ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ ತರಬೇತಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿ: ಸಾಹು

Last Updated 12 ಜನವರಿ 2017, 9:28 IST
ಅಕ್ಷರ ಗಾತ್ರ

ಬೀದರ್‌: ನಗರದಲ್ಲಿ ಕೌಶಲ ತರಬೇತಿ ಕೇಂದ್ರ ಆರಂಭಿಸಲು ಜಿಲ್ಲಾ ಆಡಳಿತದ ಮೂಲಕ ಪ್ರಸ್ತಾವ ಸಲ್ಲಿಸಿದರೆ ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಮಂಜೂರು ಮಾಡಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಸುಷ್ಮಾ ಸಾಹು ಹೇಳಿದರು.

ಇಲ್ಲಿಯ  ಜಿಲ್ಲಾ ರಂಗಮಂದಿರದಲ್ಲಿ ಬುಧವಾರ ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ಕೌಶಲ ಅಭಿವೃದ್ಧಿ ಮತ್ತು ತರಬೇತಿ ಮೂಲಕ ಮಹಿಳಾ ಸಬಲೀಕರಣ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಅನೇಕ ಬಗೆಯ ತರಬೇತಿಗಳನ್ನು ಪಡೆದರೂ ಕೌಶಲದ ಕೊರತೆಯಿಂದಾಗಿ ಯಶ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸ್ವಸಹಾಯ ಸಂಘಗಳಲ್ಲೂ ಸರಿಯಾದ ತರಬೇತಿ ಪಡೆದವರ ಸಂಖ್ಯೆ ಬಹಳ ಕಡಿಮೆ ಇದೆ. ಕೌಶಲವು ವ್ಯಕ್ತಿಯ ಬದುಕು ರೂಪಿಸುವಲ್ಲಿ ಮಹತ್ವದ ಸ್ಥಾನ ವಹಿಸುತ್ತದೆ ಎಂದು ತಿಳಿಸಿದರು.

ಅನೇಕ ಮಹಿಳೆಯರು ಹೊಲಿಗೆ ಹಾಗೂ ಬ್ಯೂಟಿಷಿಯನ್ ತರಬೇತಿ ಪಡೆದಿದ್ದಾರೆ. ಆದರೆ, ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೊಲಿಗೆ ಕೆಲಸದಲ್ಲಿ ತೊಡಗಿಸಿಕೊಂಡವರಿಗೆ ಮಾರುಕಟ್ಟೆಯ ಪರಿಜ್ಞಾನ ಇಲ್ಲ. ಹೀಗಾಗಿ ಆರ್ಥಿಕವಾಗಿ ಸಬಲರಾಗಲು ಸಾಧ್ಯಗುತ್ತಿಲ್ಲ. ಮಹಿಳೆಯರು ಕೌಶಲ ತರಬೇತಿ ಪಡೆಯುವ ಅಗತ್ಯವಿದೆ ಎಂದು ಹೇಳಿದರು.

ಸ್ವಾತಂತ್ರ್ಯದ ನಂತರವೂ ಮಹಿಳೆಯರಿಗೆ ಅವರ ಹಕ್ಕುಗಳು ದೊರೆತಿಲ್ಲ. ಮಹಿಳೆಯರಿಗೆ ಶಿಕ್ಷಣ ನೀಡಲು ಹಿಂದೇಟು ಹಾಕಲಾಗುತ್ತಿದೆ. ಕೆಲವು ಕೌಶಲಗಳು ಬಳುವಳಿಯಾಗಿ ಬಂದರೂ ಪುರುಷರೇ ಅದರ ಲಾಭ ಪಡೆದಿದ್ದಾರೆ. ಹೀಗಾಗಿ ಮಹಿಳೆಯರು ಇಂದಿಗೂ ಸಬಲರಾಗಲು ಸಾಧ್ಯವಾಗಿಲ್ಲ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಯೊಬ್ಬರಿಗೂ ಕೌಶಲ ತರಬೇತಿ ನೀಡಲು ಆಸಕ್ತಿ ತೋರಿಸಿರುವುದು ಅಭಿನಂದನೀಯ ಎಂದು ತಿಳಿಸಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ಸಂಸತ್ತಿನಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಿದರೂ ಅವರು ಸಂಸತ್ತಿನಲ್ಲಿ ಮಹಿಳೆಯರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿಲ್ಲ. ಇವತ್ತಿಗೂ ಮಹಿಳಾ ಸಬಲೀಕರಣದ ವಿಷಯಗಳನ್ನು ಪುರುಷರೇ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಹೇಳಿದರು. ಶ್ರೀಶೈಲ ಅಕ್ಕಮಹಾದೇವಿ ಚೈತನ್ಯ ಕೇಂದ್ರದ ಕರುಣಾದೇವಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಶಿವಕುಮಾರ ಸ್ವಾಮಿ, ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯೆ ಲುಂಬಿಣಿ ಗೌತಮ, ಕೌಶಲ ಅಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಅನಿಲ ಹೊಳಸಮುದ್ರಕರ್, ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ನಿಯಮಿತದ ಅಧ್ಯಕ್ಷೆ ಸಾವಿತ್ರಿಬಾಯಿ ಹೆಬ್ಬಾಳೆ, ಶಾಂತೀಶ್ವರಿ ಸಂಸ್ಥೆಯ ಈಶ್ವರಮ್ಮ ಸ್ವಾಮಿ, ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಡಾ. ಪಂಡಿತ ರವೀಂದ್ರನಾಥ, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ರವೀಂದ್ರ ಮೂಲಗೆ, ಹುಮನಾಬಾದ್‌ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಮಹಾದೇವಿ ಹೆಬ್ಬಾಳೆ, ಸಹಾಯಕ ಕೃಷಿ ನಿರ್ದೇಶಕಿ ಜಯಶ್ರೀ ಹಿರೇಮಠ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಶಿವಶಂಕರ ಟೋಕರೆ  ಉಪಸ್ಥಿತರಿದ್ದರು. ಶಿವಯ್ಯ ಸ್ವಾಮಿ ಸ್ವಾಗತಿದರು. ಧನಲಕ್ಷ್ಮಿ ಪಾಟೀಲ ನಿರೂಪಿಸಿದರು.

ಪ್ರತಿಯೊಬ್ಬರಲ್ಲೂ ಪ್ರತಿಭೆ
ಪ್ರತಿಯೊಬ್ಬರಲ್ಲೂ ಒಂದು ಪ್ರತಿಭೆ ಇರುತ್ತದೆ. ಮಹಿಳೆಯರು ತಾವು ದುರ್ಬಲರು ಎಂದು ಭಾವಿಸುವ ಅಗತ್ಯವಿಲ್ಲ. ತಮ್ಮಲ್ಲಿನ ಪ್ರತಿಭೆಯನ್ನು ಹೊರ ಹಾಕುವ ಮೂಲಕ ಸಾಮರ್ಥ್ಯ ಪ್ರದರ್ಶಿಸಬೇಕು ಸಂಸದ ಭಗವಂತ ಖೂಬಾ ಹೇಳಿದರು.

ನಮ್ಮ ಬದುಕನ್ನು ನಾವೇ ರೂಪಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಸನ್ಮಾನ ಹಾಗೂ ಭಾಷಣಕ್ಕೆ ಸೀಮಿತವಾದರೆ ಪ್ರಯೋಜನ ಇಲ್ಲ.  ಮಹಿಳೆಯರಿಗೆ ಸಬಲೀಕರಣದ ಬಗೆಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಅಂದಾಗ ಮಾತ್ರ ಕಾರ್ಯಕ್ರಮದ ಉದ್ದೇಶ ಈಡೇರಲು ಸಾಧ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT