ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ, ಬ್ಯಾಂಕ್‌ ಎಟಿಎಂನಲ್ಲೂ ನಗದು ವಹಿವಾಟು

Last Updated 12 ಜನವರಿ 2017, 6:35 IST
ಅಕ್ಷರ ಗಾತ್ರ

ಮೈಸೂರು: ಅಂಚೆ ಹಾಗೂ ಬ್ಯಾಂಕ್‌ ಎಟಿಎಂ (ಸ್ವಯಂಚಾಲಿತ ನಗದು ಪಾವತಿ ಯಂತ್ರ) ಕೇಂದ್ರಗಳಲ್ಲಿ ಉಭಯ ಕಾರ್ಡ್‌ ಬಳಕೆಗೆ ಈಗ ಅವಕಾಶ ಕಲ್ಪಿಸಿದ್ದು, ಗ್ರಾಹಕರು ಎರಡೂ ಕಡೆಗಳಲ್ಲಿ ವ್ಯವಹರಿಸಬಹುದಾಗಿದೆ.

ಅಂಚೆ ಕಚೇರಿಯನ್ನು ಗ್ರಾಹಕಸ್ನೇಹಿಯಾಗಿಸುವತ್ತ ಚಿತ್ತ ಹರಿಸಿರುವ ಇಲಾಖೆಯು ಫಿನಕಲ್‌ ಸಾಫ್ಟ್‌ವೇರ್‌ ಲಿಂಕ್‌ ಪ್ರಕ್ರಿಯೆ ಪೂರ್ಣಗೊಳಿಸಿ, ಕಳೆದ ವಾರದಿಂದ ಉಭಯ ಕಾರ್ಡ್‌ ಬಳಕೆಗೆ ಅವಕಾಶ ಕಲ್ಪಿಸಿದೆ. ಜಿಲ್ಲೆಯಲ್ಲಿ ವಿವಿಧ ಬ್ಯಾಂಕ್‌ಗಳ 733 ಎಟಿಎಂಗಳಿದ್ದು, ಅವುಗಳಲ್ಲಿಯೂ ಸೇವೆ ಪಡೆದುಕೊಳ್ಳಬಹುದಾಗಿದೆ.

ಅಂಚೆ ಮತ್ತು ಬ್ಯಾಂಕ್‌ ಎಟಿಎಂಗಳಲ್ಲಿ ಉಭಯ ಕಾರ್ಡ್‌ ಬಳಸಿ ಹಣ ಪಡೆಯಲು ಅವಕಾಶ ಇಲ್ಲದಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಜ. 1ರಂದು ವರದಿ ಪ್ರಕಟವಾಗಿತ್ತು.

ನಗರದ ನೆಹರು ವೃತ್ತದ ಮುಖ್ಯ ಅಂಚೆ ಕಚೇರಿ, ವಿ.ವಿ ಮೊಹಲ್ಲಾ, ಸರಸ್ವತಿಪುರಂ ಅಂಚೆ ಕಚೇರಿಗಳಲ್ಲಿ ಎಟಿಎಂ ಸೌಲಭ್ಯ ಇದೆ. ಅವು ಬೆಳಿಗ್ಗೆ 9ರಿಂದ ಸಂಜೆ 5.30ರ ವರೆಗೆ ತೆರೆದಿರುತ್ತವೆ. ಒಟ್ಟಾರೆ 1,968 ಅಂಚೆ ಎಟಿಎಂ ಕಾರ್ಡ್‌ ಬಳಕೆದಾರರು ಇದ್ದಾರೆ.

ಅಂಚೆ ಇಲಾಖೆಯು ಆನ್‌ಲೈನ್‌ ಸೇವೆಗೆ ಒತ್ತು ನೀಡಿದೆ. ಈಗಿರುವ ಉಳಿತಾಯ, ಸಂಚಿತ ಮೊದಲಾದ ಖಾತೆ, ಠೇವಣಿ ಸೌಲಭ್ಯಗಳ ಜೊತೆಗೆ ಚಾಲ್ತಿ ಖಾತೆ (ಕರೆಂಟ್‌ ಅಕೌಂಟ್‌), ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಕಂತು ಪಾವತಿ, ನೇರ ನಗದು ವರ್ಗಾವಣೆ (ಡಿಬಿಟಿ) ಕಲ್ಪಿಸಲು ಸಿದ್ಧತೆ ನಡೆಸಿದೆ.

‘ಅಂಚೆ ಗ್ರಾಹಕರು ಈವರೆಗೆ ಅದೇ ಎಂಟಿಎಂ ಕೇಂದ್ರವನ್ನೇ ಹುಡುಕಿ­ಕೊಂಡು ಅಲೆಯಬೇಕಿತ್ತು. ಪರಸ್ಥಳಗಳಿಗೆ ಹೋದಾಗ ಬಹಳ ತೊಂದರೆ­ಯಾಗುತ್ತಿತ್ತು. ಹೊಸ ವ್ಯವಸ್ಥೆಯಿಂದಾಗಿ ಅಲೆದಾಟ, ಹುಡುಕಾಟ ತಪ್ಪಿದೆ. ಆರ್‌ಟಿಜಿಎಸ್‌ (ರಿಯಲ್‌ ಟೈಂ ಗ್ರಾಸ್‌ ಸೆಟ್ಲಮೆಂಟ್‌), ಎನ್‌ಇಎಫ್‌ಟಿ (ನ್ಯಾಷನಲ್‌ ಎಲೆಕ್ಟ್ರಾನಿಕ್‌ ಫಂಡ್‌ ಟ್ರಾನ್ಸಫರ್‌) ಮೊದಲಾದವನ್ನು ಕಲ್ಪಿಸಿ ಹಣ ವರ್ಗಾವಣೆಗೂ ಅನುಕೂಲ ಮಾಡಿಕೊಡಬೇಕು’ ಎಂಬುದು ಜಯಲಕ್ಷ್ಮಿಪುರಂನ ಶ್ಯಾಮಲಾ ಮನವಿ.

‘ಪೋಸ್ಟಲ್‌ ಎಟಿಎಂಗಳು ನಿಗದಿತ ಅವಧಿಯಲ್ಲಿ ಮಾತ್ರ ತೆಗೆದಿರುವು­ದರಿಂದ, ಅಂಚೆ ಎಟಿಎಂ ಕಾರ್ಡ್‌ ಇದ್ದರೂ, ಉಪಯೋಗ ಬಹಳ ಕಡಿಮೆ ಇತ್ತು. ಹೊಸ ವ್ಯವಸ್ಥೆಯಿಂದ ಅನುಕೂಲವಾಗಿದೆ. ನಗರದಲ್ಲಿ ಬ್ಯಾಂಕ್‌ ಎಟಿಎಂಗಳು ಎಲ್ಲ ಕಡೆಗಳಲ್ಲೂ ಇವೆ’ ಎಂದು ಸರಸ್ವತಿಪುರಂ ನಿವಾಸಿ ಶ್ರೀನಿವಾಸ್‌ ಹೇಳುತ್ತಾರೆ.

ಉಭಯ ಕಾರ್ಡ್‌ ಬಳಕೆ ಅವಕಾಶ ಕಲ್ಪಿಸಿದ ನಂತರ ಅಂಚೆ ಎಟಿಎಂ ಬಳಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ವಿ.ವಿ ಮೊಹಲ್ಲ ಅಂಚೆ ಕಚೇರಿಯ ‘ಡಿ’ ಗ್ರೂಪ್‌ ನೌಕರ ವಿ.ಮಂಜುನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT