ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಹಾನಿ ಸಾಲಕ್ಕೆ ಜಮಾ: ರೈತರ ವಿರೋಧ

ಕಿರಟಗೇರಿ ಗ್ರಾಮದ ರೈತರಿಂದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಚೇರಿ ಎದುರು ಪ್ರತಿಭಟನೆ
Last Updated 11 ಜನವರಿ 2017, 6:59 IST
ಅಕ್ಷರ ಗಾತ್ರ

ಗದಗ: ರೈತರ ಚಾಲ್ತಿ ಖಾತೆಗೆ ಜಮೆಯಾದ ಬೆಳೆ ವಿಮೆ ಪರಿಹಾರದ ಮೊತ್ತವನ್ನು  ಬ್ಯಾಂಕುಗಳು ಬೆಳೆ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿ ತಾಲ್ಲೂಕಿನ ಕಿರಟಗೇರಿ ಗ್ರಾಮದ 30ಕ್ಕೂ ಹೆಚ್ಚು ರೈತರು ಗದುಗಿನ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಚೇರಿ ಎದುರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಕೆವಿಜಿ ಬ್ಯಾಂಕಿನ ಬೆಟಗೇರಿ ಶಾಖೆಯಲ್ಲಿ, ರೈತರೊಬ್ಬರ ಖಾತೆಗೆ ಜಮೆ ಆಗಿದ್ದ ಬೆಳೆ ಹಾನಿ ಪರಿಹಾರದ ಮೊತ್ತ ವನ್ನು ಬೆಳೆ ಸಾಲಕ್ಕೆ ಕಡಿತ ಮಾಡಿ ಕೊಳ್ಳಲಾಗಿತ್ತು. ಶಾಖೆಗೆ ಹೋಗಿ ಇದನ್ನು ಪ್ರಶ್ನಿಸಿದ ರೈತರು, ವ್ಯವಸ್ಥಾಪಕ ನೀಡಿದ ಉತ್ತರದಿಂದ ತೃಪ್ತರಾಗದೆ,  ಬಳಿಕ ಪ್ರಧಾನ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.

ಸತತ ನಾಲ್ಕು ವರ್ಷಗಳ ಬರದಿಂದ ರೈತರು ತೀವ್ರ ಆರ್ಥಿಕ ಸಂಕಷ್ಟದ ಲ್ಲಿದ್ದಾರೆ. ಇಂತಹ ಸಂಕಷ್ಟದ ಸಂದರ್ಭ ದಲ್ಲಿ ಬ್ಯಾಂಕುಗಳು, ಸರ್ಕಾರ ರೈತರ ಖಾತೆಗೆ ಜಮೆ ಮಾಡುವ ಮಾಸಾಶನ, ವೃದ್ದಾಪ್ಯವೇತನ, ಅಂಗವಿಕಲ ವೇತನ, ಬೆಳೆಹಾನಿ ಪರಿಹಾರವನ್ನು ಬೆಳೆಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿವೆ. ಸರ್ಕಾರ ದಿಂದ ಬೆಳೆ ವಿಮೆ ಪರಿಹಾರ ಮಂಜೂ ರಾದರೂ ರೈತರಿಗೆ ಇದರ ಪ್ರಯೋಜನ ಲಭಿಸುತ್ತಿಲ್ಲ. ಬ್ಯಾಂಕುಗಳ ಈ ಧೋರ ಣೆಯಿಂದ ರೈತರ ಖಾತೆಗಳಲ್ಲಿ ಒಂದು ಪೈಸೆ ಕೂಡ ಜಮೆ ಆಗುತ್ತಿಲ್ಲ. ಜಿಲ್ಲಾಡಳಿತ ಕೂಡಲೇ ಬೆಳೆಹಾನಿ ಪರಿಹಾರವನ್ನು ಕಡಿತ ಮಾಡಿಕೊಳ್ಳ ಬಾರದು ಎಂದು ಲೀಡ್ ಬ್ಯಾಂಕ್ ಗೆ ಸ್ಪಷ್ಟ ಸೂಚನೆ ನೀಡ ಬೇಕು ಎಂದು ರೈತರು ಆಗ್ರಹಿಸಿದರು.

ಮಳೆ ಮತ್ತು ತೇವಾಂಶದ ಕೊರತೆಯಿಂದ ಮುಂಗಾರು ಮತ್ತು ಹಿಂಗಾರು ಬೆಳೆ ಹಾನಿಯಾಗಿದೆ. ರೈತರು ಬೀಜ, ಗೊಬ್ಬರಕ್ಕೆ ಅನಿವಾರ್ಯವಾಗಿ ಬೆಳೆಸಾಲ ಪಡೆದಿದ್ದಾರೆ. ಆದರೆ, ಬ್ಯಾಂಕುಗಳು ಈ ರೀತಿ ಬೆಳೆ ಹಾನಿ ಪರಿಹಾರದ ಮೊತ್ತವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುವುದು ಅನ್ಯಾಯ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು ದೂರಿದರು.

ಮನವೊಲಿಕೆ:  ರೈತರು ಪ್ರತಿಭಟನೆ ನಡೆಸುತ್ತಿರುವುದನ್ನು ತಿಳಿದು ಕೆವಿಜಿ ಬ್ಯಾಂಕಿನ ವಿಭಾಗೀಯ ವ್ಯವಸ್ಥಾಪಕ ಶೇಖರ್‌ ಶೆಟ್ಟಿ  ಸ್ಥಳಕ್ಕೆ ಬಂದರು. ಪ್ರತಿಭಟನಾಕಾರರು ಅವರ  ಜತೆ ವಾಗ್ವಾದ ನಡೆಸಿದರು. ಬಳಿಕ ಶೆಟ್ಟಿ ಅವರು ರೈತರ ಮನವೊಲಿಸಿ, ನಾಲ್ವರು ರೈತರನ್ನು ಬ್ಯಾಂಕಿನೊಳಗೆ ಕರೆದು ಕೊಂಡು ಹೋದರು. ಅವರೊಂದಿಗೆ ಚರ್ಚಿಸಿ ಎರಡು ಮೂರು ದಿನದಲ್ಲಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು ಎಂದು ರೈತ ಎಸ್.ವೈ.ಸಂತಿ ಪತ್ರಿಕೆಗೆ ತಿಳಿಸಿದರು.

₹ 34 ಕೋಟಿ ಬಿಡುಗಡೆ
2015–16ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಂತ್ರಿಕ ಕಾರಣಗಳಿಂದ ಜಿಲ್ಲೆಯ 34,800 ರೈತರಿಗೆ ತಡೆಹಿಡಿಯಲಾಗಿದ್ದ ₹ 34.22 ಕೋಟಿ ಬೆಳೆವಿಮೆ ಪರಿಹಾರವನ್ನು ಸರ್ಕಾರಿ ಸ್ವಾಮ್ಯದ ಭಾರತೀಯ ಕೃಷಿ ವಿಮಾ ಕಂಪೆನಿ (ಎಐಸಿ) ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಮೊತ್ತವು ಜಿಲ್ಲೆಯಲ್ಲಿ ವಿಮೆ ಪಾಲುದಾರಿಕೆ ಹೊಂದಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಕೆನರಾ ಬ್ಯಾಂಕ್, ಕೆಸಿಸಿ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕುಗಳಿಗೆ ವರ್ಗಾವಣೆ ಆಗಿದೆ. ಆದರೆ, ಬೆಳೆಹಾನಿ ಪರಿಹಾರವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಎಂಬ ಜಿಲ್ಲಾಡಳಿತದ ಸೂಚನೆ ಇದ್ದರೂ, ಬ್ಯಾಂಕುಗಳು ರೈತರ ಖಾತೆಗೆ ಜಮೆ ಆಗುವ ಮೊತ್ತವನ್ನು ಕಡಿತ ಮಾಡುತ್ತಿವೆ.

ಪ್ರತಿಭಟನೆಯಲ್ಲಿ ಆರ್.ಕೆ.ಕುಲಕರ್ಣಿ, ವಿರೂಪಾಕ್ಷ ಕಟಕಟಿ, ಶಶಿ ಅಕ್ಕಿ, ನಿಂಗಪ್ಪ ತಳವಾರ, ಎಸ್.ಕೆ.ಹೂಗಾರ, ಕೆ.ಎಸ್.ಹಡಪದ, ಬಿ.ಎಸ್.ಹಾದಿ ಮನಿ, ಎ.ಎಫ.ನದಾಫ, ವಿ.ಎನ್.ಬನ್ನಿಕೊಪ್ಪ, ಎಸ್.ಕೆ.ಸಂಕನಗೌಡ, ಮುದಕಪ್ಪ ಸಂಕನಗೌಡ್ರ, ಶಂಕರಗೌಡ ಹುಚ್ಚನಗೌಡ್ರ, ಕೆ.ಎಸ್.ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT