ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಹಾದಿಯಲ್ಲಿ ನಿರೀಕ್ಷೆ ಮೂಡಿಸಿದ ಕಾರ್‌ಗಳು...

Last Updated 11 ಜನವರಿ 2017, 19:30 IST
ಅಕ್ಷರ ಗಾತ್ರ

2017ರಲ್ಲಿ ಹಲವು ಹೊಸ ಕಾರ್‌ಗಳು ನಮ್ಮ ರಸ್ತೆಗೆ ಬರಲಿವೆ. ಸಣ್ಣ ಹ್ಯಾಚ್‌ಬ್ಯಾಕ್‌ಗಳಿಂದ ಆರಂಭವಾಗಿ ದೊಡ್ಡ ಎಸ್‌ಯುವಿಗಳವರೆಗೆ ಹಲವು ಕಾರ್‌ಗಳು ಬಿಡುಗಡೆಗೆ ಸಜ್ಜಾಗಿವೆ. ಆದರೆ ಅವುಗಳಲ್ಲಿ ಕೆಲವು ಬಿಡುಗಡೆಗೂ ಮುನ್ನವೇ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿವೆ. ಅವುಗಳ ಕಡೆಗೆ ಒಂದು ಸಣ್ಣ ನೋಟ.

ಟಾಟಾ ಕೈಟ್‌


ಈಗ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಕಾಂಪಾಕ್ಟ್‌ ಸೆಡಾನ್‌ಗಳಲ್ಲಿ ಕೇಳಿ ಬರುತ್ತಿರುವ ಹೆಸರು ಟಾಟಾ ಕೈಟ್‌. ಸದ್ಯ ಈ ವರ್ಗದಲ್ಲಿ ಬೇರೆ ಯಾವ ಕಂಪೆನಿಗಳೂ ಹೊಸ ಕಾರ್ ಬಿಡುಗಡೆಗೆ ಸಿದ್ಧತೆ ನಡೆಸಿಲ್ಲ. ಈಗ ಮಾರುಕಟ್ಟೆಯಲ್ಲಿರುವ ಎಲ್ಲಾ ಸಿಸೆಡಾನ್‌ಗಳು ಈಗಾಗಲೇ ಹಳತಾಗಿವೆ. ತಮ್ಮ ಈಚಿನ ಜನಪ್ರಿಯ ಹ್ಯಾಚ್‌ಬ್ಯಾಕ್‌ ಟಿಯಾಗೊವನ್ನು ಮಾದರಿಯಾಗಿಟ್ಟುಕೊಂಡು ಟಾಟಾ ಕೈಟ್‌ ಅನ್ನು ಅಭಿವೃದ್ಧಿಪಡಿಸಿದೆ.

ಹೊಸ ಪ್ಲಾಟ್‌ಫಾರ್ಮ್‌ ಮೇಲೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಸಿಸೆಡಾನ್‌ ಎಂಬ ವರ್ಗವನ್ನು ಪರಿಚಯಿಸಿದ್ದೇ ಟಾಟಾ ಮೋಟಾರ್ಸ್. ಆ ವರ್ಗದಲ್ಲಿನ ಇತರ ಎಲ್ಲಾ ಸ್ಪರ್ಧಿಗಳಿಗಿಂತ ಟಾಟಾದವರ ಸಿಸೆಡಾನ್‌ಗಳೇ ಹೆಚ್ಚು ವಿಶಾಲ ಒಳಾಂಗಣ, ಆರಾಮದಾಯಕ ಸವಾರಿಗೆ ಹೆಸರುವಾಸಿಯಾಗಿವೆ. ಹೀಗಾಗಿ ಕೈಟ್‌ ಸಹ ಈ ವಿಭಾಗದಲ್ಲಿ ಪ್ರತಿಸ್ಪರ್ಧಿಗಳಿಗಿಂತ ಉತ್ತಮವಾಗಿರಲಿದೆ ಎಂದು ನಿರೀಕ್ಷಿಸಬಹುದು.

ಇನ್ನು ಇದರ ಎಂಜಿನ್‌ ಟಿಯಾಗೊ ಎಂಜಿನ್‌ಗಳಿಗಿಂತ ಶಕ್ತಿಯುತವಾಗಿರಬೇಕು ಎಂಬ ನಿರೀಕ್ಷೆ ಮಾರುಕಟ್ಟೆಯಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಾಗ್ವಾರ್‌ ಕಾರ್‌ಗಳನ್ನು ಮಾದರಿಯಾಗಿಟ್ಟುಕೊಂಡು ಕೈಟ್‌ನ ದೇಹದ ಕೆಲವು ಭಾಗಗಳನ್ನು ವಿನ್ಯಾಸ ಮಾಡಿರುವುದರಿಂದ ನೋಟದಲ್ಲಿ ಇದು ದೊಡ್ಡ ಕಾರ್‌ನಂತೆ ಕಾಣುತ್ತದೆ.

ಇನ್ನು ಇದರ ಜತೆಯಲ್ಲೇ ಟಿಯಾಗೊ ಎಎಂಟಿ (ಆಟೊಮೇಟೆಡ್ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್‌) ಅವತರಣಿಕೆಯೂ ಮಾರುಕಟ್ಟೆಗೆ ಬರಲಿದೆ. ಈ ವರ್ಗದ ಬೇರೆಲ್ಲಾ ಕಾರ್‌ಗಳಲ್ಲೂ ಎಎಂಟಿ ಸವಲತ್ತು ಇದೆ. ಟಾಟಾ ಈ ಅವತರಣಿಕೆಯನ್ನು ತಡವಾಗಿ ಪರಿಚಯಿಸುತ್ತಿದೆ. ಟಿಯಾಗೊಗೆ ಹೆಚ್ಚು ಬೇಡಿಕೆ ಇರುವುದರಿಂದ ಎಎಂಟಿ ಅವತರಣಿಕೆ ಅದರ ಮಾರುಕಟ್ಟೆ ಪಾಲನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹೊಸ ವಿನ್ಯಾಸದ ಸ್ವಿಫ್ಟ್‌


ಮಾರುತಿ ಸ್ವಿಫ್ಟ್‌ಗೆ, ಭಾರತದಲ್ಲಿ ಖಾಸಗಿ ಹ್ಯಾಚ್‌ಬ್ಯಾಕ್‌ಗಳಿಗೆ ಸಾಮಾಜಿಕ ಮನ್ನಣೆ ತಂದುಕೊಟ್ಟ ಹೆಗ್ಗಳಿಕೆ ಸಲ್ಲುತ್ತದೆ. ಈಗಾಗಲೇ ಈ ಕಾರ್‌ಗೆ ಹಲವು ಬಾರಿ ಫೇಸ್‌ಲಿಫ್ಟ್‌ ನೀಡಲಾಗಿದೆ.

ರಸ್ತೆಯ ತುಂಬೆಲ್ಲಾ ಈ ಕಾರ್‌ಗಳೇ ತುಂಬಿರುವುದರಿಂದ ಹಾಗೂ ಮೊದಲ ತಲೆಮಾರಿನಿಂದ ಈಗಿನ ತಲೆಮಾರಿನ ಸ್ವಿಫ್ಟ್‌ ಒಂದೇ ತರಹ ಇರುವುದರಿಂದ ಕಂಪೆನಿಯೂ ತುಸು ಬದಲಾವಣೆಗೆ ಮುಂದಾಗಿದೆ. 2017ರ ತಲೆಮಾರಿನ ಸ್ವಿಫ್ಟ್‌ ಈಗಾಗಲೇ ಜಪಾನ್ ಮತ್ತು ಥಾಯ್ಲೆಂಡ್‌ನಲ್ಲಿ ಬಿಡುಗಡೆ ಆಗಿದೆ. ಇದರ ದೇಹದ ಆಕಾರ ಹಳೆಯದ್ದರ ತರಹವೇ ಇದೆ. ಆದರೆ ವಿನ್ಯಾಸ ಬದಲಾಗಿದೆ. ಹೆಡ್‌ಲ್ಯಾಂಪ್‌ ವಿನ್ಯಾಸ, ಗ್ರಿಲ್, ಬಂಪರ್‌ ಎಲ್ಲವೂ ಬದಲಾಗಿದೆ. ಆದರೆ ಎಂಜಿನ್‌ ಹಳೆಯದ್ದೇ ಇರಲಿದೆ.

ನೆಕ್ಸಾನ್‌


ಟಾಟಾ ಮೋಟಾರ್ಸ್‌ ಬಳಿ ಕಳೆದ ಒಂದೂವರೆ ದಶಕದಿಂದ ಒಂದೂ ಕಾಂಪಾಕ್ಟ್‌ ಎಸ್‌ಯುವಿ ಇಲ್ಲ. ಭಾರತಕ್ಕೆ ಮೊದಲು ಸಿಎಸ್‌ಯುವಿ (ಸಿಯೆರಾ) ಪರಿಚಯಿಸಿದ್ದು ಟಾಟಾ ಮೋಟಾರ್ಸ್‌ ಆದರೂ, ಮಾರುಕಟ್ಟೆಯ ಈಗಿನ ನಾಡಿಮಿಡಿತ ಹಿಡಿಯುವಲ್ಲಿ ಕಂಪೆನಿ ವಿಫಲವಾಯಿತು.

ಬೇರೆಲ್ಲಾ ಕಂಪೆನಿಗಳ ಬಳಿ ಈಗಾಗಲೇ ಒಂದೊಂದು ಸಿಎಸ್‌ಯುವಿಯನ್ನು ಮಾರುಕಟ್ಟೆಯಲ್ಲಿ ಇರಿಸಿ ಜನಪ್ರಿಯತೆ ಗಳಿಸಿವೆ. ಟಾಟಾ ಮೋಟಾರ್ಸ್ ತೀರಾ ತಡವಾಗಿ ಈ ವರ್ಗಕ್ಕೆ ಮರುಪ್ರವೇಶ ಮಾಡುತ್ತಿದೆ. ಆದರೆ ಬಿಡುಗಡೆಗೂ ಮುನ್ನವೇ ಈ ಸಿಎಸ್‌ಯುವಿ ಜನಪ್ರಿಯತೆ ಗಳಿಸಿದೆ.

ಲ್ಯಾಂಡ್‌ರೋವರ್‌ ಕಂಪೆನಿಯ (ಟಾಟಾ ಒಡೆತನ) ಡಿಸ್ಕವರಿ ಇವೋಕ್‌ನಿಂದ ಪ್ರೇರಣೆ ಪಡೆದ ವಿನ್ಯಾಸ ಇದರದ್ದು. ಇತ್ತ ಎಸ್‌ಯುವಿಯೂ ಅಲ್ಲದ ಅತ್ತ ದೊಡ್ಡ ಹ್ಯಾಚ್‌ಬ್ಯಾಕ್‌ ಸಹ ಅಲ್ಲದ ಕ್ರಾಸ್‌ಓವರ್‌ ವಿನ್ಯಾಸ ನೆಕ್ಸಾನ್‌ನದ್ದು. ಎಲ್ಲಕ್ಕಿಂತ ಮುಖ್ಯವಾಗಿ ಈ ವರ್ಗದ ಎಲ್ಲಾ ಸ್ಪರ್ಧಿಗಳಿಗಿಂತ ನೆಕ್ಸಾನ್‌ ಹೆಚ್ಚು ಶಕ್ತಿಶಾಲಿಯಾದ ಎಂಜಿನ್‌ ಹೊಂದಿರಲಿದೆ.

ಜತೆಗೆ ಹೆಕ್ಸಾದಲ್ಲಿರುವಂತೆ ಸೂಪರ್ ಡ್ರೈವ್‌ ಮೋಡ್, ಹರ್ಮಾನ್ ಇನ್ಫೊಟೈನ್‌ಮೆಂಟ್‌ ಸವಲತ್ತು ಇದರಲ್ಲಿರಲಿದೆ. ಹೊಸ ವಿನ್ಯಾಸದ ಡ್ಯಾಶ್‌ಬೋರ್ಡ್‌ ಅನ್ನು ನೆಕ್ಸಾನ್‌ ಮೂಲಕ ಟಾಟಾ ಪರಿಚಯಿಸಲಿದೆ. ಈ ವಾಹನ ಅಭಿವೃದ್ಧಿಗೆ ಕಂಪೆನಿ ಈಗಾಗಲೇ ಬರೋಬ್ಬರಿ ಎರಡೂವರೆ ವರ್ಷ ತೆಗೆದುಕೊಂಡಿದೆ. ಈ ವರ್ಷದ ದೀಪಾವಳಿ ವೇಳೆಗೆ ಇದು ಮಾರುಕಟ್ಟೆಗೆ ಬರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಮಾರುತಿ ಇಗ್ನಿಸ್‌


ಮಾರುತಿ ಇಗ್ನಿಸ್‌ ತೀವ್ರ ಕುತೂಹಲ ಮೂಡಿಸಿರುವ ಕಾಂಪ್ಯಾಕ್ಟ್ ಎಸ್‌ಯುವಿ. ಜಪಾನೀ ಶೈಲಿಯ ಇದರ ದೇಹದ ವಿನ್ಯಾಸ ಆಕರ್ಷಕವಾಗಿದೆ. ಮಾರುತಿ ಬ್ರೆಜಾಗಿಂತಲೂ ಪ್ರೀಮಿಯಂ ಆದ ಇಗ್ನಿಸ್‌ ನೆಕ್ಸಾ ಮಳಿಗೆಗಳಲ್ಲಿ ಮಾತ್ರ ಲಭ್ಯವಿರಲಿದೆ.

ಈಗಾಗಲೇ ಸಾಬೀತಾಗಿರುವ 1.2 ಲೀಟರ್‌ ಕೆ ಸೀರಿಸ್ ಪೆಟ್ರೋಲ್ ಎಂಜಿನ್‌ ಇದರಲ್ಲಿರಲಿದೆ. ಇನ್ನು 1.3 ಲೀಟರ್‌ ಸಾಮರ್ಥ್ಯದ ಡಿಡಿಐಎಸ್‌ ಡೀಸೆಲ್ ಎಂಜಿನ್‌ ಇರಲಿದೆ.

ಇವೆರಡೂ ಈಗಾಗಲೇ ಸಾಬೀತಾಗಿರುವ ಎಂಜಿನ್‌ಗಳಾಗಿರುವುದರಿಂದ ಬಾಳಿಕೆ, ಇಂಧನ ದಕ್ಷತೆ ಮತ್ತು ಕಾರ್ಯಕ್ಷಮತೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.

ಆದರೆ ಸುಜುಕಿ ಅಭಿವೃದ್ಧಿಪಡಿಸುತ್ತಿರುವ 1.0 ಲೀಟರ್‌ ಬೂಸ್ಟರ್‌ ಜೆಟ್‌ ಎಂಜಿನ್‌ ಇರುವ ಅವತರಣಿಕೆಯೂ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಸುಜುಕಿಯವರ ಈ ಎಂಜಿನ್ ಬಲೆನೊ ಆರ್‌ಎಸ್‌ ಅವತರಣಿಕೆಯಲ್ಲೂ ಬರಲಿದೆ. ಬಲೆನೊ ಆರ್‌ಎಸ್‌ ಸಹ 2017ರ ಬಹುನಿರೀಕ್ಷಿತ ಕಾರ್‌ಗಳಲ್ಲಿ ಒಂದು.

ಇನ್ನು ಇಗ್ನಿಸ್‌ನಲ್ಲಿ ಫೋರ್‌ವ್ಹೀಲ್‌ ಡ್ರೈವ್‌ ಸೌಲಭ್ಯ ಇರಲಿದ್ದು, ಇದೇ ವಿಭಾಗದ ಇತರ ಸಿಎಸ್‌ಯುವಿಗಳಿಗಿಂತ ಒಂದು ಹೆಜ್ಜೆ ಮುಂದೆ ಇರಲಿದೆ (ಡಸ್ಟರ್‌ ಆಲ್‌ವ್ಹೀಲ್‌ ಡ್ರೈವ್ ಇದಕ್ಕೆ ಅಪವಾದ). ಸುಜುಕಿಯವರ ಜನಪ್ರಿಯ ‘ಡ್ರೈವ್ ಆಲ್‌ ಫೋರ್‌’ ಫೋರ್‌ವ್ಹೀಲ್‌ ಡ್ರೈವ್‌ ಸವಲತ್ತು ಇರಲಿರುವುದು ಇಗ್ನಿಸ್‌ ಅನ್ನು ಮತ್ತಷ್ಟು ಪ್ರೀಮಿಯಂ ಆಗಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT