ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಗೆಲ್ಲ ಹುಳುಕು, ಭಯದಲ್ಲೇ ಬದುಕು

ಅವ್ಯವಸ್ಥೆಯ ಆಗರವಾದ ಚಿಂತಾಮಣಿ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ
Last Updated 11 ಜನವರಿ 2017, 11:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಲಕವಿಲ್ಲದ ಬಾಗಿಲು, ಹೊದಿಕೆ ಇಲ್ಲದ ಬೆಡ್ಡು, ಚಳಿಗಾಲದಲ್ಲೂ ಸಿಗದ ಬಿಸಿ ನೀರು, ಅರ್ಧದಲ್ಲಿಯೇ ಕೈತೊಳೆದ ಚಿತ್ರಾನ್ನದ ತಟ್ಟೆ, ಕಿಟಕಿಗೆ ಬಿದ್ದ ಕಲ್ಲುಗಳಿಂದ ಬೆಚ್ಚಿ ಇರುಳಿಡಿ ನಿದ್ರೆಯೇ ಕಾಣದೆ ಉಬ್ಬಿದ ಕಣ್ಣುಗಳು...

ಚಿಂತಾಮಣಿ ನಗರದ ಪಾಲಿಟೆಕ್ನಿಕ್ ಹಾಸ್ಟೆಲ್ ಹಿಂಭಾಗದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದೊಳಗೆ ಮೊದಲ ನೋಟಕ್ಕೆ ದಕ್ಕುವ ಚಿತ್ರಗಳಿವು. ಮೇಲ್ನೊಟಕ್ಕೆ ತುಂಬಾ ಅಚ್ಚುಕಟ್ಟಾದಂತೆ ಕಾಣುವ ಈ ನಿಲಯದ ಪ್ರತಿಯೊಂದು ಕೋಣೆಯೊಳಗಿನಿಂದ ಕೇಳಿಬರುವ ಪಿಸುಮಾತುಗಳು ನಿಲಯದ ‘ಅವ್ಯವಸ್ಥೆ’ಯನ್ನು ಅನಾವರಣಗೊಳಿಸುತ್ತವೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಬಾಲಕಿಯರ ಈ ವಸತಿ ನಿಲಯದಲ್ಲಿ ಪ್ರಸ್ತುತ 257 ವಿದ್ಯಾರ್ಥಿನಿಯರು ನೆಲೆಸಿದ್ದಾರೆ. ಬತ್ತಿ ಹೋದ ಕೊಳವೆಬಾವಿಯಿಂದಾಗಿ ವಿಪರೀತ ನೀರಿನ ಸಮಸ್ಯೆ ಎದುರಿಸುತ್ತಿರುವ ಈ ನಿಲಯದೊಳಗೆ ನೀರೊಂದೆ ಅನೇಕ ಸಮಸ್ಯೆಗಳನ್ನು ಹುಟ್ಟುಹಾಕಿದ್ದು, ಅದರ ಪರಿಣಾಮ ಇಲ್ಲಿ ಕೆಲ ತಿಂಗಳ ಹಿಂದೆ ಪ್ರತಿಭಟನೆ ಕೂಡ ನಡೆದಿತ್ತು.

ಈ ಹಾಸ್ಟೆಲ್‌ನಲ್ಲಿ ಕುಡಿಯುವ ನೀರು ಶುದ್ಧೀಕರಿಸುವ ಯಂತ್ರವಿದೆ. ಆದರೆ ವಿದ್ಯಾರ್ಥಿಗಳಿಗೆ ಕುಡಿಯಲು ಶುದ್ಧ ನೀರಿನ ಪೂರೈಕೆ ಇಲ್ಲ. ಹೀಗಾಗಿ ವಿದ್ಯಾರ್ಥಿನಿಯರು ಕಾಲೇಜು, ಗೆಳತಿಯರ ಮನೆಗಳಲ್ಲಿ ಬಾಟಲಿಗಳಲ್ಲಿ ಕುಡಿಯುವ ನೀರು ತುಂಬಿಕೊಂಡು ಬಂದು ದಿನ ಕಳೆಯುತ್ತಾರೆ. ಸ್ವಲ್ಪ ಸ್ಥಿತಿವಂತರು ಬಾಟಲಿ ನೀರು ಖರೀದಿಸಿ ಕುಡಿಯುತ್ತಾರೆ. ಇನ್ನು ಕೆಲವರು ಅನಿವಾರ್ಯವಾಗಿ ತೊಟ್ಟಿಯ ನೀರನ್ನೇ ನೇರವಾಗಿ ಕುಡಿಯುತ್ತಾರೆ.

ಹಾಸ್ಟೆಲ್‌ ಮೇಲೆ ನೀರು ಕಾಯಿಸುವ ಸೌರ ಫಲಕಗಳನ್ನು ಅಳವಡಿಸಿದರೂ ಸ್ನಾನದ ಮನೆಯಲ್ಲಿ ಕೈಗೆಟಕುವುದು ಮಾತ್ರ ತಣ್ಣಗೆ ಕೊರೆಯುವ ನೀರು. ಹೀಗಾಗಿ ಇಲ್ಲಿ ಪ್ರತಿ ಕೋಣೆಗಳಲ್ಲಿ ನೀರು ಕಾಯಿಸುವ ಹೀಟರ್‌ಗಳು ಕಾಣಸಿಗುತ್ತವೆ. ಮೈ ನಡುಗಿಸುವ ಚಳಿಯ ನಡುವೆ ಏಳುವವರಿಗೆ ಬಿಂದಿಗೆ ನೀರು ಹಿಡಿದು ತಂದು ಹೀಟರ್‌ ಹಾಕಿ ಕಾಯಿಸುವ ನಿತ್ಯಕರ್ಮ ತುಂಬಾ ಹಿಂಸೆ ಮಾಡುತ್ತಿದೆ. ಇದರಿಂದಾಗಿ ನಸುಕಿನ ಓದಿಗೆ ವ್ಯವಧಾನವೇ ಇಲ್ಲದಂತಾಗಿದೆ. ಕೆಲ ವಿದ್ಯಾರ್ಥಿನಿಯರು ಎರಡ್ಮೂರು ದಿನಕ್ಕೊಮ್ಮೆ ಜಳಕ ಮಾಡುವುದು ರೂಢಿಸಿಕೊಂಡರೆ, ಕೆಲವರು ವಾರಕ್ಕೆ ಮೂರು ದಿನ ಮನೆ ಸ್ನಾನದ ನಂಟು ಇಟ್ಟುಕೊಂಡಿದ್ದಾರೆ.

ಕಳೆದ 7 ತಿಂಗಳುಗಳಿಂದ ಈ ಹಾಸ್ಟೆಲ್‌ಗೆ ಆರೋಗ್ಯ ಇಲಾಖೆಯಿಂದ ಸ್ಯಾನಿಟರಿ ಪ್ಯಾಡ್‌ ಪೂರೈಕೆಯಾಗಿಲ್ಲ. ಮೊದಲೇ ಬಿಸಿ ನೀರಿಲ್ಲದೆ ಪರಿತಪಿಸುತ್ತಿರುವ ವಿದ್ಯಾರ್ಥಿನಿಯರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ‘ಋತುಸ್ರಾವ’ದ ದಿನಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದೇ ದೊಡ್ಡ ತಲೆನೋವಾಗಿದೆ. ಸಮೀಪದ ಊರುಗಳ ವಿದ್ಯಾರ್ಥಿನಿಯರು ‘ಆ ದಿನ’ಗಳ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮನೆಗಳಿಗೆ ಹೋಗಿ ಇದ್ದು ಬರುತ್ತಾರೆ.

ದಿಂಬು, ಹೊದಿಕೆ ಇಲ್ಲದೆ ಮಾಸಿದ ಬೆಡ್‌ಗಳ ಮೇಲೆ ಮನೆಯಿಂದ ತಂದ ಹಾಸಿಗೆಯಲ್ಲಿ ದಿನದೂಡುತ್ತಿರುವ ವಿದ್ಯಾರ್ಥಿಗಳು ಹೊಸ ದಿಂಬು, ಹೊದಿಕೆಗಾಗಿ ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ. ಇನ್ನು ಕೆಲ ಕೋಣೆಗಳಲ್ಲಿ ವಿದ್ಯಾರ್ಥಿನಿಯರು ಹರಿದ ಬೆಡ್‌ಗಳನ್ನೇ ಬಳಸುತ್ತಿದ್ದಾರೆ!

ಇಲ್ಲಿ ಊಟದ ಹಾಲ್‌ನ ಗೋಡೆಯ ಮೇಲೆ ಬಗೆಬಗೆ ಭಕ್ಷ್ಯಗಳ ಮೆನು ಅಲಂಕರಿಸಿದೆಯೇ ವಿನಾ ತಟ್ಟೆಯಲ್ಲಿ ಬೆಳಗಿನ ಹೊತ್ತು ಪೈಪೋಟಿಯ ಮೇಲೆ ಚಿತ್ರಾನ್ನ, ಪುಳಿಯೋಗರೆ ಮಾತ್ರ ‘ದರ್ಶನ’ವಾಗುತ್ತವೆ. ಉಳಿದಂತೆ ಮುದ್ದೆ, ಅನ್ನ, ಸಾರಿನೊಂದಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟದ ‘ಶಾಸ್ತ್ರ’ ಮುಗಿಯುತ್ತದೆ. ಎರಡು ವಾರಕ್ಕೊಮ್ಮೆ ಸಿಗಬೇಕಾದ ಚಿಕನ್‌ ಕೆಲವೊಮ್ಮೆ ನಾಲ್ಕು ವಾರಕ್ಕೆ ದೊರೆತದ್ದು ಉಂಟು ಎನ್ನುತ್ತಾರೆ ಇಲ್ಲಿನ ವಿದ್ಯಾರ್ಥಿನಿಯರು.

ಊಟದಲ್ಲಿ ಏರುಪೇರಾದರೆ, ಮುಟ್ಟಿನ ದಿನಗಳಲ್ಲಿ ಹೊಟ್ಟೆನೋವು ಉಂಟಾದರೆ ತಕ್ಷಣಕ್ಕೆ ಅವುಗಳನ್ನು ತಾತ್ಕಾಲಿಕವಾಗಿ ಉಪಶಮನಗೊಳಿಸುವ ಯಾವ ವ್ಯವಸ್ಥೆಯು ಇಲ್ಲಿಲ್ಲ. ಹಗಲಿನಲ್ಲಾದರೆ ಗೆಳತಿಯೊಂದಿಗೆ ವೈದ್ಯರ ಬಳಿ ಹೋಗಿ ಬರುತ್ತೇವೆ. ರಾತ್ರಿ ಇಡೀ ನೋವು ತಿನ್ನುತ್ತ ಕಾಯುವವರ ಪಾಡು ಯಾರಿಗೂ ಬೇಡ ಎನ್ನುತ್ತಾರೆ ಹಿರಿಯ ವಿದ್ಯಾರ್ಥಿನಿಯರು.

ಹೆಸರಿಗಷ್ಟೇ ಇರುವ ಗ್ರಂಥಾಲಯ ಇದ್ದೂ ಇಲ್ಲದಂತಾಗಿದೆ. ನಿತ್ಯ ನಸುಕಿನಲ್ಲಿ ಹಾಸ್ಟೆಲ್‌ ಬಾಗಿಲ ಬಳಿ ಬೀಳುವ ದಿನಪತ್ರಿಕೆಗಳು ವಿದ್ಯಾರ್ಥಿಗಳ ದೃಷ್ಟಿಗೆ ಬೀಳುವುದೇ ಇಲ್ಲಾ. ಟಿವಿ ಇಲ್ಲಾ. ಕ್ರೀಡಾ ಸಲಕರಣೆಗಳು ವಾರ್ಡನ್‌ ಕೋಣೆಯಿಂದ ಆಚೆ ಕಾಣಿಸಿಕೊಳ್ಳುವುದಿಲ್ಲ. ಪರ್ಯಾಯ ವಿದ್ಯುತ್‌ಗಾಗಿ ಅಳವಡಿಸಿರುವ ಜನರೇಟರ್‌ ಸದಾ ರಿಪೇರಿಯಲ್ಲೇ ಇರುತ್ತವೆ. ಕೆಲ ಕೋಣೆಗಳಲ್ಲಿ ಸೌರ ಲಾಂದ್ರ ನೀಡಿದರೂ ಬಹುತೇಕ ಕೊಣೆಗಳಲ್ಲಿ ವಿದ್ಯುತ್‌ ಕಡಿತಗೊಂಡಾಗ ಕತ್ತಲೇ ಆವರಿಸಿಕೊಂಡಿರುತ್ತದೆ.

ಭಯದಲ್ಲೇ ಬದುಕು: ಅಡುಗೆ ಮಾಡುವ ಮಹಿಳೆಯರನ್ನೇ ಇಲ್ಲಿ ರಾತ್ರಿ ಕಾವಲುಗಾರರನ್ನಾಗಿ ನಿಯೋಜಿಸಲಾಗುತ್ತಿದೆ. ಹೀಗಾಗಿ ಪುಂಡಪೋಕರಿಗಳಿಗೆ ಭಯವಿಲ್ಲದಂತಾಗಿದೆ. ಪಕ್ಕದ ಮೈದಾನದಲ್ಲಿ ಮಧ್ಯರಾತ್ರಿ ಮದ್ಯಪಾನ ಮಾಡಿ, ನಶೆಯಲ್ಲಿ ಕಲ್ಲು ತೂರುವವರ ಸಂಖ್ಯೆ ಹೆಚ್ಚುತ್ತಿದೆ. ಪರೀಕ್ಷೆ ದಿನಗಳಲ್ಲಿ ಹೀಗಾದರೆ ಹೇಗೆ ಎಂಬ ಚಿಂತೆ ಶುರುವಾಗಿದೆ ಎಂದು ವಿದ್ಯಾರ್ಥಿಯರು ಆತಂಕ ವ್ಯಕ್ತಪಡಿಸುತ್ತಾರೆ.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಿಂದ ಹಿಡಿದು ಅನೇಕರೂ ಈ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿ, ನಮ್ಮ ಗೋಳು ಆಲಿಸಿ ಹೋಗಿದ್ದಾರೆ. ಆದರೆ ಯಾರೊಬ್ಬರೂ ಈವರೆಗೆ ನಮ್ಮ ಕಷ್ಟ ಪರಿಹರಿಸುವ ಕೆಲಸ ಮಾಡಿಲ್ಲ ಎಂದು ವಿದ್ಯಾರ್ಥಿಗಳು ನೊಂದು ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT