ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪ ಸಾಬೀತಾದರೆ ರಾಜೀನಾಮೆ

Last Updated 11 ಜನವರಿ 2017, 8:58 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಚೆಕ್‌ ಡ್ಯಾಂ ಪೂರ್ಣಗೊಳಿಸದೇ ಬಿಲ್ ಪಡೆದು ₹ 2.5 ಕೋಟಿ ಅವ್ಯವಹಾರ ನಡೆಸಿರುವುದಾಗಿ ನನ್ನ ವಿರುದ್ಧ ಮಾಡಿರುವ ಆರೋಪವನ್ನು ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ಮಹಾಂತೇಶ ಊದಪುಡಿ ಸಾಬೀತುಪಡಿಸಿದಲ್ಲಿ 24 ಗಂಟೆಯೊಳಗೆ ರಾಜೀನಾಮೆ ನೀಡುವೆ’ ಎಂದು ಮುಧೋಳ ಶಾಸಕ ಗೋವಿಂದ ಕಾರಜೋಳ ಸವಾಲು ಹಾಕಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಘಟಪ್ರಭಾ ಬಲದಂಡೆ ಉಪಕಾಲುವೆ ಕಾಮಗಾರಿ ಹಾಗೂ ದಾದನಟ್ಟಿ ಗ್ರಾಮದಲ್ಲಿ ಐದು ಚೆಕ್ ಡ್ಯಾಂ ನಿರ್ಮಾಣದಲ್ಲಿ ಅವ್ಯವಹಾರ ನಡೆಸಿರುವುದಾಗಿ ಆರೋಪಿಸಿದ್ದಾರೆ. ಅವರು ಏಳು ದಿನಗಳ ಒಳಗಾಗಿ ಆರೋಪ ಸಾಬೀತು ಮಾಡಿದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಜೊತೆಗೆ ಲೋಕಾಪುರದ ಬಸವಣ್ಣನ ಮೂರ್ತಿ ಮುಂದೆ ಕ್ಷಮೆ ಕೇಳಲಿದ್ದೇನೆ’ ಎಂದರು.

‘ನಿಗದಿತ ಗಡುವಿನಗೊಳಗೆ ಅವರು ಆರೋಪ ಸಾಬೀತುಪಡಿಸದಿದ್ದಲ್ಲಿ ಅವರು ರಾಜೀನಾಮೆ ನೀಡಿ, ಬಸವಣ್ಣನ ಮೂರ್ತಿ ಎದುರು ನಿಂತು ಕ್ಷಮೆ ಕೇಳಲು ಸಿದ್ಧರಾಗಲಿ’ ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿಗೆ ಪತ್ರ: ಜಿಲ್ಲೆಯಲ್ಲಿ ನಡೆಯಲಿರುವ ಸರ್ಕಾರಿ ಕಾರ್ಯಕ್ರಮಗಳಿಗೆ ತಮ್ಮನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಲಾಗುತ್ತಿದೆ ಎಂದು ತಿಮ್ಮಾಪುರ ಆರೋಪಿಸುತ್ತಾರೆ. ವಾಸ್ತವವಾಗಿ ಅವರು ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಮತದಾರ. ಮುಧೋಳ ತಾಲ್ಲೂಕಿನ ಮತದಾರರ ಪಟ್ಟಿಯಲ್ಲಿ ಇದ್ದ ಅವರ ಹೆಸರನ್ನು ಅಲ್ಲಿ ರದ್ದುಗೊಳಿಸಿ ಬೆಂಗಳೂರಿನ ಮತದಾರರಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ.  ಜೊತೆಗೆ ಅವರು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಪ್ರತಿನಿಧಿ ಅಲ್ಲ. ಬದಲಿಗೆ ವಿಧಾನಸಭೆಯಿಂದ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಹಾಗಾಗಿ ಅವರನ್ನು ಕಾರ್ಯಕ್ರಮಕ್ಕೆ ಕರೆಯದಿದ್ದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗುವುದಿಲ್ಲ. ಈ ವಿಚಾರವನ್ನು ಜಿಲ್ಲಾಧಿಕಾರಿಗೆ ಪತ್ರ ಬರೆದು ಸ್ಪಷ್ಟಪಡಿಸಿರುವೆ ಎಂದು ಕಾರಜೋಳ ಹೇಳಿದರು.

ಎಪಿಎಂಸಿ ಚುನಾವಣೆ ಗೆಲುವು: ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಎರಡು ಬಾರಿ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಈಗ ಸಾಲಮನ್ನಾ ಮಾಡಲು ಕೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಕಡೆಗೆ ಕೈತೋರುತ್ತಿದ್ದಾರೆ ಎಂದು ಟೀಕಿಸಿದ ಕಾರಜೋಳ, ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಹಾಗಾಗಿ ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡಲಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ 11 ಲಕ್ಷ ಬಿಪಿಎಲ್ ಕುಟುಂಬದವರು ಕಾರ್ಡ್ ಸಿಗದೇ ಪಡಿತರದಿಂದ ವಂಚಿತರಾಗಿದ್ದಾರೆ. ಆಹಾರ ಸಚಿವರು ತುಘಲಕ್ ದರ್ಬಾರ್ ನಡೆಸುತ್ತಿದ್ದು, ಪಡಿತರದ ಬದಲು ನಗದು ನೀಡುವುದಾಗಿ ಹೇಳುತ್ತಾ ಪಡಿತರ ವ್ಯವಸ್ಥೆಯನ್ನೇ ಮುಚ್ಚಲು ಹೊರಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಭಯದ  ವಾತಾವರಣ  ಸೃಷ್ಟಿ;  ಚರಂತಿಮಠ
‘ಎಪಿಎಂಸಿ ಚುನಾವಣೆ ಪ್ರಚಾರಕ್ಕೆ ಬೊಮ್ಮಣಗಿಗೆ ಹೋಗಿದ್ದಾಗ ವಿರೋಧಿಗಳು ಅಲ್ಲಿ ಕೆಲವರಿಗೆ ಕುಡಿಸಿ ನಮ್ಮ ವಿರುದ್ಧ ಗಲಾಟೆ ಮಾಡಿಸಿದರು. ಕಲ್ಲು ಹಿಡಿದು ಬೆದರಿಸುವ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸುವ ಕೆಲಸವೂ ನಡೆಯಿತು’ ಎಂದು ಸುದ್ದಿಗೋಷ್ಠಿಯಲ್ಲಿದ್ದ ಮಾಜಿ ಶಾಸಕ ವೀರಣ್ಣ ಚರಂತಿಮಠ ಆರೋಪಿಸಿದರು.

ಚುನಾವಣೆಯಲ್ಲಿ ಬಿಜೆಪಿಗೆ ಪೂರಕ ವಾತಾವರಣ ಇದೆ. ಅದನ್ನು ಸಹಿಸದೇ ಭಯದ ವಾತಾವರಣ ನಿರ್ಮಿಸಿ ಮತದಾರರ ಮತಗಟ್ಟೆಗೆ ಬಾರದಂತೆ ತಡೆಯುವ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ವೃತ್ತ ನಿರೀಕ್ಷಕರಿಗೆ ಪಕ್ಷದಿಂದ ಲಿಖಿತವಾಗಿ ಮನವಿ ಮಾಡಲಾಗಿದ್ದು, ಬೊಮ್ಮಣಗಿಯನ್ನು ಅತಿ ಸೂಕ್ಷ್ಮ ಮತಗಟ್ಟೆ ಎಂದು ಘೋಷಿಸಲು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT