ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರು ಮನೆಯಿಂದ ದೇವಿ ತೇರಿಗೆ ಹಗ್ಗ

ಬಾದಾಮಿ ಬನಶಂಕರಿ ದೇವಿ ಜಾತ್ರೆಗೆ ಮಾಡಲಗೇರಿಯಿಂದ ನಾಡಗೌಡರ ಮನೆಯಿಂದ ಬಂಡಿ
Last Updated 12 ಜನವರಿ 2017, 8:54 IST
ಅಕ್ಷರ ಗಾತ್ರ
ರೋಣ: ಉತ್ತರ ಕರ್ನಾಟಕದ ಬಹು ದೊಡ್ಡ ಜಾತ್ರೆ ಎಂದು ಪ್ರಸಿದ್ದಿ ಪಡೆದ ಬಾದಾಮಿ ಬನಶಂಕರಿ ಜಾತ್ರೆಗೂ ಗದಗ ಜಲ್ಲೆಯ ರೋಣ ತಾಲ್ಲೂಕಿನ ಮಾಡಲ ಗೇರಿ ಗ್ರಾಮಕ್ಕೂ ಅಭಿನಾಭವ ಸಂಬಂಧ ಇದೆ.
 
ಇದೇ 12ರಂದು ಬನದ ಹುಣ್ಣಿಮೆ ನಿಮಿತ್ತ ಜರಗುವ  ರಥೋತ್ಸವಕ್ಕೆ ಈ ತಾಯಿ ತವರು ಮನೆಯವರು ಎಂದು ಕರೆಯಿಸಿಕೊಳ್ಳುವ ಈ ಗ್ರಾಮದ ಜನರು ಹಿಗ್ಗಿನಿಂದ ಹಗ್ಗವನ್ನು ಹದಿನಾರು ಎತ್ತಿನ ಎರಡು ಹಳಿಬಂಡಿಯ ಮೂಲಕ ಬಾದಾಮಿಯ ಬನಶಂಕರಿದೇವಿಯ ರಥಕ್ಕೆ ಸಮರ್ಪನೆ ಮಾಡುವ ಮೂಲಕ ಲಕ್ಷೋಪಲಕ್ಷ ಜನರ ಮಧ್ಯದಲ್ಲಿ ಇವರು ಕೇಂದ್ರ ಬಿಂದುವಾಗಿರುತ್ತಾರೆ.
 
ಮಾಡಲಗೇರಿಯ ಆರು ಮನೆತನದ ಗೌಡರಾದ ಹಿರೇಸಕ್ಕರಗೌಡ್ರ, ಅಮಾತ್ಯ ಗೌಡ್ರ, ತಿಪ್ಪನಗೌಡ್ರ, ರಾಯನಗೌಡ್ರ, ಭೀಮನಗೌಡ (ಗೋವಿಂದಗೌಡ್ರ, ಬಾಳನಗೌಡ್ರ) ಬಾಲನಗೌಡ್ರ, ಹಿರೇ ಕೆಂಚನಗೌಡ್ರ, ಸಣ್ಣಸಕ್ಕರಗೌಡ್ರ ತೆರಿನ ಹಗ್ಗವನ್ನು ಒಯ್ಯುವ ಪ್ರಮುಖ ಮನೆತನಗಳು.
 
18ನೇ ಶತಮಾನದಿಂದ ಸಾಂಪ್ರದಾಯ: ಈ ಆರು ಮನೆತನಗಳು ಮೂರು ಮನೆತನಕ್ಕೆ ಒಂದು ಹಳಿಬಂಡಿಯಂತೆ ಒಟ್ಟು ಎರಡು ಹಳಿಬಂಡಿಯಲ್ಲಿ ತೇರಿನ ಹಗ್ಗವನ್ನು ತಗೆದುಕೊಂಡು ಹೋಗು ತ್ತಾರೆ. ಒಂದೂಂದು ಹಳಿಬಂಡಿಗೆ 16 ಎತ್ತುಗಳನ್ನು ಹೂಡುತ್ತಾರೆ. ಈ ಹಳಿ ಬಂಡಿ ಆರಂಭದಲ್ಲಿ ಹೂಡುವ ಎತ್ತು ಗಳು ಕಿಲಾರಿ ತಳಿಯ ಹೋರಿಗಳನ್ನು ಕುತನಿ ಜೂಲ, ತೊಗಲಿನ ಬಾಸಿಂಗ, ಹಣೀ ಕಟ್ಟು, ಗೊಂಡೆ, ಕೊಂಬನಸು, ಸೇವಂತಿಗಿ ಹೂ ಮಾದಲಾದ ವಸ್ತುಗಳಿಂದ ಶೃಂಗರಿಸಲಾಗುತ್ತದೆ. 
 
ಎರಡು ಹಳಿಬಂಡಿಗಳನ್ನು ತೆಗೆದು ಕೊಂಡು ಉತ್ಸಾಹದಿಂದ ಮಲಪ್ರಭಾ ನದಿಯನ್ನು ದಾಟುತ್ತಾ ಶ್ರದ್ದೆ ಭಕ್ತಿಯಿಂದ ತಾಯಿಯ ನಾಮವಳಿಗಳಾದ ಹದಿನಾರೆ ತ್ತಿನ ಹಳಿಬಂಡಿ ಬೇಡಿದ ಮಹೇಶ್ವರಿ ನಿನ್ನ ವಾಲಗೊ, ಮಾಡಲಗೇರಿ ನಾಡಗೌಡ್ರರಿಗೆ ವಾಸವಾದ ದೇವಿ ನಿನ್ನ ವಾಲಗೊ, ಹತ್ತಿಗಿಡದ ಸತ್ಯವ್ವ ನಿನ್ನ ವಾಲಗೊ, ಹೊಂಡ ದಂಡಿ ಪುಂಡ ಭರಮ ನಿನ್ನ ವಾಲಗೊ, ಯಂಕಚಿ ಎಳಿ ಮಾವು ಕೆದೂರ ಕರಿ ಮಾವು ಬಾ ದೇವಿ ಬಳಿ ಮಾವಿನ ತಂಪಿಗೆ ನೆಲಸಿದಂಥ ತಾಯಿ ನಿನ್ನ ವಾಲಗೊ ಎಂದು ಹೇಳುತ್ತ ಬನಶಂಕರಿ ತಾಯಿಯ ಸನ್ನಿಧಿಗೆ ತೆರಳುವವರು.
 
ಬನಶಂಕರಿದೇವಿಯ ತವರು, ಮಾಡಲಗೇರಿ ಗ್ರಾಮದ ಭಕ್ತರಿಗೆ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಗೌರವ ಇದೆ. 
 
ಬನಶಂಕರಿ ಜಾತ್ರೆಗೆ ಬರುವ ಮಾಡಲಗೇರಿ ಗ್ರಾಮದವರಿಂದ ತಲೆಪಟ್ಟಿ ತೆಗೆದುಕೊಳ್ಳುವುದಿಲ್ಲ. ಕಾಯಿ ಒಡೆಸಿದರೂ ಹಣ ಪಡೆಯುವುದಿಲ್ಲ. ಬನಶಂಕರಿ ಪೂಜಾರಿಗಳು ಮಾಡಲ ಗೇರಿ ಗೌಡರ ಮನೆತನದವರಿಗೆ ಉಲ್ಫಿ ಕೊಡುವ ಪದ್ಧತಿ ಇದೆ.            
             
ಮಾಡಲಗೇರಿ ಹಳಿಬಂಡಿ ಬನಶಂಕರಿಗೆ ಹೋಗುವ ದೃಶ್ಯವನ್ನು ಬದಾಮಿ ದಾರ್ಯಾಗ ಬರಗೂಡೇದೂ ಅದು ಏನು ಹದಿನಾರ ಎತ್ತಿನ ಹಳಿಬಂಡಿ ಬರವಾಗ ತವರವರು ಬರುವ ದಾರಿಯ ನೋಡಿ ತಾಯಿ ಬನಶಂಕರಿ ನಗೂತ್ತಾಳೋ, ಎಂದು ಜನಪದದಲ್ಲಿ ವರ್ಣಿಸಲಾಗಿದೆ. 
 
***
ಸಂಭ್ರಮದ ಹಳಿ ಬಂಡಿ ಮೆರವಣಿಗೆ 
ತೇರು ಎಳೆದ ಮೂರನೇ ದಿನಕ್ಕೆ ಮಾಡಲಗೇರಿ ಗ್ರಾಮದಲ್ಲಿ ಹಳಿಬಂಡಿ ಮೆರವಣಿಗೆ ನೋಡಲು ಸುತ್ತಲಿನ ಹಳ್ಳಿಗಳಿಂದ ಸಾವಿರಾರು ಜನ ಬರು ತ್ತಾರೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6ರವರೆಗೆ ಮೆರವಣಿಗೆ ನಡೆಯುತ್ತದೆ. ಮೆರವಣಿಗೆಯಲ್ಲಿ ಗೀಗೀ ಪದ ಲಾವಣಿ ಪದ, ಕರಡಿ ಮಜಲು, ಬ್ಯಾಂಡ್ ಸೆಟ್, ನಾಡಿನ ಪ್ರಸಿದ್ದ ರಸಮಂಜರಿ ತಂಡಗಳು ಮೊದಲಾದ ವೈಭವಪೂರ್ಣ ಕಾರ್ಯಕ್ರಮಗಳು ಪ್ರತಿ ವರ್ಷ ನಡೆಯುತ್ತದೆ.
 
ಮಾಡಲ ಗೇರಿ ಗ್ರಾಮದ ಸಮಸ್ತ ಜನರಿಂದ ನಡೆಯುವ ಇಂತಹ ವಿಶಿಷ್ಟ ಕಾರ್ಯಕ್ರಮದ ಕುರಿತು ಹಾಗೂ ಈ ಸಂಪ್ರದಾಯವನ್ನು ನಾಡಿಗೆ ಪರಿ ಚಯಿಸುವ ಅವಶ್ಯಕತೆ ಇದೆ ಎಂದು ಎರಡು ಹಳಿಬಂಡಿಯ ಎತ್ತಿನ ಸೇವೆ ಭಕ್ತರಾದ ಬಾಲನಗೌಡ ಬಾಲನ ಗೌಡ್ರ, ಭದ್ರಗೌಡ  ಹೇಳುತ್ತಾರೆ.
 
*
-ಬಸವರಾಜ ಪಟ್ಟಣಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT