ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಡಗುಂದಿಗೆ ತಾಲ್ಲೂಕು ಸ್ಥಾನಮಾನ ನೀಡದಿದ್ದರೆ ಸಾಮೂಹಿಕ ರಾಜೀನಾಮೆ

Last Updated 12 ಜನವರಿ 2017, 9:31 IST
ಅಕ್ಷರ ಗಾತ್ರ
ನಿಡಗುಂದಿ: ನಿಡಗುಂದಿಗೆ ತಾಲ್ಲೂಕು ಸ್ಥಾನಮಾನ ನೀಡದಿದ್ದರೆ ಸಾಮೂಹಿಕ ರಾಜೀನಾಮೆ... ಇದು  ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಂಗಮೇಶ ಬಳಿಗಾರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಕ್ಕೊರಲ ನಿಲುವು.
 
ಇದೇ ತಿಂಗಳಲ್ಲಿ ಶುದ್ಧ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳ್ಳ ಬೇಕು. ಪಟ್ಟಣದ ವಿವಿಧ ಉದ್ಯಾನ ಅಭಿವೃದ್ಧಿ, ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಬೇಕು ಎಂದು ಒತ್ತಾಯಿಸಿದರು. 
 
ಹಿಂದಿನ ಸರ್ಕಾರ ಘೋಷಿಸಿದ್ದ 43 ತಾಲ್ಲೂಕುಗಳಲ್ಲಿ ನಿಡಗುಂದಿಯೂ ಇತ್ತು. ಆದರೆ ಸೋಮವಾರ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ಕೇವಲ 33 ಪಟ್ಟಣಗಳನ್ನು ಮಾತ್ರ ತಾಲ್ಲೂಕು ಕೇಂದ್ರಗಳನ್ನಾಗಿ ಮಾಡಲಾಗುವುದು ಎಂದು ಹೇಳಿದ್ದಾರೆ. ಪಟ್ಟಣಕ್ಕೆ ತಾಲ್ಲೂಕು ಕೇಂದ್ರ ನೀಡಬೇಕು ಎಂದು ಠರಾವಿಗೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು. ಒಂದು ವೇಳೆ ತಾಲ್ಲೂಕು ಕೇಂದ್ರ ಘೋಷಣೆಯಾಗದಿದ್ದರೇ  ಪಂಚಾಯ್ತಿ  ಸದಸ್ಯರು ಸಾಮೂಹಿಕ ರಾಜೀನಾಮೆಗೂ ಸಿದ್ಧ ಎಂದು  ಸದಸ್ಯ ಸಂಗಮೇಶ ಕೆಂಭಾವಿ ಹೇಳಿದರು. ಇದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು. ಕೂಡಲೇ ಠರಾವು ಪ್ರತಿಯೊಂದಿಗೆ ಶಾಸಕ ಶಿವಾನಂದ ಪಾಟೀಲ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಭೇಟಿಯಾಗಿ ಮನವಿ ಸಲ್ಲಿಸಲು ಸಭೆ ತೀರ್ಮಾನಿಸಿತು.
 
ನೀರು ಕೊಳಚೆ: ಪಟ್ಟಣದಲ್ಲಿ ಗಲೀಜು ನೀರು ಪೂರೈಕೆಯಾಗುತ್ತಿದೆ ಎಂದು  ಆರೋಪಿಸಿದ ಬಿಜೆಪಿ ಸದಸ್ಯ ಅನ್ನಪೂರ್ಣ ಉಳ್ಳಿ, ಶೇಖರ ದೊಡಮನಿ, ಸುಮಾ ಕುಂಬಾರ ಅವರು ಬಾಟಲಿಯಲ್ಲಿ ತುಂಬಿದ್ದ ನೀರನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಇದೇ ತಿಂಗಳಾಂತ್ಯಕ್ಕೆ ನದಿಯಿಂದ ಬಂದ ನೀರನ್ನು ಶುದ್ಧೀಕರಣ ಘಟಕದ ಮೂಲಕ  ಪೂರೈಸಲಾಗುವುದು ಎಂದು ಮುಖ್ಯಾಧಿಕಾರಿ ಪವಾರ ಭರವಸೆ ನೀಡಿದರು.
 
ಅಕ್ರಮ ನಿವೇಶನ ಪ್ರಕರಣ ತನಿಖೆಗೆ: ಇದೇ ವೇಳೆ ಸಾಮಾನ್ಯ ಸಭೆಗೆ ಬಂದ ಕುಂಚಿಕೊರವ ಸಮುದಾಯದ ಜನ,  ಲಕ್ಕವ್ವನ ಕೆರೆಯ ಹತ್ತಿರ ಸುಮಾರು 30ಕ್ಕೂ ಹೆಚ್ಚು ಜನರಿಗೆ ಅನಧಿಕೃತವಾಗಿ 10 ವರ್ಷಗಳ ಹಿಂದೆ ಗ್ರಾಮ ಪಂಚಾಯ್ತಿ ಆಡಳಿತದ ಕೆಲವರು ಕೈಬರಹದ ಉತಾರವನ್ನು ಕುಂಚಿಕೊರವರರಿಗೆ ನಿವೇಶನ ನೀಡಿದ್ದಾರೆ. ಈಗ ಕಂಪ್ಯೂಟರ್ ಉತಾರ್‌ ನೀಡುವಂತೆ ಮನವಿ ಮಾಡಿದರು.
 
ಮಾನವೀಯ ನೆಲೆಗಟ್ಟಿನಲ್ಲಿ ಈ ಸಮಸ್ಯೆ ಪರಿಹರಿಸಬೇಕು. ಯಾವ ಆಡಳಿತವಿದ್ದಾಗ ಕೈಬರಹದ ಉತಾರ ನೀಡಲಾಗಿದೆ ಕುರಿತು ತನಿಖೆ ನಡೆಯಬೇಕು ಎಂದು ಕೆಲ ಸದಸ್ಯರು ಒತ್ತಾಯಿಸಿದರು. ಶತಮಾನ ಕಂಡ ನಿಡಗುಂದಿಯ ಮಾದರಿ ಪ್ರಾಥಮಿಕ ಶಾಲೆಯ ಜೀರ್ಣೋದ್ಧಾರ ಹಾಗೂ ಅಲ್ಲಿ ಸುಂದರ ಉದ್ಯಾನ ಹಾಗೂ ಶಾಲಾ ಆವರಣದೊಳಗೆ ಹಂದಿ ಬಾರದಂತೆ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸಲು ಸದಸ್ಯ ಸಂಗಮೇಶ ಕೆಂಭಾವಿ ಒತ್ತಾಯಿಸಿದರು. ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲು ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
 
 ವೀರೇಶ ನಗರದಲ್ಲಿ ಕಳೆದ ತಿಂಗಳಲ್ಲಿ 30ಕ್ಕೂ ಹೆಚ್ಚು ಹಂದಿಗಳು ಮರಣಹೊಂದಿದ್ದು, ಅವುಗಳ ಬಗ್ಗೆ ಆರೋಗ್ಯ ಇಲಾಖೆ ವತಿಯಿಂದ ತನಿಖೆ ನಡೆಯಬೇಕು. ಪಟ್ಟಣದಲ್ಲಿ ಹಂದಿಗಳ ನಿಯಂತ್ರಣ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು. ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಅನ್ನಪೂರ್ಣ ವಡವಡಗಿ ಸೇರಿದಂತೆ ಸದಸ್ಯರು ಹಾಜರಿದ್ದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT