ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಜಿಲ್ಲೆ ರಚನೆ ಆಗ್ರಹಿಸಿ ಮೆರವಣಿಗೆ

Last Updated 11 ಜನವರಿ 2017, 8:51 IST
ಅಕ್ಷರ ಗಾತ್ರ

ಶಿರಸಿ:  ಭೌಗೋಳಿಕವಾಗಿ ವಿಸ್ತಾರವಾಗಿ­ರುವ ಉತ್ತರ ಕನ್ನಡ ಜಿಲ್ಲೆಯನ್ನು ಇಬ್ಭಾಗ ಮಾಡಿ ಘಟ್ಟದ ಮೇಲಿನ ತಾಲ್ಲೂಕು­ಗಳನ್ನೊಳಗೊಂಡ ಪ್ರತ್ಯೇಕ ಜಿಲ್ಲೆ ರಚನೆಯಾಗಬೇಕು ಹಾಗೂ ನೂತನ ಜಿಲ್ಲೆಗೆ ಶಿರಸಿ ಜಿಲ್ಲಾ ಕೇಂದ್ರ­ವಾಗಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಮಂಗಳವಾರ ಇಲ್ಲಿ ಮೆರವಣಿಗೆ ನಡೆಸಿದರು.

ಶಿರಸಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ಮಾರಿಕಾಂಬಾ ದೇವಾ­ಲಯ­ದಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉಪವಿಭಾಗಾಧಿಕಾರಿ ಕಚೇರಿ ತಲುಪಿತು. ಉಪ ತಹಶೀಲ್ದಾರರ ಮೂಲಕ ಮುಖ್ಯ­ಮಂತ್ರಿಗೆ ಮನವಿ ಸಲ್ಲಿಸಲಾಯಿತು. ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ ‘ಜಿಲ್ಲೆ ರಚನೆ ಆಗುವ­ವರೆಗೂ ಹೋರಾಟ ನಿರಂತರವಾಗಿ­ರುತ್ತದೆ.

ಯಾವು­ದೇ ಸ್ವಹಿತಾಸಕ್ತಿ ಶಕ್ತಿಗ­ಳಿಂದ ಹೋರಾಟ ಹಿಮ್ಮುಖವಾಗದು’ ಎಂದರು.  ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ಮಾತನಾಡಿ ‘ಜಿಲ್ಲಾ ಕೇಂದ್ರದ ಸ್ಥಾನ ದೊರೆತರೆ ಸರ್ಕಾರದಿಂದ ಹೆಚ್ಚಿನ ಅನುದಾನ ನಗರಕ್ಕೆ ಲಭ್ಯವಾಗಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಸರ್ಕಾರಿ, ಖಾಸಗಿ ಕೆಲಸಕ್ಕೆ ಜಿಲ್ಲಾ ಕೇಂದ್ರ ಕಾರವಾರಕ್ಕೆ ಅಲೆದಾಡಿ ಜನರು ಸೋತಿದ್ದಾರೆ. ಸಮಯ ಹಾಗೂ ಹಣದ ಅಪವ್ಯಯ ತಪ್ಪಿಸಲು ಶಿರಸಿ ಪ್ರತ್ಯೇಕ ಜಿಲ್ಲೆ ರಚನೆ ಅನಿವಾರ್ಯ’ ಎಂದರು.

ಹೋರಾಟ ಸಮಿತಿಯ ಸಿದ್ದಾಪುರ ಘಟಕದ ಅಧ್ಯಕ್ಷ ಸಿ.ಎಸ್.ಗೌಡರ್ ಮಾತನಾಡಿ, ಅಭಿವೃದ್ಧಿ ದೃಷ್ಟಿಯಿಂದ ಘಟ್ಟದ ಮೇಲಿನ ತಾಲ್ಲೂಕುಗಳು ಹಿಂದೆ ಉಳಿದಿವೆ. ಸಿದ್ದಾಪುರ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಠರಾವು ಸ್ವೀಕರಿಸಲಾಗುವುದು. ಅದೇ ರೀತಿ ಘಟ್ಟದ ಮೇಲಿನ ಇನ್ನುಳಿದ ತಾಲ್ಲೂಕುಗಳಲ್ಲೂ ಆಗಬೇಕು ಎಂದರು.

ಶಿರಸಿ ಜಿಲ್ಲೆ ರಚನೆಗೆ ಪಕ್ಷಾತೀತ ಹೋರಾಟ ನಡೆಯಬೇಕು ಎಂದು ವಿಶ್ವನಾಥ ಶರ್ಮಾ ನಾಡಗುಳಿ ಹೇಳಿದರು. ವಿಭಿನ್ನ ಸಾಂಸ್ಕೃತಿಕತೆ ಹೊಂದಿರುವ ಘಟ್ಟದ ಮೇಲಿನ ಭಾಗ ಹಾಗೂ ಕರಾವಳಿ ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಳ್ಳಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷೆ ರಮಾ ಪಟವರ್ಧನ ಹೇಳಿದರು.

ರಾಜ್ಯ ಸರ್ಕಾರ ಹೊಸ 33 ತಾಲ್ಲೂಕುಗಳ ರಚನೆಗೆ ಮುಂದಾಗಿದೆ. ಇವುಗಳಲ್ಲಿ ದಾಂಡೇಲಿ, ಬನವಾಸಿ, ಗೋಕರ್ಣ ಸೇರಿಕೊಂಡರೆ ಜಿಲ್ಲೆಯಲ್ಲಿ ಹಾಲಿ ಇರುವ 11 ತಾಲ್ಲೂಕುಗಳ ಜತೆ ಹೊಸ ತಾಲ್ಲೂಕುಗಳು ಸೇರ್ಪಡೆ­ಯಾಗುತ್ತವೆ. ಆಡಳಿತಾತ್ಮಕ­ವಾಗಿ ಇಬ್ಭಾಗ ಅನಿವಾರ್ಯವಾಗುತ್ತದೆ ಎಂದು ಎಪಿಎಂಸಿ ಸದಸ್ಯ ಸಿ.ಎಫ್. ಈರೇಶ ಹೇಳಿದರು. 

‘ಈಗ ಇರುವ 11 ತಾಲ್ಲೂಕುಗಳ ಬದಲಾಗಿ ಅಧಿಕಾರಿಗಳ ವ್ಯಾಪ್ತಿಗೆ ಕಡಿಮೆ ತಾಲ್ಲೂಕುಗಳು ಸೇರ್ಪಡೆಯಾಗುವುದರಿಂದ ಅಧಿಕಾರಿ­ಗಳು ದಕ್ಷತೆಯಿಂದ ತ್ವರಿತವಾಗಿ ಸಾರ್ವಜನಿಕರ ಕೆಲಸ ಮಾಡಿಕೊಡ­ಬಹುದು. ಜಿಲ್ಲಾಧಿಕಾರಿಗೆ ಆಡಳಿತ ನಿರ್ವಹಣೆಯ ಭಾರ ತಗ್ಗುತ್ತದೆ. ಪ್ರತ್ಯೇಕ ಜಿಲ್ಲೆಯಾದರೆ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ದೃಷ್ಟಿಕೋನದಿಂಧ ಗುರಿ ಸಾಧನೆ ಸುಲಭವಾಗುತ್ತದೆ’ ಎಂದು ಮನವಿಯಲ್ಲಿ ವಿನಂತಿಸಲಾಗಿದೆ. ಹೋರಾಟ ಸಮಿತಿ ಕಾರ್ಯದರ್ಶಿ ಮಂಜುನಾಥ ಮೊಗೇರ, ಅಧ್ಯಯನ ಸಮಿತಿ ಅಧ್ಯಕ್ಷ ಮಂಜುನಾಥ ಭಟ್, ಉಪಾಧ್ಯಕ್ಷ ಗಣಪತಿ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT