ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ ವಾರ್ಡನ್‌ ಅಲ್ಲ, ನಮ್‌ ತಂದೆ!

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ ಬಾಲಕಿಯರ ಮನದಾಳ: ಮೂಲ ಸೌಕರ್ಯ ಕಲ್ಪಿಸಲು ಕಾಳಜಿ
Last Updated 12 ಜನವರಿ 2017, 5:46 IST
ಅಕ್ಷರ ಗಾತ್ರ
ಬಳ್ಳಾರಿ: ‘ಈ ಸರ್‌ ಹಾಸ್ಟೆಲ್‌ ವಾರ್ಡನ್‌ ಅಲ್ಲಾ, ನಮ್‌ ತಂದೆ. ಅವರಿಗೆ ನಾವೆಲ್ಲರೂ ಮಕ್ಕಳಿದ್ದಾಂಗ....’
ಇಲ್ಲಿಯ ಪಾರ್ವತಿ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ಮತ್ತು ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಅಭಿಮಾನದಿಂದ ಹೇಳುವ ಮಾತಿದು.
 
ಒಂದೇ ಕಾಂಪೌಂಡಿನಲ್ಲಿರುವ ಎರಡು ಹಾಸ್ಟೆಲ್‌ಗೆ ನಾಲ್ಕು ತಿಂಗಳ ಹಿಂದೆ ಪ್ರಭಾರ ವಾರ್ಡನ್‌ ಆಗಿ ಬಂದಿರುವ ಕೆ.ಮಲ್ಲಿಕಾರ್ಜುನ ಅವರ ಬಗ್ಗೆ ವಿದ್ಯಾರ್ಥಿನಿಯರು ಪ್ರಕಟಿಸುವ ಗೌರವ, ಪ್ರೀತಿ ಕಂಡರೆ ಆಶ್ಚರ್ಯವಾಗದೇ ಇರದು. ಹಾಸ್ಟೆಲ್‌ನ ಬಹುತೇಕರು ಅವರನ್ನು ‘ಅಪ್ಪ’ ಎಂದೇ ಕರೆಯುತ್ತಾರೆ. 
 
ಜಿಲ್ಲೆಯ ಕೊನೆಯ ಗ್ರಾಮವಾದ ಕರೂರಿನಲ್ಲಿರುವ ಮೆಟ್ರಿಕ್‌ಪೂರ್ವ ಬಾಲಕರ ಹಾಸ್ಟೆಲ್‌ನ ಮೇಲ್ವಿಚಾರಕ ರಾಗಿರುವ ಮಲ್ಲಿಕಾರ್ಜುನ್‌ ಅವರಿಗೆ ಇಲಾಖೆಯ ಇನ್ನೂ ಮೂರು ಹಾಸ್ಟೆಲ್‌ಗಳ ಜವಾಬ್ದಾರಿ ವಹಿಸಲಾಗಿದೆ. ಒಂದೇ ಕಾಂಪೌಂಡಿನಲ್ಲಿರುವ ಎರಡು ಹಾಸ್ಟೆಲ್‌ ಮತ್ತು ಬೆಳಗಲ್‌ ಕ್ರಾಸ್‌ನಲ್ಲಿರುವ ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್‌ ಜವಾಬ್ದಾರಿಯನ್ನು ಅವರು ಹೊತ್ತಿದ್ದಾರೆ. 
 
ಅವರ ಬಗ್ಗೆ ಹಾಸ್ಟೆಲ್‌ ವಿದ್ಯಾರ್ಥಿನಿಯರ ಮೆಚ್ಚುಗೆ ಇರುವುದು ಎರಡು ಕಾರಣಕ್ಕೆ. ಒಂದು, ಊಟ–ತಿಂಡಿ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಮುತುವರ್ಜಿ. ಇನ್ನೊಂದು, ವೈಯಕ್ತಿಕ ಮತ್ತು ಶೈಕ್ಷಣಿಕ ಸಮಸ್ಯೆಗಳ ನಿವಾರಣೆಗೆ ಅವರು ನೀಡುವ ನೆರವು ಮತ್ತು ಮಾರ್ಗದರ್ಶನ.
 
‘9ನೇ ತರಗತಿಯ ಭಾಗ್ಯ ಎಂಬ ವಿದ್ಯಾರ್ಥಿನಿಗೆ ತೀವ್ರ ಜ್ವರ ಬಂದಾಗ, ಆಕೆಯ ತಂದೆ ದೂರವಾಣಿ ಸಂಪರ್ಕಕ್ಕೆ ದೊರಕದೇ ಹೋದಾಗ, ವಾರ್ಡನ್‌ ತಂದೆಯಂತೆ ನಿಂತು ಚಿಕಿತ್ಸೆ ಕೊಡಿಸಿದ್ದನ್ನು ನಾವು ಮರೆಯುವಂತಿಲ್ಲ’ ಎನ್ನುತ್ತಾರೆ ಕೊಟ್ಟೂರು ಸ್ವಾಮಿ ಕಾಲೇಜಿನ ಬಿ.ಇಡಿ ವಿದ್ಯಾರ್ಥಿನಿ, ಸಿಂಧನೂರಿನ ಎಚ್‌.ಶೋಭಾ. 
 
‘ಹಾಸ್ಟೆಲ್‌ ಆವರಣ ಈಗ ಸ್ವಚ್ಛವಾಗಿದೆ. 10ನೇ ತರಗತಿಯವರಿಗೆ ಸ್ಟಡಿ ಟೈಂ ಟೇಬಲ್‌ ಹಾಕಿಕೊಟ್ಟಿದ್ದಾರೆ. ಅಡುಗೆ ಚೆನ್ನಾಗಿರಬೇಕು ಎಂದು ಸಿಬ್ಬಂದಿಗೆ ಪದೇಪದೇ ತಾಕೀತು ಮಾಡುತ್ತಾರೆ. ಚಳಿ ಇರುವ ಕಾರಣಕ್ಕೆ ನಮಗೂ ಬೆಳಿಗ್ಗೆ ಟೀ, ಬಿಸ್ಕೇಟ್‌ ಕೊಡ್ತಿದಾರೆ. ಜನವರಿ ಒಂದರಂದು ಮನೆಯಿಂದ ಎಲ್ಲರಿಗೂ ಹೋಳಿಗೆ ತಂದುಕೊಟ್ಟರು. ಅದಕ್ಕಿಂತ ಖುಷಿ ಬೇರೇನಿದೆ? ಎಂಬುದು ಎ.ಎಸ್‌.ಎಂ ಕಾಲೇಜಿನ ಬಿ.ಎಸ್‌ಸಿ ವಿದ್ಯಾರ್ಥಿನಿ ಕಾವ್ಯಾ ಸಂತಸದ ನುಡಿ. 7ನೇ ತರಗತಿಯ ವಿದ್ಯಾರ್ಥಿನಿ ಕವಿತಾ ಒಂದೇ ಮಾತಿನಲ್ಲಿ ‘ನಮ್‌ ಸಾರ್‌ ಸೂಪರ್ರ್’ ಎನ್ನುತ್ತಾಳೆ!
 
 
**
ಈ ಸಾರ್‌ ನಮ್ಮನ್ನ ಚೆನ್ನಾಗಿ ನೋಡ್ಕೊಳ್ತಿದ್ದಾರೆ. ಅವರು ಬೇರೆಲ್ಲೂ ಹೋಗೋದು ಬೇಡಾ. ಇದೇ ಹಾಸ್ಟೆಲ್‌ನಲ್ಲಿ ಇರಲಿ
-ಮಮತಾ
6ನೇ ತರಗತಿ ವಿದ್ಯಾರ್ಥಿನಿ
 
**
ವಾರ್ಡನ್‌ ಆಗಿ ಮಲ್ಲಿಕಾರ್ಜುನ ಅವರು ಪರಿಶ್ರಮಪಟ್ಟು ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿ ವಿದ್ಯಾರ್ಥಿಸ್ನೇಹಿಯಾಗಿದೆ
-ಕೆ. ನಾಗರಾಜ, ಜಿಲ್ಲಾ ಅಧಿಕಾರಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT