ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿಜ್ವರದ ಆತಂಕ; ಜಿಲ್ಲೆಯಲ್ಲೂ ಕಟ್ಟೆಚ್ಚರ

ಘಟಪ್ರಭಾ ಸಮೀಪದ ಪಕ್ಷಿಧಾಮ; ಭೂತರಾಮನಹಟ್ಟಿಯಲ್ಲಿ ತೀವ್ರ ನಿಗಾ
Last Updated 12 ಜನವರಿ 2017, 8:31 IST
ಅಕ್ಷರ ಗಾತ್ರ
ಬೆಳಗಾವಿ: ವಿದೇಶಗಳಿಂದ ವಲಸೆ ಬಂದ ಪಕ್ಷಿಗಳಲ್ಲಿ ಅಪಾಯಕಾರಿ ಹಕ್ಕಿಜ್ವರ (ಎಚ್‌5ಎನ್‌8) ಸೋಂಕು ಪತ್ತೆ ಯಾಗಿರುವುದರಿಂದ ಮೈಸೂರಿನ ಚಾಮರಾಜೇಂದ್ರ ಮೃಗಾಲಯವನ್ನು ಒಂದು ತಿಂಗಳ ಕಾಲ ಬಂದ್‌ ಮಾಡಿರುವುದರಿಂದ ಜಿಲ್ಲೆಯಲ್ಲಿಯೂ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಲಾಗಿದೆ.
 
ಬೀದರ್‌ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದರಿಂದ ಅಲ್ಲಿನ ಕೆಲವು ಫಾರಂಗಳಲ್ಲಿನ ಕೋಳಿಗಳನ್ನು ನಾಶಪಡಿಸಲಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಮೈಸೂರಿನ ಮೃಗಾಲಯ ದಲ್ಲಿ ಹಕ್ಕಿಜ್ವರದ ಸೋಂಕು ಉಲ್ಬಣ ಗೊಂಡಿರುವುದರಿಂದ ಆತಂಕ ಗೊಂಡಿರುವ ಸರ್ಕಾರವು ರಾಜ್ಯದೆಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಪಶು ಸಂಗೋಪನೆ ಇಲಾಖೆಯ ಅಧಿ ಕಾರಿಗಳಿಗೆ ಸೂಚನೆ ನೀಡಿದೆ.
 
ಒಂದೆಡೆ ಮಹಾರಾಷ್ಟ್ರ ಹಾಗೂ ಮತ್ತೊಂದೆಡೆ ಗೋವಾ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಗೂ ಬಹಳ ಹಕ್ಕಿಗಳು ವಲಸೆ ಬರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿರುವ ಕಿರು ಮೃಗಾಲಯ ಹಾಗೂ ಘಟಪ್ರಭಾ ಸಮೀಪದ ಧೂಪದಾಳದಲ್ಲಿರುವ ಪಕ್ಷಿಧಾಮದಲ್ಲಿ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಚಳಿಗಾಲದ ಈ ಸಂದರ್ಭದಲ್ಲಿ ಬೇರೆ ಕಡೆಯಿಂದ ಪಕ್ಷಿಗಳು ಇಲ್ಲಿಗೆ ವಲಸೆ ಬರುವುದು ಸಾಮಾನ್ಯವಾಗಿರುತ್ತದೆ. ಹೀಗಾಗಿ, ಇಂಥ ಸ್ಥಳಗಳಲ್ಲಿ ಪಕ್ಷಿಗಳು ಅಸಹಜವಾಗಿ ಸಾವಿಗೀಡಾಗುವುದು ಕಂಡುಬಂದಲ್ಲಿ ತಕ್ಷಣ ವರದಿ ಸಲ್ಲಿಸುವಂತೆ ಹಾಗೂ ಈ ನಿಟ್ಟಿನಲ್ಲಿ ನಿಗಾ ವಹಿಸುವಂತೆ ಇಲಾಖೆ ಯಿಂದ ನಿರ್ದೇಶನ ನೀಡಲಾಗಿದೆ.
 
ಸ್ಪಷ್ಟ ಸೂಚನೆ ನೀಡಲಾಗಿದೆ:‘ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಯಾವುದೇ ಲಕ್ಷಣವಿಲ್ಲ. ಆದರೂ ತೀವ್ರ ನಿಗಾ ವಹಿಸಲಾಗಿದೆ. ವಿಶೇಷವಾಗಿ ಘಟಪ್ರಭಾ ಸಮೀಪದ ಪಕ್ಷಿಧಾಮದಲ್ಲಿ ಹೆಚ್ಚಿನ ನಿಗಾ ಇಡುವಂತೆ ಸೂಚಿಸ ಲಾಗಿದೆ. ಬೀದರ್‌ನ ಕೆಲವೆಡೆ ಹಕ್ಕಿಜ್ವರ ಕಾಣಿಸಿಕೊಂಡಾಗಿನಿಂದಲೂ ಇಲ್ಲಿ ನಿಗಾ ವಹಿಸಲಾಗಿದೆ.
 
ವಲಸೆ ಬರುವ ಹಕ್ಕಿಗಳಿಂದ ಸ್ಥಳೀಯ ಪಕ್ಷಿಗಳ ಮೂಲಕ ರೋಗ ಹರಡಿ, ಕೋಳಿಗಳಿಗೆ ವ್ಯಾಪಿಸುವ ಸಾಧ್ಯತೆ ಇರುತ್ತದೆ. ಕೊಕ್ಕರೆ, ಹದ್ದು, ಕಾಗೆ, ಕೋಳಿ ಮೊದಲಾದ ಯಾವುದೇ  ಹಕ್ಕಿಗಳು ಅಸಹಜವಾಗಿ ಸಾವಿಗೀಡಾಗಿ ರುವುದು ಕಂಡುಬಂದಲ್ಲಿ ತಕ್ಷಣ ವರದಿ ಸಲ್ಲಿಸುವಂತೆ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿ ವೈಜ್ಞಾನಿಕ ವಿಶ್ಲೇಷಣೆಗೆ ಕಳುಹಿಸುವಂತೆ ಇಲಾಖೆಯ ಸ್ಥಳೀಯ ವೈದ್ಯರು, ಅಧಿಕಾರಿಗಳು ಹಾಗೂ ಕೋಳಿ ಫಾರಂಗಳ ಮಾಲೀಕರಿಗೆ ಸೂಚಿಸಲಾಗಿದೆ’ ಎಂದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಎ.ಕೆ. ಚಂದ್ರಶೇಖರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
 
‘ಜಿಲ್ಲೆಯಲ್ಲಿ 1 ಲಕ್ಷದಿಂದ 2 ಲಕ್ಷ ಸಂಖ್ಯೆಯ ಕೋಳಿಗಳಿರುವ ಹತ್ತಕ್ಕೂ ಹೆಚ್ಚು ಫಾರಂಗಳಿವೆ. ಉಳಿದಂತೆ ಸಣ್ಣ ಪುಟ್ಟವೆಲ್ಲ ಸೇರಿ ಕೋಳಿಫಾರಂಗಳ ಸಂಖ್ಯೆ 400ಕ್ಕೂ ಹೆಚ್ಚು. ಜಿಲ್ಲೆಯಲ್ಲಿ ಒಟ್ಟು 2 ಕೋಟಿಗೂ ಹೆಚ್ಚು ಕುಕ್ಕುಟ ಗಳಿವೆ. ಫಾರಂಗಳಲ್ಲಿ ಆಗಾಗ ಕೋಳಿಗಳ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿರುತ್ತದೆ. ಇದಕ್ಕೆಂದೇ ಅವರು ವೈದ್ಯರನ್ನೂ ಇಟ್ಟುಕೊಂಡಿ ರುತ್ತಾರೆ. ಕಣಕುಂಬಿಯಲ್ಲಿ ಚೆಕ್‌ಪೋಸ್ಟ್‌ ಕೂಡ ತೆರೆಯಲಾಗಿದ್ದು, ಅಲ್ಲಿ ನಿಗಾ ಇಡಲಾಗಿದೆ. ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನುವುದು ಎಲ್ಲ ಕಾಲಕ್ಕೂ ಸುರಕ್ಷಿತ’ ಎಂದು ತಿಳಿಸಿದರು.
 
ಈವರೆಗೆ ಎಲ್ಲೂ ಕಾಣಿಸಿಕೊಂಡಿಲ್ಲ: ‘ಜಿಲ್ಲೆಯಲ್ಲಿ 271 ಪಶುವೈದ್ಯಕೀಯ ಸಂಸ್ಥೆಗಳಿವೆ. ಇಲ್ಲಿನ ವೈದ್ಯರು 2–3 ಹಳ್ಳಿಗಳ ವ್ಯಾಪ್ತಿಯಲ್ಲಿ ನಿಗಾ ಇಡುವಂತೆ ನಿರ್ದೇಶನ ಕೊಡಲಾಗಿದೆ. ಕೋಳಿ ಅಥವಾ ಪಕ್ಷಿಯ ರಕ್ತದ ಮಾದರಿ ಸಂಗ್ರಹ, ಪರೀಕ್ಷೆಗೆ ಬೇಕಾದ ಸಾಧನ ನೀಡಲಾಗಿದೆ. ಎಚ್‌5ಎನ್‌8 ಸೋಂಕು ಹರಡುವ ಪ್ರಮಾಣ ಚಳಿಗಾಲದಲ್ಲಿ ಹೆಚ್ಚಿರುತ್ತದೆ. ಇದರಿಂದ, ಆತಂಕ ಮೂಡಿಸಿದೆ. ಆದರೆ, ಜಿಲ್ಲೆಯಲ್ಲಿ ಈವರೆಗೆ ಹಕ್ಕಿಜ್ವರ ಕಾಣಿಸಿಕೊಂಡ ಪ್ರಕರಣ ವರದಿಯಾಗಿಲ್ಲ’ ಎಂದು ಸ್ಪಷ್ಪಪಡಿಸಿದರು.
 
‘ಭೂತರಾಮನಹಟ್ಟಿಯಲ್ಲಿರುವ ಕಿರು ಮೃಗಾಲಯಕ್ಕೂ ವಿವಿಧೆಡೆಯಿಂದ ಹಕ್ಕಿಗಳು ಬರುತ್ತವೆ. ಆದರೆ, ಹಕ್ಕಿಜ್ವರದಿಂದ  ಯಾವುದೇ ಅನಾಹುತವಾಗಿರುವ ವರದಿಯಾಗಿಲ್ಲ. ಆದರೂ ನಿಗಾ ಇಡಲಾಗಿದೆ’ ಎಂದು ಡಿಎಫ್‌ಒ ಡಿ.ಬಿ. ಪಾಟೀಲ ಹೇಳಿದರು.
 
‘ಘಟಪ್ರಭಾ ಪಕ್ಷಿಧಾಮದಲ್ಲಿ ಬಹಳಷ್ಟು ಹಕ್ಕಿಗಳು ವಲಸೆ ಬರುತ್ತವೆ. ಮೈಸೂರಿನ ಮೃಗಾಲಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದರಿಂದ ಇಲ್ಲಿಯೂ ನಿಗಾ ವಹಿಸಬೇಕು ಎಂದು ಸೂಚಿಸಲಾಗಿದೆ’ ಎಂದು ಗೋಕಾಕ ಆರ್‌ಎಫ್‌ಒ ಎಂ.ಕೆ. ಪಾತರಕ ತಿಳಿಸಿದರು.
 
***
ಜಿಲ್ಲೆಯಲ್ಲಿ ಇದುವರೆಗೆ ಹಕ್ಕಿಜ್ವರದ ಸೋಂಕು ಕಂಡುಬಂದಿಲ್ಲ. ಆ ಸೋಂಕು ಕಾಣಿಸಿಕೊಂಡರೆ ಅಂಥ ಕೋಳಿಗಳನ್ನು ನಾಶಪಡಿಸಬೇಕಾಗುತ್ತದೆ
–ಡಾ.ಎ.ಕೆ. ಚಂದ್ರಶೇಖರ
ಉಪನಿರ್ದೇಶಕ, ಪಶುಸಂಗೋಪನಾ ಇಲಾಖೆ
 
***
ಸೂಚನೆಗಳು
* ಯಾವುದಾದರೂ ಪಕ್ಷಿ ಸಾವಿಗೀಡಾಗಿ ಬಿದ್ದಿದ್ದರೆ ಸಮೀಪದ ಪಶು ಆಸ್ಪತ್ರೆಗೆ ಮಾಹಿತಿ ನೀಡಬೇಕು
* ಕೋಳಿ ಫಾರಂಗಳವರು ಕೋಳಿಗಳಿಗೆ ಕೊಕ್ಕರೆ ರೋಗದ ಲಸಿಕೆ ಹಾಕಿಸಬೇಕು. ಇದರಿಂದ ಎಚ್‌5ಎನ್‌8 ಸೋಂಕು ಹರಡುವುದನ್ನು ತಪ್ಪಿಸಬಹುದು
* ಸೋಂಕು ಕಾಣಿಸಿಕೊಂಡ ಕೋಳಿಗಳನ್ನು ನಾಶಪಡಿಸಬೇಕು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT