ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಟ್ಟಿಗೆಯಂಥಾ ಮನೀನ ಹಾಸ್ಟೆಲ್’

Last Updated 11 ಜನವರಿ 2017, 8:13 IST
ಅಕ್ಷರ ಗಾತ್ರ

ಹಾವೇರಿ: ‘ನಮ್ಮ ಹಾಸ್ಟೆಲ್ಲಿಗೆ ಸ್ವಂತಕ್ಕಂತ ಕಟ್ಟಡಾ ಇಲ್ರಿ. ದನದ ಕೊಟ್ಟಿಗೆ ಅಂಥಾ ಒಂದು ಮಹಡಿ ಮನಿ ಬಾಡಿಗಿ ತೊಗೊಂಡು, ಅದರಾಗ... ಹಾಸ್ಟೆಲ್‌ ಮಾಡ್ಯಾರ್ರಿ. ಕೆಳಗೊಂದು– ಮ್ಯಾಲೊಂದು ದೊಡ್ಡ ಹಾಲ್‌ ಅದಾವ್ರಿ. ಎಲ್ಲಾರೂ ಅದರಾಗ ಮಕ್ಕೋಬೇಕು. ಪೀರಿಯಡ್ ಬಂದಾಗಂತೂ ಹೆಣ್ಮಕ್ಳ ಪಾಡು ಬ್ಯಾಡದು. ಬಟ್ಟಿ ಒಗದು ಒಣಗಿಸಾಕೂ ಬ್ಯಾರೆ ಜಾಗಾ ಇಲ್ಲ...’

ಜಿಲ್ಲೆಯ ಬ್ಯಾಡಗಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿನಿ ಯೊಬ್ಬಳು (ಹೆಸರು ಬಹಿರಂಗ ಪಡಿಸಲು ಇಚ್ಛಿಸದ) ಪರಿಸ್ಥಿತಿಯನ್ನು ತೋಡಿ ಕೊಂಡದ್ದು ಹೀಗೆ.  

ತಮಗಿರುವುದು ಕೊಠಡಿ ಸಮಸ್ಯೆ ಮಾತ್ರವಲ್ಲ. ಹೆಣ್ಣುಮಕ್ಕಳು ಎದುರಿಸುವ ಸಾಕಷ್ಟು ಸಮಸ್ಯೆಗಳನ್ನು ಹೇಳಿಕೊಳ್ಳ ಲಾಗದು. ಹೇಳಿದರೆ ವಾರ್ಡನ್‌ ಸಿಟ್ಟಿಗೆ ಗುರಿಯಾಗುವ ಅಪಾಯವಿದೆ ಜೊತೆಗೆ ಮನೆಯಲ್ಲಿಯೂ ಬೈಯುತ್ತಾರೆ. ಆದ್ದರಿಂದ ಎಲ್ಲವನ್ನೂ ಸಹಿಸಿಕೊಂಡು ಹೋಗಬೇಕಾಗುತ್ತದೆ ಎನ್ನುತ್ತಾರೆ ಅಲ್ಲಿಯ ವಿದ್ಯಾರ್ಥಿನಿಯರು.

ಸುಮಾರು 100 ವಿದ್ಯಾರ್ಥಿನಿಯರು ವಾಸಿಸುವ, ಬ್ಯಾಡಗಿಯ ಈ ಬಿಸಿಎಂ ವಸತಿ ನಿಲಯದ ಸಮಸ್ಯೆಯು ಜಿಲ್ಲೆಯ ಎಲ್ಲ ವಸತಿ ನಿಲಯಗಳ ಒಟ್ಟು ಸಮಸ್ಯೆಯನ್ನು ಪ್ರತಿಬಿಂಬಿಸುವಂತಿದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೊರತು ಪಡಿಸಿ, ಬಹುತೇಕ ಬಾಲಕಿಯರ ವಸತಿನಿಲಯಗಳು ಬಾಡಿಗೆ ಕಟ್ಟಡದಲ್ಲಿಯೇ ಇವೆ. ಇನ್ನೂ ಕೆಲವು ಆಗಾಗ್ಗೆ ಕಟ್ಟಡದಿಂದ ಕಟ್ಟಡಕ್ಕೆ ಬದಲಾವಣೆ ಹೊಂದುತ್ತದೆ. ಆಗ ಬಾಲಕಿ ಯರೂ ವಲಸೆ ಹೋಗುವವರಂತೆ ಹೋಗಬೇಕು. ಅಲ್ಲದೇ ನೀರು, ಬಟ್ಟೆ ತೊಳೆಯುವ, ಒಣಗಿಸುವ ಸ್ಥಳ, ಮಲ ಗುವ ಕೊಠಡಿ, ಸುರಕ್ಷತೆ ಹೀಗೆ ಮತ್ತಿತರ ಸಮಸ್ಯೆಗಳನ್ನು ಅವರನ್ನು ನಿರಂತರವಾಗಿ ಎದುರಿಸುತ್ತಲೇ ಇರುತ್ತಾರೆ. 

ಅಧಿಕ ಬಾಡಿಗೆ–ಅಸುರಕ್ಷಿತ ಕಟ್ಟಡ: ಹಾವೇರಿಯಲ್ಲಿರುವ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯ ಸೇರಿದಂತೆ ಜಿಲ್ಲೆಯ ಕೆಲವು ನಿಲಯಗಳು ನಗರದ ಹೊರವಲಯದಲ್ಲಿವೆ. ಇಲ್ಲಿನ ವಿದ್ಯಾರ್ಥಿನಿಯರು ಪ್ರತಿನಿತ್ಯ ಶಾಲೆ, ಕಾಲೇಜಿಗೆ ತೆರಳಲು ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ.

‘ಈ ಬಾಡಿಗೆ ಕಟ್ಟಡಗಳಿಗೆ ಇಲಾಖೆಗಳು ಅಧಿಕ ಬಾಡಿಗೆ ನೀಡುತ್ತವೆ. ಅದರ ಬದಲಾಗಿ, ಸ್ವಂತ ಕಟ್ಟಡ ನಿರ್ಮಿಸಬಹುದು. ಅಲ್ಲದೇ, ಕೆಲವೆಡೆ ರಾಜಕೀಯ ಒತ್ತಡಕ್ಕೆ ಮಣಿದು ಸುರಕ್ಷಿತವಲ್ಲದ, ಕೊಠಡಿಗಳಿಲ್ಲದ ಕಟ್ಟಡವನ್ನು ಬಾಡಿಗೆ ಪಡೆಯುತ್ತಾರೆ. ಕೆಲವು ಹಾಸ್ಟೆಲ್‌ಗಳು ಆರಂಭವಾಗಿ ಹತ್ತು ವರ್ಷವಾಗುತ್ತ ಬಂದರೂ ಸ್ವಂತ ಕಟ್ಟಡಗಳಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿ ಗಳೂ ಪ್ರಯತ್ನಿಸುತ್ತಿಲ್ಲ’ ಎನ್ನುತ್ತಾರೆ ಜಿಲ್ಲೆಯ ಬಾಲಕಿಯರ ಹಾಸ್ಟೆಲ್‌ಗಳ ಸಮಸ್ಯೆಗಳ ಪರವಾಗಿ ಹೋರಾಟ ನಡೆಸುತ್ತಿರುವ ಎಸ್‌ಎಫ್‌ಐ ಜಿಲ್ಲಾ ಘಟಕ ಅಧ್ಯಕ್ಷೆ ರೇಣುಕಾ ಕಹಾರೆ.

ವಾರ್ಡನ್: ‘ಒಬ್ಬರೇ ವಾರ್ಡನ್ 2–3 ಹಾಸ್ಟೆಲ್‌ ಜವಾಬ್ದಾರಿ ಹೊತ್ತಿರುತ್ತಾರೆ. ಮೇಲಾಗಿ ಅವರೂ ಗುತ್ತಿಗೆ ನೌಕರರು. ಹೀಗಾಗಿ ಅವರ ವೈಯಕ್ತಿಕ ಸಮಸ್ಯೆಗಳ ನಡುವೆಯೇ ಅಷ್ಟೊಂದು ವಸತಿ ನಿಲಯ ನಿಭಾಯಿಸುವುದು ಅಸಾಧ್ಯ. ಕಾಯಂ ಸಿಬ್ಬಂದಿ ಅಲ್ಲದ ಕಾರಣ ಹೊಣೆಗಾರಿಕೆ ಯೂ ಕಡಿಮೆ. ಗುತ್ತಿಗೆ ಪದ್ಧತಿಯಿಂದಾಗಿ ಹಾಸ್ಟೆಲ್ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ’ ಎನ್ನುತ್ತಾರೆ ವಿದ್ಯಾರ್ಥಿ, ಎಸ್ಎಫ್‌ಐ ಮುಖಂಡ ಸುಭಾಸ್.

ಆಹಾರ ಭತ್ಯೆ  ಸಾಲದು...
‘ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ₹ 1,300, ಮೆಟ್ರಿಕ್ ನಂತರದವರಿಗೆ ₹ 1,400 ಆಹಾರ ಭತ್ಯೆ ನೀಡುತ್ತಾರೆ. ಈ ಭತ್ಯೆಯಲ್ಲೇ ನಾವು ಅಡುಗೆ ಅನಿಲವನ್ನೂ ಖರೀದಿಸಬೇಕು. ಒಬ್ಬರಿಗೆ ದಿನಕ್ಕೆ ₹40ರಿಂದ ₹42 ಖರ್ಚು ಮಾಡಬಹುದು. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಹಾಗೂ ತಿಂಗಳಿಗೆ ಎರಡು ಬಾರಿ ಪೌಷ್ಟಿಕ ಆಹಾರ ( ಮೊಟ್ಟೆ, ಹಾಲು ಇತ್ಯಾದಿ) ನೀಡಲು ಸಾಧ್ಯವೇ?’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ವಾರ್ಡನ್ ಒಬ್ಬರು ಮರುಸವಾಲು ಹಾಕಿದರು.

‘ಇಂದಿನ ಜೀವನಾವಶ್ಯಕ ಬೆಲೆಗೆ ತಕ್ಕಂತೆ ಪ್ರತಿ ವಿದ್ಯಾರ್ಥಿನಿಯರಿಗೆ ತಿಂಗಳಿಗೆ ₹ 3,600 ಆಹಾರಭತ್ಯೆ, ಸುರಕ್ಷಿತವಾದ ಸ್ವಂತ ಕಟ್ಟಡಗಳು, ಕಾಯಂ ಸಿಬ್ಬಂದಿ ನೇಮಕ ಮಾಡುವ ಮೂಲಕ ಸರ್ಕಾರ  ವಿದ್ಯಾರ್ಥಿನಿಯರ ಸಮಸ್ಯೆಗೆ ಸ್ಪಂದಿಸಬೇಕು’ ಎಂದು ರೇಣುಕಾ ಕಹಾರೆ ಮತ್ತು ಸುಭಾಸ್ ಒತ್ತಾಯಿಸುತ್ತಾರೆ.

ಈ ಪೈಕಿ ಹಾವೇರಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಬಾಲಕಿಯರ ವಸತಿ ನಿಲಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಬಾಲಕಿಯ ವಸತಿ ನಿಲಯಗಳು ಸುಸಜ್ಜಿತ ಕಟ್ಟಡಗಳನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT