿದಿರುವ ಅಭ್ಯರ್ಥಿ­ಗಳು ಒಂದಲ್ಲಾ ಒಂದು ಪಕ್ಷದ ಬೆಂಬಲ ಹೊಂದಿರುವುದರಿಂದ ಸಹಜವಾಗಿಯೇ ರಾಜಕೀಯ ಪಕ್ಷಗಳಿಗೆ ಇದು ಪ್ರತಿಷ್ಠೆಯ ಕಣವಾಗಿದೆ. ತಮ್ಮ ಬೆಂಬಲಿಗರನ್ನು ಶತಾಯಗತಾಯ ಗೆಲ್ಲಿಸಲೇಬೇಕೆಂದು ಪಣ ತೊಟ್ಟಂತೆ ಭಾಸವಾಗುತ್ತಿದೆ.
ಅಣ್ಣಿಗೇರಿ ಕೃಷಿಕ ಕ್ಷೇತ್ರ ಸಾಮಾನ್ಯ ಮಹಿಳಾ ಮೀಸಲಾತಿ ಇರುವುದರಿಂದ ಶಾಂತವ್ವ ಪುರದಪ್ಪ ಗುರಿಕಾರ (ಹಸಿ ಮೆಣಸಿನಕಾಯಿ ಗುರುತು) ಮತ್ತು ಕಮಲವ್ವ ದೇವೆಂದ್ರಪ್ಪ ಪುಟ್ಟಣವರ (ಆಟೊರಿಕ್ಷಾ) ನಡುವೆ ತೀವ್ರವಾದ ಪೈಪೋಟಿ ಕಂಡುಬರುತ್ತಿದೆ.

ಜೆಡಿಎಸ್  ಅಭ್ಯರ್ಥಿ ಕಮಲವ್ವ ಪುಟ್ಟಣ್ಣವರ ಬೆಂಬಲಾರ್ಥವಾಗಿ ಶಾಸಕ ಎನ್.ಎಚ್.ಕೋನರಡ್ಡಿ, ಪುರಸಭೆ ಮಾಜಿ ಅಧ್ಯಕ್ಷೆ ರೂಪಾ ಶಿವಶಂಕರ ಕಲ್ಲೂರ ಭಾರಿ ಪ್ರಚಾರ ಕೈಗೊಂಡಿದ್ದಾರೆ. ಶಾಂತವ್ವ ಅವರ ಪರವಾಗಿ ಕ್ರೆಡಲ್ ಸಂಸ್ಥೆಯ ಮಾಜಿ ಅಧ್ಯಕ್ಷ ಷಣ್ಮುಖ ಗುರಿಕಾರ ಪ್ರಚಾರ ಕೈಗೊಂಡಿದ್ದಾರೆ. ಪಟ್ಟಣದಲ್ಲಿ ಒಟ್ಟು 6500 ಮತದಾರರಿದ್ದಾರೆ.
ಅಣ್ಣಿಗೇರಿ ಎಪಿಎಂಸಿ ಒಟ್ಟು 14 ಕ್ಷೇತ್ರಗಳ ಪೈಕಿ 11 ಕ್ಷೇತ್ರ ಕೃಷಿಕ,1 ವರ್ತಕರ ಕ್ಷೇತ್ರ,1 ಸಂಸ್ಕರಣ ಕ್ಷೇತ್ರ, 1 ಸಹಕಾರಿ ಸಂಘಗಳ ಕ್ಷೇತ್ರವಾಗಿದೆ. ಇದೇ 12ರಂದು ಚುನಾವಣೆ ನಡೆಯಲಿದೆ.

ಒಟ್ಟು 36 ಎಕರೆ ಪ್ರದೇಶದಲ್ಲಿ ಅಣ್ಣಿಗೇರಿ ಎಪಿಎಂಸಿ ಮಾರುಕಟ್ಟೆ ಮತ್ತು ಸುಮಾರು 20ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನವಲಗುಂದ ಪಟ್ಟಣದಲ್ಲಿ ಉಪ ಮಾರುಟ್ಟೆಯನ್ನು ಹೊಂದಿದೆ. ಕಳೆದ ಆಡಳಿತದ ಅವಧಿಯಲ್ಲಿ ಹತ್ತಿ ಖರೀದಿಯೊಂದನ್ನು ಬಿಟ್ಟು ಬೇರೆ ಯಾವ ವ್ಯಾಪಾರ ವಹಿವಾಟು ಕೂಡಾ ಇಲ್ಲಿ ನಡೆದಿಲ್ಲ. ಇಲ್ಲಿನ ರೈತರು ಕೂಡಾ ಹೆಚ್ಚಾಗಿ ಮೆಣಸಿನಕಾಯಿ ಬೆಳೆ, ಗೋವಿನ ಜೋಳ ಮೊದಲಾದ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದು ಇವುಗಳನ್ನು ಖರೀದಿಸಲು ಸೂಕ್ತವಾದ ಮಾರು­ಕಟ್ಟೆಯ ಅವಕಾಶ ಇಲ್ಲವಾದ್ದ­ರಿಂದ ಬೆಳೆ ಬೆಳೆದ ರೈತ ಇಂದು ಕಂಗಾಲಾಗಿ­ದ್ದಾನೆ. ಇಲ್ಲಿ ಬೆಳೆದಂತಹ ಮೆಣಸಿನ­ಕಾಯಿ­ಯನ್ನು ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಗೆ ಮಾರಾಟ ಮಾಡಲು ಇಲ್ಲಿನ ರೈತರು ಪ್ರತಿವರ್ಷವೂ ಹೋಗುತ್ತಾರೆ.

ಪಟ್ಟಣದ ಎಪಿಎಂಸಿ ಮಾರುಕಟ್ಟೆ ಕೇವಲ ಹೆಸರಿಗಷ್ಟೇ ಕೃಷಿ ಉತ್ಪನ್ನ ಮಾರುಕಟ್ಟೆಯಾಗಿದ್ದು ಕಳೆದ 60 ವರ್ಷಗಳಿಂದ ಇಲ್ಲಿ ವ್ಯಾಪಾರಸ್ಥರನ್ನು ಕರೆಸಿ ರೈತರು ಬೆಳೆಗಳನ್ನು ಇಲ್ಲಿಯೇ ಮಾರಾಟ ಮಾಡುವಲ್ಲಿ ಆಡಳಿತ ಮಂಡ­ಳಿ­ಯಾಗಲೀ, ಜನಪ್ರತಿನಿಧಿ­ಗಳಾಗಲಿ ಎಳ್ಳಷ್ಟು ಪ್ರಯತ್ನ ಮಾಡದಿರುವದು ವಿಷಾದಕರ ಸಂಗತಿಯಾಗಿದೆ.

ಈ ಹಿಂದಿನ ಅಧ್ಯಕ್ಷರು ಎಚ್ಚೆತ್ತು­ಕೊಂಡು ಸುಮಾರು ₹20 ಕೋಟಿಗೂ ಹೆಚ್ಚು ಅನುದಾನದಲ್ಲಿ ಎಪಿಎಂಸಿ ಅಭಿವೃದ್ಧಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೊಸ ಆಡಳಿತ ಮಂಡಳಿಯು ರೈತರಿಗೆ ನೆರವಾಗುವ ಯೋಜನೆಗಳನ್ನು ಹಾಕಿಕೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT