ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವರ್ಗ 2ಎಯಿಂದ ಪ್ರತ್ಯೇಕಿಸಿ; 1ಎ ಸೃಷ್ಟಿಸಿ

Last Updated 12 ಜನವರಿ 2017, 5:57 IST
ಅಕ್ಷರ ಗಾತ್ರ

ಬೆಂಗಳೂರು: ‘ಸವಿತಾ ಸಮಾಜವನ್ನು ಪ್ರವರ್ಗ 2ಎಯಿಂದ ಪ್ರತ್ಯೇಕಿಸಿ ತಿಗಳರು, ಕುಂಬಾರರು, ದೇವಾಡಿಗರು ಹೀಗೆ ಸಮ ಜನಸಂಖ್ಯೆ ಹೊಂದಿರುವ ಜಾತಿಗಳನ್ನು ಒಗ್ಗೂಡಿಸಿ ಪ್ರವರ್ಗ 1ಎ ಸೃಷ್ಟಿಸಬೇಕು’ ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜ ಒತ್ತಾಯಿಸಿದೆ.

ಕರ್ನಾಟಕ ರಾಜ್ಯ ಸವಿತಾ ಸಮಾಜ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸವಿತಾ ಸಮಾವೇಶದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಯು. ಕೃಷ್ಣಮೂರ್ತಿ  ಅವರು 19 ಬೇಡಿಕೆಗಳನ್ನು ಗೃಹಸಚಿವ ಜಿ. ಪರಮೇಶ್ವರ್‌ ಅವರಿಗೆ ನೀಡಿದರು.

‘15/4 ಮತ್ತು 16/4ರಲ್ಲಿ ಸೂಚಿಸಿರುವಂತೆ ನ್ಯಾಯಬದ್ಧ ಮೀಸಲಾತಿಯನ್ನು ನೀಡಬೇಕು. ಅಲ್ಲದೆ, ರಾಜ್ಯದಲ್ಲಿ ಪ್ರತಿನಿತ್ಯ ನಮ್ಮ ಸಮುದಾಯದಿಂದ ಸುಮಾರು ₹2 ಕೋಟಿ  ಹಣಕಾಸಿನ ವ್ಯವಹಾರ ನಡೆಯುತ್ತದೆ. ನಮ್ಮ ಆರ್ಥಿಕ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು’ ಎಂದು ಕೋರಿದರು.

ಗೃಹಸಚಿವ ಜಿ. ಪರಮೇಶ್ವರ್ ಮಾತನಾಡಿ, ‘ಯಾವುದೇ ಸಮುದಾಯ ಅಭಿವೃದ್ಧಿ ಆಗಬೇಕೆಂದರೆ ಅವರ ಜನಸಂಖ್ಯೆ ಮುಖ್ಯವಲ್ಲ. ಒಗ್ಗಟ್ಟಾಗಿರುವುದು ಮುಖ್ಯ ಎಂಬ ಅರಿವು ನಿಮಗೆ ಈಗ ಆಗಿದೆ’ ಎಂದರು.

‘ಎಲ್ಲರನ್ನೂ ಲಕ್ಷಣವಾಗಿ ಕಾಣುವಂತೆ ಮಾಡುವರನ್ನು ನಮ್ಮ ಸಮಾಜ ಬಹಳ ಕೆಳಸ್ತರದಲ್ಲಿ ನೋಡುತ್ತಿದೆ. ಇದನ್ನು ಬದಲಾಯಿಸಲು ನಿಮ್ಮ ಒಗ್ಗಟ್ಟು ಸಹಕಾರಿಯಾಗಲಿ. ಇಂದು ನಿಮ್ಮ ಸಂಘಟನೆಯನ್ನು ಪ್ರಾರಂಭಿಸಿದ್ದೀರಿ. ಇದನ್ನು ಹೀಗೆ ಮುಂದುವರಿಸಿಕೊಂಡು ಹೋಗಿ’ ಎಂದು ಆಶಿಸಿದರು.

‘ಸಿಂಧ್ ಪ್ರಾಂತ್ಯದಿಂದ ಬಂದ ಇಸ್ಲಾಂ ಪ್ರವರ್ತಕರಿಗೆ ಕ್ಷೌರ ಮಾಡುತ್ತಿದ್ದವರನ್ನು ಹಜಾಮ ಎನ್ನಲಾಗುತ್ತಿತ್ತು. ಆದರೆ, ಆ ಶಬ್ದವನ್ನು ಉಪಯೋಗಿಸಿ ನಿಮ್ಮನ್ನು ಕೀಳಾಗಿ ನೋಡುತ್ತಿದ್ದರು. ಆದ್ದರಿಂದ ಆ ಪದವನ್ನು ಕಾನೂನಾತ್ಮಕವಾಗಿ ತೆಗೆದು ಹಾಕಲಾಗಿದೆ’ ಎಂದರು.

‘ಶಿಕ್ಷಣದಲ್ಲಿ ನಿಮ್ಮ ಸಮುದಾಯ ಬಹಳ ಹಿಂದೆ ಇದೆ. ನಿಮ್ಮ ಮಕ್ಕಳಿಗೂ ಉನ್ನತ ಶಿಕ್ಷಣ ಕೊಡಿಸಿ. ಶಿಕ್ಷಣದಿಂದ ಮಾತ್ರ ನಿಮ್ಮ ಸಮುದಾಯ ಅಭಿವೃದ್ಧಿ ಕಾಣಲು ಸಾಧ್ಯ’ ಎಂದು  ಸಲಹೆ ನೀಡಿದರು.

ಸಂಸದ ಬಿ.ಎಸ್‌. ಯಡಿಯೂರಪ್ಪ  ಮಾತನಾಡಿ, ‘ಮುಖ್ಯನೆಲೆಗೆ ಬರಲು ಸಂಘಟಿತರಾಗಿ ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹ ಸಂಗತಿ. ರಾಜಕೀಯವಾಗಿಯೂ ನಿಮ್ಮ ಸಮಾಜ ಮುಂದೆ ಬರಬೇಕು. ಇತರೆ ವರ್ಗದವರೊಂದಿಗೆ ಪೈಪೋಟಿ ಮಾಡುವ ಶಕ್ತಿ ನಿಮಗಿದೆ’ ಎಂದು ಭರವಸೆ ನೀಡಿದರು.

ಇತರೆ ಪ್ರಮುಖ ಬೇಡಿಕೆಗಳು
* ವಿಧಾನಪರಿಷತ್ತಿನಲ್ಲಿ ಖಾಲಿ ಇರುವ 3 ಸ್ಥಾನಗಳಲ್ಲಿ ನಮ್ಮ ಸಮಾಜದ ಮುಖಂಡರಿಗೆ ಅವಕಾಶ ನೀಡಬೇಕು.

* ಚೈತನ್ಯ ಸ್ವಯಂ ಉದ್ಯೋಗ, ನೇರ ಸಾಲ ಯೋಜನೆಯ ಸಾಲದ ಮೊತ್ತವನ್ನು ₹1 ಲಕ್ಷಕ್ಕೆ ನಿಗದಿ ಪಡಿಸಬೇಕು.

* ಮೆಟ್ರೋಪಾಲಿಟನ್ ಸಿಟಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿರುವ ದೊಡ್ಡ ಆಸ್ಪತ್ರೆಗಳಲ್ಲಿ ಕ್ಷೌರಿಕರನ್ನು ವೇತನದೊಂದಿಗೆ ನೇಮಿಸಿಕೊಳ್ಳಬೇಕು.

* ದೇವಾಲಯಗಳಲ್ಲಿ ಮಂಗಳವಾದ್ಯ ನುಡಿಸುವ ಕಲಾವಿದರಿಗೆ ವಾದ್ಯ ಪರಿಕರಗಳನ್ನು ಮುಜರಾಯಿ ಇಲಾಖೆಯಿಂದ ಉಚಿತವಾಗಿ ನೀಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT