ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕಿನಲ್ಲಿ ಮುಂದುವರಿದ ಕಾಂಗ್ರೆಸ್‌ ಪಾರಮ್ಯ

ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ; ಗದುಗಿನಲ್ಲಿ 11 ಸ್ಥಾನಗಳಲ್ಲಿ ಗೆಲುವು, ಜಿಲ್ಲೆಯಾದ್ಯಂತ ವಿಜಯೋತ್ಸವ
Last Updated 12 ಜನವರಿ 2017, 8:50 IST
ಅಕ್ಷರ ಗಾತ್ರ
ಗದಗ: ಜಿಲ್ಲೆಯ ಐದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) 70 ಸ್ಥಾನಗಳ ಪೈಕಿ 61 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. 61 ಕ್ಷೇತ್ರಗಳಲ್ಲಿ  ಒಟ್ಟು 151 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಬಹುತೇಕ ಕಡೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ವಿಜಯದ ನಗೆ ಬೀರಿದ್ದಾರೆ.
 
ಜ.9ರಂದು ನಡೆದ ಚುನಾವಣೆ ಯಲ್ಲಿ ಶೇ35.55ರಷ್ಟು ಮತದಾನವಾ ಗಿತ್ತು. ಜಿಲ್ಲೆಯಾದ್ಯಂತ ಒಟ್ಟು 3,27, 769 ಮತದಾರರಲ್ಲಿ 1,14,797 ಮಂದಿ ಮತ ಚಲಾಯಿಸಿದ್ದರು. ಗದಗ ಎಪಿಎಂಸಿ ವ್ಯಾಪ್ತಿಯ ಮೂರು ಸ್ಥಾನಗಳು ಸೇರಿ ಒಟ್ಟು 9 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. 
 
ಬುಧವಾರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಯಿತು. ಮಧ್ಯಾಹ್ನ 2 ಗಂಟೆಯ ವೇಳೆಗೆ ಸ್ಪಷ್ಟ ಫಲಿತಾಂಶ ಹೊರಬಿತ್ತು. ಗದುಗಿನ ಕಳಸಾಪುರ ರಸ್ತೆಯಲ್ಲಿರುವ ಮೈಲಾರಪ್ಪ ಮೆಣಸಗಿ ಪದವಿ  ಪೂರ್ವ ಕಾಲೇಜು, ಶಿರಹಟ್ಟಿಯ ಎಫ್.ಎಂ. ಡಬಾಲಿ ಪದವಿ ಪೂರ್ವ ಮಹಾವಿದ್ಯಾಲಯ, ಮುಂಡರಗಿಯ ಹಳೇ ಕೃಷಿ ಉತ್ಪನ್ನ ಮಾರುಕಟ್ಟೆ  ಸಮಿತಿ ಕಚೇರಿ, ರೋಣ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು  ಹಾಗೂ ನರಗುಂದದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯಾಲಯದಲ್ಲಿ ಪೊಲೀಸರ ಬಿಗಿ ಭದ್ರತೆಯಲ್ಲಿ ಮತ ಎಣಿಕೆ ನಡೆ ಯಿತು. ತಮ್ಮ ಪರ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಂತೆ ಅಭಿಮಾನಿ ಗಳು ಕೇಕೆ ಹಾಕಿ ಸಂಭ್ರಮಿಸಿದರು. ಅಂತಿಮ ಫಲಿತಾಂಶ ಹೊರಬೀಳುತ್ತಿ ದ್ದಂತೆ ಮತಎಣಿಕೆ ಕೇಂದ್ರಗಳ ಎದುರು, ಅಭ್ಯರ್ಥಿಗಳನ್ನು ಹೆಗಲಮೇಲೆ ಹೊತ್ತುಕೊಂಡು ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು.
 
ಮತ ಎಣಿಕೆ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು.  ಯಾವುದೇ ಕೇಂದ್ರದಲ್ಲಿ ಗೊಂದಲ ಉಂಟಾಗಿಲ್ಲ. ಎಪಿಎಂಸಿ ಚುನಾವಣೆಗಾಗಿ 1889 ಅಧಿಕಾರಿಗಳಿಗೆ ತರಬೇತಿ ನೀಡಿ ನಿಯೋಜಿಸಲಾಗಿತ್ತು ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಗದಗ ತಹಶೀಲ್ದಾರ್‌ ಎಂ.ಬಿ ಬಿರಾದರ ಪತ್ರಿಕೆಗೆ ತಿಳಿಸಿದರು.
 
ಜಿಲ್ಲೆಯ ಐದು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಲಾ 11 ಕೃಷಿಕರ ಕ್ಷೇತ್ರ ಅಲ್ಲದೇ ವರ್ತಕರ , ಕೃಷಿ ಉತ್ಪನ್ನ ಮಾರಾಟ, ಕೃಷಿ ಹುಟ್ಟುವಳಿ ಸಂಸ್ಕರಣ ಸಂಘಗಳ ತಲಾ ಓರ್ವ ಸದಸ್ಯರಂತೆ ಒಟ್ಟು 14 ಸದಸ್ಯರು ಪ್ರತಿ ಕೃಷಿ ಉತ್ಪನ್ನ ಮಾರಾಟ ಕ್ಷೇತ್ರಗಳಿಂದ ಆಯ್ಕೆಯಾಗು ತ್ತಾರೆ. 15 ದಿನಗಳ ಒಳಗಾಗಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
 
ಕಾಂಗ್ರೆಸ್ಸಿಗೆ  11 ಸ್ಥಾನ: ನಿರೀಕ್ಷೆಯಂತೆ  ಗದಗ ಎಪಿಎಂಸಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬೆಂಬ ಲಿತ ಅಭ್ಯರ್ಥಿಗಳು ಮೇಲುಗೈ ಸಾಧಿ ಸಿದರು. ಒಟ್ಟು 14 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 11 ಕ್ಷೇತ್ರಗಳಲ್ಲಿ ಗೆಲುವು ಕಂಡರು. 3 ಕ್ಷೇತ್ರಗಳಲ್ಲಿ  ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ  ಗಳಿಸಿದರು.
 
ಕಳೆದ ಒಂದು ದಶಕದಿಂದ  ಗದಗ ಎಪಿಎಂಸಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಳ ಹಿಡಿತದಲ್ಲೇ ಇದೆ. ಡಿ.ಆರ್. ಪಾಟೀಲ ಅವರೇ ಅಧ್ಯಕ್ಷರಾಗಿ ಮುಂದು ವರಿದಿದ್ದರು. ಎಪಿಎಂಸಿ ಚುನಾವಣೆ ಕಾಂಗ್ರೆಸ್‌ಗೆ ಪ್ರತಿಷ್ಠೆಯ ವಿಷಯವಾಗಿತ್ತು. ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕೂಡ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿತ್ತು. ಉಭಯ ಪಕ್ಷಗಳಿಗೆ ಪ್ರಸಕ್ತ ಎಪಿಎಂಸಿ ಚುನಾವಣೆ ಪಕ್ಷ ಸಂಘಟನೆ ತಾಲೀಮು ಕೂಡ ಆಗಿತ್ತು.
 
ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ ಅವರ ಸ್ವಕ್ಷೇತ್ರ ಸೊರಟೂರಿ ನಲ್ಲಿಯೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋಲು ಕಂಡಿದ್ದಾರೆ. ಸೊರಟೂರು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಪ್ರೇಮಾ ಹೊಸಮಠ ತಮ್ಮ ಸಮೀಪದ ಪ್ರತಿಸ್ಪರ್ಧಿ ಗಿಂತ 44 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಹಾತಲಗೇರಿ ಮತಕ್ಷೇತ್ರ ದಲ್ಲಿ ವಿಜಯಲಕ್ಷ್ಮಿ ಅಣ್ಣಿಗೇರಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ -729 ಮತಗಳ ಅಂತರದೊಂದಿಗೆ ಗೆಲುವಿನ ನಗೆ ಬೀರಿದರು. ವರ್ತಕರ ಕ್ಷೇತ್ರದಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಗೆಲುವು ಒಲಿಯಿತು. 
 
ಗದಗ ಎಪಿಎಂಸಿ ಕ್ಷೇತ್ರ ವ್ಯಾಪ್ತಿಯಲ್ಲಿ 72,584 ಮತದಾರರಿದ್ದರು. ಇವರಲ್ಲಿ 25,742 ಮಂದಿ ಮತ ಚಲಾಯಿಸಿದ್ದು, ಶೇ 35.47ರಷ್ಟು ಮತದಾನವಾಗಿತ್ತು. 481 ಮತಗಳು ತಿರಸ್ಕೃತಗೊಂಡಿವೆ. 
 
ಐವರ ಅಮಾನತು
ಗದಗ: ಮತಪತ್ರ ಕಳ್ಳತನ ಹಾಗೂ ಮದ್ಯಪಾನ ಪ್ರಕರಣದ ಹಿನ್ನೆಲೆಯಲ್ಲಿ ಮುಂಡರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆ ಕಾರ್ಯಕ್ಕೆ ನಿಯು ಕ್ತರಾಗಿದ್ದ ಐವರು  ಅಧಿಕಾರಿಗಳನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ, ಗದಗ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಆದೇಶ ದಂತೆ ಜ.11ರಿಂದ ಅಮಾನತ್ತಿನಲ್ಲಿರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ರುದ್ರಪ್ಪ ಆದೇಶ ಹೊರಡಿಸಿದ್ದಾರೆ. 
 
ಮುಂಡರಗಿ ತಾಲ್ಲೂಕಿನ ಬಿದರಳ್ಳಿ ಸರ್ಕಾರಿ ಪ್ರೌಢಶಾಲೆಯ ರಾಜೇಶ. ಆರ್. ಅಥಣಿ, ಕಕ್ಕೂರ ತಾಂಡಾ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಆರ.ಸಿ. ಹೂವಣ್ಣವರ, ಶಿಂಗಟಾಲೂರ ಶಾಲೆಯ ಮುಖ್ಯಶಿಕ್ಷಕ ಹೆಚ್.ಎನ್.ಹೊಂಬಳ,  ಬೀಡನಾಳ ಶಾಲೆಯ ಹೆಚ್.ಟಿ.ವಡ್ಡರ, ಹಾಗೂ  ಮುಂಡವಾಡ ಸರ್ಕಾರಿ  ಶಾಲೆ ಈರಣ್ಣ ಯ.ಸಾಳೇಕರ ಅವರು ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದ ಹಿನ್ನಲೆಯಲ್ಲಿ  ಅಮಾನತ್ತು ಮಾಡಲಾ ಗಿದೆ ಎಂದು ಡಿಡಿಪಿಐ  ತಿಳಿಸಿದ್ದಾರೆ. 
ಮತದಾನದ ಹಿಂದಿನ ದಿನ ಜ.8ರ ರಾತ್ರಿ ಬಿದರಳ್ಳಿ ಮತಗಟ್ಟೆ ಸಂಖ್ಯೆ 51ರಲ್ಲಿ 200 ಮತಪತ್ರಗಳು ಕಳ್ಳತನವಾಗಿದ್ದವು. 
 
***
ಮತಪತ್ರದಲ್ಲಿದ್ದ ಚಿಹ್ನೆ ಕತ್ತರಿಸಿದ ಭೂಪ..
ಗದಗ ಎಪಿಎಂಸಿ ವ್ಯಾಪ್ತಿಯ ವರ್ತಕರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರ ಪರವಾಗಿ ಮತ ಚಲಾಯಿಸಿದ ವ್ಯಕ್ತಿಯೊಬ್ಬರು, ಮತಪತ್ರದಲ್ಲಿ ಅಭ್ಯರ್ಥಿಯ ಹೆಸರಿನ ಮುಂದಿರುತ್ತಿದ್ದ ಗುರುತಿನ ಮೇಲೆ ಮುದ್ರೆ ಒತ್ತಿ, ಅದನ್ಉ ಮತಪೆಟ್ಟಿಗೆಗೆ ಹಾಕುವ ಬದಲು, ಮತಪತ್ರದಲ್ಲಿದ್ದ ಅಭ್ಯರ್ಥಿಯ ಗುರುತಿನ ಚಿಹ್ನೆಯನ್ನಷ್ಟೇ ಕತ್ತರಿಸಿ ತೆಗೆದು, ಅದನ್ನು ನೀಟಾಗಿ ಮಡಚಿ ಮತಪೆಟ್ಟಿಗೆಗೆ ಹಾಕಿ ಅಭಿಮಾನ ಮೆರೆದಿದ್ದ. ಆದರೆ, ಕತ್ತರಿಸಿದ ತೆಗೆದ ಗುರುತಿನ ಚಿಹ್ನೆಯ ಮೇಲೆ ಕನಿಷ್ಠ ಮುದ್ರೆ ಒತ್ತುವುದನ್ನೂ ಮರೆತಿದ್ದ.
 
ಹೀಗಾಗಿ ಮತ ತಿರಸ್ಕೃತವಾಯಿತು. ಮತ ಎಣಿಕೆ ಸಂದರ್ಭದಲ್ಲಿ ತಿರಸ್ಕೃತ ಮತಗಳನ್ನು ಪ್ರತ್ಯೇಕಿಸುವಾಗ ಇದು ಗಮನಕ್ಕೆ ಬಂತು. ಮತದಾನದ ದಿನ ಹಿರೇಹಂದಿಗೋಳದ ಮತಕೇಂದ್ರವೊಂದರಲ್ಲಿ ಮತದಾನ ಮಾಡಿದ ಮತದಾರರೊಬ್ಬರು, ಬೆರಳಿಗೆ ಶಾಹಿ ಹಾಕಿಸಿಕೊಳ್ಳಲು ನಿರಾಕರಿಸಿದರು. ಶಾಹಿ ಹಾಕಿದರೆ ಚರ್ಮರೋಗ ಬರುತ್ತದೆ ಎಂದು ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು.ಇಂತಹ ಸ್ವಾರಸ್ಯಕರ ಘಟನೆಗಳಿಗೂ ಪ್ರಸಕ್ತ ಸಾಲಿನ ಎಪಿಎಂಸಿ ಚುನಾವಣೆ ಸಾಕ್ಷಿಯಾಯಿತು.
 
***
ಮತ ಎಣಿಕೆ ಅತ್ಯಂತ ವ್ಯವಸ್ಥಿತ ವಾಗಿ ನಡೆಯಿತು. ಯಾವುದೇ ಕೇಂದ್ರದಲ್ಲಿ ಗೊಂದಲ ಉಂಟಾಗಿಲ್ಲ. ಎಪಿಎಂಸಿ ಚುನಾವಣೆಗಾಗಿ 1889 ಅಧಿಕಾರಿಗಳಿಗೆ ತರಬೇತಿ ನೀಡಲಾಗಿತ್ತು.
-ಎಂ.ಬಿ ಬಿರಾದಾರ
ಚುನಾವಣಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT