ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌1ಎನ್‌1: ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ

Last Updated 12 ಜನವರಿ 2017, 5:53 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಎಚ್‌1ಎನ್‌1 ಸೋಂಕು ಪೀಡಿತರಾಗಿದ್ದ ತಾಲ್ಲೂಕಿನ ಕಮ್ಮಗಾನಹಳ್ಳಿ ನಿವಾಸಿ ಮಮತಾ ಲಕ್ಷ್ಮಿಪತಿ (35) ಎಂಬುವವರು ಜ. 9ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅಲ್ಲದೆ ಗೌರಿಬಿದನೂರು ತಾಲ್ಲೂಕಿನ ನಾಮಗೊಂಡ್ಲು ಗ್ರಾಮದ ಹನುಮೇಗೌಡ ಎಂಬುವವರಿಗೂ ಎಚ್‌1ಎನ್‌1 ಸೋಂಕು ತಗುಲಿದ್ದು ಅವರು ಸಹ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2015ರಲ್ಲಿ ಜಿಲ್ಲೆಯ 17 ಜನರಲ್ಲಿ ಎಚ್‌1ಎನ್‌1 ಸೋಂಕು ಕಂಡುಬಂದಿತ್ತು. ಇವರಲ್ಲಿ 5 ಜನರು ಮೃತಪಟ್ಟಿದ್ದರು.

ಎಚ್‌1ಎನ್‌1 ಪ್ರಕರಣಗಳು ವರದಿಯಾದ ಕಾರಣ ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯಾಧಿಕಾರಿ ಡಾ.ರವಿಶಂಕರ್‌, ‘ಈ ಬಾರಿಯ ಡಿಸೆಂಬರ್‌ನಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೆಚ್ಚು ಚಳಿ ಕಂಡುಬಂದಿತ್ತು. ಉಷ್ಣಾಂಶ ಶೇ 12 ರಷ್ಟು ಕುಸಿತವಾಗಿತ್ತು. ಇಂತಹ ವಾತಾವರಣದಲ್ಲಿ ಉಸಿರಾಟದ ತೊಂದರೆ ಮತ್ತು ಶ್ವಾಸಕೋಶಕ್ಕೆ ನಂಜಾಗುವ ಪ್ರಕರಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ತಿಳಿಸಿದರು.

‘ಈ ವರ್ಷದಲ್ಲಿ ಈವರೆಗೆ 2 ಪ್ರಕರಣಗಳು ಪತ್ತೆಯಾಗಿವೆ. ಈಗಾಗಲೇ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಮುಂಜಾಗ್ರತೆ ಕ್ರಮಕೈಗೊಳ್ಳಲಾಗಿದೆ’ ಎಂದು ಹೇಳಿದರು.
‘20 ದಿನಗಳ ಹಿಂದೆ ಮಮತಾ ಅವರು ಉಸಿರಾಟದ ತೊಂದರೆ ಇದೆ ಎಂದು ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದರು. ಬಳಿಕ ಚಿಕ್ಕಬಳ್ಳಾಪುರದ ಜಿಲ್ಲಾಸ್ಪತ್ರೆಯಲ್ಲಿ ಕೂಡ ಒಂದು ದಿನ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದರು. ಬಳಿಕ ನಾವು ಅವರನ್ನು ಡಿಸೆಂಬರ್ 27 ರಂದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡುವಾಗ ಅವರು ಸ್ವಇಚ್ಛೆಯಿಂದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದರು’ ಎಂದರು.

‘ಡಿ.30ರಂದು ಬೆಂಗಳೂರಿನ ಖಾಸಗಿ ಪ್ರಯೋಗಾಲಯವೊಂದು ಮಮತಾ ಅವರಲ್ಲಿ ಎಚ್‌1ಎನ್‌1 ಸೋಂಕು ಇದೆ ಎಂದು ವರದಿ ನೀಡಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಜನವರಿ 9 ರಂದು ಮೃತಪಟ್ಟಿದ್ದಾರೆ. ವರದಿ ನೀಡಿದ ಖಾಸಗಿ ಪ್ರಯೋಗಾಲಯ ರಾಷ್ಟ್ರೀಯ ಮಾನ್ಯತೆ ಪಡೆದಿಲ್ಲ. ಹೀಗಾಗಿ ನಾವು ಆ ವರದಿಯನ್ನು ಸಂಶಯಾಸ್ಪದವೆಂದು ಪರಿಗಣಿಸಿದ್ದೇವೆ’ ಎಂದು ಹೇಳಿದರು.

‘ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೌರಿಬಿದನೂರು ತಾಲ್ಲೂಕಿನ ನಾಮಗೊಂಡ್ಲು ನಿವಾಸಿ ಹನುಮೇಗೌಡ ಅವರಲ್ಲಿ ಕೂಡ ಎಚ್‌1ಎನ್‌1 ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಅವರು ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ತಿಳಿಸಿದರು.

ಮುನ್ನೆಚ್ಚರಿಕೆ ವಹಿಸಿ: ‘ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ಕೆಮ್ಮೆ, ಶೀತ, ಜ್ವರ ಪೀಡಿತರಿಗೆ ಎರಡು ದಿನಗಳಲ್ಲಿ ಗುಣಮುಖವಾಗದೆ, ಉಸಿರಾಟ ತೊಂದರೆ ಕಂಡುಬಂದರೆ ಅಂತಹ ರೋಗಿಗಳ ಗಂಟಲಿನ ದ್ರಾವಣದ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ವರದಿಯಲ್ಲಿ ಎಚ್‌1ಎನ್‌1 ವೈರಾಣು ಸೋಂಕು ಇರುವುದು ದೃಢಪಟ್ಟರೆ ಅಂತಹ ರೋಗಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಮಾತ್ರೆಗಳನ್ನು ಒದಗಿಸಲಾಗುತ್ತದೆ’ ಎಂದು ರವಿಶಂಕರ್ ಹೇಳಿದರು.

‘ಎಚ್‌1ಎನ್‌1 ಸೋಂಕು ಪ್ರಕರಣಗಳು ಕಂಡುಬಂದರೆ ಅದನ್ನು ತಕ್ಷಣ ಮೇಲಿನ ವೈಧ್ಯಾಧಿಕಾರಿಗಳ ಗಮನಕ್ಕೆ ತರುವಂತೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಈಗಾಗಲೇ ಸೂಚಿಸಲಾಗಿದೆ. ಈ ಸೋಂಕು ಇತರರಿಗೆ ಹರಡದಂತೆ ಮುಂಜಾಗ್ರತೆ ಕ್ರಮಕೈಗೊಳ್ಳುವುದು ತುಂಬಾ ಅವಶ್ಯ. ಸೋಂಕು ಪೀಡಿತರು ಗಾಳಿಯಲ್ಲಿ ವೈರಾಣುಗಳು ಹರಡದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

‘ನಾಲ್ಕು ದಿನ ಕಳೆದರೆ ಉತ್ತರಾಯಣ ಶುರುವಾಗಿ ದಿನೇ ದಿನೇ ಬಿಸಿಲು ಹೆಚ್ಚುತ್ತ ಹೋಗುತ್ತದೆ. ಆಗ ಈ ಕಾಯಿಲೆ ತಾನಾಗಿಯೇ ಕಡಿಮೆಯಾಗುತ್ತದೆ. ಈಗಾಗಲೇ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಎಲ್ಲಿಯೂ ಎಚ್‌1ಎನ್‌1ಪ್ರಕರಣ ಕಂಡುಬಂದಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕಪಡುವುದು ಬೇಡ. ಮುನ್ನೆಚ್ಚರಿಕೆ ವಹಿಸಿದರೆ ಸಾಕು’ ಎಂದು ಅವರು ಹೇಳಿದರು.

ಹೀಗೆ ಮಾಡಿ...
‘ಕೆಮ್ಮು, ಶೀತ ಪೀಡಿತರು ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರ ಬಳಸಬೇಕು ಇಲ್ಲವೇ ಮೊಳಕೈ ಮುಖಕ್ಕೆ ಅಡ್ಡ ಹಿಡಿಯಬೇಕು. ಸೋಪಿನಿಂದ ಸ್ವಚ್ಛವಾಗಿ ಕೈಗಳನ್ನು ತೊಳೆದುಕೊಳ್ಳಬೇಕು.

ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜನನಿಬಿಡ ಪ್ರದೇಶಗಳಿಂದ ದೂರ ಇರಬೇಕು. ಎಚ್‌1ಎನ್‌1 ಸೋಂಕಿತರನ್ನು ಕಾಯಿಲೆ ಗುಣಮುಖವಾಗುವವರೆಗೂ ಪ್ರತ್ಯೇಕವಾಗಿಟ್ಟು ಉಪಚರಿಸಬೇಕು. ಹೀಗೆ ಮಾಡುವುದರಿಂದ ಈ ರೋಗ ತಡೆಗಟ್ಟಬಹುದು’ ಎನ್ನುತ್ತಾರೆ ರವಿಶಂಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT