ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯವ ನೀರಿಗೆ ಒತ್ತು ನೀಡಲು ಸೂಚನೆ

Last Updated 11 ಜನವರಿ 2017, 10:03 IST
ಅಕ್ಷರ ಗಾತ್ರ

ಮೈಸೂರು: ಕುಡಿಯವ ನೀರು, ಮೇವಿನ ಸಮಸ್ಯೆ ನಿವಾರಣೆಗೆ ಒತ್ತು ನೀಡಲು ಹಾಗೂ ಬೆಳೆವಿಮೆ ನೋಂದಣಿ ಹೆಚ್ಚಿಸಲು ಕ್ರಮವಹಿಸುವಂತೆ ಅಧಿಕಾರಿ­ಗಳಿಗೆ ಸೂಚನೆ ನೀಡಲಾಯಿತು.

ನಗರದ ಮಿನಿವಿಧಾನಸೌಧದ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಲಾಯಿತು.

ಉಪಾಧ್ಯಕ್ಷ ಎನ್‌.ಬಿ.ಮಂಜು, ‘ತಾಲ್ಲೂಕಿನ ಆನಂದೂರು, ಕಲ್ಲೂರು, ಶಿವಮೂರ್ತಿನಗರ ಸೇರಿದಂತೆ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಆನಂದೂರಿನಲ್ಲಿ 7 ಕೊಳವೆ ಬಾವಿಗಳು ಕಾರ್ಯ­ನಿರ್ವಹಿಸುತ್ತಿವೆ ಎಂಬ ಮಾಹಿತಿ ನೀಡಲಾಗಿದೆ.  ಅಲ್ಲಿ ಮೂರು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಅಧ್ಯಕ್ಷೆ ಕಾಳಮ್ಮ, ‘ಕುಡಿಯುವ ನೀರಿನ ಪೂರೈಕೆಗೆ ಒತ್ತು ನೀಡಬೇಕು. ನಿರ್ಲಕ್ಷ್ಯ ವಹಿಸಿದರೆ ಸಹಿಸುವುದಿಲ್ಲ. ಗ್ರಾಮಗಳಲ್ಲಿ ಸ್ವಚ್ಛತೆ ಕೊರತೆ ಇದೆ. ಚರಂಡಿಗಳಲ್ಲಿ ಕಸಕಡ್ಡಿ ತುಂಬಿಕೊಂಡು ಗಬ್ಬೆದ್ದಿವೆ. ಬೀದಿದೀಪಗಳ ಸಮಸ್ಯೆ ಇದೆ. ಈ ಕಡೆ ಗಮನ ಹರಿಸಬೇಕು’ ಎಂದು ಸೂಚನೆ ನೀಡಿದರು. 

ಮೇವು ಬ್ಯಾಂಕ್‌ ಕಾರ್ಯನಿರ್ವಹಣೆ: ಪಶು ವೈದ್ಯಕೀಯ ಇಲಾಖೆ ಸಹಾಯ ನಿರ್ದೇಶಕ ಡಾ.ತಿರುಮಲಗೌಡ, ‘ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಿ ಮೇವು ಪೂರೈಸಲಾಗುತ್ತಿದೆ. ಪ್ರತಿ ಟನ್‌ಗೆ ₹ 6 ಸಾವಿರ ದರದಲ್ಲಿ ಮೇವು ಖರೀದಿ­ಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಜಯಪುರದಲ್ಲಿ ಮೇವು ಬ್ಯಾಂಕ್‌ ಉದ್ಘಾಟನೆಗೆ ಆಹ್ವಾನಿಸಿಲ್ಲ, ಅದು ನನ್ನ ಕ್ಷೇತ್ರ. ಸ್ಥಳೀಯ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿದರೆ ಹೇಗೆ?’ ಎಂದು ಕಾಳಮ್ಮ ಪ್ರಶ್ನಿಸಿದರು.
ಕಾರ್ಯನಿರ್ವಾಹಕ ಅಧಿಕಾರಿ ಲಿಂಗರಾಜಯ್ಯ, ‘ಸ್ಥಳೀಯ ಜನಪ್ರತಿನಿಧಿ­ಗಳನ್ನು ಕಾರ್ಯಕ್ರಮಗಳಿಗೆ ಆಹ್ವಾನಿ­ಸುವುದು ಕಡ್ಡಾಯ.  ಶಿಷ್ಟಾಚಾರ ಪಾಲಿಸದಿದ್ದರೆ ಶಿಸ್ತುಕ್ರಮ ಜರುಗಿಸ­ಲಾಗುವುದು’ ಎಂದು ಎಚ್ಚರಿಸಿದರು. 

ಬೆಳೆ ವಿಮೆ: 750 ಅರ್ಜಿ ಅಪ್‌ಲೋಡ್‌:   ಹಿಂಗಾರು ಹಂಗಾಮಿಗೆ ಹುರುಳಿ ಬೆಳೆಗೆ ವಿಮೆ ಮಾಡಿಸಲಾಗುತ್ತಿದೆ. 750 ಅರ್ಜಿಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ವಿಮೆ ಮಾಡಿಸಲು ಜ. 30ರವರೆಗೆ ಅವಕಾಶ ಇದೆ. ವಿಮೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿ ವೀರಣ್ಣ ತಿಳಿಸಿದರು.

ಈ ಬಾರಿ ವರದಿಯಾಗಿದ್ದ ಒಂದು ರೈತ ಆತ್ಮಹತ್ಯೆ ಪ್ರಕರಣಕ್ಕೆ ಪರಿಹಾರ ನೀಡಲಾಗಿದೆ. ಕಳೆದ ಬಾರಿಯ ನಾಲ್ಕು ಪ್ರಕರಣಗಳಲ್ಲಿ ಎರಡಕ್ಕೆ ಪರಿಹಾರ ನೀಡಲಾಗಿದೆ. ಇನ್ನು ಎರಡು ಪ್ರಕರಣಗಳನ್ನು ಸಮಿತಿ ತಿರಸ್ಕರಿಸಿದೆ ಎಂದು ಮಾಹಿತಿ ನೀಡಿದರು.

ಬಸ್‌ ಸೌಕರ್ಯಕ್ಕೆ ಸೂಚನೆ: ‘ದೇವಲಾ­ಪುರ ಮತ್ತು ಇಲವಾಲ ಅಂಚಿನ ಯಡಹಳ್ಳಿಗೆ ಬಸ್‌ ಸೌಕರ್ಯ ಕಲ್ಪಿಸ­ಬೇಕು. ಶಾಲಾ ಅವಧಿಯನ್ನು ಗಮನ­­ದಲ್ಲಿ ಟ್ಟುಕೊಂಡು ಬಸ್‌ ವ್ಯವಸ್ಥೆ ಮಾಡಬೇಕು’ ಎಂದು ಉಪಾಧ್ಯಕ್ಷ ಮಂಜು ಅವರು  ತಿಳಿಸಿದರು.

ಕೆಎಸ್‌ಆರ್‌ಟಿಸಿ ಅಧಿಕಾರಿ ಸುಮಾಮಾಲಾ, ‘ಬಸ್‌ ಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು’ ಎಂದು ಹೇಳಿದರು. ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ­ನಾಯಕ, ಸಹಾಯಕ ನಿರ್ದೇಶಕ ರಾಮಲಿಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT