ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಹೃದಯದ ವೀರಸನ್ಯಾಸಿ ಸ್ವಾಮಿ ವಿವೇಕಾನಂದ

Last Updated 11 ಜನವರಿ 2017, 19:30 IST
ಅಕ್ಷರ ಗಾತ್ರ

ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ‘ರಾಷ್ಟ್ರೀಯ ಯುವದಿನ’ವನ್ನಾಗಿ ಆಚರಿಸಲಾಗುತ್ತದೆ. ವಿವೇಕಾನಂದ ಒಬ್ಬ ಸನ್ಯಾಸಿ. ಸನ್ಯಾಸಿಯೊಬ್ಬರ ಜನ್ಮದಿನವನ್ನು ಯುವದಿನವನ್ನಾಗಿ ಆಚರಿಸುವುದೇ ಸ್ವಾರಸ್ಯಕರವಾಗಿದೆ. ಯೌವನ ಎಂದರೆ ಶಕ್ತಿಯ ಅಪರಿಮಿತ ಪ್ರವಾಹ. ಆದರೆ ಸನ್ಯಾಸ ಎನ್ನುವುದು ಇದಕ್ಕೆ ತದ್ವಿರುದ್ಧವಾದ ಸ್ಥಿತಿ; ಶಕ್ತಿಯ ಎಲ್ಲ ಮೂಲಗಳನ್ನೂ ಸಂಯಮದಲ್ಲಿ, ನಿಗ್ರಹದಲ್ಲಿ ನಿಲ್ಲಿಸಿಕೊಳ್ಳುವ ಸಾಧನೆಯೇ ಸನ್ಯಾಸ.

ಹೀಗೆ ಎರಡು ವಿರುದ್ಧ ಭಾವಗಳ ಸಂಗಮವನ್ನು– ಮೇಲ್ನೋಟಕ್ಕಾದರೂ – ರಾಷ್ಟ್ರೀಯ ಯುವದಿನದ ಕಲ್ಪನೆಯಲ್ಲಿ ನೋಡಬಹುದಾಗಿದೆ. ಆದರೆ ವಿವೇಕಾನಂದರು ಸನ್ಯಾಸಧರ್ಮವನ್ನು ವ್ಯಾಖ್ಯಾನಿಸಿದ ಪರಿಯನ್ನೂ, ಅವರು ಅದನ್ನು ಅನುಸಂಧಾನಿಸಿದ ರೀತಿಯನ್ನೂ ಅವಲೋಕಿಸಿದಾಗ ಯೌವನಕ್ಕೂ ಸನ್ಯಾಸಧರ್ಮಕ್ಕೂ ಇರುವ ಭಾವದ ಬೆಸುಗೆ ಸ್ಪಷ್ಟವಾಗುತ್ತದೆ.

ಸನ್ಯಾಸ ಎನ್ನುವುದಕ್ಕೆ ವಿಶಿಷ್ಟಾರ್ಥವನ್ನು ನೀಡಿ ಅದಕ್ಕೊಂದು ‘ಯೂನಿವರ್ಸಲ್‌’ ಆದ ಹೊಳಪನ್ನು ನೀಡಿದವರು ಅವರು. 1899ರ ಜೂನ್‌ 19ರಂದು ಸನ್ಯಾಸವೃಂದಕ್ಕೆ ಅವರು ನೀಡಿರುವ ಸಂದೇಶ ಇಲ್ಲಿ ಉಲ್ಲೇಖಾರ್ಹವಾದುದು. ಸನ್ಯಾಸಿಗಳ ಆದರ್ಶ ಮತ್ತು ಅನುಷ್ಠಾನದ ಬಗ್ಗೆಯೇ ಮಾತನಾಡಿದ್ದಾರೆ. ಆರಂಭದಲ್ಲಿಯೇ ಸ್ವಾಮಿ ವಿವೇಕಾನಂದ ಅವರು ಸನ್ಯಾಸಿ ಎಂದರೆ ಯಾರು ಎಂದಿದ್ದಾರೆ: ‘ಪರರಿಗೆ ಹಿತವನ್ನುಮಾಡುವವನೇ ಸನ್ಯಾಸಿ; ಏಕೆಂದರೆ ಸನ್ಯಾಸದ ಅರ್ಥವೇ ಅದು’ (Those of you who are  Sannyasins must try to do good to others, for Sannyasa means that). ಸಾಮಾನ್ಯ ಗ್ರಹಿಕೆಯಲ್ಲಿ ಸನ್ಯಾಸ ಎನ್ನುವುದು ವೈಯಕ್ತಿಕ ಸಾಧನೆಯ ಒಂದಾನೊಂದು ವಿವರ ಎಂಬ ನಂಬಿಕೆಯಿದೆ. 

ಈ ಒಂದು ಮಾತಿನಿಂದಲೇ ಈ ಕಳಂಕವನ್ನು ದೂರ ಮಾಡಿದರು ಅವರು. ನಾನು, ನನ್ನದು – ಎಂಬ ಸ್ವಾರ್ಥಮೂಲದ ಸಂಕುಚಿತ ಲೆಕ್ಕಾಚಾರದಿಂದ ಮುಕ್ತನಾಗಿ ಇಡಿಯ ಸೃಷ್ಟಿಯನ್ನೇ ತನ್ನಲ್ಲಿ ಸಾಕ್ಷಾತ್ಕರಿಸಿಕೊಳ್ಳುವ ವೈಶಾಲ್ಯವೇ ಸನ್ಯಾಸ; ಪರಂಪರೆಯ ನಿಲುವಾದರೂ ಇದೇ. ಆದರೆ ಮನೆಯಿಂದ, ಸಮಾಜದಿಂದ, – ಒಟ್ಟು ಜವಾಬ್ದಾರಿಗಳಿಂದ ಪಲಾಯನವಾದಿಯಾಗಿ ಓಡಿಹೋಗುವವನೇ ಸನ್ಯಾಸಿ ಎನ್ನುವಂಥ ವಿಕಾರವನ್ನೂ ಸನ್ಯಾಸಧರ್ಮ ಕಾಲಾಂತರದಲ್ಲಿ ಪಡೆಯಿತು.

ಇಂಥ ಅಧಃಪತನದಿಂದ ಸನ್ಯಾಸವನ್ನು ಕಾಪಾಡಿದ ಪ್ರಮುಖರಲ್ಲಿ ಒಬ್ಬರು ಸ್ವಾಮಿ ವಿವೇಕಾನಂದ. ಹೇಗೆ ಒಬ್ಬ ಸನ್ಯಾಸಿ ಇಡಿಯ ಜಗತ್ತಿನ ಒಳಿತಿಗಾಗಿ ತನ್ನದಾದ ಎಲ್ಲವನ್ನೂ ತ್ಯಾಗ ಮಾಡಬೇಕು ಎನ್ನುವುದನ್ನು ಆ ಭಾಷಣದುದ್ದಕ್ಕೂ ಸ್ವಾಮೀಜಿ ಸರಳವಾಗಿಯೂ ಸುಂದರವಾಗಿಯೂ ಪ್ರತಿಪಾದಿಸಿದ್ದಾರೆ. ‘ಸನ್ಯಾಸ ಎಂದರೆ ಮೃತ್ಯುಪ್ರೇಮ; ಸಾವನ್ನು ಸಂತೋಷದಿಂದ ಸ್ವೀಕರಿಸುವವರು’ ಎನ್ನುವ ಅವರು, ಸಾಯಲು ಬಯಸುವವರೆಲ್ಲರೂ ಸನ್ಯಾಸಿಗಳು ಆಗಲಾರರು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

‘ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಹೊರಟವರು ಆ ಕ್ಷಣ ಪ್ರಯತ್ನಿಸಿ ಸೋತರೆ ಮತ್ತೆ ಸಾಯಲು ಬಯಸುವುದಿಲ್ಲ. ಆದರೆ ಸನ್ಯಾಸಿಗಳು ಸದಾ ಸಾಯಲು ತವಕಿಸುತ್ತಾರೆ.’

ಹೀಗೆಂದು ಇದೇನೂ ನಿರಾಶಾವಾದದ ಬಲೆಯಲ್ಲ ಎಂಬುದನ್ನು ಗಮನಿಸಬೇಕು. ‘ಸಾವು ಎಲ್ಲರಿಗೂ ನಿಶ್ಚಯ. ಆದರೆ ಒಳ್ಳೆಯದನ್ನು ಮಾಡಲು ಸಾವಿಗೂ ಸಿದ್ಧನಾಗಿರುವವನೇ ಸನ್ಯಾಸಿ. ನಾವು ಆಹಾರದಿಂದ ದೇಹವನ್ನು ರಕ್ಷಿಸಿಕೊಳ್ಳುತ್ತೇವೆ. ಹೀಗೆ ರಕ್ಷಿಸಿಕೊಂಡ ದೇಹ ಅದು ಇತರರ ಪ್ರಯೋಜನಕ್ಕೆ ಬರದಿದ್ದರೆ ಅದನ್ನು ರಕ್ಷಿಸಿಕೊಂಡದ್ದರ ಸಾರ್ಥಕತೆಯಾರೂ ಏನು?’ ಎಂದು ಪ್ರಶ್ನಿಸುವ ಸ್ವಾಮೀಜಿ, ಅಧ್ಯಯನ ಎಂದರೆ ಕೇವಲ ಗ್ರಂಥಗಳ ಓದಷ್ಟೆ ಅಲ್ಲ, ಆ ಓದು ಆದರ್ಶವಾಗಿ ರೂಪ ಪಡೆದು ಸಮಾಜದ ಒಳಿತಾಗಿ ಕ್ರಿಯಾಶೀಲವಾಗಬೇಕು – ಎಂದು ಅನುಷ್ಠಾನ ವೇದಾಂತದ ವ್ಯಾಖ್ಯೆಯನ್ನು ವಿಸ್ತರಿಸುತ್ತಾರೆ. 

‘ಗುಹೆಯಲ್ಲಿ ಕುಳಿತು ಧ್ಯಾನ ಮಾಡಿ ಸಾಯುವುದೇ ಸನ್ಯಾಸ’ ಎಂಬ ರೂಢಿಯೂ ನಮ್ಮ ದೇಶದಲ್ಲಿತ್ತು. ಇದನ್ನೇ ಆದರ್ಶ ಎಂದು ಕೂಡ ತಿಳಿಯಲಾಗಿತ್ತು. ಆದರೆ ಹೀಗೆ ಸಮಾಜದಿಂದ ದೂರ ಉಳಿದು, ಯಾರಿಗೂ ಸಹಾಯ ಮಾಡದೆ ಸಾಯುವುದು ಆದರ್ಶ ಹೇಗಾದೀತು? – ಎನ್ನುವುದು ಅವರ ನಿಲುವು. ‘ಮೋಕ್ಷ ಎನ್ನುವುದನ್ನು ವೈಯಕ್ತಿಕ ಸಂಗತಿಯಾಗಿ ತಿಳಿಯುವುದೇ ಪಾಪ.

ನನ್ನ ಸುತ್ತಮುತ್ತಲು ಇರುವ ಎಲ್ಲರಿಗೂ ಮುಕ್ತಿ ದೊರೆಯುವಂತೆ ಪ್ರಯತ್ನಿಸಬೇಕಾದದ್ದು ಸನ್ಯಾಸಿಯ ಧರ್ಮ’ ಎಂದು ಬೋಧಿಸತ್ವನ ಆದರ್ಶವನ್ನು ಸರಳವಾದ ಮಾತುಗಳಲ್ಲಿ ವಿವರಿಸಿದ್ದಾರೆ. ಜಗತ್ತಿನ ಎಲ್ಲ ಆಗುಹೋಗುಗಳಲ್ಲಿ ತನ್ಮಯತೆಯಿಂದ, ಆದರೆ ನಿಃಸ್ವಾರ್ಥಬುದ್ಧಿಯಿಂದ ತೊಡಗಿಕೊಳ್ಳುವುದೇ ಸನ್ಯಾಸಧರ್ಮ, ಧ್ಯಾನವು ಸನ್ಯಾಸಧರ್ಮಕ್ಕೆ ಒದಗುವ ಸಾಧನೆ. ಆದರೆ ಧ್ಯಾನ ಎಂದರೆ ಪ್ರತ್ಯೇಕತೆಯನ್ನು ಪುರಸ್ಕರಿಸುವ ಜಡತೆಯಲ್ಲ.

ಕ್ಷಣವೊಂದರಲ್ಲಿ ಮೌನದಲ್ಲಿ ನೆಲಸಿ, ಅಲೌಕಿಕವಾದುದರಲ್ಲಿ ಮಗ್ನವಾಗುವುದೂ, ಅದರ ಮರುಕ್ಷಣದಲ್ಲಿಯೇ ಹೊಲದಲ್ಲಿ ಇಳಿದು ಉಳುವುದಕ್ಕೂ ಸಿದ್ಧವಾಗುವುದು; ಇಂಥ ಸಿದ್ಧಿಯೇ ದಿಟವಾದ ಧ್ಯಾನ – ಎಂದು ಅಧ್ಯಾತ್ಮದ ಸಾಧನೆಗೂ ಹೊಸ ಬೆಳಕನ್ನು ಅವರು ಒದಗಿಸಿದರು.

ಈ ಸಾಧನೆಗೆ ಪೂರಕವಾದ ವ್ಯಕ್ತಿತ್ವವನ್ನು ದಕ್ಕಿಸಿಕೊಳ್ಳಬೇಕೆಂದೂ ತಾಕೀತು ಮಾಡಿದರು. ಋಷಿಗಳು ಹೇಳಿರುವುದನ್ನು ಕಲಿತುಕೊಳ್ಳುವುದೇ ಸಾಧನೆಯಲ್ಲ; ಅವರಂತೆಯೇ ನಾವೂ ಆಗಬೇಕು ಎಂದು ಆಗ್ರಹಿಸಿದರು.

ಕೇವಲ ಪುಸ್ತಕಗಳಿಗೆ ಸೀಮಿತವಾದ ಬುದ್ಧಿಯಿಂದ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗದು. ಮೊದಲು ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು. ಅದಕ್ಕಾಗಿ ಶಕ್ತಿಯೇ ಮನುಷ್ಯಾಕಾರವನ್ನು ಪಡೆದಿಯೋ ಎನ್ನುವಂಥ ಬಲವನ್ನು ಸಂಪಾದಿಸಬೇಕು; ಇದರ ಜೊತೆಯಲ್ಲಿ ನಮ್ಮ ಹೃದಯವು ಸ್ತ್ರೀಹೃದಯವಾಗಬೇಕು. ಎಂದರೆ ತಾಯಿಯಂತೆ ಸಮಸ್ತ ವಿಶ್ವದ ತುಡಿತಕ್ಕೆ ಸ್ಪಂದಿಸುವಂಥ ಅನುಕಂಪಶೀಲತೆಯನ್ನು ಪಡೆಯಬೇಕು. ಯಾರಿಗೂ ಜಗ್ಗದ, ಬಗ್ಗದ ಸಾಮರ್ಥ್ಯವನ್ನೂ ಹೊಂದಬೇಕು; ಅದರ ಸಂಗಡ ವಿನಯ–ವಿಧೇಯತೆಗಳನ್ನೂ ಅಳವಡಿಸಿಕೊಳ್ಳಬೇಕು. ಇದೇ ನಿಜವಾದ ವ್ಯಕ್ತಿತ್ವ – ಎಂದು ಸಾರಿದರು.

‘ಸನ್ಯಾಸ’ ಎಂದರೆ ಎಲ್ಲ ಹೊಣೆಗಾರಿಕೆಯಿಂದ ಓಡಿಹೋಗುವುದಲ್ಲ; ಅದು ಜಗತ್ತಿನ ಹಿತಕ್ಕಾಗಿ ನ್ಯಾಸವಿಟ್ಟ ನಮ್ಮ ನಡೆ–ನುಡಿಗಳ ನಿಧಿ. ಯೌವನ ಎಂದರೆ ಶಕ್ತಿ–ಸಾಮರ್ಥ್ಯಗಳ ಪ್ರವಾಹ. ನಮ್ಮ ಎಲ್ಲ ಶಕ್ತಿ–ಸಂಪತ್ತುಗಳೂ ಸಮಾಜದ ಒಳಿತಿಗಾಗಿ ವಿನಿಯೋಗವಾಗುವುದರಲ್ಲಿಯೇ ನಮ್ಮ ಬದುಕಿನ ಸಾರ್ಥಕತೆ ಅಡಗಿದೆ. ಹೀಗಾಗಿ ಯುವಕರು ಹೆಚ್ಚೆಚ್ಚು ‘ಸಾಮಾಜಿಕಸನ್ಯಾಸಿ’ಗಳಾಗಬೇಕೆಂದು ಅವರು ಹಂಬಲಿಸಿದರು. ಇಡಿಯ ಸೃಷ್ಟಿಯ ಎಲ್ಲ ವಿವರಗಳನ್ನೂ ಒಬ್ಬ ತಾಯಿಯ ನೆಲೆಯಲ್ಲಿ ನೋಡಬಲ್ಲವನೇ ದಿಟವಾದ ಸನ್ಯಾಸಿ – ಎಂದು ಸ್ಥಾಪಿಸಿ, ಸಾಧಿಸಿ, ಅನುಸಂಧಾನಿಸಿ, ಸನ್ಯಾಸಧರ್ಮದ ಸತ್ಯ–ಶಿವ–ಸೌಂದರ್ಯತತ್ತ್ವಗಳ ಶುಭ್ರತೆಯನ್ನು ಕಾಪಾಡಿದ ಯುವಸನ್ಯಾಸಿಯೇ ಸ್ವಾಮಿ ವಿವೇಕಾನಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT