ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತವಾಗಿರಲಿ ಪಾಸ್‌ವರ್ಡ್‌

Last Updated 11 ಜನವರಿ 2017, 19:30 IST
ಅಕ್ಷರ ಗಾತ್ರ

ಡಿಜಿಟಲ್‌ ಯುಗದಲ್ಲಿ ಪಾಸ್‌ವರ್ಡ್‌ ಇಲ್ಲದೆ ಬದುಕೇ ಇಲ್ಲ ಎನ್ನಬಹುದು. ಸಿಸ್ಟಮ್‌ ಲಾಗ್‌ಇನ್‌ ಇಂದ ಹಿಡಿದು ಇಮೇಲ್, ಫೇಸ್‌ಬುಕ್‌, ಟ್ವಿಟರ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ವರೆಗೆ ಪಾಸ್‌ವರ್ಡ್‌ ಎಂಬ ಮಂತ್ರಾಕ್ಷರಗಳು ಬೇಕೇಬೇಕು.

ನೋಟು ರದ್ದತಿಯ ಬಳಿಕ ಆನ್‌ಲೈನ್‌ ವಹಿವಾಟು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಮೊಬೈಲ್‌ ವ್ಯಾಲೆಟ್‌ಗಳ ಬಳಕೆಗೂ ಪಾಸ್‌ವರ್ಡ್‌ ಎಂಬ ಅಸ್ತ್ರ ಅಗತ್ಯ. ಇಷ್ಟೆಲ್ಲಾ ಆನ್‌ಲೈನ್‌ ಮಾರ್ಗಗಳಿಗೆ ಕೀಲಿಕೈ ಆಗುವ ಪಾಸ್‌ವರ್ಡ್‌ ಸುರಕ್ಷಿತವಾಗಿರಬೇಕಾದ್ದು ಅತ್ಯಗತ್ಯ.

ಸಾಮಾನ್ಯವಾಗಿ ತಮ್ಮ ಹೆಸರಿನೊಂದಿಗೆ ಮೊಬೈಲ್‌ ನಂಬರ್‌ ಸೇರಿಸಿ ಪಾಸ್‌ವರ್ಡ್‌ ರೂಪಿಸಿಕೊಳ್ಳುವ ಅಭ್ಯಾಸ ಹಲವರದ್ದು. ಇನ್ನು ಕೆಲವರು ಹೆಸರು ಹಾಗೂ ಊರು ಅಥವಾ ಹೆಸರಿನೊಂದಿಗೆ ಹೆಂಡತಿ/ಗಂಡ ಇಲ್ಲವೇ ಪ್ರೇಯಸಿ/ಪ್ರಿಯಕರನ ಹೆಸರನ್ನು ಪಾಸ್‌ವರ್ಡ್‌ ಆಗಿ ಬಳಸುವುದು ರೂಢಿ. ಕೆಲವರು ಹೆಸರಿನೊಂದಿಗೆ ತಮ್ಮ ಹುಟ್ಟಿದ ವರ್ಷವನ್ನು ಪಾಸ್‌ವರ್ಡ್‌ ಆಗಿಸಿಕೊಂಡಿರುತ್ತಾರೆ. ಆದರೆ, ಇಂಥ ಪಾಸ್‌ವರ್ಡ್‌ಗಳು ಎಷ್ಟು ಸುರಕ್ಷಿತ ಎಂದು ಯೋಚಿಸಿದ್ದೀರಾ?

ನಿಮ್ಮ ಗೆಳೆಯರು ಇಲ್ಲವೇ ಆಪ್ತವಲಯದಲ್ಲಿರುವವರಿಗೆ ನಿಮ್ಮ ಕೆಲ ಖಾಸಗಿ ವಿಷಯಗಳು (ನಿಮ್ಮ ಹೆಂಡತಿ/ಗಂಡನ ಹೆಸರು, ನಿಮ್ಮ ಊರು, ನಿಮ್ಮ ಹುಟ್ಟಿದ ವರ್ಷ) ಸಾಮಾನ್ಯವಾಗಿ ತಿಳಿದೇ ಇರುತ್ತವೆ. ಹೀಗಾಗಿ ನೀವು ಈ ಮಾಹಿತಿಗಳನ್ನು ಪಾಸ್‌ವರ್ಡ್‌ ಆಗಿ ಬಳಸುವುದು ಅಷ್ಟು ಸುರಕ್ಷಿತವಲ್ಲ. ಇನ್ನು 111222333 ಅಥವಾ ABCD123 ಇಲ್ಲವೇ 123@Password ಎಂಬ ಪಾಸ್‌ವರ್ಡ್‌ ಇರಿಸಿಕೊಳ್ಳುವುದು ಹಲವರ ಅಭ್ಯಾಸ. ನಿಮ್ಮ ಆನ್‌ಲೈನ್‌ ಕೋಟೆಗೆ ಕನ್ನ ಹಾಕಲು ಇಂಥ ಪಾಸ್‌ವರ್ಡ್‌ಗಳು ಅನುಕೂಲ ಮಾಡಿಕೊಟ್ಟಂತೆ. ಹೀಗಾಗಿ ಪಾಸ್‌ವರ್ಡ್‌ ಸುರಕ್ಷತೆಯನ್ನು ನಿರ್ಲಕ್ಷಿಸುವುದು ಸರಿಯಲ್ಲ.

ದುರ್ಬಲ ಪಾಸ್‌ವರ್ಡ್ ಬದಲಿಗೆ ಸುರಕ್ಷಿತವಾದ ಪಾಸ್‌ವರ್ಡ್‌ಗಳನ್ನು ಬಳಸುವುದು ಉತ್ತಮ. ಹೆಸರು, ಊರು, ಹೆಂಡತಿ/ಗಂಡನ ಹೆಸರು, ಜನ್ಮ ದಿನಾಂಕ, ನಿಮ್ಮ ಕಂಪೆನಿ, ನಿಮ್ಮ ಇಷ್ಟದ ಲೇಖಕನ ಹೆಸರು, ನಿಮ್ಮ ನೆಚ್ಚಿನ ನಟನ ಹೆಸರು, ನಿಮ್ಮ ಇಷ್ಟದ ಪುಸ್ತಕ – ಇವುಗಳನ್ನು ಪಾಸ್‌ವರ್ಡ್‌ ಆಗಿಸಿಕೊಳ್ಳುವುದು ಸುರಕ್ಷಿತವಲ್ಲ. ಏಕೆಂದರೆ ನಿಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಈ ಮಾಹಿತಿಗಳು ಸಾಮಾನ್ಯವಾಗಿ ಎಲ್ಲರಿಗೂ ಸಿಗುತ್ತವೆ. ಕನ್ನಕೋರರು ಇವನ್ನೆಲ್ಲಾ ಇಣುಕುತ್ತಿರುತ್ತಾರೆಂಬ ಎಚ್ಚರವಿರಲಿ.

ಪಾಸ್‌ವರ್ಡ್‌ ಆದಷ್ಟೂ ಕ್ಲಿಷ್ಟವಾಗಿರಲಿ. ನಿಮಗೆ ಮಾತ್ರ ನೆನಪಿನಲ್ಲಿ ಉಳಿಯುವಂತಿರಲಿ. ಅಗತ್ಯವಿರುವಲ್ಲಿ ಲಾಗ್‌ಇನ್‌ ವೇಳೆ ನಿಮ್ಮ ಮೊಬೈಲ್‌ಗೆ ಸುರಕ್ಷತೆಯ ವೇರಿಫಿಕೇಷನ್ ಕೋಡ್‌ ಬರುವಂತೆ ಖಾತೆ ಸೆಟ್ಟಿಂಗ್‌ ಮಾಡಿಕೊಳ್ಳಿ. ಪ್ರತಿ ಲಾಗ್‌ಇನ್‌ ಮಾಹಿತಿಯೂ ಇಮೇಲ್‌ ಅಥವಾ ಮೊಬೈಲ್‌ ಸಂದೇಶದ ಮೂಲಕ ಬರುವಂತೆ ಖಾತೆ ಸೆಟ್ಟಿಂಗ್‌ ಮಾಡಿ.ಯಾರೊಂದಿಗೂ ನಿಮ್ಮ ಪಾಸ್‌ವರ್ಡ್‌ ಹಂಚಿಕೊಳ್ಳಬೇಡಿ. ನಿಮ್ಮ ಖಾತೆಗಳು ಇನ್ನೂ ಸುರಕ್ಷಿತವಾಗಿರಬೇಕೆಂದರೆ ಆಗಾಗ ಪಾಸ್‌ವರ್ಡ್‌ ಬದಲಿಸುತ್ತಿರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT