ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50:50 ಅನುಪಾತದಲ್ಲಿ ನಿವೇಶನ ವಿತರಿಸಿ

Last Updated 11 ಜನವರಿ 2017, 9:29 IST
ಅಕ್ಷರ ಗಾತ್ರ

ಹಾಸನ: ನಗರದ ಎಸ್‌.ಎಂ.ಕೃಷ್ಣ ನಗರ ಬಡಾವಣೆಗೆ ಭೂಮಿ ನೀಡಿರುವ ರೈತರಿಗೆ 2015ರ ಕೋರ್ಟ್‌ ಆದೇಶ ಪ್ರಕಾರ ನಗರಾಭಿವೃದ್ಧಿ ಪ್ರಾಧಿಕಾರವು 50:50 ಅನುಪಾತದಲ್ಲಿ ನಿವೇಶನ ನೀಡಬೇಕು ಎಂದು ಶಾಸಕ ಎಚ್‌.ಎಸ್‌.ಪ್ರಕಾಶ್‌ ಆಗ್ರಹಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡಾವಣೆ ನಿರ್ಮಾಣಕ್ಕೆ ಸಂಕೇನಹಳ್ಳಿ, ಬೂವನ ಹಳ್ಳಿ ಗ್ರಾಮಗಳಲ್ಲಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೆ ಇದುವರೆಗೆ ಜಮೀನು ಕಳೆದುಕೊಂಡವರಿಗೆ ನಿವೇಶನ ಹಂಚಿಕೆ ಮಾಡಿಲ್ಲ.

ನಗರಾಭಿವೃದ್ಧಿ ಪ್ರಾಧಿಕಾರ ರೈತರಿಂದ ಭೂಮಿ ಸ್ವಾಧೀನಪಡಿಸಿಕೊಂಡಾಗ ಸರ್ಕಾರದ ಆದೇಶದಂತೆ 2009ರಲ್ಲಿ 60;40 ಅನುಪಾತದಲ್ಲಿ ನಿವೇಶನ ನೀಡುವುದಾಗಿ ಹೇಳಿತ್ತು. ಆದರೆ ಆ ಆದೇಶದ ಪ್ರಕಾರ ರೈತರು ಭೂಮಿ ನೀಡಲು ಮುಂದೆ ಬಾರದ ಕಾರಣ 2015ರಲ್ಲಿ 50;50 ರ ಅನುಪಾತದಲ್ಲಿ ನಿವೇಶನ ನೀಡಲು ಸರ್ಕಾರ ಆದೇಶ ಹೊರಡಿಸಿದೆ ಎಂದು ದಾಖಲೆ ಪ್ರದರ್ಶಿಸಿದರು.

2009ರದ ಆದೇಶ ಪ್ರಕಾರ ಹುಡಾ 60;40 ರಂತೆ ನಿವೇಶನ ನೀಡುವುದಾಗಿ ರೈತರೊಂದಿಗೆ ಒಪ್ಪಂದ ಮಾಡಿ ಕೊಂಡಿತ್ತು. ಆದರೆ, ಇದುವರೆಗೂ ನೀಡಿಲ್ಲ. ಹೊಸ ಆದೇಶದಂತೆ ನಿವೇಶನ ಹಂಚಿಕೆ ಮಾಡುವಂತೆ ರೈತರು ಪಟ್ಟು ಹಿಡಿದಿರುವ ಕಾರಣ 50;50ರಂತೆ ಹಂಚಿಕೆ ಮಾಡಲು ತೀರ್ಮಾನಿ ಸಲಾಗಿದೆ. ಇನ್ನು ಭೂಮಿ ಕಳೆದುಕೊಂಡ ಆಯಾ ಗ್ರಾಮಗಳ ರೈತರಿಗೆ ಅಲ್ಲೇ ನಿವೇಶನ ಹಂಚಿಕೆ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡದೆ ಕಂಪ್ಯೂಟರ್‌ ಮೂಲಕ ನಿವೇಶನ ಹಂಚಿಕೆಗೆ ನಿರ್ಧರಿಸಿದೆ. ಇದರ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಬಾಕ್ಸ್‌ನಲ್ಲಿ ಚೀಟಿ ಹಾಕಿ ಸಾರ್ವಜನಿಕವಾಗಿ ಆಯ್ಕೆ ಮಾಡಬೇಕು. ಹದಿನೈದು ದಿನದೊಳಗೆ ನಿವೇಶನದ ದರ ನಿಗದಿ ಮಾಡಬೇಕು. ರೈತರಿಗೆ ನಿವೇಶನ ನೀಡದಿದ್ದರೆ ಮತ್ತೆ ಕೋರ್ಟ್‌ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದರು.

ಸಾಲಗಾಮೆ ರಸ್ತೆಯಿಂದ ಬೇಲೂರುವರೆಗಿನ ಹೊರ ವರ್ತುಲ ರಸ್ತೆಗಾಗಿ ಸ್ವಾಧೀನಪಡಿಸಿಕೊಂಡಿರುವ 14 ಎಕರೆ ಜಮೀನಿಗೆ ಇನ್ನೂ ಪರಿಹಾರ ನೀಡಿಲ್ಲ. ಪರಿಹಾರ ನೀಡಿದ ಬಳಿಕ ನಗರಾಭಿವೃದ್ಧಿ ಪ್ರಾಧಿಕಾರವು ಲೋಕೋ ಪಯೋಗಿ ಇಲಾಖೆಗೆ ಕಾಮಗಾರಿ ಹಸ್ತಾಂತರ ಮಾಡಬೇಕು ಎಂದರು.

ಸರಸ್ವತಿಪುರಂ ನಿಂದ ಎಂಸಿಎಫ್‌ವರೆಗೆ ರಸ್ತೆ ವಿಸ್ತರಣೆಗಾಗಿ ಮರ ಕಡಿದು ಹಾಕಲು ಅನುಮತಿ ನೀಡುವಂತೆ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಹಳೆ ಬಸ್‌ ನಿಲ್ದಾಣದ ಪಕ್ಕ ಇರುವ ಕಟ್ಟಡ ಕೆಡವದ ಹೊರತು ಬಸ್‌ ಸಂಚಾರಕ್ಕೆ ಅನುಮತಿ ನೀಡಿದರೆ ಉಪಯೋಗವಾಗುವುದಿಲ್ಲ ಎಂದರು.

2018ರ ಮಹಾಮಸ್ತಕಾಭಿಷೇಕ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರು ಇದುವರೆಗೂ ಜನಪ್ರತಿನಿಧಿಗಳ ಸಭೆ ಕರೆದಿಲ್ಲ. ಪ್ರಸಕ್ತ ಬಜೆಟ್‌ನಲ್ಲಿಯೇ ಅನುದಾನ ಬಿಡುಗಡೆ ಆಗಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಅನುದಾನ ನೀಡುವುದರಿಂದ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಕರೆದು ಯೋಜನೆ ಪಟ್ಟಿ ಸಿದ್ಧಪಡಿಸಬೇಕು. ಇಲ್ಲಿ ರಾಜಕೀಯ ಬರೆಸಬಾರದು ಎಂದರು. ಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ರಘು ಹೊಂಗೆರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT