ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟಿಗೊಂದು ವಿದಾಯ

Last Updated 11 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಕಿ ಆರಿದ ಒಲಿಯಂಗಾದೆ
ಅವತ್ತು ನನ್ ಹತ್ರ ಐದ್ನೂರರ ಐದು ನೋಟು ಇದ್ವು, ಹತ್ತಿಪ್ಪತ್ತರ ನೋಟುಗಳ ಎಪ್ಪತ್ತು ರೂಪಾಯಿ ಚಿಲ್ರೆ ಇತ್ತು. ಎರಡೂವರೆ ಸಾವ್ರ ಸಾಲ ಇತ್ತು. ಅದಕ್ಕೆ ಐದ್ನೂರರ ಐದು ನೋಟು ಕೊಟ್ಟು ಮನೀಗ್ ಬಂದು ಟಿ.ವಿ ನೋಡಿದ್ರ ನಾಳಿಂದ ಐದ್ನೂರು, ಸಾವಿರದ ನೋಟು ಬರೀ ಕಾಗ್ದ ಅಂತಿದ್ರು, ಅದ್ನ ಕೇಳಿ ತುಂಬಾ ಖುಷಿ ಪಟ್ನಿ.

ಯಾಕಂದ್ರ ಅವತ್ತಿನ್ ದಿನ ನನ್ ಹತ್ರ ಐದ್ನೂರದಾಗ್ಲಿ ಸಾವಿರದಾಗ್ಲಿ ಒಂದ್ ನೋಟೂ ಇರ್ಲಿಲ್ಲ. ನನ್ನಷ್ಟಕ್ ನಾನೇ ಭಾಳ ಲಕ್ಕಿ ಅನ್ಕೊಂಡೆ. ನೋಟ್ ಬ್ಯಾನ್ ಮಾಡಿದ್ರಲ್ಲ ಅಂತ ನಾನೇನ್ ಮುಗಲ್ ಮುರ್ದು ಬಿದ್ದಂಗ ಕೂಡ್ಲಿಲ್ಲ, ಇದೇನ್ ಮಹಾ, ನಾಳಿಂದ ಹೊಸ ನೋಟ್ ಸಿಗತೈತಲಾ ಅಂತ ನಿರುಮ್ಮಳಾದೆ.

ನಾಲ್ಕೈದು ದಿನಾ ಕಳೀತು, ರೊಕ್ಕ ಬೇಕಾತು, ಖುಷಿ ಕಡೀಮಾತು. ಆದ್ರೂ ಒಳಗೊಳಗ ಏನೋ ಉದ್ಧಾರಾಕ್ಕೈತಿ ಅನ್ನೋ ಪೊಗರ್‌ ತುಂಬಿತ್ತು. ಪಿಂಕ್‌ ನೋಟ್ನ ಬರೀ ವಾಟ್ಸಾಪ್ನಲ್ಲೆ ನೋಡುದಾಗಿತ್ತು. ಯಾವಾಗ್ ಕೈಲಿಂದ ಆ ನೋಟ್ ಮುಟ್ತೀನೋ ಅಂತಾ ಒದ್ದಾಟ.

ಹೆಂಗೋ ಬ್ಯಾಂಕ್ ಮುಂದ ನಿಂತು ಪಿಂಕ್ ನೋಟ್ ಪಡದ್ಯಾ. ಅಲ್ಲೇ ಶುರುವಾತು ಖರೆ ಪ್ರಾಬ್ಲಮ್ಮು. ನನ್ ಬೈಕ್‌ಗೆ ಹಸಿವಾಗಿ ಬಿಕ್ಕಳಿಸಾಕ ಚಾಲೂ ಮಾಡಿತ್ತು. ಪೆಟ್ರೋಲ್ ಬಂಕಿನವ್ನು ಹಾಕಿದ್ರ ಫುಲ್ಲು ಇಲ್ಲಾಂದ್ರ ಇಲ್ಲ ಅಂದ್ಬಿಟ್ಟ. ಬಸವಳಿದ ಬಿಕ್ಕಳಿಕೇಲೆ ದಿನಾ ಪೂರ್ತಿ ಬೈಕ್ ಓಡ್ಸಿದ್ದಾತು. ನಂತ್ರ ಬೆಂಕಿ ಆರಿದ ಒಲೀಯಂಗ ತಣ್ಣಗಾಗಿ ಬೈಕ್ ಮಗ್ಗುಲೊಳ್ಳಿಸಿ, ಮುಖ ಮುರೀತು.

ಖರೆ ಸಮಸ್ಯೆ ಶುರುವಾಗಿದ್ದು ಬಸ್ಸಿಗೆ ಹತ್ತಿದಾಗ. ಚಿಲ್ರೆ ಸಿಗ್ದೆ ಪರದಾಡಿ ಒಂದು ದಿನಾ ಪ್ರಯಾಣ ಮುಗಿಸಿದ್ದಾತು. ಹಳೆ ನೋಟು ಬ್ಯಾನ್ ಮಾಡಿದ್ದಕ್ಕೂ, ನನ್ ಹತ್ರ ಆ ನೋಟು ಇಲ್ಲದಕ್ಕೂ ತಾಳೆಯಾಗಿ ತುಂಬಾ ಖುಷಿಪಟ್ಟಿದ್ದ ನನಗೆ, ಹಳೆ ಗಂಡನ ಪಾದವೇ ಗತಿ ಎಂಬಂತೆ ಆತ್ಮೀಯರಿಂದ ಹಳೆ ಐದ್ನೂರರ ನೋಟು ಸಾಲ ಪಡ್ದು ನನ್ ಗಾಡಿಗೆ ಎಣ್ಣೆ ಹಾಕ್ಸಿದ್ದಾತು. ಪಿಂಕ್ ನೋಟ್ ಮಾತ್ರ ಇಸ್ತ್ರಿಮಾಡಿಟ್ಟಂಗ ಹಾಗೇ ಇತ್ತು. ಅದನ್ನ ನೋಡಿ ಮೊದ್ಲಿಗೆ ಥ್ರಿಲ್ ಆಗಿದ್ದೆ.

ಆದ್ರೆ ನಿನ್ನನ್ ಯಾರೂ ಒಲ್ಲೆ ಅಂತಾರಲ್ಲೋ ಮಾರಾಯಾ ಅಂತ ನೋಟ್ನ ಬೈಕೊಂಡಿದ್ದೆ. ಒಂದು ತಿಂಗಳಾದ್ರೂ ಪಿಂಕಪ್ಪಾ ನನ್ ಪ್ಯಾಕೆಟಲ್ಲಿ ಮುದುರ್ಕೊಂಡು ಬಿದ್ದಿದ್ದ. ನನ್ ಗೆಳೆಯನಿಗೆ ಐದ್ನೂರ ಸಾಲಕ್ಕೆ ಎರಡು ಸಾವಿರ ನೋಟ್ ಕೊಟ್ಟೆ, ಆ ನೋಟು ಒಂದು ವಾರ ಅವ್ರ ಹತ್ರ ರೆಸ್ಟ್‌ ಮಾಡಿ ನನ್ ಹತ್ರಕ್ಕೇ ಬಂತು. ಮದುವೆಯಾದ ಹೊಸತರಲ್ಲಿನ ಹೆಂಡತಿಯಂಗಿದ್ದ ನೋಟು, ಬಹಳ ದಿನವಾದ್ರೂ ಜಾಗ ಖಾಲಿ ಮಾಡದ ಅತಿಥಿಯಂತಾಗಿದ್ದಂತೂ ನಿಜ. 
–ಗಂಗಾಧರ ಗು. ಹಿರೇಮಠ ಕೂಡಲಸಂಗಮ

***
ನನ್ನ ನೋಡಿ ನಗುವವರನ್ನು ಕಂಡು!

ನನ್ನ ಸಂಗೀತ ವಿದ್ಯಾರ್ಥಿಗಳು 100, 50, 20, 10ರ ನೋಟುಗಳೊಂದಿಗೆ ಶುಲ್ಕ ನೀಡುವುದರಿಂದ ಚಿಲ್ಲರೆ ಅಭಾವ ಎಂದಿಗೂ ಉಂಟಾಗಿಲ್ಲ. ನವೆಂಬರ್, ಡಿಸೆಂಬರ್‌ನಲ್ಲಿ ಒಂದು ದಿನವೂ ಎಟಿಎಂ ಮುಂದೆ ಕ್ಯೂ ನಿಲ್ಲದೇ ಸಂಸಾರ ನಿಭಾಯಿಸಿದೆ. ಆದಾಗ್ಯೂ ಹಳೆಯ 500,1000 ರೂಪಾಯಿಯ 30 ನೋಟುಗಳು ನನ್ನ ಬಳಿ ಇದ್ದವು.

ಒಂದು ದಿನ ಬೇಗ ಬ್ಯಾಂಕಿಗೆ ಹೋದೆ. 500 ರೂಪಾಯಿಗಳ 8 ನೋಟು ನೀಡಿ 100 ರೂಪಾಯಿಗಳ 4 ಸಾವಿರ ಪಡೆದೆ. ರೈಲಿನಲ್ಲಿ ಟಿಕೆಟ್‌ಗೆ 2000 ರೂಪಾಯಿ ಕೊಟ್ಟು 8 ಸಾವಿರ ಉಳಿತಾಯ ಖಾತೆಗೆ ಹಾಕಿದೆ. ವಿದ್ಯಾರ್ಥಿಗಳಿಗೆ ಒಂದೇ ರೀತಿ ಯೂನಿಫಾರಂ ಸೀರೆ ಕೊಂಡುಕೊಂಡಿದ್ದರಿಂದ ಅಂಗಡಿಯವರು ಒಂದು ಸಾವಿರದ ಐದು ನೋಟುಗಳನ್ನು ಮರು ಮಾತಾಡದೆ ಪಡೆದ. ಆದರೆ ನನ್ನ ಬಳಿ ಇದ್ದ ಕೊನೆಯ ಐನೂರರ ನೋಟು ಖರ್ಚಾದ ಬಗೆ ಮಾತ್ರ ಹಾಸ್ಯಕ್ಕೀಡು ಮಾಡಿತು.

ಬಸವನಗುಡಿ ಕಡ್ಲೆಕಾಯಿ ಪರಿಷೆಗೆ ಮೊದಲ ದಿನವೇ ಭೇಟಿ ನೀಡಿದ ನಾನು, ಸಿಕ್ಕಿದ್ದನ್ನೆಲ್ಲಾ ತಿಂದು, ನೋಡಿದ್ದನ್ನೆಲ್ಲಾ ಕೊಂಡು, ಜಾತ್ರೆ ಮೋಜು ಅನುಭವಿಸುತ್ತಾ ಮನೆ ಕಡೆ ಹೊರಡಬೇಕೆನ್ನುವಷ್ಟರಲ್ಲಿ ತಮಟೆ, ಡಮರುಗ ವಾದ್ಯ ಮಾರುವವರು ನನ್ನೆದುರು ಬಂದು ಕೊಳ್ಳುವಂತೆ ಕೇಳಿಕೊಂಡರು.

ನನ್ನ ಬಳಿ ಕೊನೇ 500 ರೂಪಾಯಿಯ ಒಂದು ನೋಟಿತ್ತು. ಚೌಕಾಸಿ ಮಾಡಿ 250 ರೂಪಾಯಿಗೆ ಡೋಲು ಖರೀದಿಸಿದೆ. ಆತ, ‘ಮೇಡಂ ನನ್ನ ಬಳಿ ಚಿಲ್ಲರೆ ಇಲ್ಲ, ಬ್ಯಾಂಕ್ ಖಾತೆಯೂ ಇಲ್ಲ’ ಎಂದ. ಅಷ್ಟರಲ್ಲಿ ಡಮರುಗದವನು, ‘500 ರೂಪಾಯಿಗಳಿಗೆ 50 ರೂಪಾಯಿ ಕಮಿಷನ್ ಪಡೆದು ಚಿಲ್ಲರೆ ಕೊಡುತ್ತಾರೆ. ಆದ್ದರಿಂದ 300 ರೂಪಾಯಿ ಪಡೆದುಕೋ’ ಎಂದು ಡೋಲಿನವನಿಗೆ ಕಿವಿಮಾತು ಹೇಳಿದ.

ಆತ ಸಂತೋಷದಿಂದ 500 ರೂಪಾಯಿ ನೋಟು ಪಡೆದು 200 ರೂಪಾಯಿ ನೀಡಿದ. ಡಮರುಗದವನು ‘ನನ್ನ ಬಳಿಯೂ ಖರೀದಿಸಿ’ ಎಂದು ಗೋಗರೆದ. 200 ರೂಪಾಯಿ ನೀಡಿ ಅದನ್ನು ಖರೀದಿಸಿದೆ. ನನ್ನ ಎರಡೂ ಕೈಗಳಲ್ಲೂ ತುಂಬಿದ ಬ್ಯಾಗ್‌ಗಳಿದ್ದರಿಂದ ವಾದ್ಯಗಳೆರಡನ್ನೂ ಕತ್ತಿಗೆ ನೇತು ಹಾಕಿಕೊಂಡು ಆಟೊ ಸಿಗುವವರೆಗೆ ನಡೆದೆ. ಜಾತ್ರೆಗೆ ಬಂದ ಸಾವಿರಾರು ಜನ ನನ್ನ ಅವಸ್ಥೆ ನೋಡಿ ಮುಸಿಮುಸಿ ನಗುತ್ತಿದ್ದರು. ನನಗೂ ನನ್ನನ್ನು ನೋಡಿ ನಗು ತಡೆಯಲಾಗಲಿಲ್ಲ. ನಗುವವರನ್ನು ಕಂಡು ನಾನೂ ನಗುವ ಮಜಾ ಏನೆಂದು ತಿಳಿದೆ. ಹೀಗೆ ಕೊನೆಯ ನೋಟಿನ ವಿದಾಯ ನೆನಪಿನಲ್ಲಿ ನಗು ಉಳಿಸಿತು.
–ಸುಕನ್ಯಾ ವಿಜಯ್‌ಕುಮಾರ್ ಬೆಂಗಳೂರು

***
ಕನಕಾಂಬರ ಬಾಡಿತು, ಗುಲಾಬಿ ಅರಳಿತು...

ನನ್ನ ಮೊದಲ ಸಂಪಾದನೆಯಲ್ಲಿನ ಒಂದು ಕನಕಾಂಬರ (1000) ನೋಟನ್ನು ನೆನಪಿಗೆಂದು ಪುಸ್ತಕದಲ್ಲಿಟ್ಟಿದ್ದೆ. ಎಷ್ಟೋ ಬಾರಿ ‘ಆ ಕನಕಾಂಬರ ಬಾಡಿತೋ? ಮಾಯವಾಯಿತೋ? ಎಂದು ನೋಡಿದ್ದುಂಟು. ನೋಟು ರದ್ದತಿ ನಂತರ, ನನ್ನಲ್ಲಿದ್ದ ಪ್ರಾಚೀನ, ಬಾಡದ ಕನಕಾಂಬರದ ನೋಟನ್ನು ಎತ್ತಿ, ‘ನಾನು ಇದನ್ನು ವಿನಿಮಯ ಮಾಡಲ್ಲ. ನೆನಪಿಗಿರಲಿ’ ಅಂದೆ.

ಅಣ್ಣ ರಾಜೀವ ಏರು ಧ್ವನಿಯಲ್ಲಿ ‘ಚೀಟಿಗೆ ಹಣ ಬೇಕಿದೆ’, ನೆನಪು ಬಂದಾಗ ಇಂಟರ್‌ನೆಟ್‌ನಲ್ಲಿ ನೋಡಿಕೋ, ಇಲ್ಲಾ ಫೋಟೊ ತೆಗೆದು ಇಟ್ಟಿಕೋ? ಊಟಕ್ಕೆ ಬೇಕಾದಾಗಲೇ ಉಪ್ಪಿನಕಾಯಿಗೂ ಬೆಲೆ’ ಅಂದ. ಮಧ್ಯಮ ವರ್ಗದವನಾದ ನನಗೆ ಆತನ ಮಾತು ಮೊದಲ ಬಾರಿಗೆ ವೇದವಾಕ್ಯ ಎನ್ನಿಸಿತು.

ಖಾತೆಗೆ ಹಣ ತುಂಬಲು ತಯಾರಾಗಿ ನಿಂತಿದ್ದ ನನ್ನ ಸ್ನೇಹಿತನೊಡನೆ, ವಿನಿಮಯಕ್ಕೆ ನಡೆದೆ.  ಬ್ಯಾಂಕಿನ ಬಳಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿಂತ ಕ್ಯೂನಂತೆ ನಿಂತ ಜನರ ಹಿಂದೆ ನಿಂತೆ... ನಿಂತೇ... ನಿಂತೇ... ನಿಂತೇ... ಕೊನೆಗೂ ಬ್ಯಾಂಕ್‌ ಸಿಬ್ಬಂದಿ ಕಂಡಾಗ ತಿಮ್ಮಪ್ಪನ ದರ್ಶನವಾದ ಅನುಭವ. ಆತ ತನ್ನ ಮೂಗಿನ ಮೇಲೆ ಬೆಂಡಾಗಿ ಸುಸ್ತಾಗಿ ಮಲಗಿದ್ದ ಕನ್ನಡಕವನ್ನು ಸರಿ ಮಾಡಿಕೊಂಡು, ‘ಅಲ್ಲಿ ಬೋರ್ಡ್‌ ನೋಡಿಲ್ವಾ, Only 2000’ ಅಂದ. ನಾನು ‘ನನ್ನ ಬಳಿ ಇರುವುದೇ ನನ್ನ ಬಾಡದ ಕನಕಾಂಬರದ ನೋಟು’ ಎಂದೆ, ಬ್ಯಾಂಕ್‌ನವ ‘ನಾನು ಕೊಡಲ್ಲಾ’ ಎಂದ.

ಕೊನೆಗೆ ಸ್ನೇಹಿತನ ಬಳಿ ಒಂದು ಸಾವಿರ ತೆಗೆದುಕೊಂಡು, ಬ್ಯಾಂಕ್‌ನವನಿಗೆ ಕೊಟ್ಟು ನನ್ನ ಬಾಡದ ಕನಕಾಂಬರಕ್ಕೆ ಬೈಬೈ ಮಾಡಿ, ಅರಳಿದ ಗುಲಾಬಿಯನ್ನು ಪಡೆದೆ. ಅಚ್ಚರಿಯಿಂದ ಅಕ್ಷರಗಳನ್ನೆಲ್ಲಾ ಗಮನಿಸಿದೆ.  ಕೆಲ ಹೊತ್ತಿನಲ್ಲಿ, ಸೊಗಸಾಗಿದ್ದ ನೋಟು ಹೇಳಿತು ‘ನಾನು ಕಬ್ಬಿಣದ ಕಡಲೆ’ ಎಂದು. ಅದನ್ನು ಬೇರೆಡೆ ಕೊಟ್ಟು, ಸ್ನೇಹಿತನಿಗೆ 1000 ಚಿಲ್ಲರೆ ಕೊಡುವಷ್ಟರಲ್ಲಿ  ನಾನು ಸುಸ್ತಾಗಿ ಹೋಗಿದ್ದೆ. 
–ಆದರ್ಶ ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT