ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೂಡ್ರಲಕ್ಕೂ ಆಗವಲ್ದು, ಮಲಗಲಕ್ಕೂ ಆಗವಲ್ದು’

ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ದಾಖಲು: ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿ: ಆರೋಪ, ಆಕ್ರೋಶ
Last Updated 12 ಜನವರಿ 2017, 5:57 IST
ಅಕ್ಷರ ಗಾತ್ರ
ಹೊಸಪೇಟೆ: ‘ಮೈಯೆಲ್ಲ ಬೆಂಕಿಯಂತಹ ಉರಿ. ದೇಹದಲ್ಲಿ ಉಸಿರೇ ಇಲ್ಲದಂತಾಗಿದೆ. ಹೊಟ್ಟೆಯಲ್ಲಿ ಭಾರಿ ಸಂಕಟ. ಕೂಡ್ರಲಕ್ಕೂ ಆಗವಲ್ದು, ಮಲಗಲಕ್ಕೂ ಆಗವಲ್ದು’
 
ಹೀಗೆ ಹೇಳಿದವರು ತಾಲ್ಲೂಕಿನ ಕಮಲಾಪುರದ ಮಲ್ಲಮ್ಮ. ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆಂದು ಬುಧವಾರ ಕಮಲಾಪುರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದರು. ಆದರೆ, ಆಸ್ಪತ್ರೆಯ ಸಿಬ್ಬಂದಿ ‘ಆ್ಯಟೊಪಿನ್’ ಹೆಸರಿನ ಚುಚ್ಚುಮದ್ದಿನ ಬದಲಾಗಿ ‘ಆ್ಯಡ್ರೊಮಿಲಿನ್‌’ ಚುಚ್ಚುಮದ್ದು ನೀಡಿದ ಕಾರಣ ಮಲ್ಲಮ್ಮ ತೀವ್ರ ಅಸ್ವಸ್ಥರಾಗಿ ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಚುಚ್ಚುಮದ್ದು ನೀಡಿದ ಬಳಿಕ ಅವರು ಎದುರಿಸುತ್ತಿರುವ ಸಮಸ್ಯೆಯನ್ನು ಮೇಲಿನಂತೆ ‘ಪ್ರಜಾವಾಣಿ’ಗೆ ಹೇಳಿಕೊಂಡರು.
 
ಮಲ್ಲಮ್ಮ ಅವರಿಗೆ ಒಂದು ಗಂಡು ಹಾಗೂ ಹೆಣ್ಣು ಮಗು ಇದೆ. ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಕುರಿತು ಕಮಲಾಪುರ ಪಟ್ಟಣದ ಆಶಾ ಕಾರ್ಯಕರ್ತೆಯರು ಅವರಿಗೆ ಮಾಹಿತಿ ನೀಡಿದ್ದರು. ಇದರಿಂದ ಅವರು ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿ ಯಿಂದ ಮಲ್ಲಮ್ಮ ಸೇರಿದಂತೆ 15 ಮಹಿಳೆಯರು ತೀವ್ರ ಅಸ್ವಸ್ಥಗೊಂಡಿ ದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಅವರು ಪಡಬಾರದ ನೋವು ಪಡುತ್ತಿದ್ದಾರೆ.
 
ನಗರದ ಸರ್ಕಾರಿ ಆಸ್ಪತ್ರೆಯ ಮೂಲೆಯ ಹಾಸಿಗೆ ಮೇಲೆ ಬುಧವಾರ ಸಂಜೆ ನೋವಿನಿಂದ ಮಲ್ಲಮ್ಮ ನರಳಾಡುತ್ತಿದ್ದರು. ಇನ್ನೊಂದೆಡೆ ಅವರ ಆರು ತಿಂಗಳ ಹೆಣ್ಣು ಮಗು ಅಳುತ್ತಿತ್ತು. ಮಗುವಿಗೆ ಹಾಲು ಕುಡಿಸುವುದರ ಬಗ್ಗೆ ವೈದ್ಯರು ಏನನ್ನೂ ಸ್ಪಷ್ಟವಾಗಿ ಹೇಳದ ಕಾರಣ ಅವರು ತನ್ನ ಮಗುವಿಗೆ ಹಾಲು ಕುಡಿಸದೇ ಅಸಹಾಯಕರಾಗಿದ್ದರು. ತಾನು ನೋವಿನಲ್ಲಿದ್ದರೂ ಅದನ್ನು ಮರೆತು ತನ್ನ ಕಂದಮ್ಮನನ್ನು ಸಮಾಧಾನ ಪಡಿಸಲು ಯತ್ನಿಸುತ್ತಿರುವ ದೃಶ್ಯ ಮನ ಕಲಕುತ್ತಿತ್ತು.
 
ಇದು ಮಲ್ಲಮ್ಮ ಒಬ್ಬರ ನೋವಲ್ಲ. ಆಸ್ಪತ್ರೆಯಲ್ಲಿ ದಾಖಲಾಗಿರುವ ಬಹುತೇಕ ಮಹಿಳೆಯರ ಗೋಳು ಇದೇ ಆಗಿದೆ. ಬಹುತೇಕ ಮಹಿಳೆಯರಿಗೆ ಒಂದು ವರ್ಷದೊಳಗಿನ ಮಕ್ಕಳಿದ್ದಾರೆ. ತಾಯಂದಿರು ಹಾಸಿಗೆ ಮೇಲೆ ನರಳಾಡುತ್ತಿದ್ದರೆ, ಅವರ ಮಕ್ಕಳು, ತಂದೆ ಹಾಗೂ ಸಂಬಂಧಿಕರ ಕಂಕುಳಲ್ಲಿ ಅಳುತ್ತಿದ್ದರು.
 
ಮಲ್ಲಮ್ಮ ಅವರ ಹಾಸಿಗೆಗೆ ಹೊಂದಿಕೊಂಡಂತೆ ಕಮಲಾಪುರದ ಪುಷ್ಪಲತಾ ಎಂಬುವರು ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಇಂಜೆಕ್ಷನ್‌ ಕೊಟ್ಟ ನಂತರ ವಾಂತಿ ಆಗಿದೆ. ರಕ್ತದೊತ್ತಡ ಹೆಚ್ಚಾಗಿ ಪ್ರಜ್ಞೆ ತಪ್ಪಿ ಬಿದ್ದೆ. ಕಣ್ಣು ತೆರೆದು ನೋಡಿದರೆ ಹೊಸಪೇಟೆ ಆಸ್ಪತ್ರೆಯಲ್ಲಿದ್ದೆ’ ಎಂದು ತಮಗಾದ ತೊಂದರೆ ಬಿಚ್ಚಿಟ್ಟರು.
 
ಪುಷ್ಪಲತಾ ಅವರಿಗೆ ಇಬ್ಬರು ಹೆಣ್ಣು ಹಾಗೂ ಒಂದು ಗಂಡು ಮಗು ಇದೆ. ಇನ್ನು ಮಕ್ಕಳು ಬೇಡ ಎಂದು ಅವರು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹೋಗಿದ್ದರು. ಆದರೆ, ಅಲ್ಲಿ ಬೇರೆಯದೇ ಘಟಿಸಿ ನೋವು ಅನುಭವಿಸುತ್ತಿದ್ದಾರೆ. ಹೀಗೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಒಬ್ಬೊಬ್ಬ ಮಹಿಳೆಯೂ ಒಂದೊಂದು ರೀತಿಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಇವರ ನೋವು, ಸಂಕಟ ನೋಡಿ ಸಂಬಂಧಿಕರು ವಿಚಲಿತರಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT