ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಉಳಿಸಲು ಸಾವಿರ ಹನಿಗಳ ಸಂಕಲ್ಪ

ಗವಿಮಠ, ಜಿಲ್ಲಾಡಳಿತದ ಆಶ್ರಯದಲ್ಲಿ ಜಲದೀಕ್ಷೆ ಕಾರ್ಯಕ್ರಮ: ಗಮನ ಸೆಳೆದ ಜಾಥಾ
Last Updated 12 ಜನವರಿ 2017, 11:09 IST
ಅಕ್ಷರ ಗಾತ್ರ

ಕೊಪ್ಪಳ: ಜೀವಜಲ ಉಳಿಸುವ ಕುರಿತು ಬುಧವಾರ ನಗರದಲ್ಲಿ ಗವಿಮಠ ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ನಡೆದ ಜಲದೀಕ್ಷೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಜಲಸಂರಕ್ಷಣೆಯ ಸಂದೇಶ ತಲುಪಿಸುವಲ್ಲಿ ಯಶಸ್ವಿಯಾಯಿತು. 

ಸಾವಿರಾರು ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರು, ಅಧಿಕಾರಿಗಳು, ನೌಕರರು ಜಲಸಂರಕ್ಷಣೆ ಕುರಿತು ಪ್ರತಿಜ್ಞೆ ಸ್ವೀಕರಿಸಿದರು.
ಬರಪೀಡಿತ ಎಂಬ ಹಣೆಪಟ್ಟಿ ಹೊತ್ತಿರುವ ಜಿಲ್ಲೆಯಲ್ಲಿ ಇರುವ ನೀರನ್ನು ಉಳಿಸಬೇಕು. ಅಂತರ್ಜಲ ರಕ್ಷಿಸಬೇಕು. ನೀರು ಪೋಲಾಗುವುದನ್ನು ತಡೆಯಬೇಕು ಎಂಬ ಸಂದೇಶವನ್ನು ಒತ್ತಿ ಹೇಳಲಾಯಿತು.

ಜಲಬಿಂದುವಿನ ವೇಷ ಧರಿಸಿದ ವಿದ್ಯಾರ್ಥಿಗಳು, ವನ್ಯಜೀವಿಗಳು ನೀರಿಲ್ಲದೇ ಸಂಕಟಪಡುತ್ತಿರುವ ದೃಶ್ಯಗಳುಳ್ಳ ಫಲಕಗಳು ಜನರ ಗಮನಸೆಳೆದವು. ಅಧ್ಯಾತ್ಮಿಕ ಕೇಂದ್ರವೊಂದು ಈ ರೀತಿಯೂ ಸಾಮಾಜಿಕ, ಪರಿಸರ ಕಾಳಜಿ ಕುರಿತು ಜಾಗೃತಿ ಮೂಡಿಸಲು ಸಾಧ್ಯವಿದೆ ಎಂಬುದನ್ನು ಈ ಜಾಥಾ ತೋರಿಸಿಕೊಟ್ಟಿದೆ ಎಂದು ಇದರಲ್ಲಿ ಪಾಲ್ಗೊಂಡಿದ್ದ ಯುವ ಸಂಘಟನೆಯೊಂದರ ಕಾರ್ಯಕರ್ತರು ಅಭಿಪ್ರಾಯಪಟ್ಟರು.

ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ‘ಇಂದು ಶುದ್ಧ ಗಾಳಿ, ಕುಡಿಯುವ ನೀರು ಕೂಡಾ ನಮಗೆ ದೊರಕುತ್ತಿಲ್ಲ. ಇದರಿಂದಾಗಿ ಬದುಕು ಬರಡಾಗುತ್ತಿದೆ. ಆದ್ದರಿಂದ ಹನಿ ನೀರನ್ನು ಉಳಿಸುವ ಕಾರ್ಯ ಆಗಬೇಕು’ ಎಂದು ಹೇಳಿದರು.

ಡಾ.ಕೆ.ಎಸ್‌.ರೆಡ್ಡಿ ವಿದ್ಯಾರ್ಥಿಗಳಿಗೆ ಜಲರಕ್ಷಣೆಯ ಪ್ರಮಾಣವಚನ ಬೋಧಿಸಿದರು. ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ಬಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಡಾ.ಕೆ.ಎಸ್‌.ರೆಡ್ಡಿ ಮಾತನಾಡಿ, ನೀರನ್ನು ತಾಯಿಯ ರೂಪದಲ್ಲಿ ನೀರನ್ನು  ಕಾಣಬೇಕು. ಪ್ರಕೃತಿಯ ಸಂಪತ್ತನ್ನು ಉಳಿಸಲು ಗವಿಮಠ ಪ್ರಯತ್ನಿಸುತ್ತಿದೆ. ಗಿಡ–ಮರಗಳ ನಾಶದಿಂದ ಕೆರೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ನೀರಿನಲ್ಲಿ ಆಧ್ಯಾತ್ಮಿಕ ಶಕ್ತಿ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿಯೂ ಜಲಜಾಗೃತಿ ಜಾಥಾ ನಡೆಯಿತು. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎ.ಶ್ಯಾಮಸುಂದರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್‌ ಪೂಜಾರ್‌, ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಪಾನಗಂಟಿ, ಸೋಮರಡ್ಡಿ ಅಳವಂಡಿ, ರಾಜೇಶ ಯಾವಗಲ್, ಸಂಜಯಕೊತಬಾಳ, ಮಹೇಶ ಮುದಗಲ್, ವೀರೇಶ ಮಹಾಂತಯ್ಯನಮಠ ಭಾಗವಹಿಸಿದ್ದರು. ಕೃಷಿ ವಿಸ್ತರಣಾ ಶಿಕ್ಷಣ ಕೇಂಧ್ರದ ವಿಸ್ತರಣಾ ಮುಂದಾಳು ಡಾ.ಎಂ.ಬಿ.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಶರಣಬಸಪ್ಪ ಬಿಳಿಎಲೆ ಕಾರ್ಯಕ್ರಮ ನಿರೂಪಿಸಿದರು.

ರೊಟ್ಟಿ ಸಮರ್ಪಣೆ:  ನಗರದ ಗವಿಸಿದ್ದೇಶ್ವರ ಜಾತ್ರೆಗೆ ರೊಟ್ಟಿ, ತರಕಾರಿ, ದವಸ ಧಾನ್ಯಗಳು  ಹರಿದು ಬಂದಿವೆ. ಬುಧವಾರ ವಜ್ರಬಂಡಿ, ಸಿದ್ದಾಪುರ, ಚಿಕ್ಕಬೆಣಕಲ್, ಗಂಗಾವತಿ    ತಾಲ್ಲೂಕಿನ ಆದಾಪುರ, ನಿರಲೂಟಿ, ಹೊಮ್ಮಿನಾಳ, ಇಂದರಗಿ, ಗುನ್ನಾಳ, ಹನುಮನಹಟ್ಟಿ, ಗಂಗನಾಳ, ಕಲ್ಲತಾವರಗೇರಿ, ಲೇಬಗೇರಿ, ಚಾಮಾಲಾಪುರ, ವನಜಭಾವಿ, ಹಳ್ಳಳ್ಳಿ, ಕೆ.ಹಂಚಿನಾಳ ಗ್ರಾಮಸ್ಥರು ರೊಟ್ಟಿ ಅರ್ಪಿಸಿದರು.

ಜಲದೀಕ್ಷೆಯ ಹೊಸ ಪರಿಕಲ್ಪನೆ
ನಗರದಲ್ಲಿ ಬುಧವಾರ ಗವಿಮಠದ ಜಾತ್ರೆಯ ಅಂಗವಾಗಿ ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ‘ಜಲದೀಕ್ಷೆ’ ಹೆಸರಿನ ಬೃಹತ್‌ ಜಾಥಾ ನಡೆಯಿತು.
ಜಿಲ್ಲೆಯನ್ನು ಪದೇ ಪದೇ ಕಾಡುತ್ತಿರುವ ಬರ, ನೀರಿನ ಉಳಿತಾಯ, ಸಂಗ್ರಹದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಗವಿಮಠ ಈ ಬಾರಿ ಜಲದೀಕ್ಷೆ ಪರಿಕಲ್ಪನೆ ಅಡಿ ಜಾತ್ರೆ ಹಮ್ಮಿಕೊಂಡಿದೆ.

ಜಿಲ್ಲಾಡಳಿತ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ಇಲಾಖೆ, ಜಲಮಂಡಳಿ, ಶಿಕ್ಷಣ ಇಲಾಖೆ, ಕರ್ನಾಟಕ ವಾರಿಯರ್ಸ್‌ ಸ್ಪೋರ್ಟ್ಸ್‌ ಕ್ಲಬ್ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಜಾಗೃತಿ ಜಾಥಾ ನಡೆಯಿತು.

ಜೀವಜಲ ಉಳಿಸುವ ಕುರಿತ ಘೋಷವಾಕ್ಯ ಬರೆದ ಫಲಕಗಳನ್ನು ಹಿಡಿದ ಸಾವಿರಾರು ಶಾಲಾ ವಿದ್ಯಾರ್ಥಿಗಳು ಜಲಜಾಗೃತಿ ಕುರಿತು ಘೋಷಣೆ ಕೂಗಿದರು. ಪೆಟ್ರೋಲ್‌ ಬಂಕ್‌ ಮಾದರಿಯ ನೀರಿನ ಬಂಕ್‌ನ ಸ್ತಬ್ಧಚಿತ್ರ ಗಮನ ಸೆಳೆಯಿತು. ನಗರದ ಗೌರಿ ಶಂಕರ ದೇವಸ್ಥಾನದ ಆವರಣದಿಂದ ಆರಂಭವಾದ ಜಾಥಾಗೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ  ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT