ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರ್ಸ್ಯೂಟ್‌ ಆಫ್‌ ಹ್ಯಾಪಿನೆಸ್‌’

Last Updated 11 ಜನವರಿ 2017, 19:30 IST
ಅಕ್ಷರ ಗಾತ್ರ

ಮನಸ್ಸಿನ ತುಂಬೆಲ್ಲ ಕನಸುಗಳನ್ನು ತುಂಬಿಕೊಂಡಿರುವ ನಿರುದ್ಯೋಗಿ ಯುವಕನ ಸಂಕಷ್ಟಗಳನ್ನು ಬಿಂಬಿಸುವ ಸಿನಿಮಾ ‘ಪರ್ಸ್ಯೂಟ್‌ ಆಫ್‌ ಹ್ಯಾಪಿನೆಸ್‌’. 2006ರಲ್ಲಿ ಬಿಡುಗಡೆಯಾದ ಈ ಅಮೆರಿಕನ್‌ ಸಿನಿಮಾ, ಕ್ರಿಸ್‌ ಗಾರ್ಡನರ್‌ ಎಂಬ ಯಶಸ್ವಿ ಉದ್ಯಮಿಯ ಜೀವನ ಚರಿತ್ರೆಯನ್ನು ಆಧರಿಸಿದ್ದು.

ಆರ್ಥಿಕ ಅಸ್ಥಿರತೆಯಿಂದಾಗಿ ಅವನು ಅನುಭವಿಸುವ ಸಂಕಟಗಳು, ಮರೀಚಿಕೆಯಾಗಿಯೇ ಉಳಿಯುವ ‘ಒಳ್ಳೆಯ ದಿನ’ಗಳ ಕನಸು ಎಲ್ಲವನ್ನೂ ನಿರ್ದೇಶಕ ಗೇಬ್ರಿಯಲ್‌ ಮಕ್ಕಿನೋ ಪರಿಣಾಮಕರವಾಗಿ ಚಿತ್ರಿಸಿದ್ದಾರೆ. ಕ್ರಿಸ್‌ ಗಾರ್ಡನರ್‌ ಏನೇ ಮಾಡಲು ಹೋದರೂ ಅದು ಎಡವಟ್ಟಾಗಿ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿರುತ್ತದೆ. ಬದುಕು ದುಸ್ಥರವಾದಾಗ ಅವನ ಹೆಂಡತಿ ಲಿಂಡಾ ಸಹ ಅವನನ್ನು ತೊರೆದು ಹೋಗುತ್ತಾಳೆ.

ಮಗ ಕ್ರಿಸ್ಟೋಫರ್‌ನನ್ನು ಜತೆಗಿಟ್ಟುಕೊಂಡು ಸುಮಾರು ಒಂದು ವರ್ಷ ಕ್ರಿಸ್‌, ಮನೆಯಿಲ್ಲದೇ ಅಲೆಯಬೇಕಾಗುತ್ತದೆ. ಜಗತ್ತಿನಲ್ಲಿ ಎಲ್ಲರೂ ಖುಷಿಯಿಂದಿರುತ್ತಾರೆ. ಈ ಖುಷಿಯ ಸುಖ ನನಗೇಕೆ ಸಾಧ್ಯವಾಗುತ್ತಿಲ್ಲ ಎಂದು ತನ್ನೊಳಗೆ ತಾನೇ ಕೇಳಿಕೊಳ್ಳುವ ಕ್ರಿಸ್‌ಗೆ ಒಂದು ಕೆಲಸ ಸಿಕ್ಕಾಗ ಆ ಖುಷಿಯ ಅನುಭವ ಆಗುತ್ತದೆ. ಮುಂದೆ ಅವನು ಕೋಟ್ಯಧಿಪತಿಯೂ ಆಗುತ್ತಾನೆ.

ಸಾಮಾನ್ಯವಾಗಿ ಯಶಸ್ವಿ ವ್ಯಕ್ತಿಗಳ ಜೀವನ ಆಧರಿಸಿ ಬರುವ ಚಿತ್ರಗಳು ಎಲ್ಲ ಸಂಕಷ್ಟಗಳನ್ನೂ ಅತಿರೇಕದಲ್ಲಿ ಕಾಣಿಸಿ, ಮುಂದೆ ಅವನ ಯಶಸ್ವಿ ಜೀವನದ ವೈಭೋಗವನ್ನೂ ಅಷ್ಟೇ ಅತಿರೇಕದಲ್ಲಿ ಬಿಂಬಿಸುತ್ತವೆ. ಅಲ್ಲಿ ಹಣಗಳಿಕೆಯೇ ಯಶಸ್ಸಿನ ಅರ್ಥ ಎಂಬಲ್ಲಿ ಕೊನೆಗೊಳ್ಳುವುದೇ ಹೆಚ್ಚು. ಆದರೆ ‘ಪರ್ಸ್ಯೂಟ್‌ ಆಫ್‌ ಹ್ಯಾಪಿನೆಸ್‌’ ಸಿನಿಮಾ ಈ ಅಪಾಯದಿಂದ ತಪ್ಪಿಸಿಕೊಂಡಿದೆ. ಕ್ರಿಸ್‌ ಗಾರ್ಡನರ್‌ಗೆ ಕೆಲಸ ಸಿಗುವುದರಲ್ಲಿ ಸಿನಿಮಾ ಮುಗಿದುಬಿಡುತ್ತದೆ.

ಅವನ ಯಶಸ್ಸನ್ನು ಅಕ್ಷರಗಳಲ್ಲಿ ಮಾಹಿತಿ ರೂಪದಲ್ಲಿ ತೋರಿಸಿ ಮುಗಿಸಿಬಿಡುತ್ತಾರೆ ನಿರ್ದೇಶಕರು. ಇದರಿಂದ ನಾಯಕ ಬದುಕಿನಲ್ಲಿ ಅನುಭವಿಸುವ ಸಂಕಷ್ಟಗಳು, ಅದನ್ನು ಛಲದಿಂದ ಎದುರಿಸುವ ಮನಸ್ಥೈರ್ಯಗಳು ಜೀವನವನ್ನು ಇನ್ನಷ್ಟು ಆಳದಿಂದ ಅರಿತುಕೊಳ್ಳುವ ಪ್ರಯತ್ನವಾಗಿ ಕಾಣುತ್ತದೆ. ಇದೇ ಈ ಸಿನಿಮಾದ ಯಶಸ್ಸು.

ಕ್ರಿಸ್‌ ಗಾರ್ಡನರ್‌ ಪಾತ್ರದಲ್ಲಿ ನಟಿಸಿರುವ ವಿಲ್‌ ಸ್ಮಿತ್‌ ನಟನೆಯಲ್ಲಿ ಅದು ಇನ್ನಷ್ಟು ಪರಿಣಾಮಕಾರಿಯಾಗಿದೆ. ಅವರ ಮಗ ಜಾಡನ್‌ ಸ್ಮಿತ್‌ ಈ ಸಿನಿಮಾದಲ್ಲಿ ಕ್ರಿಸ್‌ ಗಾರ್ಡನರ್‌ ಮಗ ‘ಕ್ರಿಸ್ಟೋಫರ್‌’ ಪಾತ್ರದಲ್ಲಿ ನಟಿಸಿದ್ದಾನೆ. ಈ ಸಿನಿಮಾವನ್ನು goo.gl/JYuvQx  ಕೊಂಡಿ ಬಳಸಿ ಅಂತರ್ಜಾಲದಲ್ಲಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT