ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಚುನಾವಣೆ: ಮತಗಟ್ಟೆಗೆ ಅಧಿಕಾರಿಗಳು

Last Updated 12 ಜನವರಿ 2017, 4:49 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಐದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ (ಎಪಿಎಂಸಿ) ಗುರುವಾರ (ಜ.12) ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತವು ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲೆಯಲ್ಲಿ ಐದೂ ಎಪಿಎಂಸಿಗಳಿಂದ 55 ಕೃಷಿಕರ ಕ್ಷೇತ್ರ ಮತ್ತು 15 ಇತರೆ ಕ್ಷೇತ್ರಗಳು ಸೇರಿದಂತೆ ಒಟ್ಟಾರೆ 70 ಕ್ಷೇತ್ರಗಳಿವೆ. ಎಪಿಎಂಸಿಗೆ ವಿವಿಧ ಕ್ಷೇತ್ರಗಳಿಂದ ತಲಾ ಒಬ್ಬರಂತೆ ಒಟ್ಟು 14 ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ವ್ಯವಸಾಯಗಾರರ ಕ್ಷೇತ್ರದಿಂದ 11 ಸದಸ್ಯರು, ವರ್ತಕರ ಕ್ಷೇತ್ರ, ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಮತ್ತು ಕೃಷಿ ಹುಟ್ಟುವಳಿ ಸಂಸ್ಕರಣಾ ಸಹಕಾರ ಸಂಘಗಳ ಕ್ಷೇತ್ರದಿಂದ ತಲಾ ಒಬ್ಬರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇತರೆ ಕ್ಷೇತ್ರಗಳ ಪೈಕಿ ಈಗಾಗಲೇ 6ರಲ್ಲಿ ಅವಿರೋಧ ಆಯ್ಕೆ ನಡೆದಿದೆ. 55 ಕೃಷಿಕರ ಕ್ಷೇತ್ರಗಳಲ್ಲಿ 181 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿದ್ದಾರೆ. 
ಮತದಾನಕ್ಕೆ ಅಗತ್ಯ ಸಿಬ್ಬಂದಿ ಮತ್ತು ವಾಹನದ ವ್ಯವಸ್ಥೆಗೊಳಿಸಿದ್ದು ಬುಧವಾರ ಮತದಾನ ಸಿಬ್ಬಂದಿ ಆಯಾ ತಾಲ್ಲೂಕು ಕೇಂದ್ರಗಳಿಂದ ವಾಹನದೊಡನೆ ಮತದಾನ ಕೇಂದ್ರಕ್ಕೆ ಭದ್ರತೆಯೊಂದಿಗೆ ಕಳಿಸಿಕೊಡಲಾಗಿದೆ.

ಮತದಾನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ನಡೆಯಲಿದ್ದು ಮತದಾನ ಕೇಂದ್ರದಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.
ಒಟ್ಟು ಕ್ಷೇತ್ರಗಳು: ಕೋಲಾರ 11 ಕೃಷಿಕರ ಕ್ಷೇತ್ರ, 2 ಇತರೆ ಕ್ಷೇತ್ರಗಳು, ಮಾಲೂರು 11 ಕೃಷಿಕರ ಕ್ಷೇತ್ರ ಮತ್ತು  ಇತರೆ ಕ್ಷೇತ್ರಗಳು 2. ಬಂಗಾರಪೇಟೆ 11 ಕೃಷಿಕ ಕ್ಷೇತ್ರಗಳು 22  ಮತ್ತು ಇತರೆ 2 ಕ್ಷೇತ್ರಗಳು, ಮುಳಬಾಗಿಲು 11 ಕ್ಷೇತ್ರಗಳು 2 ಇತರೆ 2 ಕ್ಷೇತ್ರಗಳು, ಶ್ರೀನಿವಾಸಪುರ 11 ಕ್ಷೇತ್ರಗಳು 2 ಇತರೆ ಕ್ಷೇತ್ರಗಳು. ಇತರೆ ಕ್ಷೇತ್ರಗಳಲ್ಲಿ 6 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು 4 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.

ಮತದಾರರ ವಿವರ: ಕೋಲಾರ ತಾಲ್ಲೂಕಿನಲ್ಲಿ ಒಟ್ಟು 60,530 ಮಂದಿ ಮತದಾರರಿದ್ದು ಆ ಪೈಕಿ ಪುರುಷರು 49,010, ಮಹಿಳೆಯರು ಸೇರಿ  11,520 ಮತದಾರರಿದ್ದಾರೆ. 76 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಮಾಲೂರಿನಲ್ಲಿ ಒಟ್ಟು 37,707 ಮತದಾರರಿದ್ದು ಆ ಪೈಕಿ ಪುರುಷರು  29,026 ಮಹಿಳೆಯರು 8,681ಮತದಾರರಿದ್ದಾರೆ. 74ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
ಬಂಗಾರಪೇಟೆಯಲ್ಲಿ ಒಟ್ಟು 56,273 ಮತದಾರರಿದ್ದು ಆ ಪೈಕಿ ಪುರುಷರು 44, 647, ಮಹಿಳೆಯರು 11, 626 ಮತದಾರರಿದ್ದು, 78 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮುಳಬಾಗಿಲಿನಲ್ಲಿ ಒಟ್ಟು 44,129 ಮತದಾರರಿದ್ದು ಆ ಪೈಕಿ ಪುರುಷರು 36,041 ಮತ್ತು ಮಹಿಳೆಯರು 80,88 ಮತದಾರರಿದ್ದು, 78 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.  ಶ್ರೀನಿವಾಸಪುರದಲ್ಲಿ ಒಟ್ಟು 35,175 ಮತದಾರರಿದ್ದು ಆ ಪೈಕಿ ಪುರುಷರು 28,524 ಮಹಿಳೆಯರು 6,651ಮತದಾರರಿದ್ದಾರೆ 63 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಅತಿ ಸೂಕ್ಷ್ಮ ಮತಗಟ್ಟೆಗಳು: ಜಿಲ್ಲೆಯಲ್ಲಿ ಒಟ್ಟು 146 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು 75 ಅತಿಸೂಕ್ಷ್ಮ ಮತಗಟ್ಟೆಗಳು ಮತ್ತು 145 ಸಾಮಾನ್ಯ ಮತಗಟ್ಟೆಗಳಿವೆ, ಕೋಲಾರದಲ್ಲಿ 23 ಅತಿಸೂಕ್ಷ್ಮ, ಮಾಲೂರಿನಲ್ಲಿ 12 ಅತಿಸೂಕ್ಷ್ಮ, ಬಂಗಾರಪೇಟೆಯಲ್ಲಿ 9 ಅತಿಸೂಕ್ಷ್ಮ, ಮುಳಬಾಗಿಲಿನಲ್ಲಿ 23 ಅತಿಸೂಕ್ಷ್ಮ ಮತ್ತು ಶ್ರೀನಿವಾಸಪುರದಲ್ಲಿ 28 ಅತಿ ಸೂಕ್ಷ್ಮ ಕೇಂದ್ರಗಳನ್ನು ಗುರುತಿಸಲಾಗಿದ್ದು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಮತದಾನದ ಸಿಬ್ಬಂದಿ:  ಎಪಿಎಂಸಿ ಚುನಾವಣೆಗೆ ಒಟ್ಟು 1,218 ಸಿಬ್ಬಂದಿಯನ್ನು ಮತದಾನ ಪ್ರಕ್ರಿಯೆಗೆ ನಿಯೋಜಿಸಲಾಗಿದೆ, ಒಂದೊಂದು ತಾಲ್ಲೂಕಿನ ಒಬ್ಬರಂತೆ ಚುನಾವಣಾಧಿಕಾರಿ ಸಹಾಯಕ ಚುನಾವಣಾಧಿಕಾರಿ ನೇಮಿಸಲಾಗಿದೆ. ಮತದಾನ ಸಿಬ್ಬಂದಿ ಸಾಗಾಣಿಕೆಗೆ ಜಿಲ್ಲೆಯಾದ್ಯಂತ 43 ಸಾರಿಗೆ ಸಂಸ್ಥೆಯ ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ.

ಪೊಲೀಸ್ ಭದ್ರತೆ: ಜಿಲ್ಲೆಯಲ್ಲಿ ಒಟ್ಟು 500 ಮಂದಿ ಪೊಲೀಸ್ ಸಿಬ್ಬಂದಿಯನ್ನು ಮತದಾನ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ, ಅತಿಸೂಕ್ಷ್ಮ ಕೇಂದ್ರಗಳಿಗೆ ಒಬ್ಬ ಪೊಲೀಸ್ ಕಾನ್‌ಸ್ಟೇಬಲ್‌ ಜತೆಗೆ ಒಬ್ಬ ಹೆಡ್‌ ಕಾನ್‌ಸ್ಟೇಬಲ್‌ ನನ್ನು ನೇಮಿಸಲಾಗಿದೆ. ಪ್ರತಿ ತಾಲೂಕಿಗೆ ಒಬ್ಬರಂತೆ ನೋಡೆಲ್ ಅಧಿಕಾರಿ ಮತ್ತು ಸೆಕ್ಟರ್ ಅಧಿಕಾರಿಗಳನ್ನು ಚುನಾವಣೆ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ.

ನಿಷೇಧಾಜ್ಞೆ ಜಾರಿ: ಮತಗಟ್ಟೆಯ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯವರೆಗೆ 144  ಸೆಕ್ಷನ್ (ನಿಷೇಧಾಜ್ಞೆ) ಜಾರಿಗೊಳಿಸಲಾಗಿದೆ. ಅದೇ ರೀತಿ ಬುಧುವಾರದ ರಾತ್ರಿ 12 ರಿಂದ ಗುರುವಾರದ ರಾತ್ರಿ 12 ರವರೆಗೆ ಮದ್ಯಪಾನ ನಿಷೇಧಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT