ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ.ಕ. ಸಮಸ್ಯೆ ಚರ್ಚೆ: ಶೋಭಾ

Last Updated 12 ಜನವರಿ 2017, 9:26 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಹಾರಕೂಡ ಕಲ್ಯಾಣ ಮಂಟಪದಲ್ಲಿ ಜನವರಿ 21 ಮತ್ತು 22 ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಸಚಿವರಾದ ನಿರ್ಮಲಾ ಸೀತಾರಾಮನ್, ಅನಂತಕುಮಾರ್‌, ಡಿ.ವಿ. ಸದಾನಂದಗೌಡ ಹಾಗೂ ರಮೇಶ ಜಿಗಜಿಣಗಿ ಮತ್ತು ರಾಜ್ಯ ಬಿಜೆಪಿ ಎಲ್ಲ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಪ್ರಮುಖವಾಗಿ ಹೈದರಾಬಾದ್‌ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಅಲ್ಲದೆ, ಬರ ಮತ್ತು ಅತಿವೃಷ್ಟಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳು, ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ ಹಾಗೂ ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಗಳು ಮತ್ತು ನೋಟು ರದ್ದು ಕ್ರಮ ಬಗೆಗೆ ಚರ್ಚಿಸಿ ಈ ಬಗ್ಗೆ ಸಭೆಯಲ್ಲಿ ನಿರ್ಣಯಗಳನ್ನು ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಬರ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಬೆಳೆಹಾನಿ ಪರಿಹಾರ ವಿತರಣೆ ಸರಿಯಾಗಿಲ್ಲ. ಎಲ್ಲಿ ಗೋಶಾಲೆಗಳನ್ನು ಆರಂಭಿಸಬೇಕು. ಕೊಳವೆಬಾವಿ ಕೊರೆಸುವ ಬಗ್ಗೆ ಏನನ್ನು ಸರ್ಕಾರ ತಯಾರಿ ಮಾಡಿಕೊಂಡಿಲ್ಲ. ಆಡಳಿತವು ಸಂಪೂರ್ಣ ಕುಸಿದಿದೆ ಎಂದು ಅವರು ಆರೋಪಿಸಿದರು.

ಸರ್ಕಾರವು ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದೆ. ರಾಜ್ಯವು ಮನವಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ₹1,780 ಕೋಟಿ ಪರಿಹಾರ ಬಿಡುಗಡೆ ಮಾಡಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎನ್ನುವುದಕ್ಕೆ ಡಿಸೆಂಬರ್‌ 31 ರಂದು ನಡೆದ ಘಟನೆಯೊಂದು ಸಾಕ್ಷಿ. ಮಹಿಳೆಯರಿಗೆ ಬೆಂಗಳೂರು ಸುರಕ್ಷಿತವಲ್ಲ ಎನ್ನುವುದು ಜಗತ್ತಿನಾದ್ಯಂತ ಪ್ರಚಾರವಾಗಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಕುಖ್ಯಾತಿ ಪಡೆಯುತ್ತಿದೆ. ಯುವತಿಯರು ಧರಿಸುವ ಉಡುಗೆಗಳಿಂದ ಈ ಘಟನೆಗಳಾಗುತ್ತವೆ ಎಂದು ಗೃಹ ಸಚಿವರು ನೀಡಿದ ಬೇಜವಾಬ್ದಾರಿ ಹೇಳಿಕೆಯು ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರಚೋದನೆ ನೀಡುವಂತಿದೆ ಎಂದು ಅವರು ತಿಳಿಸಿದರು.

ಉದ್ಯೋಗ ಕ್ಷೀಣ: ಹಳೆ ನೋಟುಗಳನ್ನು ರದ್ದುಪಡಿಸಿದ ಕ್ರಮದಿಂದ ದೇಶದಲ್ಲಿ ಉದ್ಯೋಗ ಮತ್ತು ಉದ್ಯಮದಲ್ಲಿ ಸ್ವಲ್ಪ ತೊಂದರೆಯಾಗಿದೆ. ಚಿಲ್ಲರೆ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ₹500 ನೋಟುಗಳು ಎಲ್ಲ ಕಡೆಗೂ ಲಭ್ಯವಾಗುತ್ತಿಲ್ಲ. ₹2 ಸಾವಿರ ನೋಟಿನಿಂದ ಸಣ್ಣ ಪ್ರಮಾಣದ ವ್ಯವಹಾರ ಮಾಡಲು ಸಾಧ್ಯವಾಗದೆ ನಾನು ಕೂಡಾ ಪರದಾಡಿದ್ದೇನೆ ಎಂದು ಹೇಳಿದರು.

ಹಳೆ ನೋಟುಗಳನ್ನು ನವೆಂಬರ್‌ 8 ರಂದು ರದ್ದುಗೊಳಿಸಿದ ಮರುದಿನವೇ ಕಾಶ್ಮೀರದಲ್ಲಿ ಗಲಭೆಗಳು ಸ್ಥಗಿತವಾಗಿವೆ. ಬೇರೆ ಬೇರೆ ಬದಲಾವಣೆಗಳು ಕೂಡ ಆಗಿವೆ. ಕೇಂದ್ರ ರಕ್ಷಣಾ ಸ್ಥಾಯಿ ಸಮಿತಿಯಲ್ಲಿ ಸದಸ್ಯಳಾಗಿರುವುದರಿಂದ ಈ ಬಗೆಗೆ ಮಾಹಿತಿ ಇದೆ ಎಂದು ಅವರು ವಿವರಣೆ ನೀಡಿದರು.

ಉಗ್ರರ ಉಪಟಳ, ದೇಶ ವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕಲು ಯಾವ ಕ್ರಮ ಕೈಗೊಂಡರೂ ಅಷ್ಟೊಂದು ಫಲಪ್ರದವಾಗಿರಲಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ನಿರ್ಧಾರದಿಂದ ಹಳೇ ನೋಟುಗಳನ್ನು ರದ್ದುಗೊಳಿಸಿದರು. ಈ ಕ್ರಮ ಶ್ಲಾಘ ನೀಯವಾದದ್ದು ಎಂದು ಅವರು  ಹೇಳಿದರು.

ವಿಧಾನ ಪರಿಷತ್‌ ಸದಸ್ಯರಾದ ರಘುನಾಥ ಮಲ್ಕಾಪುರೆ, ಬಿ.ಜಿ. ಪಾಟೀಲ, ಶಾಸಕ ದತ್ತಾತ್ರೇಯ ಪಾಟೀಲ, ಬಿಜೆಪಿ ಮುಖಂಡರಾದ ಜಗದೀಶ ಹಿರೇಮನಿ, ರೇವುನಾಯಕ ಬೆಳಮಗಿ, ದೊಡ್ಡಪ್ಪಗೌಡ ಪಾಟೀಲ, ಶಶೀಲ್‌ ನಮೋಶಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈಶ್ವರಪ್ಪ ದೊಡ್ಡವರು
‘ಬಿಜೆಪಿ ರಾಜ್ಯ ವರಿಷ್ಠರಲ್ಲಿ ಕೆ.ಎಸ್‌.ಈಶ್ವರಪ್ಪ ಕೂಡಾ ಒಬ್ಬರು. ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಹೀಗಾಗಿ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಕೇಂದ್ರದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಎಕರೆಗೆ 4ಕ್ವಿಂಟಲ್‌ ಖರೀದಿ
ಒಬ್ಬ ರೈತರಿಂದ ಇಂತಿಷ್ಟೇ ಪ್ರಮಾಣದಲ್ಲಿ ತೊಗರಿ ಖರೀದಿಸಬೇಕು ಎಂಬ ಕಟ್ಟಳೆಯನ್ನು ಸರ್ಕಾರ ವಿಧಿಸಿಲ್ಲ. ಒಂದು ಎಕರೆಗೆ 4 ಕ್ವಿಂಟಲ್‌ ತೊಗರಿ ಖರೀದಿಸಬೇಕು ಎಂದು ಮಂಡಳಿಯ ತಾತ್ಕಾಲಿಕ ನಿರ್ಧಾರ. ಖರೀದಿ ಸುವ ತೊಗರಿಯ ದಾಸ್ತಾನು ಮಾಡಲು ಹೀರಾಪುರ ದಲ್ಲಿ ಕೇಂದ್ರೀಯ ಗೋದಾಮು ನಿಗಮದ(ಸಿಡಬ್ಲ್ಯೂಸಿ) ಗೋದಾಮುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ನೋಂದಣಿ ಕಡ್ಡಾಯ
ಈ ಖರೀದಿ ಕೇಂದ್ರಗಳಲ್ಲಿ ಸೋಮವಾರದಿಂದ ರೈತರ ನೋಂದಣಿ ಆರಂಭಿಸಲಾಗಿದೆ. ರೈತರು ಪಹಣಿ ತರಬೇಕು. ಪಹಣಿಯಲ್ಲಿ ಬೆಳೆಯ ಉಲ್ಲೇಖದಲ್ಲಿ ಲೋಪವಿದ್ದರೆ ತೊಗರಿ ಬೆಳೆದಿರುವ ಬಗ್ಗೆ ಕಂದಾಯ ಇಲಾಖೆಯಿಂದ ದೃಢೀಕರಣ  ಪತ್ರ ತರಬೇಕು. ಅದರ ಜೊತೆಗೆ ಗುರುತಿನ ಚೀಟಿ ಮತ್ತು ಬ್ಯಾಂಕ್‌ ಪಾಸ್‌ಬುಕ್‌ ಪ್ರತಿ ನೀಡಬೇಕು. ಆದರೆ, ಆ ಬ್ಯಾಂಕ್‌ ಖಾತೆಯಲ್ಲಿ ಕನಿಷ್ಠ ₹100 ಹಣ ಜಮೆ ಇರುವುದು ಕಡ್ಡಾಯ.

9 ಖರೀದಿ ಕೇಂದ್ರ
ಕಲಬುರ್ಗಿ, ಚಿಂಚೋಳಿ ಮತ್ತು ಕೋಡ್ಲಿ, ಸೇಡಂ ಮತ್ತು ಮುಧೋಳ, ಚಿತ್ತಾಪುರ, ನಾಲವಾರ, ಶಹಾಬಾದ್‌, ಕಾಳಗಿಯಲ್ಲಿ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಖರೀದಿ ಕೇಂದ್ರ ಸ್ಥಾಪಿಸಿದೆ. ಇದರ ಜೊತೆಗೆ  ಜೇವರ್ಗಿ ಮತ್ತು ಯಡ್ರಾಮಿಗಳಲ್ಲೂ ಖರೀದಿ ಕೇಂದ್ರ ಆರಂಭಿಸುವ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT