ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯತೆ ಹೆಸರಿನಲ್ಲಿ ದೌರ್ಜನ್ಯ ಅಪಾಯಕಾರಿ

Last Updated 12 ಜನವರಿ 2017, 5:44 IST
ಅಕ್ಷರ ಗಾತ್ರ

ತುಮಕೂರು: ‘ರಾಷ್ಟ್ರೀಯತೆಯ ಹೆಸರಿನಲ್ಲಿ ದೇಶಭಕ್ತರ ಹಣೆಪಟ್ಟಿ ಹೊತ್ತವರು ನಡೆಸುತ್ತಿರುವ ದೌರ್ಜನ್ಯಗಳು ಜಾತೀಯತೆಗಿಂತಲೂ ಅತ್ಯಂತ ಹೆಚ್ಚು ಅಪಾಯಕಾರಿ’ ಎಂದು ಹಿರಿಯ ಸಾಹಿತಿ ಪ್ರೊ.ಕೆ. ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು.

ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಕುವೆಂಪು ವಿಚಾರೆಧಾರೆಗಳ ಕುರಿತು ನಡೆದ ಉಪನ್ಯಾಸದಲ್ಲಿ ಅವರು ಮಾತನಾಡಿದರು.
21 ಶತಮಾನದಲ್ಲಿ ಜಾತಿ, ಧರ್ಮ, ಹೆಸರಿನಲ್ಲಿ  ದೌರ್ಜನ್ಯಗಳು ತೀವ್ರವಾಗಿವೆ. ಕುವೆಂಪು ಜಾತಿ, ಧರ್ಮದ ಸಂಕುಚಿತ ಭಾವನೆ ಕಳಚಿಕೊಂಡು ವಿಶ್ವಮಾನವ ಎಂದು ಗುರುತಿಸಿಕೊಂಡರು. ಕುವೆಂಪು ನಾಸ್ತಿಕರಲ್ಲ. ಅವರು ನಿಸರ್ಗದಲ್ಲಿ ದೇವರನ್ನು ಕಾಣುತ್ತಿದ್ದರು. ತಮ್ಮ ಕೊನೆಗಾಲದಲ್ಲಿ ಭವಿಷ್ಯದ ಪ್ರಜೆಗಳಿಗೆ ವಿಶ್ವ ಮಾನವ ಸಂದೇಶ ಹಾಗೂ ಅನಿಕೇತನ ಪ್ರಜ್ಞೆಯನ್ನು ಪ್ರಚಾರ ಮಾಡಿದರು’ ಎಂದರು.

‘ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ.ಬೇಂದ್ರೆ ವೈದಿಕ ಅಡೆತಡೆಯಲ್ಲಿ ಕೃತಿಗಳನ್ನು ರಚಿಸಿದರು. ಆದರೆ ಕುವೆಂಪು ಇದನ್ನು ಮೀರಿ ಕೃತಿ ರಚಿಸಿದರು. ತೇಜಸ್ವಿ, ಕುವೆಂಪು ಅವರನ್ನು ಶೂದ್ರ ಮಹಾ ಕವಿ ಎಂದು ಬಣ್ಣಿಸಿದ್ದಾರೆ’ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ‘ಕುವೆಂಪು ಸ್ಥಳೀಯ ನೆಲೆಯಲ್ಲಿ ಬೇರು ಬಿಟ್ಟು ವಿಶ್ವವನ್ನು ನೋಡಿದವರು. ಲೋಕದರ್ಶನವನ್ನು ಶ್ರಮಿಕರು, ರೈತರ ಮೂಲಕ ಮಾಡಿದರು’ ಎಂದರು.

‘21 ಶತಮಾನದ ಸಾಮಾಜಿಕ ಸಮಸ್ಯೆಗಳಿಗೆ ಕುವೆಂಪು ಕೃತಿಗಳು ಪರಿಹಾರ ಸೂಚಿಸುತ್ತವೆ. ಪುರೋಹಿತಶಾಹಿ ಕಲ್ಪನೆ ನಮ್ಮ ತಲೆಯಲ್ಲಿ ಇದೆ ಹೊರತು ಜಾತಿಯಲ್ಲಿ ಇಲ್ಲ. ಇಂಥ ಪುರೋಹಿತಶಾಹಿ ಕಲ್ಪನೆಯನ್ನು ಗುಂಡಿಟ್ಟು ಕೊಲ್ಲಬೇಕು’ ಎಂದು ಕುವೆಂಪು ಮಾತುಗಳನ್ನು ಉಲ್ಲೇಖಿಸಿದರು.

ಲೇಖಕ ದೊರೆರಾಜು, ಪ್ರಾಂಶುಪಾಲ ಪ್ರೊ.ಎಚ್ ಹರೀಶ್ ಮಾತನಾಡಿದರು.  ಕುವೆಂಪು ವೇದಿಕೆ ಅಧ್ಯಕ್ಷ ಜಿ.ಎಂ.ಶ್ರೀನಿವಾಸಯ್ಯ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT