ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಮೆಟ್ಟಿಲೇರಿದ ಶಾಸಕರ ಕೀಳು ಭಾಷೆ

Last Updated 11 ಜನವರಿ 2017, 11:28 IST
ಅಕ್ಷರ ಗಾತ್ರ

ತುಮಕೂರು: ‘ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ  ನನ್ನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದು, (ಅವಳು ಯಾವಳೋ ಕಿತ್ತೋದಳು) ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ತುರುವೇಕೆರೆ ಪಟ್ಟಣ ಪಂಚಾಯಿತಿ ಹಾಲಿ ಸದಸ್ಯೆ  ಹಾಗೂ ಮಾಜಿ ಅಧ್ಯಕ್ಷೆ ಎಚ್.ಆರ್.ನೇತ್ರಾವತಿ ಅವರು ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂಥ್ ಅವರಿಗೆ ದೂರು ನೀಡಿದರು.

‘ಜನವರಿ 2ರಂದು ಪಟ್ಟಣದ ಪೊಲೀಸ್ ಠಾಣೆ ಎದುರು ಶಾಸಕರು ನಡೆಸಿದ ಪ್ರತಿಭಟನೆ ವೇಳೆ ಅನವಶ್ಯಕವಾಗಿ ನನ್ನ  ವಿರುದ್ಧ ಕೀಳುಮಟ್ಟದ ಮಾತುಗಳನ್ನಾಡಿದ್ದಾರೆ. ನನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ನೇತ್ರಾವತಿ ಅವರ ದೂರನ್ನು ಪರಿಶೀಲಿಸಲಾಗುವುದು. ತನಿಖೆಗೆ ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ’ ಎಂದು ಇಶಾ ಪಂಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ನೇತ್ರಾವತಿ ಸಿಡಿಮಿಡಿ: ‘ನಾನು ಜೆಡಿಎಸ್  ಸದಸ್ಯೆಯಾಗಿದ್ದರೂ ಪಕ್ಷಕ್ಕೆ ಮತ್ತು ಬೇರೆಯವರಿಗೆ ದ್ರೋಹ ಬಗೆದಿಲ್ಲ. ಪಟ್ಟಣ ಪಂಚಾಯಿತಿಯಲ್ಲಿ ಯಾವ ಪಕ್ಷಕ್ಕೂ ಬಹುಮತ ಇರದ ಕಾರಣ ಕಳೆದ ಅವಧಿಯಲ್ಲಿ  ಬೇರೆ ಪಕ್ಷಗಳ ಮೈತ್ರಿಯೊಂದಿಗೆ ಅಧ್ಯಕ್ಷೆಯಾಗಿದ್ದೆ. ಕೀಳುಮಟ್ಟದಲ್ಲಿ ಮಾತನಾಡಲು ಶಾಸಕರಿಗೆ  ಅಧಿಕಾರ ಕೊಟ್ಟವರು ಯಾರು’ ಎಂದು ನೇತ್ರಾವತಿ ತುರುವೇಕೆರೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸಂಸದರ ವಿರುದ್ಧ ಕೀಳು ಭಾಷೆ: ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರ ವಿರುದ್ಧವೂ ಶಾಸಕರು ತುಚ್ಛ ಭಾಷೆಯನ್ನು (ಪ್ರಕಟಿಸಲು ಯೋಗ್ಯವಲ್ಲದ ಪದಗಳು)  ಬಳಸಿದ್ದಾರೆ.

ಇದಕ್ಕೆ ಮಂಗಳವಾರ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಮುದ್ದಹನುಮೇಗೌಡ,‘ಕೆಳ ಮಟ್ಟದ ಭಾಷೆ ಬಳಸಿರುವ ಶಾಸಕರಿಗೆ ಜನರು ಉತ್ತರ ನೀಡುತ್ತಾರೆ. ಕೆಟ್ಟ  ಭಾಷೆ ಬಳಸಿ ದೊಡ್ಡವರಾಗಲು ಸಾಧ್ಯವಿಲ್ಲ’ ಎಂದರು.

ಹಿನ್ನೆಲೆ: ಎಪಿಎಂಸಿ ನಾಮಪತ್ರ ಪರಿಶೀಲನೆ ವೇಳೆ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಮುಖಂಡ ಕೊಂಡಜ್ಜಿ ವಿಶ್ವನಾಥ್‌ ನಡುವೆ ಜಟಾಪಟಿ ನಡೆದಿತ್ತು. ತಮ್ಮ ನಾಮಪತ್ರ ತಿರಸ್ಕರಿಸಲು ಶಾಸಕರು ಕಾರಣ ಎಂದು ಕೊಂಡಜ್ಜಿ ವಿಶ್ವನಾಥ್‌ ಶಾಸಕರ ಕಾರನ್ನು ಅಡ್ಡಗಟ್ಟಿ ನಿಂದಿಸಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಕೊಂಡಜ್ಜಿ ವಿಶ್ವನಾಥ್‌ ಹಾಗೂ ಅವರ ಬೆಂಬಲಿಗರಿಂದ ತಮಗೆ ಪ್ರಾಣ ಬೆದರಿಕೆ ಇದ್ದು,  ಅವರನ್ನು ಬಂಧಿಸುವಂತೆ ಶಾಸಕ ಕೃಷ್ಣಪ್ಪ ಪೋಲಿಸರಿಗೆ ದೂರು ನೀಡಿದ್ದರು.

ಆರೋಪಿಗಳನ್ನು ಬಂಧಿಸದ ಕಾರಣ ಪೊಲೀಸರ ವಿರುದ್ಧ ಜ. 2ರಂದು ತುರುವೇಕೆರೆಯಲ್ಲಿ ಧರಣಿ ಹಮ್ಮಿಕೊಂಡಿದ್ದರು. ಧರಣಿ ವೇಳೆ ಪಟ್ಟಣ ಪಂಚಾಯಿತಿ ಸದಸ್ಯೆ, ಸಂಸದರು ಹಾಗೂ ಸರ್ಕಲ್‌ ಇನ್‌ಸ್ಪೆಕ್ಟರ್‌ ಅವರನ್ನು ಕೀಳು, ಅಶ್ಲೀಲ ಭಾಷೆ ಬಳಸಿ ಟೀಕಿಸಿದ್ದರು.

ಶಾಸಕರ  ಭಾಷಣದ ವಿಡಿಯೊ ತುಣುಕು ವಾಟ್ಸಪ್‌ನಲ್ಲಿ ಸೋಮವಾರದಿಂದ (ಜ. 9) ಹರಿದಾಡ ತೊಡಗಿದ್ದು, ಪ್ರಕರಣ ತಿರುವು ಪಡೆಯಲು ಕಾರಣವಾಗಿದೆ.
ಶಾಸಕರ ಸವಾಲು: ಪಟ್ಟಣ ಪಂಚಾಯಿತಿ ಸದಸ್ಯೆ ಹೆಸರು ಹಿಡಿದು ಟೀಕಿಸಿಲ್ಲ. ಅವರು ಬೇಕಾದರೆ ಮಹಿಳಾ ಆಯೋಗಕ್ಕೆ ದೂರು ನೀಡಲಿ ಎಂದು ಮಂಗಳವಾರ ಸುದ್ದಿಗಾರರಿಗೆ ತುರುವೇಕೆರೆಯಲ್ಲಿ ಎಂ.ಟಿ.ಕೃಷ್ಣಪ್ಪ ಪ್ರತಿಕ್ರಿಯಿಸಿದರು. ಸಂಸದರ ವಿರುದ್ಧ ಮಾಡಿದ ಟೀಕೆಗೆ ಪ್ರತಿಕ್ರಿಯೆ ನೀಡಲಿಲ್ಲ.

ಸಂಸ್ಕಾರ, ಸುಸಂಸ್ಕೃತ ಜನಪ್ರತಿನಿಧಿಗಳು ಸಾರ್ವಜನಿಕರ ಮಧ್ಯೆ ಕೆಲಸ ಮಾಡಬೇಕು. ನಾಲಿಗೆ ಹರಿಬಿಡುವವರ ಬಗ್ಗೆ ಪ್ರತಿಕ್ರಿಯೆ ನೀಡಿದರೆ ಅವರು ನಾಲಿಗೆಯನ್ನು ಮತ್ತಷ್ಟು ಉದ್ದ ಮಾಡುತ್ತಾರೆ. ಅವರ ಕೀಳು ಭಾಷೆಗೆ ಜನರೇ ಉತ್ತರ ಕೊಡುತ್ತಾರೆ ಎಂದು ಮುದ್ದಹನುಮೇಗೌಡ ಅವರು ಶಾಸಕ ಕೃಷ್ಣಪ್ಪ ಟೀಕೆಗೆ ತಿರುಗೇಟು ನೀಡಿದರು.

ನಾನು ಸ್ಥಳೀಯವಾಗಿ ಗಲೀಜು ರಾಜಕಾರಣ ಮಾಡಲ್ಲ. ಕೀಳು ಭಾಷೆ ಪ್ರಯೋಗ ನನ್ನ ಶಬ್ದಕೋಶದಲ್ಲಿ ಇಲ್ಲ. ಜಾಯಮಾನವೂ ಅಲ್ಲ ಎಂದರು. ಸದಸ್ಯೆಯನ್ನು ನಿಂದಿಸಿರುವ ಶಾಸಕರ ಕೃತ್ಯ ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT