ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ, ಶುಲ್ಕ ಸಮರ್ಪಕ ವಸೂಲಿಗೆ ಸಲಹೆ

ರಾಮನಗರ ನಗರಸಭೆ ಮುಂಗಡ ಬಜೆಟ್ ಕುರಿತು ಪೂರ್ವಭಾವಿ ಸಭೆ
Last Updated 12 ಜನವರಿ 2017, 10:20 IST
ಅಕ್ಷರ ಗಾತ್ರ
ರಾಮನಗರ: ಅಕ್ರಮ ಜಾಹೀರಾತು ಫಲಕಗಳಿಗೆ ಶುಲ್ಕ ವಿಧಿಸುವುದು, ಕಟ್ಟಡ ಪರವಾನಗಿ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಅನುಸರಿಸುವುದು, ಆಸ್ತಿ ತೆರಿಗೆಯ ಸಮರ್ಪಕ ವಸೂಲಿ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣ...
 
ಇವು ಮುಂಬರುವ ನಗರಸಭೆ ಬಜೆಟ್‌ಗೆ ಸಂಬಂಧಿಸಿದಂತೆ ಕೇಳಿಬಂದ ಸಲಹೆಗಳು. ನಗರಸಭೆಯ ಸಭಾಂಗಣದಲ್ಲಿ ಬುಧವಾರ 201–18ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಹಲವರು ಪಾಲ್ಗೊಂಡು ಉಪಯುಕ್ತ ಸಲಹೆ ನೀಡಿದರು. 
 
ನಗರಸಭೆ ಸದಸ್ಯ ಆರ್.ಎ. ಮಂಜುನಾಥ್ ಮಾತನಾಡಿ ‘ನಗರದಲ್ಲಿರುವ ಅನಧಿಕೃತ ಜಾಹೀರಾತು ಫಲಗಳನ್ನು ಕಿತ್ತುಹಾಕಿ. ಅವುಗಳಿಂದ ಶುಲ್ಕ ವಸೂಲಿ ಮಾಡುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು. ಅನಧಿಕೃತ ಫಲಕಗಳನ್ನು ತೆಗೆಯುವ ಕಾರ್ಯದಲ್ಲಿ ತಾರತಮ್ಯ ಮಾಡಬೇಡಿ. ಬಲಾಢ್ಯರು, ರಾಜಕಾರಣಿಗಳ ಫಲಕಗಳನ್ನು ಬಿಟ್ಟು ಬಡ ವ್ಯಾಪಾರಿಗಳ ಫಲಕಗಳನ್ನು ತೆಗೆಯುವ ಮೂಲಕ ಅವರ ಮೇಲೆ ದೌರ್ಜನ್ಯ ಮಾಡಬೇಡಿ’ ಎಂದು ತಿಳಿಸಿದರು.
 
ಮತ್ತೊಬ್ಬ ಸದಸ್ಯ ಎ.ಬಿ. ಚೇತನ್‌ ಕುಮಾರ್‌ ಮಾತನಾಡಿ ‘ಕಟ್ಟಡ ನಿರ್ಮಾಣ ಪರವಾನಗಿ ಪಡೆಯದೇ ನಗರದಲ್ಲಿ ನೂರಾರು ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಇದು ನಗರಸಭೆ ಆದಾಯಕ್ಕೆ ನಷ್ಟ ಉಂಟು ಮಾಡುತ್ತಿದೆ. ನಿರ್ದಾಕ್ಷಿಣ್ಯವಾಗಿ ಅಧಿಕಾರಿಗಳು ನಿಯಮಗಳನ್ನು ಜಾರಿಗೆ ತಂದು ಶುಲ್ಕ ವಸೂಲಿ ಮಾಡಿ’ ಎಂದು ಸಲಹೆ ನೀಡಿದರು.
 
ಜೆಡಿಎಸ್ ಮುಖಂಡ ಮೆಹಬೂಬ್ ಖಾನ್ ಮಾತನಾಡಿ ‘ನಗರದಲ್ಲಿ ಕೇವಲ 3 ಸಾರ್ವಜನಿಕ ಶೌಚಾಲಯಗಳಿವೆ. ಪ್ರತಿನಿತ್ಯ ನಗರಕ್ಕೆ ಬರುವ ಸಾವಿರಾರು ಜನರು ಶೌಚಾಲಯಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹಿರಿಯರು, ರೋಗಿಗಳು ಸೇರಿದಂತೆ ಎಲ್ಲರೂ ಮೂತ್ರ ವಿಸರ್ಜನೆ ಮಾಡಲು ಕಿ.ಮೀಗೂ ಹೆಚ್ಚು ದೂರ ಕ್ರಮಿಸಬೇಕಿದೆ. ಅನಿವಾರ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲೇ ಮೂತ್ರ ವಿಸರ್ಜಿಸುವಂತಾಗಿದೆ. ಇದನ್ನು ತಪ್ಪಿಸಲು ನಗರದ 10 ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಬಜೆಟ್ ನಲ್ಲಿ ಹಣ ಮೀಸಲಿಡಿ’ ಎಂದರು.
 
ನಗರಸಭೆ ಸದಸ್ಯ ಎ.ರವಿ ಮಾತನಾಡಿ ‘ಆಸ್ತಿ ತೆರಿಗೆಯನ್ನು ಸಮರ್ಪಕವಾಗಿ ವಸೂಲಿ ಮಾಡಿ ಆದಾಯವನ್ನು ಹೆಚ್ಚಿಸಿಕೊಳ್ಳುವುದರಿಂದ ಬಜೆಟ್ ಗಾತ್ರವನ್ನು ಹೆಚ್ಚಿಸಿಕೊಳ್ಳಬಹುದು. ಇದು ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಪ್ರಾಪರ್ಟಿ ಕ್ಯಾಲ್ಕುಲೇಟರ್ ಮೂಲಕ ಆಸ್ತಿ ತೆರಿಗೆಯನ್ನು ವಸೂಲಿ ಮಾಡಿ. ವಿಶೇಷ ಅನುದಾನವನ್ನು ತಂದು ಐಜೂರು ವೃತ್ತ- ರೈಲ್ವೆ ನಿಲ್ದಾಣದ ರಸ್ತೆಯ ಅಭಿವೃದ್ಧಿ ಮಾಡಬೇಕು. ರಸ್ತೆ ಅಗಲ ಹೆಚ್ಚಳ ಹಾಗೂ ಏಕಮುಖ ಸಂಚಾರಕ್ಕೆ ಕ್ರಮ ವಹಿಸಿ’ ಎಂದು ಸಲಹೆ ನೀಡಿದರು.
 
ಮುಖಂಡ ಅಫ್ರೋಸ್ ಮಾತನಾಡಿ ‘13 ರಿಂದ 17ನೇ ವಾರ್ಡಿಗೆ ಒಂದೇ ಒಂದು ಓವರ್ ಹೆಡ್ ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ನೀರು ಸರಬರಾಜು ವ್ಯತ್ಯಯವಾಗುತ್ತಿದೆ. ಈ ಬಜೆಟ್‌ನಲ್ಲಿ ಮತ್ತೊಂದು ಟ್ಯಾಂಕ್ ನಿರ್ಮಾಣ ಮಾಡಲು ಹಣ ಮೀಸಲಿರಿಸಿ’ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಮಂಜು ಮಾತನಾಡಿ ‘ಇಲ್ಲಿನ ವಿವೇಕಾನಂದನಗರ ಬಡಾವಣೆಯಲ್ಲಿರುವ ವಿವೇಕಾನಂದ ಪ್ರತಿಮೆಗೆ ಮೇಲ್ಛಾವಣಿ ನಿರ್ಮಿಸಿ, ಅಭಿವೃದ್ಧಿ ಪಡಿಸಬೇಕು’ ಎಂದರು.
 
ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್ ಮಾತನಾಡಿ ‘ಎರಡು ಪೂರ್ವಬಾವಿ ಸಭೆಯಲ್ಲಿ ಸಾರ್ವಜನಿಕರು ಹಾಗೂ ಚುನಾಯಿತ ಪ್ರತಿನಿಧಿಗಳಿಂದ ಸ್ವೀಕರಿಸಿದ ಸಲಹೆಗಳನ್ನು ಅನುಷ್ಠಾನಕ್ಕೆ ತರಲು ನಿಯಮಾನುಸಾರ ಅಧಿಕಾರಿಗಳೊಂದಿಗೆ ಚರ್ಚಿಸಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುವುದು’ ಎಂದು ತಿಳಿಸಿದರು.
 
ನಗರಸಭೆ ಉಪಾಧ್ಯಕ್ಷೆ ಸಮೀನಾತಾಜ್‌, ಸ್ಥಾಯಿ ಸಮಿತಿ ಅಧ್ಯಕ್ಷ ರಫೀಕ್‌ ಅಹಮದ್, ಪೌರಾಯುಕ್ತ ಕೆ. ಮಾಯಣ್ಣಗೌಡ ಪಾಲ್ಗೊಂಡಿದ್ದರು. 
 
***
ಅಂಬೇಡ್ಕರ್‌ ಪ್ರತಿಮೆ ನಿರ್ಮಿಸಿ
‘ಜಿಲ್ಲಾಧಿಕಾರಿ ಕಚೇರಿ ಎದುರು ಅಂಬೇಡ್ಕರ್‌ ಪ್ರತಿಮೆಯನ್ನು ನಿರ್ಮಾಣ ಮಾಡಲು ₹8ರಿಂದ 10 ಲಕ್ಷವನ್ನು ಇಡಲಾಗಿದ್ದರೂ, ಇದರ ಬಗ್ಗೆ ನಗರಸಭೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಡಾ.ಬಿ.ಆರ್. ಅಂಬೇಡ್ಕರ್‌ ಯುವ ವೇದಿಕೆಯ ಅಧ್ಯಕ್ಷ ಶಿವಶಂಕರ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಆಯವ್ಯಯಕ್ಕೆ ಸಂಬಂಧಿಸಿದಂತೆ ನಡೆದ ಹಲವು ಸಭೆಗಳಲ್ಲಿ ಈ ವಿಷಯವನ್ನು ಹಲವು ಬಾರಿ ಪ್ರಸ್ತಾಪ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ. ಮುಂದಿನ ಆಯವ್ಯಯ ಮಂಡಿಸುವಷ್ಟರಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅಂಬೇಡ್ಕರ್‌ ಪ್ರತಿಮೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು. ಕೂಡಲೇ ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತರು ಸಭೆ ನಡೆಸಿ ಯೋಜನೆ ರೂಪಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT