ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಣೆ ಒಂದು, ವಿದ್ಯಾರ್ಥಿನಿಯರು 13!

Last Updated 11 ಜನವರಿ 2017, 8:56 IST
ಅಕ್ಷರ ಗಾತ್ರ

ಕಾರವಾರ: ಕಿಷ್ಕೆಂಧೆಯಂತಹ ಚಿಕ್ಕ ಕೊಠಡಿಯಲ್ಲಿ ಮಲಗುವುದು ಬರೋಬ್ಬರಿ 13 ವಿದ್ಯಾರ್ಥಿನಿಯರು! ಇವರಲ್ಲಿ ನಾಲ್ವರು ಮಂಚದ ಮೇಲಿದ್ದರೆ, ಉಳಿದವರಿಗೆ ನೆಲವೇ ಆಶ್ರಯ. ಅನೇಕ ವಿದ್ಯಾರ್ಥಿನಿಯರಿಗೆ ನಿಲಯದ ಪಡಸಾಲೆಯೇ ಓದಿನ ತಾಣ.

ಇದು ನಗರದ ಬಾಡದಲ್ಲಿರುವ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯದ ಶೋಚನೀಯ ಸ್ಥಿತಿ. ಇಲ್ಲಿನ ಅವ್ಯವಸ್ಥೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಹೋದರೆ ಸಮಸ್ಯೆಗಳ ಸರಮಾಲೆಯೇ ಬಿಚ್ಚಿಕೊ­ಳ್ಳುತ್ತದೆ. ಈ ಕಟ್ಟಡದ ಮೊದಲನೇ ಮಹಡಿಯಲ್ಲಿರುವ ಮೆಟ್ರಿಕ್‌ಪೂರ್ವ ಬಾಲಕಿಯರ ವಸತಿನಿಲಯದ ಸಮಸ್ಯೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.

ಈ ನಿಲಯದಲ್ಲಿ ಒಟ್ಟು ಐದು ಮಲಗುವ ಕೋಣೆಗಳಿದ್ದು, ಎಲ್ಲವೂ ಕಿರಿದಾಗಿವೆ. ಪಿಯುಸಿ, ಡಿಪ್ಲೊಮಾ, ಬಿ.ಎಡ್‌, ಪದವಿ ಹಾಗೂ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ 50 ವಿದ್ಯಾರ್ಥಿನಿಯರು ಇಲ್ಲಿದ್ದಾರೆ. ಬಯೋಮೆಟ್ರಿಕ್‌ ಹಾಜರಾತಿ, ದೂರದರ್ಶನ ಸೌಲಭ್ಯವಿದ್ದು, ವಿದ್ಯಾರ್ಥಿನಿಯರ ಸುರಕ್ಷತೆ ದೃಷ್ಟಿಯಿಂದ ಎರಡ್ಮೂರು ಕಡೆಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದೆ.

ಅವ್ಯವಸ್ಥೆಯ ಗೂಡು
ನಾಲ್ವರು ವಿದ್ಯಾರ್ಥಿನಿಯರು ಇರ­ಬಹುದಾದ ಕೋಣೆಯಲ್ಲಿ 12ರಿಂದ 13 ಮಂದಿ ಇದ್ದಾರೆ. ಅವರಿಗೆ ನೀಡಿರುವ ಅಲ್ಯುಮಿನಿಯಂ ಪೆಟ್ಟಿಗೆಯನ್ನು ಇಡಲು ಸ್ಥಳಾವಕಾಶ ಇಲ್ಲದೇ ಮಂಚದ ಅಡಿಗೆ ತುರುಕಲಾಗಿದೆ. ವಿದ್ಯಾರ್ಥಿನಿಯರು ತಮ್ಮ ಬಟ್ಟೆ ಹಾಗೂ ಪುಸ್ತಕಗಳನ್ನು ಒಪ್ಪವಾಗಿ ಜೋಡಿಸಿಟ್ಟುಕೊಳ್ಳಲು ಸಹ ಅಲ್ಲಿ ಸ್ಥಳದ ಅಭಾವ ಇದೆ. ಅಡುಗೆ ಕೋಣೆ, ಊಟ ಮಾಡುವ ಕೋಣೆ ಹಾಗೂ ಕಚೇರಿಯ ಕೊಠಡಿ ಪ್ರತ್ಯೇಕವಾಗಿದ್ದು, ಅವುಗಳು ಸಹ ಕಿರಿ­ದಾಗಿವೆ. ಇನ್ನೂ ನಿಲಯದಲ್ಲಿ 4 ಶೌಚಾಲಯ ಹಾಗೂ 4  ಸ್ನಾನಗೃಹಗ­ಳಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿ­ಸಿದರೆ ಇದು ತೀರಾ ಕಡಿಮೆ ಇದೆ.  ಕೆಲವು ಬಾಗಿಲು ಹಾಳಾಗಿವೆ. ಜತೆಗೆ ಇಲ್ಲಿ ಖಾಲಿ ಇರುವ ವಾರ್ಡನ್‌ ಹುದ್ದೆ  ಜವಾಬ್ದಾರಿಯನ್ನು ಮೆಟ್ರಿಕ್‌­ಪೂರ್ವ ಬಾಲ­­ಕಿಯರ ನಿಲಯದ ವಾರ್ಡನ್‌ ಅವರೇ ಹೆಚ್ಚುವರಿ ನಿಭಾ­ಯಿಸುತ್ತಿದ್ದಾರೆ.

ಓದಲಿಕ್ಕೆ ಆಗಲ್ಲ
‘ಕಿರಿದಾದ ಕೊಠಡಿಯಲ್ಲಿ 13 ಮಂದಿ ಮಲಗುವುದು ಅಸಾಧ್ಯ. ಎಲ್ಲರೂ ಒಟ್ಟಿಗೆ ಸೇರಿದರೆ ಮಲಗು­ವುದಿರಲಿ, ಕುಳಿತುಕೊಳ್ಳಲೂ ಆಗುವು­ದಿಲ್ಲ. ಇನ್ನೂ ಓದಲು ಊಟದ ಕೋಣೆ ಹಾಗೂ ಪಡಸಾಲೆಯನ್ನು ಆಶ್ರಯಿಸ­ಬೇಕಿದೆ. ಮೊದಲ ಮಹಡಿಯಲ್ಲಿ ಮೆಟ್ರಿಕ್ ಪೂರ್ವ ನಿಲಯವಿದ್ದು, ಅಲ್ಲಿನ ಬಾಲಕಿಯರ ಗದ್ದಲದಿಂದ ಓದಿಗೆ ಇನ್ನಷ್ಟು ತೊಂದರೆಯಾಗುತ್ತಿದೆ. ಬಿಸಿ ನೀರಿನ ವ್ಯವಸ್ಥೆ ಇಲ್ಲದ ಕಾರಣ ಸ್ನಾನಕ್ಕೆ ತಣ್ಣೀರೇ ಗತಿ. ಸ್ನಾನಗೃಹ ಹಾಗೂ ಶೌಚಾಲಯ ನಾಲ್ಕೇ ಇರುವುದರಿಂದ ಮುಂಜಾನೆ 4 ಗಂಟೆಗೆ ಎದ್ದು ತರಗತಿಗೆ ಹೋಗಲು ಸಿದ್ಧವಾಗಬೇಕು’ ಎಂದು ಶಿವಾಜಿ ಬಿ.ಎಡ್‌ ಕಾಲೇಜಿನ ವಿದ್ಯಾರ್ಥಿನಿ ರಮ್ಯಾ ಪಟಗಾರ ವಿವರಿಸುತ್ತಾರೆ. 

ಗ್ರಂಥಾಲಯ ಇಲ್ಲ:
‘ನಿಲಯದಲ್ಲಿ ಗ್ರಂಥಾಲಯ ವ್ಯವಸ್ಥೆ ಇಲ್ಲ. ಇರುವ ನಾಲ್ಕು ಕಂಪ್ಯೂಟರ್‌ಗಳಲ್ಲಿ ಎರಡು ಹಾಳಾಗಿದೆ. ಇನ್ನೆರಡನ್ನು ಕಚೇರಿ ಕೆಲಸಕ್ಕೆ ಮಾತ್ರ ಮೀಸಲಿಡಲಾಗಿದೆ. ಹೀಗಾಗಿ ನಮ್ಮ ಬಳಕೆಗೆ ಅವು ಲಭ್ಯವಿಲ್ಲ. ಕಂಪ್ಯೂಟರ್‌ ಅಗತ್ಯವಿದ್ದರೆ ನಾವು ಹೊರಗಿನ ಸೈಬರ್‌ ಕೇಂದ್ರಕ್ಕೆ ಹೋಗ­ಬೇಕು. ಒಗೆದ ಬಟ್ಟೆಗಳನ್ನು ಒಣಗಿಸಲು ಕೂಡ ಸ್ಥಳಾವಕಾಶ ಕೊರತೆ ಇದೆ’ ಎನ್ನುತ್ತಾರೆ ಪಿಯುಸಿ ವಿದ್ಯಾರ್ಥಿನಿ ಪಿಂಕಿ.

ಜಾಗ ಮಂಜೂರು:
‘ಬಿ.ಸಿ.ಎಂ ವಸತಿನಿಲಯಕ್ಕೆ ಬಿಣಗಾದಲ್ಲಿ ತಹಶೀಲ್ದಾರ್‌ ಅವರು ಒಂದು ಗುಂಟೆ ಜಾಗ ಮಂಜೂರು ಮಾಡಿದ್ದಾರೆ. ಒಂದೇ ಕಟ್ಟಡದಲ್ಲಿ ನಡೆಯುತ್ತಿರುವ ಮೆಟ್ರಿಕ್‌ಪೂರ್ವ ಹಾಗೂ ಮೆಟ್ರಿಕ್‌ ನಂತರ ಬಾಲಕಿಯರ ವಸತಿನಿಲಗಳಲ್ಲಿ ಒಂದು ಹೊಸ ಜಾಗಕ್ಕೆ ಸ್ಥಳಾಂತರಗೊಂಡರೆ ಇನ್ನೊಂದು ನಿಲಯದ ಜಾಗದ ಕೊರತೆ ನೀಗಲಿದೆ. ನಿಲಯದಲ್ಲಿ ಸೌರ ವಿದ್ಯುತ್‌ ವ್ಯವಸ್ಥೆಯಿದ್ದು, ಬಿಸಿನೀರು ಲಭ್ಯವಿದೆ. ವಿದ್ಯಾರ್ಥಿನಿಯರು ಸರಿಯಾಗಿ ಬಳಕೆ ಮಾಡದ ಕಾರಣ ಅದು ಬೇಗ ಖಾಲಿ ಆಗುತ್ತದೆ’ ಎಂದು ನಿಲಯದ ವಾರ್ಡನ್‌ ಮಂಜುಳಾ ನಾಯ್ಕ  ತಿಳಿಸಿದರು.

ಮೆಟ್ರಿಕ್‌ಪೂರ್ವ ನಿಲಯ :  ಜಾಗದ ಕೊರತೆ
ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯ ನೆಲ ಅಂತಸ್ತಿನ­ಲ್ಲಿದ್ದರೆ, ಇದೇ ಕಟ್ಟಡದ ಮೊದಲ ಮಹಡಿಯಲ್ಲಿ ಮೆಟ್ರಿಕ್‌ ಪೂರ್ವ ಬಾಲಕಿಯರ ವಸತಿ ನಿಲಯವಿದೆ. ಇಲ್ಲಿಯೂ ಒಟ್ಟು 50 ವಿದ್ಯಾರ್ಥಿನಿ­ಯರು ಇದ್ದು, ಒಂದು ಕೊಠಡಿಯಲ್ಲಿ 10ರಿಂದ 15 ಮಂದಿ ಇದ್ದಾರೆ. ಇಲ್ಲಿಯೂ ಒತ್ತೊಟ್ಟಿಗೆ ಮಲ­ಗಬೇ­ಕಾದ ಪರಿಸ್ಥಿತಿ ಇದೆ. ಇರುವ ಕೆಲ ಹಾಸಿಗೆ ಹರಿದು ಹೋಗಿವೆ.  ಹೆಂಚಿನ ಚಾವಣಿ ಮಳೆಗಾಲದಲ್ಲಿ ಸೋರು­ತ್ತದೆ.  ದುರಸ್ತಿ ಮಾಡಿಸಿ­ದ್ದರೂ  ನೀರು ಇಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT