ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈ ಕೊರೆವ ಚಳಿಯಲ್ಲೂ ತಣ್ಣೀರ ಸ್ನಾನ..!

ವಿಜಯಪುರದ ಮೆಟ್ರಿಕ್‌ಪೂರ್ವ ಬಾಲಕಿಯರ ಸರ್ಕಾರಿ ವಿದ್ಯಾರ್ಥಿ ನಿಲಯದ ದುಃಸ್ಥಿತಿ
Last Updated 12 ಜನವರಿ 2017, 9:32 IST
ಅಕ್ಷರ ಗಾತ್ರ
ವಿಜಯಪುರ: ‘ಮೈ ಕೊರೆವ ಚಳಿಇದ್ದರೂ ಹೊದ್ದು ಮಲಗಾಕ ಬೆಚ್ಚನೆ ಹೊದಿಕೆಯಿಲ್ಲ. ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಬೇಕೆಂದರೇ ತಣ್ಣೀರ ಸ್ನಾನವೇ ಗತಿ...’
 
‘ಮನಸ್ಸಿಗೆ ನೋವಾಗುವ್ಹಾಂಗ್‌ ವಾರ್ಡನ್‌ ಮೇಡಂ ಬೈತಾರ. ಅದಕ್ಕ ಕಣ್ಣೀರ್‌ ಹಾಕಿದ್ರೂ ಮತ್ತ ಬೈತಾರ. ಹಿಂಗಾಗಿ ನಾವ್‌ ಏನೂ ಮಾತಾಡೊಂಗಿಲ್ಲಾ...ಸಾಕಷ್ಟು ಊಟಾ ಕೊಟ್ಟರೂ ತಿನ್ನಂಗಿರಲ್ಲಾ. ಚಪಾತಿಗೆ ಎಣ್ಣಿ ಹಚ್ಚಿ ಬೇಯಿಸೊಂಗಿಲ್ಲಾ. ಅನ್ನದಾಗ ನುಸಿ ಇರ್ತಾವು. ನೀರಿನಂಥಾ ಸಾಂಬಾರು. ಮೆನು ಬೋರ್ಡ್‌ಗಷ್ಟೇ ಸೀಮಿತ...
 
ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಬಾಲೆಯರು ‘ಪ್ರಜಾವಾಣಿ’ ಬಳಿ ಬಿಚ್ಚಿಟ್ಟ ಗೋಳಿನ ಕತೆಯಿದು.
 
ಹಾಸ್ಟೆಲ್‌ ಸನಿಹ ತೆರಳುತ್ತಿದ್ದಂತೆಯೇ ದುರ್ವಾಸನೆ ಮೂಗಿಗೆ ಅಡರುತ್ತದೆ. ಆವರಣಗೋಡೆ ಬಿಡಾಡಿ ದನ, ನಾಯಿ, ಹಂದಿಗಳ ಬೀಡಾಗಿದೆ. ಸನಿಹದಲ್ಲೇ ಅಪಾಯಕಾರಿ ವಿದ್ಯುತ್ ಪರಿವರ್ತಕ. ಸುತ್ತಮುತ್ತ ವಿದ್ಯಾರ್ಥಿ ನಿಲಯಗಳಿದ್ದರೂ ಅಸಹ್ಯಕರ ವಾತಾವರಣ. ಇವೆಲ್ಲವನ್ನೂ ದಾಟಿಯೇ ಶಾಲೆಗೆ ಹೋಗಿ ಬರಬೇಕಾದ ಅನಿವಾರ್ಯತೆ.
 
ಬೆಳಿಗ್ಗೆ 10 ದಾಟಿದರೂ ಕಾವಲಿಗೆ ಸಿಬ್ಬಂದಿಯೇ ಇರಲಿಲ್ಲ. ಪ್ರಶ್ನಿಸಿದರೆ ಚಹಾ ಕುಡಿಯಲು ಹೋಗಿದ್ದಾರೆ ಎಂಬ ಉತ್ತರ. ತಾಸು ಕಳೆದರೂ ಮರಳದ ಪುರುಷ ಭದ್ರತಾ ಸಿಬ್ಬಂದಿ. ವಾರ್ಡನ್‌ ಹಾಸ್ಟೆಲ್‌ಗೆ ಬಂದಿದ್ದು ಬೆಳಿಗ್ಗೆ 10ರ ಬಳಿಕವೇ. ಅದೂ ಸಿಬ್ಬಂದಿ ಫೋನಾಯಿಸಿದ ಬಳಿಕ. ಶಾಲೆಗೆ ಹೊರಟ ಬಾಲೆ ಯರನ್ನು ಮಾತನಾಡಿಸಿದಾಗ ತೆರೆದುಕೊಂಡ ಸತ್ಯ ಸಂಗತಿ ಬೆಚ್ಚಿ ಬೀಳಿಸುವಂತಹವು.
 
‘ನಮ್ಮ ಹೆಸರು ಹೇಳಬ್ಯಾಡ್ರೀ. ಮಾತ ನಾಡಿದ್ದು ಗೊತ್ತಾದರೆ ಸಾಕು, ತ್ರಾಸ್‌ ಕೊಡ್ತಾರೆ. ಬಾಯಿಗೆ ಬಂದಂಗೆ ಬೈತಾರ...’ ಎಂದು ವಿದ್ಯಾರ್ಥಿನಿಯರು ಕಣ್ಣೀರಿಟ್ಟರು. ‘ಇಲ್ಲಿ ನೂರೈವತ್ತು ವಿದ್ಯಾರ್ಥಿನಿಯರಿದ್ದೇವೆ. ನೂರಕ್ಕೂ ಹೆಚ್ಚಿನವರು ತಾಂಡಾದವರು. ನಮ್ಮಪ್ಪ–ಅವ್ವ ದುಡಿಯಾಕ್‌ ಹೋಗ್ಯಾರ. ನಮ್ಮ ಪಾಲಿಗೆ ಹಾಸ್ಟೆಲೇ ಎಲ್ಲಾ. ಆದ್ರ ಜೈಲಲ್ಲಿ ಇದ್ದಂಗಾಗೈತಿ....’ ಎಂದು ನೋವಿನ ಸರಮಾಲೆ ಬಿಚ್ಚಿಟ್ಟರು.
 
‘ವಾರ್ಡನ್‌ ಬೈತಾರೆ. ಸಿಬ್ಬಂದಿಯೂ ಅಷ್ಟೇ. ಯಾವಾಗ್ಲೂ ಹೆದರಿಸ್ತಾರ. ಅಪರೂಪಕ್ಕೆ ಸಂಬಂಧಿಕರು ಬಂದರೂ ಮಾತಾಡಾಕ್‌ ಕೊಡೊಂಗಿಲ್ಲಾ.
 
ಯಾರಾದ್ರೂ ಸಾಹೇಬ್ರು ಬರ್ತಾರ ಅಂದಾಗ ಮಾತ್ರ ಎಲ್ಲ ಚಲೋ ಇರ್ತದ. ನಂತರ ಮತ್ತದೇ ಗೋಳು. ಶನಿವಾರ–ಭಾನುವಾರ ಆಟಾ ಆಡಾಕ್‌ ಬಿಡೊಂಗಿಲ್ಲಾ. ಸೊಳ್ಳಿ ಕಾಟಾ ವಿಪರೀತ ಐತಿ. ರಾತ್ರಿಯಿಡೀ ಕಡೀತಾವ್‌. ಕೆಲ ರೂಮುಗಳಲ್ಲಿ ಫ್ಯಾನ್ ಸಹ ಇಲ್ಲ. ಹಾವಿನ ಹೆದರಿಕಿ ಬ್ಯಾರೆ. ನಿನ್ನೆಯಷ್ಟೇ ಒಂದ್‌ ಹಾವು ಹೊಡ್ದು ಸಾಯಿಸಿ ಸುಟ್ಟಾರ ನೋಡ್ರಿ....’ಎಂದು ಅವರು ಬೂದಿಯಿದ್ದ ಸ್ಥಳ ತೋರಿಸಿದರು.
 
‘ಒಂದೊಂದ್‌ ರೂಮಿನ್ಯಾಗ ಆರು ಹುಡುಗ್ಯಾರು ಅದೀವಿ. ಕಬ್ಬಿಣದ ಕಾಟ್‌ ಅದಾವು, ಆದ್ರ ಗಾದಿ ಇಲ್ಲಾ. ತೆಳ್ಳನ ಬೆಡ್‌ಶೀಟ್‌ ಮತ್ತ್‌ ಚಾದರ್‌ ಕೊಟ್ಟಾರ. ತಲಿದಿಂಬು ಇಲ್ಲಾ. ಇನ್ನೊಂದ್‌ ಬಟ್ಟೇನ ತಲಿದಿಂಬಾಗಿ ಇಟ್ಕೊಂಡು ಮಲಗ್ಬೇಕು. ಇಲ್ಲಿನ ವಿಪರೀತ ಥಂಡಿ ಐತಿ. ಹಿಂಗಾಗಿ ಕಬ್ಬಿಣದ ಕಾಟ್‌ ಮ್ಯಾಲೆ ಹಾಸೂ ಬೆಡ್‌ ಶೀಟ್‌ ಮತ್ತ ಚಾದರ್‌ ಸ್ವಲ್ಪ ಹೊತ್ತಿನ್ಯಾಗ ಜುಣುಜುಣು ಅನ್ನತೈತಿ. ಹಿಂಗಾಗಿ ಥಂಡಿ ತಡಿಯಾಕಾಗೊಂಗಿಲ್ಲಾ. ಮುಂಜಾನೆದ್ದ ತಣ್ಣೀರಾಗ ಝಳಕಾ ಮಾಡಬೇಕ್ರಿ. ಇಂಥಾ ದುಃಸ್ಥಿತಿ ಯಾರಿಗೂ ಬರವಾರದ್ರೀ....’ ಎಂದೂ  ವಿವರಿಸಿದರು.
 
ಶಿಸ್ತಿಗೆ ಕ್ರಮ:  ‘ಮಕ್ಕಳಲ್ಲಿ ಶಿಸ್ತು ಮೂಡಿಸಲು ನಮ್ಮ ಮಹಿಳಾ ಭದ್ರತಾ ಸಿಬ್ಬಂದಿ ಕೆಲವೊಮ್ಮೆ ಗದರುತ್ತಾರೆ. ಊಟದ ಸಮಸ್ಯೆ ಇಲ್ಲ. ಯಾರಾದರೂ ದೂರು ನೀಡಿದರೆ ತಕ್ಷಣವೇ ಪರಿಹರಿಸುತ್ತೇವೆ. ಹೆಚ್ಚುವರಿ ಸೋಲಾರ್‌ ಅಳವಡಿಕೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹಾಸ್ಟೆಲ್‌ ವಾರ್ಡನ್‌ ಎಸ್‌.ಎ. ಇನಾಮದಾರ ಪ್ರತಿಕ್ರಿಯಿಸಿದ್ದಾರೆ. 
 
***
‘ಏನೂ ಬದಲಾಗಲಿಲ್ಲ...’
‘ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿ ಅಧ್ಯಕ್ಷ ವಿ.ಎಸ್‌.ಉಗ್ರಪ್ಪ 2016ರ ಜೂನ್‌ 19ರಂದು ಭೇಟಿ ನೀಡಿದಾಗ, ಇಲ್ಲಿನ ಅವ್ಯವಸ್ಥೆಗೆ ಬೆಚ್ಚಿಬಿದ್ದು ಎಚ್ಚರಿಕೆ ನೀಡಿದ್ದರು’.
 
‘ನಮ್ಮ ದುಃಸ್ಥಿತಿ ಕಂಡು ಅಧಿಕಾರಿಗಳ ಮೇಲೆ ರೇಗಿದ್ದರು. ಏನಾದ್ರೂ ಬದಲಾಗಬಹುದು ಅಂದ್ಕೊಂಡಿದ್ದೆವು. ಆದರೆ ಏನೂ ಆಗಿಲ್ಲಾ....’ ಎಂದು ಕೆಲ ವಿದ್ಯಾರ್ಥಿನಿಯರು ದೂರಿದರು. 
 
***
ಜೈಲಲ್ಲಿದ್ದಂಗಾಗೈತಿ. ಸಂಬಂಧಿಕರ ಜತೆನೂ ಮಾತಾಡಂಗಿಲ್ಲಾ. ಆಟಾ ಆಡಾಕೂ ಬಿಡೊಂಗಿಲ್ಲಾ....  ನಮ್ಮ ತ್ರಾಸ್‌ ಹೇಳ್ಕೊಳಾಕ್‌ ಅವಕಾಶ ಕೊಡಲ್ರೀ...
-ಹಾಸ್ಟೆಲ್‌ ವಿದ್ಯಾರ್ಥಿನಿಯರು
ವಿಜಯಪುರ
 
***
ಸೋಲಾರ್ ವ್ಯವಸ್ಥೆ ಸರಿ ಪಡಿಸುವೆ. ಕೇಂದ್ರ ಕಚೇರಿಯಿಂದಲೇ 3 ವರ್ಷಗಳಿಗೊಮ್ಮೆ ಹೊದಿಕೆ ಬದಲಿಸುತ್ತೇವೆ. ದೂರು ಕುರಿತು ಪರಿಶೀಲಿಸುವೆ
-ಜಿ.ಎಂ.ದೊಡ್ಡಮನಿ
ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT