ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಲ್ಲೂರು ಜಾತ್ರಾ ಮಹೋತ್ಸವ ಇಂದಿನಿಂದ

ಐದು ದಿನಗಳ ಜಾತ್ರೆ; ಗುರುವಾರ ರಾತ್ರಿ ಚಂದ್ರಮಂಡಲೋತ್ಸವ ಆಚರಣೆಗೆ ಗ್ರಾಮ ಸಜ್ಜು
Last Updated 12 ಜನವರಿ 2017, 8:50 IST
ಅಕ್ಷರ ಗಾತ್ರ

ಹನೂರು:  ಐದು ದಿನ ನಡೆಯುವ ಸಿದ್ದಪ್ಪಾಜಿ ಜಾತ್ರೆಗೆ ಚಿಕ್ಕಲ್ಲೂರು ಸಜ್ಜುಗೊಂಡಿದೆ. ಜ. 12ರಂದು ‘ಚಂದ್ರಮಂಡಲ’ದ ಮೂಲಕ  ಚಿಕ್ಕಲ್ಲೂರು ಜಾತ್ರೆ ಆರಂಭವಾಗಲಿದೆ
ಸುಗ್ಗಿ ಮುಗಿದು, ದವಸಧಾನ್ಯಗಳನ್ನು ತುಂಬಿಕೊಳ್ಳುವ ಕೃಷಿ ಸಮುದಾಯಗಳ ಸಮೃದ್ಧಿಯ ಸಂಕೇತವಾಗಿ ಈ ಚಂದ್ರ ಮಂಡಲೋತ್ಸವ ಆಚರಿಸಲಾಗುತ್ತದೆ.

ಮೊದಲ ದಿನ ಚಂದ್ರಮಂಡ ಲೋತ್ಸವ ಆಚರಣೆ ನಡೆಯಲಿದೆ. ತೆಳ್ಳನೂರು, ಕೊತ್ತನೂರು, ಬಾಣೂರು, ಬಾಳಗುಣಸೆ, ಇರಿದಾಳು,ಇಕ್ಕಡಹಳ್ಳಿ, ಸುಂಡ್ರಳ್ಳಿ ಗ್ರಾಮದ ಪಕ್ಕ ಚಿಕ್ಕಳ್ಳಿ ಗ್ರಾಮವ ನಾಳೆ ಚಿಕ್ಕಲ್ಲೂರು ಮಾಡ್ತೀನಿ, ಅಲ್ಲಿ ನಿನ್ನ ಚಿಕ್ಕಲ್ಲೂರಯ್ಯ ಅಂತ ನಾಮಕರಣ ಮಾಡುತ್ತೀನಿ....

ಇದು  ಮಂಟೆಸ್ವಾಮಿ ಕಾವ್ಯದಲ್ಲಿ  ಸಿದ್ದಪ್ಪಾಜಿಯನ್ನು ಕುರಿತು  ಮಂಟೆಸ್ವಾಮಿ ಹೇಳುವ ಮಾತುಗಳಿವು.  ಸಿದ್ದಪ್ಪಾಜಿ ಹಲಗೂರು ಕಬ್ಬಿಣದ  ಭಿಕ್ಷೆಯ ನಂತರ ಏಳು ಊರುಗಳ ಒಕ್ಕಲು ಪಡೆದು ಚಿಕ್ಕಲ್ಲೂರು ಮಾಡಿದ ಕಾರಣ  ಸುತ್ತ ಏಳು ಊರಿನ ಜನ ಒಟ್ಟಾಗಿ ಸೇರಿ 5 ದಿನಗಳ ಕಾಲ ಸಡಗರ ದಿಂದ ಚಿಕ್ಕಲ್ಲೂರು ಜಾತ್ರೆ ಮಾಡುತ್ತಾರೆ. 

ಐದು ದಿನಗಳ ಜಾತ್ರೆಯಲ್ಲಿ ಚಂದ್ರ ಮಂಡಲೋತ್ಸವ ಅತ್ಯಂತ ಪ್ರಮುಖ ಆಕರ್ಷಣೆ. ಇದನ್ನು ಚಿಕ್ಕಲ್ಲೂರು ಸುತ್ತಮುತ್ತಲಿನ ಬಾಣೂರು, ಬಾಳ ಗುಣಸೆ, ತೆಳ್ಳನೂರು, ಇಕ್ಕಡಹಳ್ಳಿ ಏಳು ಊರುಗಳ ವಿವಿಧ ಸಮುದಾಯಗಳು ಒಟ್ಟಾಗಿ ಸೇರಿ ಚಂದ್ರ ಮಂಡಲೋತ್ಸವ ಆಚರಿಸುತ್ತಾರೆ. 

ಚಂದ್ರಮಂಡಲ: ಬಿದಿರಿನ ಕಿರೀಟ, ತೇರಿನ, ಜ್ಯೋತಿಯ ಆಕೃತಿಯನ್ನು ಎಲ್ಲಾ ಸೇರಿ ನಿರ್ಮಿಸುತ್ತಾರೆ.  ತೆಳ್ಳನೂರು ಹಾಗೂ ಸುಂಡ್ರಳ್ಳಿ ಗ್ರಾಮದ ಜನರು ಬೊಂಬು, ಬಿದಿರು, ಅಚ್ಚೆ ನೀಡಿ ದರೆ, ಇಕ್ಕಡಹಳ್ಳಿ ಹಾಗೂ ಇರಿದಾಳು ಗ್ರಾಮಸ್ಥರು ಎಣ್ಣೆ, ಪಂಜು, ಬಾಣೂರು ಹಾಗೂ ಬಾಳಗುಣಸೆ ಗ್ರಾಮದವರು ಮಡಿ ಬಟ್ಟೆಯನ್ನು ನೀಡುತ್ತಾರೆ.

ಬಿದಿರು, ಅಚ್ಚೆ ನಾರುಗಳಿಂದ ಕಟ್ಟುವ ಚಂದ್ರಮಂಡಲಕ್ಕೆ ಭಕ್ತರು ಕೊಡುವ ಪಂಜು, ಎಣ್ಣೆ, ತುಪ್ಪ, ಹೂವು, ಹೊಂಬಾಳೆ ಹಾಕಿ ಸಿಂಗರಿಸಲಾಗುತ್ತದೆ. ಮಧ್ಯರಾತ್ರಿ ವೇಳೆಗೆ ಬೊಪ್ಪೆಗೌಡನ ಪುರದ ಧರೆಗೆ ದೊಡ್ಡವರ ಸಂಸ್ಥಾನ ಮಠದ ಸ್ವಾಮಿ ಗದ್ದಿಗೆ ಹಾಗೂ ಚಂದ್ರಮಂಡಲಕ್ಕೆ ಪೂಜೆ ಮಾಡಿ ಆಕೃತಿಗೆ ಬೆಂಕಿ ಹಚ್ಚಲಾಗುತ್ತದೆ. ಇದೇ ಚಂದ್ರ ಮಂಡಲ ಸೇವೆ.

ಈ ಚಂದ್ರಮಂಡಲಕ್ಕೆ ಭಕ್ತರು ಹಣ್ಣು, ಜವನ, ದವಸಧಾನ್ಯ, ನಗನಾಣ್ಯಗಳನ್ನು ಎಸೆದು ಹರಕೆ ಒಪ್ಪಿಸುತ್ತಾರೆ. ಸುಟ್ಟು ಬೂದಿಯಾಗುವ ಚಂದ್ರ ಮಂಡಲದ ಬೂದಿಗೆ ಎಣ್ಣೆ, ಕರ್ಪೂರ ಹಾಕಿ  ಮಟ್ಟಿ ಕಪ್ಪು ಮಾಡಿ ಹಣೆಗೆ ಹಚ್ಚಿಕೊಳ್ಳುತ್ತಾರೆ. ಇದೇ ಇಂದು ಮಂಟೆಸ್ವಾಮಿ, ಸಿದ್ದಪ್ಪಾಜಿ ಪರಂಪರೆ ಕಪ್ಪು ದೂಳ್ತ ಎಂದು ಪ್ರಸಿದ್ಧವಾಗಿದೆ.

ಕತ್ತಲ ರಾಜ್ಯದಲ್ಲಿ ಜನರನ್ನು ಜಾಗೃತಿಗೊಳಿಸಿ, ಬೆಳಕಾದ ಹಿನ್ನೆಲೆಯನ್ನು ಚಂದ್ರಮಂಡಲ,  ಪರಂಜ್ಯೋತಿ ಎಂದು ಕರೆಯಲಾಗುತ್ತದೆ. ಚಂದ್ರಮಂಡಲ ಕಟ್ಟುವ ಸೇವೆ ಶಾಗ್ಯ ಗ್ರಾಮದವರಿಗೆ ಬಾದ್ಯ: ಚಂದ್ರಮಂಡಲ ಕಟ್ಟುವ ಅವಕಾಶ ಶಾಗ್ಯ ಗ್ರಾಮದ ಆದಿ ಜಾಂಬವರಿಗೆ ಬಾದ್ಯಪಟ್ಟದ್ದಾಗಿದೆ. 

ವಿಶೇಷ ಎಂದರೆ  ಚಂದ್ರಮಂಡಲ ಉತ್ಸವ ದಿಂದಿಡಿದು, ಕೊನೆಯ ದಿನ ವಾದ ಮುತ್ತತ್ತಿ ರಾಯನಸೇವೆವರೆಗೂ ಈ ಗ್ರಾಮದ ಜನರು ಜಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಗಮನಾರ್ಹ.  ಗ್ರಾಮದ ಗುರುಮನೆ ಕುಟುಂಬದವರು ಜಾತ್ರೆಗೆ ಚಂದ್ರ ಮಂಡಲ ಕಟ್ಟುತ್ತಾ ಬಂದಿದ್ದಾರೆ. ನನ್ನ ಜತೆಗೆ ಗುರು ಮನೆಯ ಇನ್ನು ಐದಾರು ಜನರು ಚಂದ್ರ ಮಂಡಲ ಕಟ್ಟಲು ಸಹಕಾರ ನೀಡುತ್ತಾರೆ ಎನ್ನು ತ್ತಾರೆ ಗುರುಮನೆ ಮುಖ್ಯಸ್ಥ  ರಾಚಪ್ಪ.
– ಬಿ. ಬಸವರಾಜು

ಚಿಕ್ಕಲ್ಲೂರು: ಪ್ರಾಣಿ ಬಲಿ ನಿಷೇಧಕ್ಕೆ ಆಗ್ರಹ

ಚಾಮರಾಜನಗರ: ‘ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಮತ್ತು ಬಿಳಿಗಿರಿರಂಗನಬೆಟ್ಟದಲ್ಲಿ ದೇವರ ಹೆಸರಿನಡಿ ಪ್ರಾಣಿ ಬಲಿ ನಡೆಯುತ್ತಿದೆ. ಇದನ್ನು ನಿಷೇಧಿಸಬೇಕು’ ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಆಗ್ರಹಿಸಿದರು.

‘ಜಾತ್ರೆ ಸಂದರ್ಭದಲ್ಲಿ ವ್ಯಾಪಕ ವಾಗಿ ಪ್ರಾಣಿ ಬಲಿ ನಡೆಯುತ್ತದೆ. ಇದನ್ನು ತಡೆಗಟ್ಟಲು ಅಹಿಂಸಾ ಪ್ರಾಣಿದಯಾ ಸಂದೇಶ ಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚಿಕ್ಕಲ್ಲೂರು ಸಿದ್ದಪ್ಪಾಜಿ ಮತ್ತು ಬಿಳಿಗಿರಿ ರಂಗನಾಥಸ್ವಾಮಿ ಜಾತ್ರೆ ಯಲ್ಲಿ ಪ್ರಾಣಿಬಲಿ ನಿಷೇಧಿಸಲು ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಣಿಬಲಿ ಪ್ರತಿಬಂಧಕ ಅಧಿನಿಯಮ 1959ರ ಅನ್ವಯ ಧಾರ್ಮಿಕ ಕ್ಷೇತ್ರಗಳ ಆವರಣದಲ್ಲಿ ಪ್ರಾಣಿಬಲಿ ನಿಷೇಧಿಸಲಾಗಿದೆ. ಆದರೆ, ಕಾಯ್ದೆ ಉಲ್ಲಂಘಿಸಿ ಹಬ್ಬ, ಹರಕೆಯ ನೆಪದಲ್ಲಿ ಜಾತ್ರೆ ವೇಳೆ ಪ್ರಾಣಿಬಲಿ ನಡೆಯುತ್ತಿದೆ ಎಂದು ದೂರಿದರು.

ಚಿಕ್ಕಲ್ಲೂರು ಹಾಗೂ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದಲ್ಲಿ ನಡೆಯುವ ಜಾತ್ರೆಯಲ್ಲಿ ಪ್ರಾಣಿಬಲಿ ತಪ್ಪಿಸಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆ ಕ್ರಮವಹಿಸ ಬೇಕು. ಇಲ್ಲವಾದರೆ ಜಿಲ್ಲಾಡಳಿತದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕದ ಸಂಚಾಲಕಿ ಸುನಾಂದದೇವಿ, ಬಸವದಳದ ಕೊಳ್ಳೇಗಾಲ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ, ಕಾರ್ಯದರ್ಶಿ ಕೆ.ಪಿ. ಶಿವಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT