ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ 6 ಎಪಿಎಂಸಿಗೆ ಮತದಾನ ಇಂದು

ಅವಿರೋಧ ಆಯ್ಕೆಯ ನಂತರ ಉಳಿದ ಸ್ಥಾನಗಳಿಗೆ ಚುನಾವಣೆ; ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ, ಕಟ್ಟುನಿಟ್ಟಿನ ಕ್ರಮ
Last Updated 12 ಜನವರಿ 2017, 7:29 IST
ಅಕ್ಷರ ಗಾತ್ರ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹಳಿಯಾಳ, ಸಿದ್ದಾಪುರ, ಹೊನ್ನಾವರ, ಕುಮಟಾ ಹಾಗೂ ಯಲ್ಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ (ಎಪಿಎಂಸಿ) ಚುನಾವಣೆ ಅಖಾಡ ಸಿದ್ಧವಾಗಿದ್ದು, ಗುರುವಾರ ಮತದಾನ ನಡೆಯಲಿದೆ. 
 
ಬುಧವಾರ ಆಯಾ ತಾಲ್ಲೂಕಿನ ತಹಶೀಲ್ದಾರ್‌ ಕಚೇರಿಯಲ್ಲಿ ಮಸ್ಟರಿಂಗ್‌ ಕಾರ್ಯ ನಡೆಯಿತು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ­ಯು ಮತಪತ್ರ, ಮತ ಪೆಟ್ಟಿಗೆ ಹಾಗೂ ಮತದಾರರ ಪಟ್ಟಿಯೊಂದಿಗೆ ನಿಗದಿತ ಮತಗಟ್ಟೆಗಳಿಗೆ ತೆರಳಿದರು. 
 
8 ಕ್ಷೇತ್ರಗಳಿಗೆ ಚುನಾವಣೆ: ಕಾರವಾರ ಹಾಗೂ ಅಂಕೋಲಾ ತಾಲ್ಲೂಕುಗಳ ವ್ಯಾಪ್ತಿ ಹೊಂದಿರುವ ಕಾರವಾರ ಎಪಿಎಂಸಿಯಲ್ಲಿ ಒಟ್ಟು 13 ಕ್ಷೇತ್ರಗಳಿದ್ದು, ಈಗಾಗಲೇ ಐದರಲ್ಲಿ ಅವಿರೋಧ ಆಯ್ಕೆಯಾಗಿದೆ. ಉಳಿದ 8 ಸ್ಥಾನಗಳಿಗೆ ಗುರುವಾರ ಮತದಾನ ಪ್ರಕ್ರಿಯೆ ನಡೆಯಲಿದೆ. 
 
ಮತದಾರರು ಎಷ್ಟು?: 
ಕಾರವಾರ– ಅಂಕೋಲಾ ತಾಲ್ಲೂಕು ಸೇರಿ ಒಟ್ಟು 1.06 ಲಕ್ಷ ಮತದಾರರು ಇದ್ದಾರೆ. ಕಾರವಾರ ತಾಲ್ಲೂಕಿನಲ್ಲಿ 43,270 ಪುರುಷ, 24,138 ಮಹಿಳಾ ಮತದಾರರು ಹಾಗೂ ಅಂಕೋಲಾ ತಾಲ್ಲೂಕಿನಲ್ಲಿ 26,343 ಪುರುಷ, 12,921 ಮಹಿಳಾ ಮತದಾರರು ಇದ್ದಾರೆ. ಕೃಷಿ ಭೂಮಿ ಹೊಂದಿರು­ವವರಿಗೆ ಮಾತ್ರ ಮತ ಚಲಾಯಿಸುವ ಹಕ್ಕು ಇದೆ. ಕಾರವಾರ ತಾಲ್ಲೂಕಿನ ಒಟ್ಟು 96 ಮತಗಟ್ಟೆಗಳಿದ್ದು, 480 ಸಿಬ್ಬಂದಿ­ ನಿಯೋಜಿಸ­ಲಾಗಿದೆ ಎಂದು ಚುನಾವ­ಣಾಧಿಕಾರಿ ಹಾಗೂ ಕಾರವಾರ ತಹಶೀ­ಲ್ದಾರ್‌ ಜಿ.ಎನ್‌.ನಾಯ್ಕ  ತಿಳಿಸಿದರು. 
 
ಅವಿರೋಧವಾಗಿ ಆಯ್ಕೆಯಾದವರು: ಕಾರವಾರ ಎಪಿಎಂಸಿಗೆ  ಕಿನ್ನರ ಕ್ಷೇತ್ರಕ್ಕೆ ಪರಿಶಿಷ್ಟ ಜಾತಿಯ ಕುಷ್ಟ ವಾಹು ಹುಲಸ್ವಾರ, ನಂದನಗದ್ದಾ ಸಾಮಾನ್ಯ ಕ್ಷೇತ್ರಕ್ಕೆ ಸಾಯಿನಾಥ ಶ್ರೀಕಾಂತ ನಾಯ್ಕ ಸುಂಕೇರಿ, ಅಂಕೋಲಾದ ಬೆಳಸೆ ಮಹಿಳಾ ಮೀಸಲು ಕ್ಷೇತ್ರಕ್ಕೆ ಸೀತೆ ಸೋಮಯ್ಯ ಗೌಡ, ಉಳುವರೆ, ವರ್ತಕರ ಕ್ಷೇತ್ರಕ್ಕೆ ಪ್ರಸಾದ ಶ್ರೀಕಾಂತ ಕಾಮತ, ಶಿರವಾಡ, ಕಲ್ಲೇಶ್ವರದಿಂದ ಮಾರಾಟ ಸಹಕಾರಿ ಸಂಘದ ಅಭ್ಯರ್ಥಿಯಾಗಿ ನಾರಾಯಣ ಶಿವರಾಮ ಹೆಗಡೆ ಅವರು ಅವಿರೊಧವಾಗಿ ಆಯ್ಕೆಯಾಗಿದ್ದಾರೆ. 
 
ಚುನಾವಣೆ ನಡೆವ ಕ್ಷೇತ್ರಗಳು: ಕಾರವಾರ– ಅಂಕೋಲಾ ಸೇರಿ ಒಟ್ಟು 8 ಕ್ಷೇತ್ರಗಳಿಗೆ ಮತದಾನ ನಡೆಯ­ಲಿದೆ. ಕಾರವಾರದ ಬಾಡ, ಮುಡಗೇರಿ, ಚಿತ್ತಾಕುಲ, ಘಾಡಸಾಯಿ, ಅಮದಳ್ಳಿ ಕೃಷಿಕರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಎಲ್ಲಾ  ಕ್ಷೇತ್ರಗಳಲ್ಲಿ ತಲಾ ಇಬ್ಬರು ಅಭ್ಯರ್ಥಿಗಳು ಕಣದಲ್ಲಿ­ದ್ದಾರೆ. ಅವರ್ಸಾ, ಅಗಸೂರು, ಅಂಕೋಲಾ (ಹಿಂದುಳಿದ ವರ್ಗಕ್ಕೆ ಮೀಸಲು ಕ್ಷೇತ್ರ) ಇಲ್ಲಿ ಸಹ ತಲಾ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಭ್ಯರ್ಥಿ­ಗಳಿಗೆ ಹಸು ಹಾಗೂ ಉದಯಿಸುತ್ತಿರುವ ಸೂರ್ಯ ಚಿಹ್ನೆಗಳನ್ನು ನೀಡಲಾಗಿದೆ. ಒಬ್ಬ ಕೃಷಿಕ ಕೃಷಿ ಕ್ಷೇತ್ರದಲ್ಲಿ ಸೇರಿದಂತೆ ವರ್ತಕರ ಕ್ಷೇತ್ರ, ಸಹಕಾರಿ ಸಂಘದಲ್ಲಿ ಸಹ ಸದಸ್ಯತ್ವ ಹೊಂದಿ ಅಲ್ಲಿ ಮತದಾರರಾಗಿದ್ದರೆ, ಎಡಗೈನ ಬೇರೆ ಬೇರೆ ಬೆರಳುಗಳಿಗೆ ಶಾಹಿ ಹಾಕಲು ಸೂಚಿಸಲಾಗಿದೆ ಎಂದರು. 
 
ಕೃಷಿಕರ ಕ್ಷೇತ್ರದಲ್ಲಿ ಮತದಾನ ಮಾಡುವವರಿಗೆ ಎಡಗೈ ಮಧ್ಯ ಬೆರಳಿಗೆ, ಕೃಷಿ ಸಂಸ್ಕರಣ ಸಹಕಾರ ಸಂಘದಲ್ಲಿ ಸದಸ್ಯತ್ವ ಹಾಗೂ ಮತದಾರರಾಗಿದ್ದರೆ ಎಡಗೈ ಹೆಬ್ಬೆರಳಿಗೆ, ವರ್ತಕರ ಸಂಘದಲ್ಲಿ ಮತದಾನ ಹಕ್ಕು ಹೊಂದಿದ್ದರೆ ಎಡಗೈ ತೋರು ಬೆರಳಿಗೆ, ಮಾರಾಟ ಸಹಕಾರಿ ಸಂಘದಿಂದ ಮತದಾರರಾಗಿದ್ದರೆ ಎಡಗೈ ಉಂಗುರದ ಬೆರಳಿಗೆ ಶಾಹಿ ಹಾಕಲು  ಮತಗಟ್ಟೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು. 
 
ಕಣದಲ್ಲಿ ಇರುವವರು 
ಮುಡಗೇರಿ ಕ್ಷೇತ್ರದಲ್ಲಿ ರವೀಂದ್ರ ಎನ್.ಪವಾರ್ (ಹಸು), ಸುನೀಲ ಬಾಬುರಾಯ ಸೈಲ್ (ಉದಯಿಸು­ತ್ತಿರುವ ಸೂರ್ಯ) ಕಣದಲ್ಲಿ ಇರುವ ಸ್ಪರ್ಧಿಗಳಾಗಿದ್ದಾರೆ. ಚಿತ್ತಾಕುಲ ಮಹಿಳಾ ಮೀಸಲು ಕ್ಷೇತ್ರದಲ್ಲಿ ಪವಿತ್ರಾ ಪ್ರಕಾಶ್ ನಾಯ್ಕ, ಸುಜಾತ ಯಾನೆ ಧನಲಕ್ಷ್ಮಿ ದಿಲೀಪ ದಳವಿ, ಘಾಡಸಾಯಿ ಸಾಮಾನ್ಯ ಕ್ಷೇತ್ರದಲ್ಲಿ ಉದಯ ಗಜಾನನ ಪ್ರಭು, ನಾರಾಯಣ ಜೀವಾಜಿ ಗಾಂವಕರ, ಬಾಡ ಕ್ಷೇತ್ರದಲ್ಲಿ ದಿಗಂಬರ ವಾಮನ ಹಳದನಕರ, ವಿಜಯಕುಮಾರ ಕುಶಾಲಿ ನಾಯ್ಕ, ಅಮದಳ್ಳಿ (ಹಿಂದುಳಿದ ವರ್ಗ ಬಿ) ಕ್ಷೇತ್ರದಲ್ಲಿ ಅಶೋಕ ಪಾಯ್ಕ ನಾಯ್ಕ, ವಿದ್ಯಾಧರ ಪುತ್ತು ಗಾಂವಕರ, ಅವರ್ಸಾದಲ್ಲಿ ಪಾಂಡುರಂಗ ವೆಂಕಟ್ರಮಣ ನಾಯಕ, ಮಹೇಶ್ ಬಾಬುರಾಯ ನಾಯ್ಕ, ಅಗಸೂರು (ಪರಿಶಿಷ್ಟ ಪಂಗಡ) ಕ್ಷೇತ್ರದಲ್ಲಿ ಪುಟ್ಟಾ ನಾರಾಯಣ ಸಿದ್ದಿ, ಸುಬ್ರಾಯ ಹಸನ ಸಿದ್ದಿ, ಅಂಕೋಲಾ(ಹಿಂದುಳಿದ ವರ್ಗ) ಕ್ಷೇತ್ರದಲ್ಲಿ ಗಣಪತಿ ಬೊಮ್ಮಯ್ಯ ನಾಯಕ, ಚಂದ್ರಕಾಂತ ಗಣಪತಿ ನಾಯ್ಕ ಕಣದಲ್ಲಿದ್ದಾರೆ. 
 
**
ಎಪಿಎಂಸಿ ಚುನಾವಣೆಗೆ ಗುರುವಾರ ಬೆಳಿಗ್ಗೆ 8ರಿಂದ ಸಂಜೆವರೆಗೆ ಮತದಾನ ನಡೆಯಲಿದ್ದು, ಚುನಾವಣೆ ಸುಸೂತ್ರವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.  
ಜಿ.ಎನ್‌.ನಾಯ್ಕ, ಕಾರವಾರ
ತಹಶೀಲ್ದಾರ್‌  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT