ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ: ₹ 7,500 ಬೆಂಬಲ ಬೆಲೆ ನಿಗದಿಗೆ ಆಗ್ರಹ

Last Updated 12 ಜನವರಿ 2017, 9:16 IST
ಅಕ್ಷರ ಗಾತ್ರ

ಚಿತ್ತಾಪುರ: ಮಾರುಕಟ್ಟೆಯಲ್ಲಿ ತೊಗರಿ ಬೆಲೆ ತೀರಾ ಕಡಿಮೆಯಾಗಿದೆ. ರೈತರು ಬೆಲೆ ಕುಸಿತದಿಂದ ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದಾರೆ. ಪ್ರತಿ ಕ್ವಿಂಟಾಲ್‌ ತೊಗರಿಗೆ ₹ 7,500 ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು, ರೈತರು ಬುಧವಾರ ತಾಲ್ಲೂಕಿನ ಶಹಾಬಾದ ಸಮೀಪದ ಭಂಕೂರು ಕ್ರಾಸ್‌ನಲ್ಲಿ ರಸ್ತೆತಡೆ ನಡೆಸಿದರು.

ಕೇಂದ್ರ ಸರ್ಕಾರವು ದೇಶದ ರೈತರ ಹಿತಾಸಕ್ತಿಯ ವಿರುದ್ಧ ಅಗತ್ಯಕ್ಕಿಂತ ಅಧಿಕವಾಗಿ ಬೇರೆ ದೇಶಗಳಿಂದ ಬೇಳೆ ಕಾಳುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಪಾತಾಳಕ್ಕೆ ಕುಸಿದಿದೆ. ತೊಗರಿ ಬೆಳೆ ಬೆಳೆಯಲು ದುಬಾರಿ ಖರ್ಚು ಮಾಡಿರುವ ರೈತ ಸಮುದಾಯ ಬೆಲೆ ಕುಸಿತದಿಂದ ತೀವ್ರ ಆರ್ಥಿಕ ನಷ್ಟಕ್ಕೆ ಒಳಗಾಗಿದೆ. ಸರ್ಕಾರದ ರೈತ ವಿರೋಧಿ ನೀತಿಯಿಂದ ರೈತರು ತೀವ್ರ ತೊಂದರೆ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಉಳುಮೆ ಮಾಡುವಾಗ ಬೀಜ, ಗೊಬ್ಬರ, ರಸಗೊಬ್ಬರ, ಬಿತ್ತನೆ, ಎಡೆ, ಬೆಳೆ ಸಂರಕ್ಷಣೆ, ಕಟಾವು, ಸ್ವಂತ ದುಡಿಮೆ ಇತ್ಯಾದಿ ಸೇರಿದಂತೆ ಮಾಡುವ ಖರ್ಚುವೆಚ್ಚದ ಮತ್ತು ಆದಾಯದ ಕುರಿತು ಡಾ.ಸ್ವಾಮಿನಾಥನ್‌ ನೇತೃತ್ವದ ಆಯೋಗವು ನಿಖರ ಅಧ್ಯಯನ ಮಾಡಿ, ವರದಿ ಸಲ್ಲಿಸಿದೆ. ಆದರೆ ಆ ವರದಿ ಜಾರಿಗೊಳಿಸಿದ್ದಲ್ಲಿ, ದೇಶದ ದೊಡ್ಡ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬ ನೆಪವೊಡ್ಡಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ. ದೇಶದ ಅನ್ನದಾತನ ಹಿತಕ್ಕೆ ವಿರುದ್ಧವಾಗಿ ನಿಲುವು ತೆಗೆದುಕೊಂಡು ಅನ್ಯಾಯ ಮಾಡಿದೆ ಎಂದು ಅವರು ಆರೋಪಿಸಿದರು.

ಸರ್ಕಾರಗಳು ರೈತರು ಕೃಷಿಗೆ ಮಾಡುತ್ತಿರುವ ಖರ್ಚು ಕಡಿಮೆ ಮಾಡಿಸಿ ಅವರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸಿ ರೈತರ ಖರ್ಚು ಅಧಿಕಗೊಳಿಸಿ ಆದಾಯ ಕಡಿಮೆ ಮಾಡುವ ಅತೀ ಕೆಟ್ಟ ಧೋರಣೆ ಅನುಸರಿಸುತ್ತಿವೆ ಎಂದು ಅವರು ಆರೋಪಿಸಿದರು.

ಪ್ರಧಾನಿ ಮೋದಿಯವರು ದೇಶದ ದೊಡ್ಡ ದೊಡ್ಡ ಕಂಪೆನಿಗಳ ₹1.12 ಲಕ್ಷ ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ದೇಶ ವಿದೇಶಗಳ ಒಟ್ಟಾರೆ ₹7.33 ಲಕ್ಷ ಸಾವಿರ ಕೋಟಿ ತೆರಿಗೆ ಮನ್ನಾ ಮಾಡಿದ್ದಾರೆ. ಆದರೆ, ರೈತರ ಬ್ಯಾಂಕ್‌ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಗಳು ರೈತರನ್ನು ಸಂಪೂರ್ಣವಾಗಿ ಕಡೆಗಣಿ ಸುತ್ತಿವೆ ಎಂದು ದೂರಿದರು.

ರಸ್ತೆತಡೆ ಮಾಡಿದ್ದರಿಂದ ಅರ್ಧ ತಾಸಿನವರೆಗೆ ಶಹಾಬಾದ ಕಲಬುರ್ಗಿ, ಚಿತ್ತಾಪುರ, ವಾಡಿ ಮಾರ್ಗದ ವಾಹನ ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿತು. ಪ್ರತಿ ಕ್ವಿಂಟಾಲ ತೊಗರಿಗೆ ₹ 7,500 ಬೆಂಬಲ ಬೆಲೆ ನೀಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬರೆದ ಮನವಿ ಪತ್ರವನ್ನು ಉಪ ತಹಶೀಲ್ದಾರ್‌ ಮಲ್ಲಿಕಾರ್ಜುನ ಸ್ವೀಕರಿಸಿದರು.

ಮುಖಂಡರಾದ ಅಶೋಕ ಮ್ಯಾಗೇರಿ, ಸಾಯಬಣ್ಣ ಗುಡುಬಾ, ನಾಗೇಂದ್ರ ಕಂಟಿ, ಮಹಾಂತಯ್ಯ ಸ್ವಾಮಿ, ರಾಯಪ್ಪ, ಹಿರಗಪ್ಪ, ಜಗದೇವಿ ನಂದೂರ, ಈರಣ್ಣ ಗುಡೂರ, ಬಸವಂತರಾವ ಮಾನಕರ್‌, ಖಾಸೀಂ ಆಂದೋಲಾ, ಶಂಕರ ರಾಠೋಡ್‌, ಶರಣು ಮಡ್ಡಿ ಭಾಗವಹಿಸಿದ್ದರು.

ಆಳಂದ: ಪಟ್ಟಣದ ಬಸ್‌ ನಿಲ್ದಾಣದ ಎದುರು ಬುಧವಾರ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ರೈತರು ಮುಖ್ಯರಸ್ತೆ ತಡೆದು ತೊಗರಿ ಬೆಳೆ ಬೆಂಬಲ ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು
.
ಅಖಿಲ ಭಾರತ ಕಿಸಾನ ಸಭಾ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಚಿತ್ತಾಪುರ ತೊಗರಿ ಬೆಳೆಗಾರರ ಸಂಘದಿಂದ ರೈತರ ವಿವಿಧ ಬೇಡಿಕೆ ಒತ್ತಾಯಿಸಿ ಮೂರು ದಿನಗಳ ಜೀಪ್ ಜಾಥಾ ಹೋರಾಟದ ಅಂಗವಾಗಿ  ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ವಿದೇಶದಿಂದ ತೊಗರಿ ಆಮದು ಮಾಡಿಕೊಳ್ಳುವ ಕೇಂದ್ರದ ಕ್ರಮ ಖಂಡನೀಯ. ರಾಜ್ಯದ ಐದು ಜಿಲ್ಲೆಗಳಲ್ಲಿ ರೈತರು 170 ಲಕ್ಷ ಕ್ವಿಂಟಲ್‌ ತೊಗರಿ ಬೆಳೆಯುತ್ತಾರೆ. ಹೆಚ್ಚಿನ ಅರಿವು, ನೆರವು ನೀಡಿದರೆ ಅಗತ್ಯ ಪೂರೈಕೆ ತೊಗರಿ ಬೆಳೆಯುವ ಸಾಮರ್ಥ್ಯ ರೈತರಿಗೆ ಇದೆ ಎಂದರು.

ಎಮ್‌.ಎಸ್.ಸ್ವಾಮಿನಾಥನ್ ಅವರ ಶಿಫಾರಸು ವರದಿ ಕೇಂದ್ರ ಸರ್ಕಾರ ಜಾರಿಗೆ ತರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗೆ ರೈತರು ಸಂಕಟ ಪಡುತ್ತಿದ್ದಾರೆ. ತೊಗರಿ ಬೋರ್ಡ್‌ ಸ್ಥಾಪನೆಯಿಂದ ಈ ಭಾಗದ ತೊಗರಿ ಬೆಳೆಗಾರರ ಸಮಸ್ಯೆ ಬಗೆಹರಿ ಯುತ್ತಿಲ್ಲ ಎಂದರು. ಮುಖಂಡ ಮೌಲಾ ಮುಲ್ಲಾ ಮಾತನಾಡಿ, ಜಿಲ್ಲೆಯ ಪ್ರಮುಖ ಬೆಳೆಯಾದ ತೊಗರಿಗೆ ಕನಿಷ್ಠ ₹ 7500 ಬೆಂಬಲ ಬೆಲೆ ನೀಡಬೇಕು, ಎಲ್ಲ ರೈತರ ತೊಗರಿ ಖರೀದಿಗಾಗಿ ಗ್ರಾಪಂ ಮಟ್ಟದಲ್ಲಿ ಕೇಂದ್ರ ತೆರೆಯಲು ಒತ್ತಾಯಿಸಿದರು.

ತಾಲ್ಲೂಕು ಅಧ್ಯಕ್ಷ ಪ್ರಕಾಶ ಮಾನೆ, ಮುಖಂಡ ಭೀಮಾಶಂಕರ ಮಾಡಿ ಯಾಳ ಮಾತನಾಡಿದರು. ಮುಖಂಡ ರಾದ ಪಾಂಡುರಂಗ ಮಾವಿನಕರ, ದತ್ತಾತ್ರೇಯ ಕಬಾಡೆ, ಫಕ್ರೋದ್ದಿನ್ ಗೋಳಾ, ಹಣಮಂತ ಜಿರಹಳ್ಳಿ, ವಿಠಲ ಬಿಲಗುಂದಿ, ಸಿರಾಜ್ ಖಾಜಿ, ಅಪ್ಪಾರಾಯ ವಾಡಿ, ರಾಜಶೇಖರ ಶಿವಮೂರ್ತಿ ಇದ್ದರು. ಪ್ರತಿಭಟನೆಯಿಂದ ಕೆಲ ಹೊತ್ತು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಯಿತು. ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು ಪ್ರತಿಭಟನಾಕಾರರಿಂದ ಮನವಿಪತ್ರ ಸ್ವೀಕರಿಸಿದರು.

ಪರಿಹಾರ ಧನಕ್ಕೆ ರೈತರ ಒತ್ತಾಯ
ಚಿಂಚೋಳಿ: ತೊಗರಿಗೆ ಬೆಂಬಲ ಬೆಲೆ ಹೆಚ್ಚಿಸಿ ಪ್ರತಿ ಕ್ವಿಂಟಲ್‌ಗೆ  ₹7500 ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಾಂತ ರೈತ ಸಂಘ ತಾಲ್ಲೂಕಿನ ಹೊಡೇಬೀರನಹಳ್ಳಿ ಕ್ರಾಸ್‌ನಲ್ಲಿ ಬುಧವಾರ ರಸ್ತೆತಡೆ ನಡೆಸಿದರು.

ಹೊಡೇಬೀರನಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಸಿದ್ದಪ್ಪ ರಾಯಪ್ಪ ಪೂಜಾರಿ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಮಂಜೂರು ಮಾಡಬೇಕು, 
ರೈತರ ಸಾಲ ಮನ್ನಾ ಮಾಡಬೇಕು, ತೊಗರಿ ಮಂಡಳಿಯನ್ನು ಬೇಳೆಕಾಳು ಅಭಿವೃದ್ಧಿ ಮಂಡಳಿಯಾಗಿ ಪುನರ್‌ ರಚಿಸಬೇಕು ಎಂಬ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗಯ್ಯ ಯಂಪಳ್ಳಿ, ಪರಮೇಶ್ವರ ಕಾಂತಾ, ತುಳಜಪ್ಪ ಹೊಡೇಬೀರನಹಳ್ಳಿ, ಖಾಜಾ ಪಟೇಲ್‌, ಶಬ್ಬೀರಮಿಯಾ, ಶರಣಪ್ಪ ಪೂಜಾರಿ, ಶಿವರಾಯ ಪೂಜಾರಿ, ಜಾಫರಖಾನ್‌ ಮಿರಿಯಾಣ, ಶರಣಸಿದ್ದಪ್ಪ ಪೂಜಾರಿ, ಹಣಮಂತರೆಡ್ಡಿ ಕೊಳ್ಳೂರು ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT