ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೋದರ ಭಾಷೆಗೂ ಸಮಾನ ಮನ್ನಣೆ ಸಿಗಲಿ

ಭಾಷೆಗಳ ಮೇಲೆ ಆಧಿಪತ್ಯ ಬೇಡ * ಭೂಮಿಯೊಂದಿಗೆ ಸಂಘರ್ಷ ಮಾಡದಿರಿ* ಕಂಪ್ಯೂಟರ್‌ ಬಳಕೆ ಅಗತ್ಯ
Last Updated 12 ಜನವರಿ 2017, 7:26 IST
ಅಕ್ಷರ ಗಾತ್ರ

ಆರ್.ಗುಂಡೂರಾವ್ ಸಭಾಂಗಣ, ಎದುರ್ಕುಳ ಶಂಕರನಾರಾಯಣ ಭಟ್ ಪ್ರಧಾನ ವೇದಿಕೆ, ಕುಶಾಲನಗರ: ಕನ್ನಡ ಭಾಷೆಯ ಸಹೋದರ ಭಾಷೆಗಳಿಗೆ ಸಮಾನ ಮನ್ನಣೆ ನೀಡುವ ಮೂಲಕ ಅವುಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.

ಇಲ್ಲಿನ ರೈತ ಸಹಕಾರ ಭವನದ ಆವರಣದಲ್ಲಿ ಏರ್ಪಡಿಸಿದ್ದ 11ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬುಧವಾರ ನಡೆದ ಭಾಷೆ ಮತ್ತು ಬದುಕು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಕೊಡವ ಭಾಷೆ, ತುಳು ಸೇರಿದಂತೆ ಇನ್ನಿತರ ಸಹೋದರ ಭಾಷೆಗಳ ಮೇಲೆ ಆಧಿಪತ್ಯ ನಡೆಸಬಾರದು. ಬದಲಿಗೆ ಸಹೋದರ ಭಾಷೆಗಳ ಬೆಳವಣಿಗೆಗೆ ಒತ್ತಾಸೆಯಾಗಬೇಕು ಎಂದು ಹೇಳಿದರು.

ಪ್ರಗತಿಪರ ಚಿಂತನೆಯ ಸಾಹಿತ್ಯದಲ್ಲಿ ಧನಾತ್ಮಕ ಹಾಗೂ ನಕಾರಾತ್ಮಕ ಆಲೋಚನೆಗಳನ್ನು ರೂಢಿಸಿಕೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮನಸ್ಥಿತಿ ವಿದ್ಯಾರ್ಥಿಗಳು ಮತ್ತು ಕನ್ನಡ ಸಾಹಿತ್ಯಾಭಿಮಾನಿಗಳಲ್ಲಿ ಬೆಳೆಯಬೇಕು ಎಂದರು.

ಆಧುನಿಕ ಮತ್ತು ಸಾಂಪ್ರದಾಯಿಕ ಕೃಷಿಯಲ್ಲಿ ಬದುಕು ಎಂಬ ವಿಚಾರ ಕುರಿತು ಮಾತನಾಡಿದ ಉಪನ್ಯಾಸಕ ಜಯಕುಮಾರ್, ಆಧುನಿಕ ಬೇಸಾಯ ಪದ್ಧತಿಯಿಂದ ಕೃಷಿ ಉತ್ಪನ್ನಗಳು ವಿಷಕಾರಿ ಅಹಾರವಾಗಿ ಮಾರ್ಪಡುತ್ತಿವೆ. ಇಂಥ ವಿಷಕಾರಿ ಆಹಾರ ಸೇವನೆಯಿಂದ ಆರೋಗ್ಯ ಸ್ಥಿತಿ ಹದಗೆಡುತ್ತಿದೆ ಎಂದರು.

ರೈತರು ಭೂಮಿಯೊಂದಿಗೆ ಸಂಘರ್ಷದ ಹಾದಿ ಹಿಡಿದಿದ್ದಾರೆ. ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಕೆ ಮಾಡುವ ಮೂಲಕ ಮಣ್ಣಿನ ಫಲವತ್ತತೆಯನ್ನು ನಾಶ ಮಾಡುತ್ತ ತಮ್ಮ ಬದುಕನ್ನೂನಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಉತ್ತಮ ಆರೋಗ್ಯ ಸುಧಾರಣೆಗೆ ಸಾವಯವ ಬೇಸಾಯ ಪದ್ಧತಿ ತುಂಬ ಅಗತ್ಯವಾಗಿದ್ದು, ರೈತರು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಕೃಷಿ ಅಧಿಕಾರಿಗಳು ಕೂಡ ರೈತರಿಗೆ ಅಗತ್ಯ ಮಾಹಿತಿ ನೀಡುವ ಮೂಲಕ ಅರಿವು ಮೂಡಿಸಲು ಮುಂದಾಗಬೇಕು ಎಂದರು.

ಕೃಷಿಯಲ್ಲಿ ಜಾನಪದ ಸಾಹಿತ್ಯ ಕುರಿತು ವಿಚಾರ ಮಂಡಿಸಿದ ಪ್ರಗತಿಪರ ಕೃಷಿಕ ಅಳುವಾರದ ಪ್ರೇಮ್ ಕುಮಾರ್, ಕೃಷಿಯಿಂದ ರೈತರ ಬದುಕು ಹಸನಾಗುತ್ತದೆ. ರೈತರು ಹಣಗಳಿಸುವ ಉದ್ದೇಶದಿಂದ ಕೃಷಿಯಲ್ಲಿ ತೊಡಗಬಾರದು. ರೈತ ಕುಟುಂಬದವರು ತಮ್ಮನ್ನು ಪರಿಪೂರ್ಣವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಲ್ಲಿ ಮಾತ್ರ ಸಾರ್ಥಕ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಸಮ್ಮೇಳಾನಾಧ್ಯಕ್ಷ ಎಸ್.ಸಿ.ರಾಜಶೇಖರ್, ಉದ್ಯಮಿ ಹಂಡ್ಲಿ ವೇದಕುಮಾರ್, ಸಮಾಜ ಸೇವಕ ಜಿ.ಎಂ.ಕಾಂತರಾಜ್ ಉಪಸ್ಥಿತರಿದ್ದರು.  ನಿವೃತ್ತ ಶಿಕ್ಷಕ ಸೋಮಪ್ಪ ಸ್ವಾಗತಿಸಿದರು. ಪ.ಪಂ.ಸದಸ್ಯ ಎಂ.ನಂಜುಂಡಸ್ವಾಮಿ ನಿರೂಪಿಸಿದರು. ದಾಮೋದರ್ ವಂದಿಸಿದರು. ಎಚ್.ಬಿ.ದಿನೇಶಾಚಾರಿ ನಿರ್ವಹಣೆ ಮಾಡಿದರು.

ಓದುವ ಅಭಿರುಚಿ ಬೆಳೆಸಿಕೊಳ್ಳಿ
ಸಮ್ಮೇಳನದ ಮಕ್ಕಳಗೋಷ್ಠಿಯಲ್ಲಿ ಪುಟಾಣಿಗಳು ನಿರರ್ಗಳವಾಗಿ ಮಂಡಿಸಿದ ವಿಚಾರಗಳು ಗಮನ ಸೆಳದವು. ಬದಲಾಗುತ್ತಿರುವ ಜೀವನ ಶೈಲಿ ಕುರಿತು ವಿಷಯ ಮಂಡಿಸಿದ ಕೃತಜ್ಞ ಬೆಸೂರು, ಬದಲಾಗುತ್ತಿರುವ ಜೀವನ ಶೈಲಿಯನ್ನು ಒತ್ತಡದ ಬದುಕಿನ ಅನಿವಾರ್ಯತೆಯಿಂದಾಗಿ ಜನ ಅನುಕರಣೆ ಮಾಡುತ್ತಿದ್ದಾರೆ ಎಂದರು.


ಪ್ರತಿಯೊಬ್ಬರೂ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ದೃಶ್ಯಮಾಧ್ಯಮಗಳು ಯುವಜನಾಂಗ ವನ್ನು ದಾರಿತಪ್ಪಿಸುತ್ತಿವೆ. ಇದರಿಂದ ಮಕ್ಕಳ ಮೇಲಾಗುವ ಪರಿಣಾಮಗಳನ್ನು ತಿಳಿಸಿಕೊಡುವ ಮೂಲಕ ಜಾಗೃತಿ ಮೂಡಿಸಿದರು.

ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ವಿಧಾನಗಳ ಕುರಿತು ಮಾತನಾಡಿದ ಆಶಯ ಸಂಪಾಜೆ, ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಯಬೇಕು. ಅದಕ್ಕೆ ಮನೆಯಲ್ಲೂ ಪೂರಕ ವಾತಾವರಣ ಇರಬೇಕು. ಪೋಷಕರು ಪತ್ರಿಕೆಗಳನ್ನು ಓದುವ ಹವ್ಯಾಸ ಇಟ್ಟು ಕೊಂಡಿದ್ದರೆ ಮಕ್ಕಳೂ ಆ ಕಡೆಗೆ ಆಕರ್ಷಿತರಾಗುತ್ತಾರೆ ಎಂದರು.

ಮಕ್ಕಳಲ್ಲಿ ನಾಯಕತ್ವದ ಬೆಳವಣಿಗೆ ಬಗ್ಗೆ ಸೋದಾಹರಣ ವಾಗಿ ವಿ.ಡಿ.ಸಿಂಚನಾ ವಿಚಾರ ಮಂಡಿಸಿದರು. ಸಾಹಿತಿ ಕಸ್ತೂರಿ ಗೋವಿಂದಮ್ಮಯ್ಯ ಮಾತನಾಡಿ, ಜೀವನೋತ್ಸಾಹ ಕಳೆದುಕೊಂಡಾಗ ಸಾಹಿತ್ಯ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಸಾಮಾಜಿಕ ಜಾಲತಾಣಗಳ ಮುಂದೆ ಅನುಭವಗಳ ಮೂಸೆಯಿಂದ ಅರಳುವ ಕೃತಿಗಳು ಹೆಚ್ಚು ಖುಷಿ ಕೊಡುತ್ತವೆ ಎಂದರು. ಸಾಹಿತಿ ಶಿವದೇವಿ ಅವನೀಶ್ಚಂದ್ರ, ಮಕ್ಕಳನ್ನು ಅವರ ಆಸಕ್ತಿಯ ಕ್ಷೇತ್ರದಲ್ಲೇ ಬೆಳೆಸಬೇಕು. ಮಕ್ಕಳು ಮಕ್ಕಳಾಗಿಯೇ ಬಾಲ್ಯ ಅನುಭವಿಸಲಿ. ಮತ್ತೆ ಎಂದಿಗೂ ಈ ಅವಕಾಶ ಸಿಗುವುದಿಲ್ಲ ಎಂದರು.

ಪತ್ರಕರ್ತ ನರೇಂದ್ರ ಪಾರೆಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಎಸ್.ಸಿ.ರಾಜಶೇಖರ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್, ಸಾಹಿತಿ ಬೈತಡ್ಕ ಜಾನಕಿ ಬೆಳ್ಯಪ್ಪ, ಜಲಾ ಕಾಳಪ್ಪ ಉಪಸ್ಥಿತರಿದ್ದರು. ಅರ್ಪಿತಾ ಸ್ವಾಗತಿಸಿ, ವಿಘ್ನೇಶ್ ನಿರೂಪಿಸಿದರು. ಹೃತ್ವಿಕ ವಂದಿಸಿದರು. ಶಿಕ್ಷಕ ರಂಗಸ್ವಾಮಿ ನಿರ್ವಹಣೆ ಮಾಡಿದರು.

ಕಾವೇರಿ ತಾಲ್ಲೂಕು ರಚನೆಯಾಗಲಿ: ನಿರ್ಣಯಸಮ್ಮೇಳನದಲ್ಲಿ 11 ನಿರ್ಣಯಗಳನ್ನು ಅಂಗೀಕರಿಸಲಾಯಿತು. ಕುಶಾಲನಗರವನ್ನು ಕೇಂದ್ರವಾಗಿರಿಸಿಕೊಂಡು ಕಾವೇರಿ ತಾಲ್ಲೂಕು ರಚನೆ ಮಾಡಬೇಕು. ಕೊಡಗು ಜಿಲ್ಲಾ ವ್ಯಾಪ್ತಿಯ ಎಲ್ಲ ವಿದ್ಯಾಸಂಸ್ಥೆಗಳಲ್ಲಿ ಪ್ರೌಢಶಾಲಾ ಹಂತದವರೆಗೆ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ನೀಡಬೇಕು.

ಜಿಲ್ಲೆಯ ಎಲ್ಲೆಡೆ ಕಚೇರಿಗಳಲ್ಲಿ ತಪ್ಪಿಲ್ಲದ ಕನ್ನಡ ಫಲಕಗಳನ್ನು ಬರೆಸಬೇಕು. ಕೊಡಗು ಜಿಲ್ಲೆಯ ವ್ಯಾಪ್ತಿಯ ಕನ್ನಡ ಮಾಧ್ಯಮ ಶಿಕ್ಷಣ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ಹೆಚ್ಚಿನ ಶಿಕ್ಷಣಗಳಿಗೆ ಸೂಕ್ತ ಅನುದಾನವನ್ನು ನೀಡಬೇಕು. ಕೊಡಗು ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಮಾಧ್ಯಮ ಓದಿದವರನ್ನೇ ಕೆಲಸಗಳಿಗೆ ತೆಗೆದುಕೊಳ್ಳಬೇಕು.

ಕಾವೇರಿ ನದಿ ನೀರನ್ನು ಮಲಿನಗೊಳಿಸಲು ಕಾರಣರಾದ ವರ ಮೇಲೆ ಕಾನೂನು ಕ್ರಮ ತೆಗೆ ದುಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುವ ನೀಟ್ ಮತ್ತಿತರ ಪರೀಕ್ಷೆಗಳ ಪೂರ್ವಭಾವಿ ತರಬೇತಿ ಬಳಿಕ ಮೌಖಿಕ, ಲಿಖಿತ ಪರೀಕ್ಷೆಗಳನ್ನು ಕನ್ನಡದಲ್ಲೂ ನಡೆಸುವ ಅವಕಾಶ ಕಲ್ಪಿಸಿಕೊಡಬೇಕು ಎಂಬುದು ಪ್ರಮುಖ ನಿರ್ಣಯಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT