ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಲ ನೋವಿಗೆ ಹೋರಾಟದ ಕಿಡಿ ಹೊತ್ತಿಸಿ...

Last Updated 11 ಜನವರಿ 2017, 19:30 IST
ಅಕ್ಷರ ಗಾತ್ರ

‘ಅಪ್ಪಾ...ಎಂದು ಕರೆಯಲಾಗದ, ಅಪ್ಪಿಕೊಳ್ಳಲಾಗದ ಒಡಲ ಸಂಕಟವೇ ಬೇರೆ. ಇದೊಂದು ಅರ್ಥವಾಗದ, ರಣಗಾಯದ ಹಸಿಹಸಿ ನೋವು. ಬಾಲ್ಯದ ಗೆಣೆಕಾರರು, ಸಹಪಾಠಿಗಳು, ಮಾಸ್ತರರು, ನೆರೆಹೊರೆ ಜನರು ಹೀಗೆ ಊರಿನ ಸಮಸ್ತ ಜನರಿಗೂ ನಮ್ಮ ಪರಿಚಯವಿದೆ. 

ಅಪಹಾಸ್ಯ, ಅವಮಾನ, ಜಾತಿ ನಿಂದನೆ, ಜನ್ಮರಹಸ್ಯ ಹೀಗೆ ಅದೆಷ್ಟೋ ಒಡಲುರಿ ಸಂಕಟಗಳು ನಮ್ಮ ಜನ್ಮಕ್ಕೆ ಅಂಟಿಕೊಂಡಿವೆ. ಅಪ್ಪ ಇಲ್ಲದ ಚಡಪಡಿಕೆ... ಅಮ್ಮನ ವೇದನೆಯ ಕೂಪದಲ್ಲಿ ಬೆಂದು ಹೋಗಿರುವ ಮಕ್ಕಳ ಕಥಿ ರೀ...’ ಎಂದು ದೇವದಾಸಿ ತಾಯಂದಿರ ಮಕ್ಕಳಾದ ಚಂದಾಲಿಂಗ ಕಲಾಲಬಂಡಿ, ಮಂಜುನಾಥ ವಿರೂಪಾಪುರ, ಪರಶುರಾಮ ಹೊಸಳ್ಳಿ, ಯಮನಪ್ಪ ಹಾಗೂ ಯಮನೂರಪ್ಪ ತಮ್ಮ ಬದುಕಿನ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಾ ಗದ್ಗದಿತರಾದರು.

ಅವರ ಕಣ್ಣೀರಿನ ಕಥೆ ಅದೆಷ್ಟೋ ದೇವದಾಸಿ ತಾಯಂದಿರ ಮಕ್ಕಳ, ಯುವಕ– ಯುವತಿಯರ ಕಥೆ ವ್ಯಥೆಯೂ ಆಗಿದೆ. ಶತಮಾನಗಳಿಂದಲೂ ಅಂತರಾಳದಲ್ಲಿ ಹೆಪ್ಪುಗಟ್ಟಿರುವ ನೋವಿಗೆ ಮುಲಾಮು ಇಲ್ಲದೆ ನರಳುತ್ತಿರುವ ಅವರ ಮಕ್ಕಳ ಬಾಳಿನ ನೋವಿಗೆ ಮುಲಾಮು ಹಚ್ಚಲು ಈ ಯುವಕರು ಟೊಂಕಕಟ್ಟಿ ನಿಂತಿದ್ದಾರೆ.

ಸಮಾನತೆ ತತ್ವ
ಕಾನೂನು, ಕಟ್ಟಪ್ಪಣೆಗಳ ನಡುವೆಯೂ ದೇವದಾಸಿ ಪದ್ಧತಿ ಸಮಾಜದ ಅನಿಷ್ಟವಾಗಿ ಇಂದಿಗೂ ಮುಂದುವರಿದಿದೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಕೂಡ ಎಲ್ಲ ರೀತಿಯಲ್ಲೂ ತುಳಿತಕ್ಕೊಳಗಾದವರಿಗಾಗಿ ಹೊಸ ಜೀವನ ವಿಧಾನ ಕಂಡುಹಿಡಿದರು.

ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದಗಳಿಲ್ಲದೆ ಶರಣ ಸಂಕುಲವೆಂಬ ನವ ಸಮಾಜ ಸ್ಥಾಪನೆಯ ಮೂಲಕ ದುಡಿಯುವ ವರ್ಗದ ಶಾರೀರಿಕ ಹಾಗೂ ಮಾನಸಿಕ ಶೋಷಣೆ, ದಾಸಿ – ವೇಶ್ಯೆಯರ ದೈಹಿಕ ಮಾನಸಿಕ ಹಾಗೂ ಲೈಂಗಿಕ ಶೋಷಣೆ ತಡೆಗಟ್ಟಿದರು. ಬಸವಣ್ಣ ಅವರ ಮುಂದೆ ದಾಸಿಯರ ಮತ್ತು ವೇಶ್ಯೆಯರ ಮಕ್ಕಳ ಭವಿಷ್ಯದ ಪ್ರಶ್ನೆ ಇತ್ತು. ಅದನ್ನು ಅವರು ಬಗೆಹರಿಸಿದ ಕ್ರಮ ಮಾರ್ಮಿಕವಾಗಿದೆ.

‘ಚೆನ್ನಯ್ಯನ ಮನೆಯ ದಾಸನ ಮಗಳು, ಕಕ್ಕಯ್ಯನ ಮನೆಯ ದಾಸಿಯ ಮಗಳು, ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ’ ಎಂದು ಹೇಳುವ ಮೂಲಕ ಬಸವಣ್ಣನವರು ಆ ಮಕ್ಕಳ ಸ್ಥಾನದಲ್ಲಿ ನಿಂತು ಸಮಾಜ ಕೊಡುವ ನೋವು ಮತ್ತು ಅಪಮಾನಗಳನ್ನು ಸಂವೇದನಾಶೀಲರಾಗಿ ಅನುಭವಿಸುತ್ತಾರೆ.

ಅವರಿಗೆ ನ್ಯಾಯ ಒದಗಿಸಲು ಮಾರ್ಗ ಹುಡುಕುತ್ತಾರೆ. ‘ದಾಸೀ ಪುತ್ರನಾಗಲಿ, ವೇಶ್ಯಾಪುತ್ರನಾಗಲಿ, ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು ವಂದಿಸಿ ಪೂಜಿಸಿ ಪಾದೋದಕ ಪ್ರಸಾದವಕೊಂಬುದೆ ಯೋಗ್ಯ. ಹೀಗಲ್ಲದೆ ಉದಾಸೀನ ಮಾಡಿ ಬಿಡುವವರಿಗೆ ಪಂಚಮಹಾಪಾತಕ ನರಕ ಕಾಣಾ, ಕೂಡಲ ಸಂಗಮದೇವ’ ಎಂದು ಬಸವಣ್ಣ ಅವರು ಹೇಳಿದ್ದಾರೆ. ಅನೈತಿಕ ಸಂಬಂಧದಿಂದ ಜನಿಸಿದ ಮಕ್ಕಳಲ್ಲೂ ಬಸವಣ್ಣ ಶಿವಸ್ವರೂಪವನ್ನೇ ಕಂಡರು. ಆ ಮೂಲಕ ರಾಜಪುತ್ರ, ದಾಸೀಪುತ್ರ ಮತ್ತು ವೇಶ್ಯಾಪುತ್ರರು ಸಮಾನರಾದರು!   

ಈ ಸತ್ಯವನ್ನು ಅರಿಯಲು ಈ ಜಗತ್ತು 1948ನೇ ಡಿಸೆಂಬರ್ 10 ರವರೆಗೆ ಕಾಯಬೇಕಾಯಿತು. ಅಂದು ವಿಶ್ವ ಸಂಸ್ಥೆ ಘೋಷಿಸಿದ 30ಅಂಶಗಳಲ್ಲಿ ‘ದಾಂಪತ್ಯ ಸಂಬಂಧದಿಂದ ಜನಿಸಿದ ಮಕ್ಕಳ ಹಕ್ಕುಗಳಲ್ಲಿ ಹಾಗೂ ಅನೈತಿಕ ಸಂಬಂಧದಿಂದ ಜನಿಸಿದ ಮಕ್ಕಳ ಹಕ್ಕುಗಳಲ್ಲಿ ವ್ಯತ್ಯಾಸವಿಲ್ಲ ಎಂಬ ಅಂಶವೂ ಸೇರಿದೆ. ತಮ್ಮನ್ನು ಅನೈತಿಕ ಸಂಬಂಧಕ್ಕೆ ಜನಿಸಿದವರು ಎಂದು ಹೀಯಾಳಿಸುವ ಸಮಾಜಕ್ಕೆ  ಈ ಯುವಕರು ಈ ರೀತಿಯಾಗಿ ಉತ್ತರ ನೀಡುತ್ತಾರೆ. (ಆಧಾರ:‘ಮುತ್ತು ಒಡೆವ ಬನ್ನಿ’ ಕೃತಿಯ ಮುನ್ನುಡಿಯಲ್ಲಿ ಪ್ರಸ್ತಾಪಿಸಿರುವ ಕೆಲ ಅಂಶಗಳು).

ಮುಂದಿತ್ತು ಬದುಕಿನ ಪ್ರಶ್ನೆ
‘ನಮ್ಮ ತಾಯಂದಿರು ದೇವದಾಸಿಯರಾಗಿ ಸಮಾಜದ ಕಣ್ಣಿನಲ್ಲಿ ನಿಕೃಷ್ಟವಾಗಿ ಬದುಕುತ್ತಿದ್ದಾರೆ. ಸರ್ಕಾರ 1984ರಲ್ಲಿ ದೇವದಾಸಿ ಪದ್ಧತಿ ನಿಷೇಧ ಮಾಡಿದೆ.1994ರಲ್ಲಿ ದೇವದಾಸಿ ಪುನರ್ವಸತಿ ಯೋಜನೆ ಜಾರಿಗೆ ತಂದು, ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಿದರೂ, ಅರ್ಹ ಫಲಾನುಭವಿಗಳನ್ನು ತಲುಪಿಲ್ಲ ಎಂಬುದನ್ನು ದೇವದಾಸಿ ಪದ್ಧತಿ ಆಚರಣೆಯಲ್ಲಿರುವ ಜಿಲ್ಲೆಗಳ ವ್ಯಾಪ್ತಿಯ ಸರ್ಕಾರಿ ಅಂಕಿ – ಅಂಶಗಳು ಸಾದರಪಡಿಸುತ್ತವೆ.

‘ಪರಿಸ್ಥಿತಿ ಹೀಗಿರುವಾಗ; ಭೂಮಿ, ವಸತಿ, ಮೂಲ ಸೌಕರ್ಯ, ಮಾಸಾಶನಕ್ಕಾಗಿ ಇಂದಿಗೂ ಪರದಾಡುತ್ತಿರುವ ನೂರಾರು ಮಂದಿ ದೇವದಾಸಿ ತಾಯಂದಿರ ಎದೆಯೊಳಗ ಸಮುದ್ರ ಅಳದಷ್ಟು ಬ್ಯಾನಿ ತುಂಬೈತ್ರೀ...ಅದ್ಕ ‘ವಿಮುಕ್ತಿ ದೇವದಾಸಿ ವೇದಿಕೆ’ ಹುಟ್ಟಾಕಿದ್ದೀವಿ’ ಎಂದು ವೇದಿಕೆ ಅನಿವಾರ್ಯತೆ ಮತ್ತು ಬದುಕಿನ ಪ್ರಶ್ನೆಗಳ ಬಗ್ಗೆ ಈ ಯುವಕರು ವಿವರಿಸುತ್ತಾರೆ.

ಮನದ ಬೇಗುದಿಗೊಂದು ವೇದಿಕೆ
‘ಹೇಗೋ ಶಾಲೆ ವಿದ್ಯಾಭ್ಯಾಸ ಮುಗಿಸಿ ಕಾಲೇಜು ಸೇರಿಕೊಂಡರೆ ಅಪಮಾನದ ಬೇಗುದಿ ಇನ್ನೂ ಹೆಚ್ಚಾಯಿತು. ಜನ್ಮರಹಸ್ಯದ ನಿಂದನೆ ಮಾತುಗಳು ಮನಸ್ಸು ಇರಿಯುತ್ತಿದ್ದವು. ಅವ್ವನ ಬಗ್ಗೆ ಹೀಯಾಳಿಕೆ ಮಾತುಗಳು ಮನಸ್ಸಿಗೆ ವೇದನೆಯಾಗುತ್ತಿತ್ತು. ಆದರೂ, ಏನೂ ಮಾಡಲು ಆಗುತ್ತಿರಲಿಲ್ಲ’ ಎಂದು ಮಂಜುನಾಥ ವಿರೂಪಾಪುರ ಕಣ್ಣಂಚಿನಲ್ಲಿ ನೀರು ತುಂಬಿಕೊಂಡರು.

‘ನಮ್ ಆಯೀ (ಅಜ್ಜಿ) ಕೂಡ ದೇವದಾಸಿ. ಬದ್ಕು ಬ್ಯಾಸ್ರಾ ಮೂಡಿಸಿದರೂ, ನನ್‌ ಅಪ್ಪನ ಸಲುವಾಗಿ ಆಕಿ ಎಷ್ಟೋ ನಮೂನಿ ಬ್ಯಾನಿ ತಡಿದ್ಯಾಳಾ. ಜನ್ಮಕ್ಕೆ ಕಾರಣವಾದ ವ್ಯಕ್ತಿ ಊರ್ ಮಂದಿಗೆ ಗೊತ್ತ್ರೀ... ಬೆಳದಂಗ ನಮ್ಗೂ ಅಪ್ಪ ಯಾರಂತ್‌ ಗೊತ್ತಾಗತ್ತೈತ್ರೀ.

ಆದ್ರ, ಜಗ್ಗಿ ಕೇಳಂಗಿಲ್ಲ. ಅಪ್ಪಾ...ಅಂತ ಕರೆಯಾಕ ಆಸೆ ಆಗತ್ತೈತಿ.. ನಮ್ ಬ್ಯಾನಿ ಯಾರ ಮುಂದ ಹೇಳೋನ್ರೀ... ನಾವು ಹಾದರಕ್ಕ ಹುಟ್ಟೀವಿ ಅಂತ ಸಮಾಜ ಹಣೆಪಟ್ಟಿ ಕಟ್ಟಿದೆ. ನನ್ನ ಅಪ್ಪ ಕೂಡ ಇಂತಹ ಹಿನ್ನೆಲೆಯಿಂದ ಬಂದು ಹೋರಾಟಗಾರನಾಗಿ ರೂಪುಗೊಂಡವರು. ಮನಸ್ಸಿನ ದುಗುಡ ಮಕ್ಕಳ ಮುಂದೆ ಹೇಳಿಕೊಂಡು, ಹಗುರಾಗುತ್ತಿದ್ದ’ ಎಂದು ಚಂದಾಲಿಂಗ ತನ್ನ ಅಪ್ಪನ ಸಂಘರ್ಷದ ಬದುಕು ತೆರೆದಿಟ್ಟರು.

ನೂರಾರು ವರ್ಷಗಳಿಂದ ನಾಗರಿಕ ಸಮಾಜದ ಮೇಲ್ವರ್ಗದ ಮುಖವಾಡ ಹೊತ್ತ ಮನಸ್ಸುಗಳು ‘ಭರತ ಹುಣ್ಣಮೆ’ಯ (ಮುತ್ತೈದೆ ಹುಣ್ಣಿಮೆ) ಹಾಲು ಬೆಳದಿಂಗಳ ರಾತ್ರಿಗಾಗಿ ವರ್ಷವಿಡೀ ಕಾಯುತ್ತಿದ್ದ ಕಾಲ ಒಂದಿತ್ತು. ಆ ಹುಣ್ಣಿಮೆ ಬಂತೆಂದರೆ ಸಾಕು ಹುಲಿಗಿ, ಸವದತ್ತಿ, ಉಚ್ಚಂಗಿದುರ್ಗ, ನೀರಮಾನವಿ, ಮಾತ್ಪಳಿ, ಕನಕಗಿರಿ, ತುಳಸಿಗಿರಿ ಆಂಜನೇಯ ಮತ್ತು ಬಾದಾಮಿ ಸುತ್ತಲಿನ ಅನೇಕ ಕೊಳ್ಳ ಪ್ರದೇಶಗಳಲ್ಲಿ ದೇವದಾಸಿ ಮಾಡುವ ಆಚರಣೆ ವೈಭವದಿಂದ ಜರುಗುತ್ತಿತ್ತು.

ಕಾಲಕ್ರಮೇಣ ಚಂದ್ರಗುತ್ತಿಯ ಬೆತ್ತಲೆಸೇವೆ ವಿರುದ್ಧ ಪ್ರಗತಿಪರ ಸಂಘಟನೆಗಳ ಪ್ರಬಲ ಹೋರಾಟದ ಪರಿಣಾಮ ದೇವದಾಸಿ ಪದ್ಧತಿ ತಡೆಗೆ ದಾರಿಯಾಯಿತೇ ಹೊರತು; ಸರ್ಕಾರ ಮತ್ತು ನಾಗರಿಕ ಸಮಾಜದ ಹೋರಾಟ ಹಾಗೂ ಕಾನೂನಿನಿಂದಲ್ಲ ಎಂದು ಚಂದಾಲಿಂಗಾ ಮತ್ತು ಅವರ ಬಳಗದ ಸ್ನೇಹಿತರು ಅಭಿಪ್ರಾಯಪಡುತ್ತಾರೆ.

ಉತ್ತರ ಕರ್ನಾಟಕದ 13 ಜಿಲ್ಲೆಯಲ್ಲಿ ದೇವದಾಸಿ ಆಚರಣೆ, ಮುತ್ತುಕಟ್ಟುವ ಪದ್ಧತಿ ದೇವಸ್ಥಾನ ಅಂಗಳದಿಂದ ಹೊರ ಬಂದಿತೇ ಹೊರತು; ಪದ್ಧತಿ ಆಚರಣೆ ಮಾತ್ರ ತೆರೆಯಲ್ಲಿ ಇನ್ನೂ ಚಾಲ್ತಿಯಲ್ಲಿ ಇದೆ ಎನ್ನುವುದಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಇರುವ ದೇವದಾಸಿ ತಾಯಂದಿರೇ ಜೀವಂತ ಸಾಕ್ಷಿ ಎನ್ನುತ್ತಾರೆ.

ಎಷ್ಟೋ ಅಂಗವಿಕಲ ಹಾಗೂ ಅಸಹಾಯಕ ಹೆಣ್ಣು ಮಕ್ಕಳಿಗೆ ಗುಟ್ಟಾಗಿ ಮುತ್ತು ಕಟ್ಟುವ ಪದ್ಧತಿ ಇದೆ. ದಾಸಿ ಬಿಡುವ ಪದ್ಧತಿ ಕಡಿಮೆಯಾಗಿದೆ. ಆದರೆ, ಅದು ಸಂಪೂರ್ಣವಾಗಿ ನಿಂತಿಲ್ಲ. ದೇವಸ್ಥಾನಗಳಲ್ಲಿ ಸಾಂಪ್ರದಾಯಿಕವಾಗಿ ವಿಧಿವಿಧಾನಗಳನ್ನು ಅನುಸರಿಸಿ ಸಾರ್ವಜನಿಕವಾಗಿ ಆಚರಣೆ ಕಾನೂನಾತ್ಮಕ ನಿಷೇಧ ಹೇರಿರುವುದರಿಂದ ನಿಂತಿದೆ.

ಆದರೆ, ಕಾನೂನು ಚೌಕಟ್ಟು ಮೀರಿ ದೇವಸ್ಥಾನಗಳ ಹೊರಗೆ ದಾಸಿ ಬಿಡುವ ಹೊಸ ಆಚರಣೆ ಪದ್ಧತಿ ಇದೆ. ಈ ಅಮಾನವೀಯ ಪದ್ಧತಿಯನ್ನು ನಿರ್ಮೂಲನೆಗೊಳಿಸುವಲ್ಲಿ ಸರ್ಕಾರದ ಪಾತ್ರ ಎಷ್ಟು ಮುಖ್ಯವೋ ನಾಗರಿಕ ಸಮಾಜದ ಸಂಘಟನೆಗಳ ಪಾತ್ರ ಮತ್ತು ಕರ್ತವ್ಯ ಸಹ ಅಷ್ಟೇ ಮುಖ್ಯ ಎಂಬುದು ಈ ಯುವಕರ ಪ್ರತಿಪಾದನೆ.

ದೇವದಾಸಿ ಪದ್ಧತಿ ಪ್ರತಿಬಂಧಿಸುವುದು ಹಾಗೂ ಪುನರ್ವಸತಿ ಕುರಿತು ತುರ್ತಾಗಿ ಸಮಗ್ರ ನೀತಿ ಮತ್ತು ಕಾಯ್ದೆ ಕೇಂದ್ರ ಸರ್ಕಾರ ಮಟ್ಟದಲ್ಲಿ ಜಾರಿಯಾಗಬೇಕು. ಪ್ರತಿ ಹಂತದಲ್ಲಿ ಸರ್ಕಾರ ದೇವದಾಸಿ ತಾಯಂದಿರ  ಕುಟುಂಬಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಪುನರ್ವಸತಿಗೆ ತಕ್ಕಂತೆ ಆಯವ್ಯಯದಲ್ಲಿ ಹಣಕಾಸು ಕಾಯ್ದಿರಿಸುವ ಜವಾಬ್ದಾರಿ ಹೊತ್ತಕೊಳ್ಳಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ.

ದಾಸ್ಯದ ಬಿಡುಗಡೆ: ಕಳೆದ ಎರಡು ವರ್ಷಗಳಿಂದ ಈಚೆಗೆ ‘ವಿಮುಕ್ತಿ ದೇವದಾಸಿ ವೇದಿಕೆ’ ಮೂಲಕ ಸ್ವಾಭಿಮಾನಕ್ಕಾಗಿ ಮತ್ತು ದಾಸ್ಯದಿಂದ ವಿಮುಕ್ತಿ ಪಡೆಯುವ ಹೋರಾಟ ಆರಂಭವಾಗಿದೆ.

ಎಷ್ಟೋ ಮಂದಿ ದೇವದಾಸಿಯರು ಅನಾರೋಗ್ಯ, ವಯೋಸಹಜವಾಗಿ ನಿಧನ ಹೊಂದಿದ್ದಾರೆ. ಅವರ ಮಕ್ಕಳು ಯಾವುದೇ ಸೌಲಭ್ಯ ಇಲ್ಲದೆ ನರಳುತ್ತಿದ್ದಾರೆ. ಈ ಪದ್ಧತಿಯ ಹಿನ್ನೆಲೆಯಿಂದ ಬಂದಿರುವ ಯುವ ಜನರನ್ನು ಸಂಘಟಿಸಲಾಗುತ್ತಿದೆ. ಈ ಮೂಲಕ ತಮ್ಮ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನಾತ್ಮಕ ಪಾಲು ಪಡೆಯುವ ಹೋರಾಟಕ್ಕೆ ಸಜ್ಜುಗೊಳಿಸಲಾಗುತ್ತಿದೆ ಎಂದು ಈ ಯುವಕರು ತಮ್ಮ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಾರೆ. 

ಕುಷ್ಟಗಿ ತಾಲ್ಲೂಕಿನ ಪ್ರತಿ ಊರಿನಲ್ಲಿ ವಾಸವಾಗಿರುವ ದೇವದಾಸಿ ತಾಯಂದಿರ ಕಾಲೊನಿಗಳಿಗೆ ಭೇಟಿ ನೀಡುವ ಈ ಐವರು ಯುವಕರು,  ಪದ್ಧತಿ ವಿರುದ್ಧ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ಪೀಳಿಗೆಯನ್ನು ಈ ಪದ್ಧತಿಗೆ ನೂಕದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ  ಹಾಸ್ಟೆಲ್‌ ವ್ಯವಸ್ಥೆ ಒದಗಿಸಿ, ಸಹಾಯಹಸ್ತ ಚಾಚುತ್ತಾರೆ.

ಸ್ವಾಭಿಮಾನಿ ಆಂದೋಲನ: ವಿಮುಕ್ತಿ ದೇವದಾಸಿ ವೇದಿಕೆಯಡಿ ಪ್ರತಿವಾರ ಒಂದೆಡೆ ಸೇರಿ ದೇವದಾಸಿ ತಾಯಂದಿರ ಕಷ್ಟ ಸುಖ ವಿಚಾರಿಸುತ್ತಾರೆ. ಅವರಿಗೆ ಬರಬೇಕಾದ ಮಾಸಾಶನ, ನಿವೇಶನ, ಭೂಮಿ ಹಕ್ಕುಗಳ ಬಗ್ಗೆ ಮಾಹಿತಿ ಪಡೆದು, ಸಂಬಂಧಪಟ್ಟ ಅಧಿಕಾರಿ ಮತ್ತು ಇಲಾಖೆಯ ಗಮನಕ್ಕೆ ತಂದು ಸೌಲಭ್ಯ ಸಿಗುವಂತೆ ಮಾಡುತ್ತಾರೆ. 

ಜಮೀನು ಇರುವ ದೇವದಾಸಿಯರಿಗೆ ಕೊಳವೆಬಾವಿ, ಹೈನುಗಾರಿಕೆ ಸಾಲ ಸಿಕ್ಕಿದೆ.  ಕೊಪ್ಪಳ ಜಿಲ್ಲೆಯ 150 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಎಲ್ಲ ದೇವದಾಸಿಯರಿಗೆ ನಿವೇಶನ ನೀಡುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದು ವೇದಿಕೆ ಹೋರಾಟದ ಫಲ ಎನ್ನುತ್ತಾರೆ ಈ ಯುವಕರು. ತಾವು ಹಮ್ಮಿಕೊಂಡಿರುವ ಸ್ವಾಭಿಮಾನಿ ಆಂದೋಲನ ಜನಮುಖಿಯಾಗಿ ಸಾಗುತ್ತಿದೆ ಎಂದು ಅಭಿಮಾನಪಡುತ್ತಾರೆ.

ಈ ಹಾದಿಯಲ್ಲಿ ದೇವದಾಸಿ ತಾಯಂದಿರಾದ ಪಡಿಯಮ್ಮ, ಮಲಿಯವ್ವ ನಾಗಮ್ಮ, ದುರ್ಗವ್ವ ಅವರು ಸಕ್ರಿಯವಾಗಿ ಈ ಯುವಕರೊಂದಿಗೆ ಕೈಜೋಡಿಸಿದ್ದಾರೆ. ಅಲ್ಲದೆ, ಪಿಯುಸಿಎಲ್ ಸಂಘಟನೆ ರಾಜ್ಯ ಘಟಕ ಅಧ್ಯಕ್ಷ ಪ್ರೊ.ವೈ.ಜೆ.ರಾಜೇಂದ್ರ, ಸಮಾಜ ಸಂಶೋಧನೆ ಮತ್ತು ಸಮುದಾಯ ಅಭಿವೃದ್ಧಿ ಸಂಸ್ಥೆಯ ಡಾ.ಆರ್.ವಿ.ಚಂದ್ರಶೇಖರ್ ‘ವಿಮುಕ್ತಿ ದೇವದಾಸಿ ವೇದಿಕೆ’ಗೆ ಬೆನ್ನಲುಬಾಗಿ ನಿಂತು ಮಾರ್ಗದರ್ಶನ ನೀಡುತ್ತಿದ್ದಾರೆ. 

ವೇದಿಕೆ ಕಾರ್ಯಚಟುವಟಿಕೆ ಕುಷ್ಟಗಿ ತಾಲೂಕಿಗಷ್ಟೇ ಸೀಮಿತವಾಗಿದ್ದು, ಮುಂದಿನ ದಿನಗಳಲ್ಲಿ ದೇವದಾಸಿ ಪದ್ಧತಿವ್ಯಾಪಿಸಿರುವ ಇತರ ಜಿಲ್ಲೆಗಳಿಗೂ ಕಾರ್ಯಬಾಹುಳ್ಯ ವಿಸ್ತರಿಸುವ ಬಗ್ಗೆ ಯುವ ಪಡೆ ಚಿಂತನೆ ನಡೆಸಿದೆ. ಇವರ ಸಂಪರ್ಕ: 9740691789.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT