ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಘಟ್ಟದಲ್ಲಿ ಕಲ್ಲು ಗಣಿಗಾರಿಕೆ ತಡೆಗೆ ಆಗ್ರಹ

Last Updated 12 ಜನವರಿ 2017, 6:51 IST
ಅಕ್ಷರ ಗಾತ್ರ

ಹಾಸನ: ಸಕಲೇಶಪುರ ತಾಲ್ಲೂಕು ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ್ಕೋಟೆ ಎಸ್ಟೇಟ್, ಆರಾಧನಾ ಎಸ್ಟೇಟ್ ಜಮೀನಿನಲ್ಲಿರುವ ಪ್ರದೇಶದಲ್ಲಿ ಗ್ರಾನೈಟ್ ಕಲ್ಲುಗಳ ನಿಕ್ಷೇಪವಿದೆ. ಪಶ್ಚಿಮಘಟಕ್ಕೆ ಹೊಂದಿಕೊಂಡಿರುವ ಈ ಪ್ರದೇಶ ಈಗ ಗಣಿಧಣಿಗಳ ಕಣ್ಣಿಗೆ ಬಿದ್ದಿದೆ.

ಅರಣ್ಯ ಇಲಾಖೆ, ಕಂದಾಯ ನಿರೀಕ್ಷಕ, ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಇತರ ಇಲಾಖೆ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಬಲಿಯಾಗಿ ನೈಸರ್ಗಿಕ ಸಂಪನ್ಮೂಲ ನಾಶಕ್ಕೆ ಮುಂದಾಗಿದ್ದಾರೆ. ಗಣಿಗಾರಿಕೆ ನಡೆಸುವುದರಿಂದ ಸುತ್ತಲಿನ ಪ್ರದೇಶದ ಮೇಲೆ ದುಷ್ಪರಿಣಾಮ ಬೀರಲಿದ್ದು, ಜಿಲ್ಲಾಡಳಿತ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ ನಾಗರಿಕರು ಒತ್ತಾಯಿಸಿದ್ದಾರೆ.

ಪಶ್ಚಿಮಘಟ್ಟದಲ್ಲಿ ನೂರಾರು ಪ್ರಾಣಿ ಪಕ್ಷಿ, ಅಮೂಲ್ಯ ಗಿಡಮೂಲಿಕೆ, ಆಮೆ, ಆನೆ, ಕಾಡುಬೆಕ್ಕು, ಮೊಲ ಹಾಗೂ ಅಳಿವಿನಂಚಿನಲ್ಲಿರುವ ಹತ್ತಾರು ಬಗೆಯ ಪಕ್ಷಿಗಳು  ವಾಸಿಸುತ್ತಿವೆ. ಮಳೆಗಾಲದಲ್ಲಿ ಮೋಡಗಳನ್ನು ತಡೆದು ಮಳೆ ತರಿಸುವ ಮರಗಿಡಗಳು ಹಾಗೂ ಬೆಟ್ಟಗುಡ್ಡ ಗಳಿಂದ ಕೂಡಿದ ಈ ಪ್ರದೇಶಕ್ಕೆ ಇಂದು ಗಂಡಾಂತರ ಎದುರಾಗಿದೆ. ಇಲ್ಲಿ ಹರಿಯುವ ನೀರನ್ನು ಸುತ್ತಲಿನ ರೈತರು ಕಾಫಿ, ಕಿತ್ತಳೆ, ನಿಂಬೆ, ಬಾಳೆ ಹಾಗೂ ಏಲಕ್ಕಿ ಬೆಳೆಗೆ ಬಳಸಿಕೊಳ್ಳುತ್ತಿದ್ದಾರೆ. ಸಾವಿರಾರು ಜನರ ಜೀವನಾಧಾರ ವಾಗಿರುವ ಭೂಮಿಯನ್ನು ಅಗೆಯುವ ಕೆಲಸ ನಡೆದರೆ ಘೋರ ನಷ್ಟವುಂಟಾ ಗಲಿದೆ ಎಂದು ವಿವರಿಸಿದರು.

ಖಾಲಿ ಪತ್ರಕ್ಕೆ ಸಹಿ: ಗಣಿಧಣಿಗಳಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದಿ ರುವ ಅಧಿಕಾರಿಗಳು ಈ ಪ್ರದೇಶದ ರೈತರಿಂದ ಖಾಲಿ ಪತ್ರದ ಮೇಲೆ ಸಹಿ ಹಾಕಿಸಿಕೊಂಡು ‘ಈ ಪ್ರದೇಶ ಪಾಳು ಭೂಮಿ’ ಎಂದು ಪ್ರತಿಪಾದಿಸಿದ್ದಾರೆ. ಅನಕ್ಷರಸ್ಥ ರೈತರು ಏನೂ ಅರಿಯದೆ ಸಹಿ ಹಾಕಿದ್ದಾರೆ ಎಂದರು. ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪಶ್ಚಿಮಘಟ್ಟ ಗಳ ಉಳಿವಿಗೆ ಸಹಕರಿಸಬೇಕು.

ಸುಳ್ಳು ಮಾಹಿತಿ ನೀಡಿ ಸಂಪನ್ಮೂಲ ಕೊಳ್ಳೆ ಹೊಡೆಯಲು ಯತ್ನಿಸುತ್ತಿರುವ ಅಧಿಕಾರಿ ಹಾಗೂ ಖಾಸಗಿ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ನಿಯೋಗದಲ್ಲಿ ಸಕಲೇಶಪುರ ಕೃಷಿಕ ಸಮಾಜ ಉಪಾಧ್ಯಕ್ಷ ಎಚ್.ಟಿ. ಗಣೇಶ್, ಎಚ್.ಆರ್. ಭರತ್, ಕಿಶೋರ್‌ ಕುಮಾರ್, ದರ್ಶನ್, ವೆಂಕಟೇಶ್ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT