ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಹೊಂಡ ನಿರ್ಮಾಣಕ್ಕೆ ಆರ್ಥಿಕ ಮುಗ್ಗಟ್ಟು

Last Updated 12 ಜನವರಿ 2017, 10:52 IST
ಅಕ್ಷರ ಗಾತ್ರ

ರಾಯಚೂರು: ಮಳೆ ಆಶ್ರಿತ ಪ್ರದೇಶದ ರೈತರ ಜೀವನ ಮಟ್ಟ ಸುಧಾರಿಸಲು ಕೃಷಿ ಭಾಗ್ಯ ಯೋಜನೆಯಡಿ ಜಾರಿಗೆ ತಂದಿರುವ ಕೃಷಿ ಹೊಂಡಗಳಿಗೆ ಸಹಾಯಧನ ನೀಡಲು ರಾಜ್ಯ ಸರ್ಕಾರಕ್ಕೆ ಹಣಕಾಸಿನ ಮುಗ್ಗಟ್ಟು ಎದುರಾಗಿದೆ. ಆದ ಕಾರಣ ಹೊಸದಾಗಿ ಕೃಷಿ ಹೊಂಡ ನಿರ್ಮಾಣ ಮಾಡದಂತೆ ಕೃಷಿ ಇಲಾಖೆಯಿಂದ ತಡೆ ನೀಡಲಾಗಿದೆ.

ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳು ನಿರ್ಮಿಸಿಕೊಂಡ ಸಾಮಾನ್ಯ ವರ್ಗದ ರೈತರಿಗೆ ಶೇ 80ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 90ರಷ್ಟು ಸಹಾಯಧನ ನೀಡಲಾಗುತ್ತದೆ. ಆದರೆ, ಜಿಲ್ಲೆಯಲ್ಲಿ 2016–17ನೇ ಸಾಲಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡ ರೈತರಿಗೆ ₹2.60 ಕೋಟಿಗೂ ಅಧಿಕ ಮೊತ್ತದ ಸಹಾಯಧನ ನೀಡುವುದು ಬಾಕಿಯಿದೆ.

ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಹೊಸದಾಗಿ ಕೃಷಿ ಹೊಂಡಗಳು ನಿರ್ಮಿಸಲು ಕೃಷಿ ಇಲಾಖೆ ಆದೇಶ ನೀಡಬೇಕಾಗಿತ್ತು. ಆದರೆ, ಅನುದಾನದ ಕೊರತೆಯಿಂದ ಕೃಷಿ ಹೊಂಡಗಳು ನಿರ್ಮಿಸಿಕೊಳ್ಳಲು ರೈತರಿಗೆ ಕಾಮಗಾರಿ ಆದೇಶ ನೀಡದಂತೆ ಕೃಷಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

2014–15ನೇ ಸಾಲಿನಿಂದ ಜಾರಿಗೆ ಬಂದಿರುವ ಈ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 3700 ಕೃಷಿ ಹೊಂಡಗಳು ನಿರ್ಮಾಣಗೊಂಡಿವೆ. ಕೃಷಿ ಹೊಂಡಗಳ ನಿರ್ಮಾಣಕ್ಕೆ ರೈತರು ಉತ್ಸುಕತೆ ತೋರಿದ್ದಾರೆ. 218 ಮಂದಿ ರೈತರಿಗೆ ಬಿಲ್‌ ಪಾವತಿ ಮಾಡುವುದು ಬಾಕಿಯಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ‘ಜೊತೆಗೆ ರೈತರ ಜಮೀನುಗಳಿಗೆ ಕಾಲುವೆ ನೀರು ಪೂರೈಸಲು ಅಧಿಕಾರಿಗಳು ಸೋತಿದ್ದಾರೆ.

ಜೊತೆಗೆ ಎರಡ್ಮೂರು ವರ್ಷಗಳಿಂದ ಸರಿಯಾಗಿ ಮಳೆಯೂ ಬಾರದ ಕಾರಣ ಕೃಷಿ ಹೊಂಡಗಳ ನಿರ್ಮಾಣಕ್ಕೆ ರೈತರು ಆಸಕ್ತಿ ತೋರುತ್ತಿದ್ದಾರೆ.  ಆದರೆ, ಕೃಷಿ ಇಲಾಖೆ ಸಮರ್ಪಕವಾಗಿ ಬಿಲ್‌ ಪಾವತಿ ಮಾಡುತ್ತಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಅಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ ದೂರಿದರು.

‘ಸಹಾಯಧನ ನೀಡಲು ವಿಳಂಬ ವಾಗುತ್ತಿರುವ ಕೃಷಿ ಹೊಂಡ ನಿರ್ಮಾಣವನ್ನು ಕೈಬಿಡಬೇಕಾಗಿದೆ. ಬೆಳೆ ನಷ್ಟದಿಂದ ರೈತರು ಆರ್ಥಿಕವಾಗಿ ದುರ್ಬಲಗೊಂಡಿದ್ದಾರೆ. ಕೃಷಿ ಇಲಾಖೆ ಹಾಗೂ ಸರ್ಕಾರ ರೈತರ ರಕ್ಷಣೆ ಧಾವಿಸಬೇಕು’ ಎಂದು ಒತ್ತಾಯಿಸಿದರು.
- ಪಿ.ಹನುಮಂತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT