ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಿಕೆಯಲ್ಲಿ ತಾಂತ್ರಿಕ ಚಿಂತನೆ ಇರಲಿ’

Last Updated 12 ಜನವರಿ 2017, 6:52 IST
ಅಕ್ಷರ ಗಾತ್ರ

ಅರಸೀಕೆರೆ: ‘ಹಿಂದಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ಸಾಕಷ್ಟು ಬದಲಾವಣೆಗಳಾಗಿವೆ. ಪ್ರೌಢಶಾಲೆ ಹಂತದಲ್ಲಿಯೇ ಕಲಿಕೆ ಹೊಸ ತಿರುವು ಪಡೆಯುತ್ತದೆ. ಪ್ರಾಥಮಿಕ ಹಂತದಲ್ಲಿ ನಲಿ–ಕಲಿ, ನಂತರದಲ್ಲಿ ಕಂಪ್ಯೂಟರ್‌ ಹೀಗೆ ಆಧುನಿಕ ಶಿಕ್ಷಣ ದೊರಕುತ್ತಿದೆ’ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಜೆ.ಸಿ.ಪುರ ಗ್ರಾಮದಲ್ಲಿ ತಾವು ಓದಿದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಗ್ರಾಮಸ್ಥರು ಹಾಗೂ ಶಾಲೆ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ದೇಶ ಅಂತರಿಕ್ಷ ಕ್ಷೇತ್ರದಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ವಾಣಿಜ್ಯ ಕ್ಷೇತ್ರದಲ್ಲಿ 3ನೇ ಸ್ಥಾನ ಪಡೆದಿದೆ. ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಉತ್ತಮ ಚಿಂತನೆ ಹಾಗೂ ಗೆಳೆತನ ಅಗತ್ಯ. ನನ್ನ ಸಹಪಾಠಿ ಎನ್‌.ಎಸ್‌.ಸಿದ್ದಪ್ಪ ಜಗತ್ತಿನ 2 ಸಾವಿರ ವಿಜ್ಞಾನಿಗಳಲ್ಲಿ ಒಬ್ಬರು. ಓದಿನಲ್ಲಿ ತಾಂತ್ರಿಕತೆ, ಚಿಂತನೆ ಅಗತ್ಯವಾಗಿ ಇರಬೇಕು. ಆದರೆ, ದುರಾಸೆ ಇರಬಾರದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ತಾಲ್ಲೂಕಿನಲ್ಲಿ ದುಸ್ಥಿತಿಯಲ್ಲಿರುವ ಶಾಲಾ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಸರ್ವ ಶಿಕ್ಷಣ ಅಭಿಯಾನಕ್ಕೆ ಕೇಂದ್ರ ಸರ್ಕಾರದಿಂದ ನೀಡುತ್ತಿದ್ದ ಹಣ ಈಗ ಪ್ರಾಥಮಿಕ ಶಾಲೆಗಳಿಗೆ ಬರುತ್ತಿಲ್ಲ. ಆದರೆ, ಆರ್‌ಎಂಎಸ್‌ ಯೋಜನೆಯಡಿ ಪ್ರೌಢಶಾಲೆಗಳಿಗೆ ನೀಡಲಾಗುತ್ತಿದೆ. ಅಗತ್ಯವಿರುವ ಶಾಲೆಗಳಿಗಿಂತ ಅಗತ್ಯ ಇಲ್ಲದ ಶಾಲೆಗಳಿಗೆ ಹೆಚ್ಚಿನ ಹಣ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಶಾಲೆಯಲ್ಲಿ ಓದಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬಿಡಿಎ ಎಂಜಿನಿಯರ್‌ ಶೇಖರಪ್ಪ, ರಾಂಪುರ ಶಿವಮೂರ್ತಿ, ಕೆಯುಡಬ್ಲೂ ಮುಖ್ಯ ಎಂಜಿನಿಯರ್ ಸಿದ್ದಾನಾಯ್ಕ್‌, ಎಇಇ ಸಿದ್ದಪ್ಪ ಅವರಿಗೆ ಸನ್ಮಾನಿಸಲಾಯಿತು. ಜಿ.ಪಂ ಸದಸ್ಯರಾದ ಲೀಲಾ ಧರ್ಮಶೇಖರ್‌, ವತ್ಸಲಾ ಶೇಖರಪ್ಪ, ತಾ.ಪಂ ಅಧ್ಯಕ್ಷೆ ಮಂಜುಳಾ ಬಾಯಿ, ಉಪಾಧ್ಯಕ್ಷ ಮಹೇಶ್ವರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT