ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷ ಉರುಳಿದರೂ ಕಾಮಗಾರಿ ವಿಳಂಬ

Last Updated 12 ಜನವರಿ 2017, 8:33 IST
ಅಕ್ಷರ ಗಾತ್ರ

ಮೈಸೂರು: ಪ್ರಸಕ್ತ ಹಣಕಾಸು ವರ್ಷ ಮುಗಿಯುವುದಕ್ಕೆ ಕೇವಲ ಎರಡೂವರೆ ತಿಂಗಳು ಬಾಕಿ ಉಳಿದಿದ್ದರೂ ಕೆಲವು ಇಲಾಖೆಗಳ ಕಾಮಗಾರಿಗಳು ಆರಂಭವಾಗದಿರುವ ಸಂಗತಿ ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪರಿಶೀಲನಾ ಸಭೆಯಲ್ಲಿ ಬೆಳಕಿಗೆ ಬಂದಿತು.

ಪ್ರಾಥಮಿಕ ಶಾಲಾ ಕಟ್ಟಡಗಳ ದುರಸ್ತಿಯ ಕ್ರಿಯಾ­ಯೋಜನೆಗೆ ತಾಲ್ಲೂಕು ಪಂಚಾಯಿತಿಯಲ್ಲಿ ಒಪ್ಪಿಗೆ ದೊರೆತಿದ್ದರೂ ಕೆಲವು ತಾಲ್ಲೂಕುಗಳಲ್ಲಿ ಕಾಮಗಾರಿ ಆರಂಭ­ವಾಗದಿರುವ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ­ನಿರ್ವಹಣಾಧಿಕಾರಿ ಶಿವಶಂಕರ್ ಆಕ್ಷೇಪ ವ್ಯಕ್ತಪಡಿಸಿದರು.

ಜೂನ್ ತಿಂಗಳಲ್ಲೇ ಕ್ರಿಯಾಯೋಜನೆಗೆ ಜಿಲ್ಲಾ ಪಂಚಾಯಿತಿ ಅನುಮೋದನೆ ನೀಡಿದೆ. ಈವರೆಗೂ ಕಾಮಗಾರಿ ಆರಂಭಿಸ­ದಿರುವುದು ಸರಿಯಲ್ಲ. ಮೈಸೂರಿನಲ್ಲಿ 9, ನಂಜನಗೂಡಿನಲ್ಲಿ 11, ಹುಣಸೂರಿನಲ್ಲಿ 7, ಎಚ್.ಡಿ.ಕೋಟೆಯಲ್ಲಿ 12, ಪಿರಿಯಾಪಟ್ಟಣದಲ್ಲಿ 7 ಕಾಮಗಾರಿಗಳು ಆರಂಭವಾಗಬೇಕಿವೆ. ತಿ.ನರಸೀಪುರದ 8 ಕಾಮಗಾರಿಗಳ ಪೈಕಿ ಕೆಲವು ಆರಂಭವಾಗಿವೆ ಎಂದು ಆಯಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮಾಹಿತಿ ನೀಡಿದರು.

ಇಒಗಳಿಗೆ ಒತ್ತಡ ಹೆಚ್ಚಿದೆ
ಶಾಲಾ ಕಟ್ಟಡಗಳ ದುರಸ್ತಿಯಂತಹ ವಿಚಾರದ ಕಡೆಗೆ ಗಮನ ಕೊಡಲಾಗದಷ್ಟು ಇರುವ ಒತ್ತಡವಾದರೂ ಏನು ಎಂದು ಪ್ರಶ್ನಿಸಿದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ, ಇಒಗಳಿಗೆ ಮುಂಚಿನಷ್ಟು ಒತ್ತಡ ಇಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮೈಸೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಿಂಗರಾಜಯ್ಯ, ‘ಸ್ವಚ್ಛ ಭಾರತ್ ಮಿಷನ್, ನರೇಗಾ, ವಸತಿ ಯೋಜನೆಗಳು ಸೇರಿದಂತೆ ಬಹಳಷ್ಟು ಕೆಲಸದ ಒತ್ತಡಗಳು ಇವೆ. ಬೆಳಿಗ್ಗೆ 9 ಗಂಟೆಗೆ ಕಚೇರಿಗೆ ಬಂದರೆ ರಾತ್ರಿ 8 ಗಂಟೆಯಾದರೂ ಕೆಲಸ ಮುಗಿಯುವುದಿಲ್ಲ ಎಂದರು. ಇದಕ್ಕೆ ಎಲ್ಲ ತಾಲ್ಲೂಕಿನ ಇ.ಒಗಳು ದನಿಗೂಡಿಸಿದರು. ಆದ್ಯತೆಯ ಮೇರೆಗೆ ಕಾರ್ಯನಿರ್ವಹಿಸಬೇಕು ಎಂದು ಹೇಳುವ ಮೂಲಕ ಸಿಇಒ ಶಿವಶಂಕರ್ ಚರ್ಚೆಗೆ ತೆರೆ ಎಳೆದರು.

ಅಂಗನವಾಡಿ ಕಟ್ಟಡಗಳ ನಿರ್ವಹಣೆಗೆ ₹ 1.20 ಕೋಟಿ ಬಿಡುಗಡೆಯಾಗಿದ್ದರೂ, ಕಾಮಗಾರಿ ಆರಂಭವಾಗದಿರುವುದಕ್ಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯಿಮಾ ಸುಲ್ತಾನ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಹಾಜರಿದ್ದರು.

ಕುಡಿಯುವ ನೀರಿನ ಸಮಸ್ಯೆ
ಮೈಸೂರು ತಾಲ್ಲೂಕಿನ 9, ನಂಜನಗೂಡು ತಾಲ್ಲೂಕಿನ 8 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತಿದೆಯೋ ಅಲ್ಲೆಲ್ಲಾ ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದೆ. ಸದ್ಯ, ನೀಡಿರುವ ₹ 84.55 ಕೋಟಿ ಮೊತ್ತದಲ್ಲಿ ಈವರೆಗೆ ₹ 79.44 ಕೋಟಿಯಷ್ಟು ಹಣವನ್ನು ಇದಕ್ಕಾಗಿ ವಿನಿಯೋಗಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಮಾಹಿತಿ ನೀಡಿದರು.

ಎಪಿಎಲ್‌ಗೆ ಅರ್ಜಿ ಆಹ್ವಾನ
ಜ. 9ರಿಂದ ಆದ್ಯತೇತರ (ಎಪಿಎಲ್) ಪಡಿತರ ಚೀಟಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಂತರ್ಜಾಲದ ಮೂಲಕ ಅತ್ಯಂತ ಸರಳವಾಗಿ ಅರ್ಜಿ ತುಂಬಿ, ಅಲ್ಲಿಯೇ ತಾತ್ಕಾಲಿಕ ಪಡಿತರ ಚೀಟಿಯನ್ನು ಪ್ರಿಂಟ್ ತೆಗೆದುಕೊಳ್ಳಬಹುದು. 15 ದಿನದಲ್ಲಿ ಮೂಲಪ್ರತಿ ಅಂಚೆ ಮೂಲಕ ಮನೆಗೆ ಬರುತ್ತದೆ. ಇದಕ್ಕೆ ಆಧಾರ ಸಂಖ್ಯೆ ಜತೆ ಮೊಬೈಲ್ ಸಂಖ್ಯೆ ಜೋಡಣೆಯಾಗುವುದು ಕಡ್ಡಾಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ತಿಳಿಸಿದರು.

ಜಿಲ್ಲೆಯಲ್ಲಿ 30 ಲಕ್ಷ ಕುಟುಂಬದಲ್ಲಿ 24 ಲಕ್ಷ ಕುಟುಂಬಗಳು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದವು. ಆಧಾರ ಜೋಡಣೆ ಕಡ್ಡಾಯ ಮಾಡಿದ ಮೇಲೆ ಇದೀಗ ಬಿಪಿಎಲ್ ಪಡಿತರ ಚೀಟಿದಾರರ ಸಂಖ್ಯೆ 18 ಲಕ್ಷಕ್ಕೆ ಇಳಿದಿದೆ. 60ರಿಂದ 70 ಸಾವಿರ ಕ್ವಿಂಟಲ್ ಆಹಾರ ಧಾನ್ಯ ಇದರಿಂದ ಉಳಿದಿದೆ. ಬಿಪಿಎಲ್ ಪಡಿತರ ಚೀಟಿಗೆ ಜ. 20ರಿಂದ ಅರ್ಜಿ ಸ್ವೀಕಾರ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT