ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ ಬಾಲಕಿಯರಿಗೆ ಬೇಕು ‘ಜಲ ಭಾಗ್ಯ ’

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ಗೃಹ, ನೀರಿನ ಕೊರತೆಯೇ ಇಲ್ಲಿನ ದೊಡ್ಡ ಸಮಸ್ಯೆ
Last Updated 12 ಜನವರಿ 2017, 7:33 IST
ಅಕ್ಷರ ಗಾತ್ರ
ಶಿರಸಿ: ನೀರಿನ ಮಿತವ್ಯಯದ ಪಾಠ ಕಲಿತರೆ, ಇಲ್ಲಿನ ಬಾಲಕಿಯರ ವಸತಿ ನಿಲಯಗಳಲ್ಲಿ ಉಳಿದುಕೊಂಡು ಶಾಲೆಗೆ ಹೋಗುವ ವಿದ್ಯಾರ್ಥಿನಿಯರು ಮನೆಯ­ನ್ನು ಮರೆತು ಖುಷಿಯಲ್ಲಿ ಇರಬಲ್ಲರು!
 
ಗಾಂಧಿ ನಗರದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ಪೂರ್ವ  ಬಾಲಕಿ­ಯರ ವಸತಿ ನಿಲಯ ಅದರ ಪಕ್ಕದ­ಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳಲ್ಲಿ ಒಟ್ಟು 200 ವಿದ್ಯಾರ್ಥಿನಿಯರು ಇದ್ದಾರೆ. ಮೆಟ್ರಿಕ್ ಪೂರ್ವ ವಿಭಾಗದಲ್ಲಿ ಕೇವಲ ಏಳು ಕೊಠಡಿಗಳಲ್ಲಿ 100 ಬಾಲಕಿಯರು ಇದ್ದರೆ ಮೆಟ್ರಿಕ್ ನಂತರದ ವಸತಿ ನಿಲಯ­ದಲ್ಲಿ ಒಂಬತ್ತು ಕೊಠಡಿಗಳಲ್ಲಿ 100 ವಿದ್ಯಾರ್ಥಿನಿಯರು ಉಳಿದು­ಕೊಂಡಿ­ದ್ದಾರೆ. 
 
ಮೆಟ್ರಿಕ್‌ಪೂರ್ವ ವಸತಿ ನಿಲಯಗಳ ಸಣ್ಣ ಸಣ್ಣ ಕೊಠಡಿಗಳಲ್ಲಿ ಗರಿಷ್ಠ 14 ಮಕ್ಕಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. 100 ಮಕ್ಕಳಲ್ಲಿ 80 ಮಕ್ಕಳಿಗೆ ಮಂಚಗಳಿವೆ. ಅವರಲ್ಲಿ 64 ಬಾಲಕಿಯರಿಗೆ ಹಾಸಿಗೆ ಭಾಗ್ಯ ಸಿಕ್ಕಿದೆ. ಉಳಿದ ಮಕ್ಕಳು ದೊಡ್ಡ ಕೊಠಡಿಯಲ್ಲಿ ನೆಲದ ಮೇಲೆ ಚಾಪೆ ಹಾಕಿಕೊಂಡು ಮಲಗುತ್ತಾರೆ. ಇರುವ ವ್ಯವಸ್ಥೆಯಲ್ಲಿ ಮಕ್ಕಳು ಶಿಸ್ತು, ಸ್ವಚ್ಛತೆ ಕಾಪಾಡಿಕೊಂಡಿದ್ದಾರೆ. 
 
‘ದಿನಕ್ಕೆ ಎರಡು ಬಕೆಟ್ ನೀರು ಸಿಗುತ್ತದೆ. ಅದರಲ್ಲೇ ಎಲ್ಲವನ್ನೂ ಪೂರೈ­ಸಿ­­ಕೊಳ್ಳಬೇಕು. ನಗರಸಭೆಯ ನೀರು ಬಂದರೆ ಸಂಜೆ ಇನ್ನೊಂದು ಬಕೆಟ್ ಹೆಚ್ಚುವರಿ ನೀರು ಸಿಗುತ್ತದೆ. ನೀರಿನ ಸಮಸ್ಯೆ, ಮಳೆಗಾಲದಲ್ಲಿ ಬಟ್ಟೆ ಒಣ ಹಾಕಲು ಜಾಗದ ಅಭಾವ ಬಿಟ್ಟರೆ ನಮಗೆ ಇನ್ನೇನೂ ಕೊರತೆಯಿಲ್ಲ’ ಎನ್ನು­ತ್ತಾರೆ ವಸತಿ ನಿಲಯದಲ್ಲಿರುವ ಮಕ್ಕಳು.
 
‘ಎರಡೂ ವಸತಿ ನಿಲಯಗಳು ಸೇರಿ ಒಂದು ತೆರೆದ ಬಾವಿ ಇದೆ. ಬಾವಿಯಲ್ಲಿ ನೀರಿನ ಒರತೆ ಸಾಕಷ್ಟಿಲ್ಲ. ನಗರಸಭೆಯ ನೀರು ಎರಡು ದಿನಕ್ಕೊಮ್ಮೆ ಬರುತ್ತದೆ. ಈಗ ಪೈಪ್‌ಲೈನ್ ಒಡೆದಿರುವುದರಿಂದ ನಾಲ್ಕಾರು ದಿನಗಳಿಂದ ಈ ನೀರು ಸಹ ಸಿಗುತ್ತಿಲ್ಲ. ನೀರಿನ ವ್ಯವಸ್ಥೆ ಸಮರ್ಪಕಗೊಂಡರೆ ಹಾಸ್ಟೆಲ್ ಮಕ್ಕಳಿಗೆ ಇನ್ನೇನು ಸಮಸ್ಯೆಯಿಲ್ಲ’ ಎನ್ನುತ್ತಾರೆ ವಸತಿ ನಿಲಯಗಳ ಮುಖ್ಯಸ್ಥರು. 
 
‘ಇಲ್ಲಿನ ಮೆಟ್ರಿಕ್ ನಂತರದ ವಸತಿ ನಿಲಯದ ಪ್ರವೇಶ ಪಡೆಯಲು ಪ್ರತಿ­ವರ್ಷ ತೀವ್ರ ಪೈಪೋಟಿ ಇರುತ್ತದೆ. 50 ಸೀಟ್ ಖಾಲಿಯಿದ್ದರೆ 150 ಅರ್ಜಿಗಳು ಬರುತ್ತವೆ. ನಿಗದಿತ ಮಾನದಂಡದ ಮೇಲೆ ವಿದ್ಯಾರ್ಥಿನಿ­ಯರನ್ನು ಆಯ್ಕೆ ಮಾಡಲಾಗುತ್ತದೆ’ ಎನ್ನುತ್ತವೆ ಇಲಾಖೆ ಮೂಲಗಳು. ‘ವಸತಿ ನಿಲಯದ ಆವರ­ಣ­ದ­ಲ್ಲಿರುವ ಒಂದು ಬಾವಿಯ ನೀರು ಸಾಕಾಗದು. ನಗರಸಭೆ ನೀರು ಎರಡು ದಿನಗಳಿಗೊಮ್ಮೆ ಬರುತ್ತದೆ. ಕಳೆದ ವರ್ಷ ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ಟ್ಯಾಂಕರ್ ನೀರು ತರಿಸಿಕೊಂಡೆವು’ ಎಂದು  ‘ಪ್ರಜಾವಾಣಿ’ಗೆ ತಿಳಿಸಿದರು. 
 
‘ಊಟವಾದ ಮೇಲೆ ಕೈತೊಳೆಯಲು ವಸತಿ ನಿಲಯದಲ್ಲಿ ಹೊಸದಾಗಿ ನಳಗಳನ್ನು ಅಳವಡಿಸಲಾಗಿದೆ. ಆದರೆ ನೀರಿನ ಕೊರತೆಯ ಕಾರಣಕ್ಕಾಗಿ ಈ ನಳಗಳನ್ನು ಬಳಕೆ ಮಾಡುತ್ತಿಲ್ಲ’ ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದರು. 
 
‘ವಸತಿ ನಿಲಯಗಳಲ್ಲಿ ಸೀಟು ಸಿಗದೇ ಅನೇಕರು ಹಳ್ಳಿಯಿಂದ ನಿತ್ಯ ಓಡಾಡು­ತ್ತಾರೆ. ಬಡ ಕುಟುಂಬದ ಮಕ್ಕಳಿಗೆ  ಕಷ್ಟವಾಗುತ್ತಿದ್ದು ಶಿರಸಿಯಲ್ಲಿ ಹೆಚ್ಚುವರಿ ವಸತಿ ನಿಲಯ ಸ್ಥಾಪನೆ ಆಗಬೇಕು’ ಎನ್ನುತ್ತಾರೆ ಪ್ರಜಾಸತ್ತಾತ್ಮಕ ಪದವೀಧ­ರರ ವೇದಿಕೆ ಅಧ್ಯಕ್ಷ ಮಹೇಶ ನಾಯ್ಕ.
 
**
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿ
ಶಿರಸಿ– ಯಲ್ಲಾಪುರ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ವಿಶಾಲ­ವಾದ ಎಂಟು ಕೊಠಡಿಗಳಲ್ಲಿ 76 ಮಕ್ಕಳು ಉಳಿದುಕೊಂಡಿದ್ದಾರೆ. ‘ಮಕ್ಕಳಿಗೆ ಗುಂಪು ಅಭ್ಯಾಸಕ್ಕೆ ಅನು­ಕೂಲ­ವಾಗುವಂತೆ ಮಕ್ಕಳಿಗೆ ಕೊಠಡಿ ಅನುಕೂಲ ಮಾಡಿಕೊಡಲಾಗಿದೆ. ಚಿಕ್ಕ ಮಕ್ಕಳ ಗಲಾಟೆಯಿಂದ ತೊಂದರೆಯಾಗ ಬಾರದೆಂಬ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಓದು­ತ್ತಿರುವ ವಿದ್ಯಾರ್ಥಿನಿಯರಿಗೆ ಒಂದು ಪ್ರತ್ಯೇಕ ಕೊಠಡಿ ಮೀಸಲಿಟ್ಟಿದ್ದೇವೆ’ ಎನ್ನುತ್ತಾರೆ ವಾರ್ಡನ್ ರಾಜೇಶ್ವರಿ ಮಡಿವಾಳ.
 
**
ಹಾಸ್ಟೆಲ್‌ನಲ್ಲಿ ಏನೂ ಸಮಸ್ಯೆ ಇಲ್ರಿ. ಹಾಸ್ಟೆಲ್‌ದಾಗ್ ಇದ್ರ ನಮ್ಗೆ ಮನ್ಯಾಗ ಇದ್ದಾಂಗ್ ಆಗ್ತೈತ್ರಿ. ಮನಿ ನೆನಪೂ ಆಗಾಂಗಿಲ್ಲರೀ...
-ಮಾತಂಗವ್ವ 
8ನೇ ತರಗತಿ ವಿದ್ಯಾರ್ಥಿನಿ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT