ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಡ್‌ ಬಳಕೆ ಶುಲ್ಕ ವಸೂಲಿ ಗೊಂದಲ ಕೊನೆಯಾಗಲಿ

Last Updated 12 ಜನವರಿ 2017, 7:08 IST
ಅಕ್ಷರ ಗಾತ್ರ

ಡೆಬಿಟ್‌,  ಕ್ರೆಡಿಟ್  ಕಾರ್ಡ್‌ ಬಳಸುವುದಕ್ಕೆ ಗ್ರಾಹಕರು ಅಥವಾ ವರ್ತಕರಿಂದ ಬ್ಯಾಂಕ್‌ಗಳು ಶುಲ್ಕ ವಸೂಲಿ ಮಾಡುವುದು ವಿವಾದಕ್ಕೆ ಗುರಿಯಾಗಿದೆ. ನಗದುರಹಿತ ಆರ್ಥಿಕತೆ ಹಾದಿಯಲ್ಲಿ ಇದು ಅನಪೇಕ್ಷಿತ ಬೆಳವಣಿಗೆ.  ಇದೇ ಕಾರಣಕ್ಕೆ ಕಾರ್ಡ್‌ ಮೂಲಕ ಹಣ ಸ್ವೀಕರಿಸದಿರಲು ಪೆಟ್ರೋಲ್‌ ಬಂಕ್‌ ಮಾಲೀಕರು ನಿರ್ಧರಿಸಿದ್ದರು.

ಸರ್ಕಾರದ ಮನವೊಲಿಕೆಯ ನಂತರ ನಿರ್ಧಾರ ಬದಲಿಸಿ, ಗ್ರಾಹಕರಿಗೆ ಹೆಚ್ಚುವರಿ ಹೊರೆಯಾಗದಂತೆ ಕಾರ್ಡ್‌ಗಳ ಬಳಕೆಗೆ ಅವಕಾಶ ಮಾಡಿಕೊಟ್ಟಿರುವುದರಿಂದ ವಿವಾದ ತಾತ್ಕಾಲಿಕವಾಗಿ ಶಮನಗೊಂಡಿದೆ. ಸಮಸ್ಯೆ ಇನ್ನೂ  ಶಾಶ್ವತವಾಗಿ ಬಗೆಹರಿದಿಲ್ಲ.

ಶೀಘ್ರದಲ್ಲಿಯೇ ಇದಕ್ಕೆ ಸರ್ವಸಮ್ಮತ ಪರಿಹಾರ ಸೂತ್ರ ಕಂಡುಹಿಡಿಯುವುದಾಗಿ ಸರ್ಕಾರ ತಿಳಿಸಿದೆ. ಅಂತಿಮವಾಗಿ ಎಂಡಿಆರ್‌  ಅನ್ನು (ಮರ್ಚೆಂಟ್ ಡಿಸ್ಕೌಂಟ್ ರೇಟ್) ಯಾರ ತಲೆಗೆ ಕಟ್ಟಲಾಗುವುದು ಎನ್ನುವುದು ನಿರ್ಧಾರವಾಗಬೇಕಾಗಿದೆ. ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಂತರ ಕಂಡುಬಂದಿರುವ ಗೊಂದಲಗಳ ಸರಮಾಲೆಗೆ ಈ ಶುಲ್ಕ ಪಾವತಿಯೂ ಸೇರಿರುವುದು ಹೊಸ ಬೆಳವಣಿಗೆ.

ಅರ್ಥ ವ್ಯವಸ್ಥೆಯಲ್ಲಿ ನಗದು ಚಲಾವಣೆಯನ್ನು ಗಮನಾರ್ಹವಾಗಿ ತಗ್ಗಿಸಿ, ಡಿಜಿಟಲ್‌ ಪಾವತಿ ಉತ್ತೇಜಿಸಲು ಹೊರಟಿರುವ ಕೇಂದ್ರ ಸರ್ಕಾರವು ಈ ಹಂತದಲ್ಲಿ ಇಂತಹ ಗೊಂದಲಕ್ಕೆ ಆಸ್ಪದ ಮಾಡಿಕೊಡಬಾರದಿತ್ತು. ಪೆಟ್ರೋಲ್‌ ಬಂಕ್‌ಗಳಲ್ಲಿ 50 ದಿನಗಳವರೆಗೆ ಕೇಂದ್ರ ಸರ್ಕಾರ ಎಂಡಿಆರ್‌ ಮನ್ನಾ ಮಾಡಿತ್ತು. ಜತೆಗೆ  ಕಾರ್ಡ್‌ ಪಾವತಿಗೆ ಇಂಧನದ ಬೆಲೆಯಲ್ಲಿ ಶೇ 0.75ರಷ್ಟು ರಿಯಾಯಿತಿಯನ್ನೂ ಘೋಷಿಸಿತ್ತು.

ಗಡುವು ಕೊನೆಗೊಳ್ಳುತ್ತಿದ್ದಂತೆ ಕ್ರೆಡಿಟ್‌ ಕಾರ್ಡ್‌ಗಳ ಮೇಲೆ ಶೇ 1 ಮತ್ತು ಡೆಬಿಟ್‌ ಕಾರ್ಡ್‌ಗಳ ಮೇಲೆ ಶೇ 0.25ರಿಂದ ಶೇ 1ರಷ್ಟು ಶುಲ್ಕ ವಸೂಲಿ ಮಾಡುವ ಬ್ಯಾಂಕ್‌ಗಳ ನಿರ್ಧಾರ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಏಕೆಂದರೆ ಕಾರ್ಡ್ ವಿತರಿಸಿರುವ ಬ್ಯಾಂಕ್ ಹಾಗೂ ಹಣ ಪಡೆದುಕೊಳ್ಳುವ ಬ್ಯಾಂಕ್ ಎರಡೂ ವ್ಯಾಪಾರಿಯಿಂದ ಈ ಸೇವಾ ಶುಲ್ಕ ಪಡೆದುಕೊಳ್ಳುತ್ತವೆ.

ಇದು ತಮ್ಮ ಲಾಭದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಕಾರ್ಡ್‌ಗಳನ್ನು ಸ್ವೀಕರಿಸದಿರಲು ಪೆಟ್ರೋಲ್‌ ಬಂಕ್‌ ಮಾಲೀಕರು ನಿರ್ಧರಿಸಿ ಅಸಹಕಾರ ತೋರಿದ್ದರು. ಒಂದು ವೇಳೆ ಶುಲ್ಕ ವಸೂಲಿ ಕಡ್ಡಾಯ ಮಾಡಿದ್ದರೆ ಬಂಕ್‌ ಮಾಲೀಕರು ಆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಇಲ್ಲವೆ ಕಾರ್ಡ್‌ಗಳನ್ನೇ ಸ್ವೀಕರಿಸದಿರುವ ಅನಿವಾರ್ಯ ನಿರ್ಧಾರಕ್ಕೆ ಬರುತ್ತಿದ್ದರು. ಇದು ನಿಜಕ್ಕೂ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳುವುದನ್ನು ಪ್ರತಿಪಾದಿಸುತ್ತಿರುವ ಸರ್ಕಾರದ ಆಶಯಕ್ಕೆ ಹಿನ್ನಡೆ.

ಕಾರ್ಡ್‌ ಸಿದ್ಧಪಡಿಸಿದ ಸಂಸ್ಥೆ, ಕಾರ್ಡ್‌ ವಿತರಿಸಿದ ಬ್ಯಾಂಕ್‌ ಮತ್ತು ಸ್ವೈಪ್‌ ಸಾಧನ ಅಳವಡಿಸಿದ ಹಣಕಾಸು ಸಂಸ್ಥೆಗಳ ಪಾಲಿಗೆ ಎಂಡಿಆರ್‌ ವರಮಾನ ಮೂಲವಾಗಿದೆ. ಹೀಗಾಗಿ ಶುಲ್ಕ ವಸೂಲಿ ಅನಿವಾರ್ಯವಾಗಿರಲಿದ್ದು, ಗ್ರಾಹಕರು ಮತ್ತು ವರ್ತಕರಿಗೆ ಹೊರೆಯಾಗದಂತೆ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕಾಗಿದೆ.

₹ 1,000ವರೆಗಿನ ವಹಿವಾಟಿಗೆ ಶೇ 0.25 ಮತ್ತು ₹ 1,000ದಿಂದ ₹ 2,000ವರೆಗಿನ ವಹಿವಾಟಿಗೆ ಶೇ 0.5ರಷ್ಟು ಎಂಡಿಆರ್‌ ವಿಧಿಸಲು ಆರ್‌ಬಿಐ ನಿರ್ಧರಿಸಿದೆ. ಡಿಜಿಟಲ್‌ ವಹಿವಾಟು ನಿರ್ವಹಣೆಗೆ ಸ್ವೈಪ್‌ ಸಾಧನ ಪೂರೈಕೆ, ಗ್ರಾಹಕರು ಪಾವತಿಸುವ ಹಣ ಪಡೆಯಲು ವರ್ತಕರು ಬ್ಯಾಂಕ್‌ನಲ್ಲಿ ತೆರೆಯುವ ಪ್ರತ್ಯೇಕ ಖಾತೆಗಳ (ಮರ್ಚಂಟ್ ಅಕೌಂಟ್‌) ನಿರ್ವಹಣೆ, ಪಾವತಿ ಸೇವೆ ಒದಗಿಸಲು ಅಳವಡಿಸಿರುವ ಇತರ ಮೂಲ ಸೌಕರ್ಯಗಳ  ಬಳಕೆಗೆ ವರ್ತಕರು ಬ್ಯಾಂಕ್‌ಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ಗ್ರಾಹಕರ ಹಣ ಪಾವತಿ ಸ್ವೀಕರಿಸಲು ಬ್ಯಾಂಕ್‌ಗಳು ವರ್ತಕರಿಗೆ ವಿಧಿಸುವ ಶುಲ್ಕವನ್ನೇ ಎಂಡಿಆರ್‌ ಎಂದು ಪರಿಗಣಿಸಲಾಗುತ್ತಿದೆ.  

ಪೆಟ್ರೋಲ್‌ ಪಂಪ್‌ಗಳಲ್ಲಿ ಉದ್ಭವಿಸಿದ ಬಿಕ್ಕಟ್ಟು ಇತರ ವಲಯಗಳಿಗೂ ವ್ಯಾಪಿಸದಂತೆ ಸರ್ಕಾರ ಮತ್ತು ಆರ್‌ಬಿಐ ಪರಿಹಾರ ಸೂತ್ರ ರೂಪಿಸಬೇಕಾಗಿದೆ. ಹೊಸ ನೋಟುಗಳ ಮುದ್ರಣ, ಭದ್ರತೆ, ಸಾಗಣೆ ಮತ್ತಿತರ ಉದ್ದೇಶಗಳಿಗೆ ಕೇಂದ್ರೀಯ ಬ್ಯಾಂಕ್‌ ಗಮನಾರ್ಹ ಪ್ರಮಾಣದಲ್ಲಿ ಹಣ ವೆಚ್ಚ ಮಾಡುತ್ತದೆ.

ಕಾರ್ಡ್‌ಗಳ ಬಳಕೆ ಹೆಚ್ಚುತ್ತಿದ್ದಂತೆ ನಗದು ನಿರ್ವಹಣೆ ವೆಚ್ಚದಲ್ಲಿ ಉಳಿತಾಯ ಆಗಲಿದೆ. ಇದನ್ನು ಎಂಡಿಆರ್‌ಗೆ ವರ್ಗಾಯಿಸಿ ವರ್ತಕರು ಮತ್ತು ಗ್ರಾಹಕರ ಮೇಲಿನ ಹೊರೆ ತಗ್ಗಿಸಬಹುದಾಗಿದೆ. ನೋಟುಗಳ ಬಳಕೆ ವ್ಯವಸ್ಥೆಯಲ್ಲಿ ಕರೆನ್ಸಿ ವಿತರಣೆ, ಲೆಕ್ಕಪತ್ರ ನಿರ್ವಹಣೆಗೂ ವೆಚ್ಚ ಎಂಬುದಿರುತ್ತಿತ್ತು. ಆದರೆ ಅದನ್ನು ಗ್ರಾಹಕರಿಗೇನೂ ವರ್ಗಾಯಿಸುವುದಿಲ್ಲ.

ಈ ವೆಚ್ಚ ಸರ್ಕಾರ ಹಾಗೂ ಬ್ಯಾಂಕ್‌ಗಳ ಮಧ್ಯೆ ಹಂಚಿಹೋಗುತ್ತಿತ್ತು. ಆದರೆ ಈಗ ಎಂಡಿಆರ್, ಬ್ಯಾಂಕ್‌ಗಳಿಗೆ ಇನ್ನೊಂದು ವರಮಾನದ ಮೂಲವಾಗಿರುವುದರಿಂದ ಈ ಪ್ರಕ್ರಿಯೆ ಬಗ್ಗೆ ಬ್ಯಾಂಕಿಂಗ್ ಉದ್ಯಮ ಮರು ಆಲೋಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT