ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನುರ್ಮಾಸ ಪೂಜೆ ಮುಕ್ತಾಯ ನಾಳೆ

25 ಸಾವಿರ ಭಕ್ತರಿಂದ ಮಾಲೆ ವಿಸರ್ಜನೆ
Last Updated 12 ಜನವರಿ 2017, 6:48 IST
ಅಕ್ಷರ ಗಾತ್ರ

ಹಿರೀಸಾವೆ: ಹೋಬಳಿಯ ಕಬ್ಬಳಿ ಬಸವೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿರುವ 30ನೇ ವರ್ಷದ ಧನುರ್ಮಾಸ ಪೂಜೆಯ ಮುಕ್ತಾಯ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜ.13ರಂದು ರಾತ್ರಿ ನಡೆಯಲಿದೆ.

ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಮತ್ತು ಕಬ್ಬಳಿಯ ಶಿವಪುತ್ರನಾಥ ಸ್ವಾಮೀಜಿ ನೇತೃತ್ವದಲ್ಲಿ ಡಿ.15ರಂದು ಧನುರ್ಮಾಸ ಪೂಜೆ ಪ್ರಾರಂಭವಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಪ್ರತಿ ನಿತ್ಯ ಬೆಳಿಗ್ಗೆ ಮತ್ತು ರಾತ್ರಿ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ಮತ್ತು ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆ ದವು. ಪೂಜೆ ಅಂಗವಾಗಿ ಬಸವೇಶ್ವರ ಸ್ವಾಮಿಯ ಸಾವಿರಾರು ಭಕ್ತರು ಹರಕೆ ಹೊತ್ತು ಬಸವ ಮಾಲೆ ಧರಿಸುತ್ತಾರೆ.

ದೂರದ ಹಳ್ಳಿಯವರು ದೇವಾಲ ಯದ ಬಳಿಯ ಕಲ್ಯಾಣಿಯಿಂದ ತಮ್ಮ ಹಳ್ಳಿಗೆ ಕಳಸ ತೆಗೆದುಕೊಂಡು ಹೋಗಿ, ಗ್ರಾಮ ದೇವತೆಯ ಗುಡಿಯಲ್ಲಿ  ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸುತ್ತಾರೆ. ಸಂಕ್ರಾಂತಿ ಹಿಂದಿನ ರಾತ್ರಿ (ಶುಕ್ರವಾರ) ಬಸವ ಮಾಲಾಧಾರಿಗಳು ತಮ್ಮ ಗ್ರಾಮ ದೇವತೆಗಳಿಗೆ ಅಲಂಕಾರ ಮಾಡಿ ಮೆರವಣಿಗೆಯಲ್ಲಿ ಇಲ್ಲಿಗೆ ಕರೆತರುವುದು ವಿಶೇಷ. ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳ ದೇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.

ಶುಕ್ರವಾರ ರಾತ್ರಿ ಆದಿಚುಂಚನ ಗಿರಿಯ ನಿರ್ಮಲಾನಂದ ನಾಥ ಸ್ವಾಮೀಜಿ ಬಂದು ಬಸವಣ್ಣನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಕಲ್ಯಾಣಿಯಲ್ಲಿ ದೇವರು ಹಾಗೂ ಬಾಲಗಂಗಾಧರನಾಥ ಸ್ವಾಮೀಜಿಯವರ ಪ್ರತಿಮೆಯ ತೆಪ್ಪೋತ್ಸವ ನಡೆಯುತ್ತದೆ. ನಂತರ ಬಸವ ಮಾಲಾ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.

ತುಮಕೂರು ಜಿಲ್ಲೆಯ ತುರುವೇಕೆರೆ, ತಿಪಟೂರು, ಮಂಡ್ಯ ಜಿಲ್ಲೆಯ ನಾಗಮಂಗಲ ಹಾಗೂ ಹಾಸನ ಜಿಲ್ಲೆಯ ವಿವಿಧ ತಾಲ್ಲೂಕಿನ ಹಲವು ಗ್ರಾಮ ದೇವತೆಗಳು ಇಲ್ಲಿಗೆ ಮೆರವಣಿಗೆಯಲ್ಲಿ ಆಗಮಿಸಲಿವೆ.

ಸಂಕ್ರಾಂತಿ ದಿನದಂದು ಆಗಮಿಸಿದ ಎಲ್ಲ ದೇವರಿಗೂ ಮಡ್ಲಕ್ಕಿ ನೀಡಿ ಗೌರವಿಸಲಾಗುತ್ತದೆ ಎಂದು ಆದಿಚುಂಚನಗಿರಿ ಹಾಸನ ಮಠದ ಶಂಭುನಾಥಸ್ವಾಮೀಜಿ ತಿಳಿಸಿದ್ದಾರೆ.
ಬಹುತೇಕ ದೇವರು ದಿಡಗ ಗ್ರಾಮದ ಮೂಲಕ ಕಬ್ಬಳಿಗೆ ಬರುತ್ತವೆ. ಇಲ್ಲಿನ ಡಾ.ರಾಜ್‌ ವೃತ್ತದಲ್ಲಿ ಬಸವ ಮಾಲಾಧಾರಿಗಳಿಗೆ ಮತ್ತು ಭಕ್ತರಿಗೆ ಫಲಾಹಾರ ವಿತರಿಸಲು ದಿಡಗ ಗ್ರಾಮಸ್ಥರು ಸಿದ್ಧತೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT