ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯಕ್ಕೆ ವಿದ್ಯಾರ್ಥಿನಿಯರ ಪರದಾಟ

ನಗರದ ಹಾಸ್ಟೆಲ್‌ಗಳಲ್ಲಿ ಅತ್ಯಾಧುನಿಕ ಸೌಕರ್ಯ, ಕೆಲ ವಸತಿನಿಲಯಗಳಿಗೆ ಸ್ವಂತಕಟ್ಟಡದ ಕೊರತೆ
ಅಕ್ಷರ ಗಾತ್ರ
ದಾವಣಗೆರೆ: ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಸ್ನಾನಗೃಹಗಳಿಲ್ಲ. ಗ್ರಂಥಾಲಯವಿಲ್ಲ. ಆರೋಗ್ಯ ತಪಾಸಣೆ ಸೌಲಭ್ಯವಿಲ್ಲ. ಕಾವಲುಗಾರರಿಲ್ಲ. ಇನ್ನು ಸಿಸಿಟಿವಿ ಕ್ಯಾಮೆರಾ ಸೌಲಭ್ಯ ಕೇಳುವಂತೆಯೇ ಇಲ್ಲ...
 
– ಇಂತಹ ಹತ್ತಾರು ಸಮಸ್ಯೆಗಳ ನಡುವೆಯೇ ದಾವಣಗೆರೆ ಜಿಲ್ಲೆಯ ಜಗಳೂರು, ಹರಪನಹಳ್ಳಿ ಹಾಗೂ ಚನ್ನಗಿರಿ ತಾಲ್ಲೂಕಿನ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಇಲಾಖೆಗೆ ಸೇರಿದ ಮೆಟ್ರಿಕ್‌ ಪೂರ್ವ ಹಾಗೂ ಮೆಟ್ರಿಕ್‌ ನಂತರದ ಬಾಲಕಿಯರ ಕೆಲವು ವಸತಿನಿಲಯಗಳು ನಡೆಯುತ್ತಿವೆ!
 
ಸಮಾಜಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯ ಅವರ ತವರು ದಾವಣಗೆರೆ. ನಗರದ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಬಿಸಿಎಂ ಹಾಸ್ಟೆಲ್‌ಗಳು ವಿಶಾಲವಾದ ಕಟ್ಟಡ ಹಾಗೂ ಖಾಸಗಿ ವಸತಿನಿಲಯಗಳ ಸೌಲಭ್ಯಗಳಿಗೆ ಸಮನಾದ ಮೂಲಸೌಲಭ್ಯಗಳನ್ನು ಒಳಗೊಂಡಿವೆ. ಆದರೆ, ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿನ ಬಾಲಕಿಯರ ವಸತಿನಿಲಯಗಳು ಇದೇ ರೀತಿಯ ಸೌಲಭ್ಯಗಳನ್ನು ಹೊಂದಿಲ್ಲ. ಬಹುತೇಕ ವಸತಿನಿಲಯಗಳು ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿದ್ದು, ಅವುಗಳ ಸ್ಥಿತಿ ಶೋಚನೀಯವಾಗಿದೆ. 
 
ಕೊಠಡಿಗಳ ಕೊರತೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಜಗಳೂರಿನಲ್ಲಿರುವ ಮೆಟ್ರಿಕ್‌ಪೂರ್ವ ಬಾಲಕಿಯರ ವಸತಿನಿಲಯ ತೆರೆದ ದೊಡ್ಡ ಚರಂಡಿ ಬಳಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಇಲ್ಲಿ 250ಕ್ಕೂ ಹೆಚ್ಚು ಬಾಲಕಿಯರಿದ್ದಾರೆ. ಆದರೆ ಕೊಠಡಿಗಳ ಕೊರತೆ ಇರುವ ಕಾರಣ ಪ್ರತಿ ಕೊಠಡಿಯಲ್ಲಿ 5ರಿಂದ 6 ಬಾಲಕಿಯರನ್ನು ಕುರಿಗಳಂತೆ ತುಂಬಲಾಗಿದೆ. ಹಾಸ್ಟೆಲ್‌ನಲ್ಲಿ ಉತ್ತಮ ಸ್ನಾನಗೃಹ ಹಾಗೂ ಊಟದ ಹಾಲ್‌ ಸೌಲಭ್ಯವಿಲ್ಲ. ಇಂತಹ ಸಮಸ್ಯೆಗಳ ಮಧ್ಯೆಯೇ ಬಾಲಕಿಯರು ಬದುಕು ಕಟ್ಟಿಕೊಳ್ಳಬೇಕಾದ ಸ್ಥಿತಿ ಇದೆ.
 
ಎಲ್ಲವೂ ಅವ್ಯವಸ್ಥೆ: ‘ಕಲಿಯಲು ಅನುಕೂಲವಾಗಲೆಂದು ಊರು ಬಿಟ್ಟು ಈ ಹಾಸ್ಟೆಲ್‌ಗೆ ಬಂದಿದ್ದೇವೆ. ಉತ್ತಮ ವಾತಾವರಣ, ಸೌಲಭ್ಯ ಇರಬಹುದೆಂಬ ನಿರೀಕ್ಷೆಯಿತ್ತು. ಆದರೆ, ಇಲ್ಲಿ ಬರೀ ಅವ್ಯವಸ್ಥೆ. ಚರಂಡಿ ಬಳಿ ಹಾಸ್ಟೆಲ್‌ ಇರುವುದರಿಂದ ಸೊಳ್ಳೆಗಳ ಹಾವಳಿ ಹೆಚ್ಚು ಇದೆ. ವಾರಕ್ಕೆ ಕನಿಷ್ಠ ಇಬ್ಬರು ವಿದ್ಯಾರ್ಥಿನಿಯರು ಜ್ವರಕ್ಕೆ ತುತ್ತಾಗುತ್ತಿ ದ್ದಾರೆ’ ಎಂದು ವಿದ್ಯಾರ್ಥಿನಿ ಯೊಬ್ಬರು ಅಳಲು ತೋಡಿಕೊಂಡರು.
 
ಕಟ್ಟಡದ ಬಳಿಯೇ ವಿದ್ಯುತ್‌ ಕಂಬವಿದೆ. ಅದರ ವಿದ್ಯುತ್‌ ತಂತಿಗಳು ಹಾಸ್ಟೆಲ್‌ಗೆ ತಾಗಿಕೊಂಡು ಹಾದುಹೋಗಿದ್ದು, ಹಾಸ್ಟೆಲ್‌ನ ಬಾಲ್ಕನಿಯಲ್ಲಿ ನಿಲ್ಲಲು ಭಯವಾಗುತ್ತದೆ. ಇಲಾಖೆ ಅಧಿಕಾರಿಗಳು ಹಾಸ್ಟೆಲ್‌ ಅನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಿದರೆ ಅನುಕೂಲವಾಗುತ್ತದೆ’ ಎಂದು ಇನ್ನೊಬ್ಬ ವಿದ್ಯಾರ್ಥಿನಿ ಆತಂಕ ವ್ಯಕ್ತಪಡಿಸಿದಳು.
 
ಕೊಠಡಿಗಳ ಕೊರತೆ: ಹರಪನಹಳ್ಳಿಯ ಪರಿಶಿಷ್ಟ ಜಾತಿಗೆ ಸೇರಿದ ಮೆಟ್ರಿಕ್‌ ಪೂರ್ವ ಬಾಲಕಿಯರ ವಸತಿನಿಲಯ ವನ್ನು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದ್ದು, ವಿದ್ಯಾರ್ಥಿನಿಯರ ದಾಖಲಾತಿಗೆ ತಕ್ಕಂತೆ ಕೊಠಡಿಗಳ ಸೌಲಭ್ಯವಿಲ್ಲ. ಚನ್ನಗಿರಿಯಲ್ಲಿರುವ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದೆ.
 
ಸಿಸಿಟಿವಿ ಕ್ಯಾಮೆರಾ ಇಲ್ಲ: ದಾವಣಗೆರೆ ನಗರದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಬಿಸಿಎಂ ಎಲ್ಲಾ ಹಾಸ್ಟೆಲ್‌ಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿವೆ. ಆದರೆ ಯಾವ ಹಾಸ್ಟೆಲ್‌ಗಳಿಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ಕೆಲ ಹಾಸ್ಟೆಲ್‌ಗಳಲ್ಲಿ ಕಾವಲುಗಾರ, ಅಡುಗೆಯವರು ಹಾಗೂ ಅಡುಗೆ ಸಹಾಯಕ ಸಿಬ್ಬಂದಿಯ ಕೊರತೆ ಇದೆ. 
 
**
ವಾರ್ಡನ್‌ಗಳ ಚುಚ್ಚುಮಾತು..
ಹರಿಹರ ತಾಲ್ಲೂಕಿನ ಬಿಸಿಎಂ ವಿದ್ಯಾರ್ಥಿನಿಯರ ನಿಲಯದ ವಾರ್ಡನ್‌ಗಳ ನಿರ್ಲಕ್ಷ್ಯ ಹಾಗೂ ಚುಚ್ಚುಮಾತುಗಳು ವಸತಿಗೃಹದ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಿದೆ.
 
ವಿದ್ಯಾರ್ಥಿನಿಲಯದಲ್ಲಿ ಕೊಠಡಿಗಳನ್ನು ಹೊರತುಪಡಿಸಿದರೆ, ಇಲ್ಲಿರುವ ಯಾವ ಸೌಲಭ್ಯಗಳೂ ವಿದ್ಯಾರ್ಥಿನಿಯರಿಗೆ ದೊರೆಯುತ್ತಿಲ್ಲ. ವಿದ್ಯಾರ್ಥಿನಿಯರಿಗೆ ನಿತ್ಯ ಬಡಿಸುವ ಆಹಾರ ಪದ್ಧತಿಯನ್ನು ಬಿಂಬಿಸುವ ಫಲಕ ಗೋಣಿಚೀಲ ಸೇರಿದೆ. ಅದರಲ್ಲಿ ನಿಗದಿಪಡಿಸಿದ ಪದ್ಧತಿಯಂತೆ ಆಹಾರ ವಿತರಣೆ ಆಗುತ್ತಿಲ್ಲ. ಆಹಾರದಲ್ಲಿ ತರಕಾರಿ ಹಾಗೂ ರುಚಿಯ ಕೊರತೆ ಎದ್ದು ಕಾಣುತ್ತದೆ. 
 
‘ಶುಚಿ ಕಿಟ್‌ಗಳ ಬಗ್ಗೆ ವಿಚಾರಿಸಿದರೆ ಅವಹೇಳನಕಾರಿಯಾಗಿ ನಿಂದಿಸುತ್ತಾರೆ. ವಿದ್ಯಾರ್ಥಿನಿಯರ ನಿಲಯದ ರಕ್ಷಣೆಗೆ ಅಗತ್ಯ ಭದ್ರತಾ ಸಿಬ್ಬಂದಿ ಇಲ್ಲ’ ಎಂಬುದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿನಿಯರ ದೂರು.
 
**
250 ಹುದ್ದೆ ಖಾಲಿ 
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿಯರ 20 ಹಾಸ್ಟೆಲ್‌ಗಳಿವೆ. ಎಲ್ಲ ಹಾಸ್ಟೆಲ್‌ ಗಳಲ್ಲಿ ಮಹಿಳಾ ವಾರ್ಡನ್‌ ಹಾಗೂ ಕಾವಲುಗಾರರನ್ನು ನೇಮಿಸಲಾಗಿದ್ದು, ಅಡುಗೆ ಯವರು, ಸಹಾಯಕರು ಹಾಗೂ ರಾತ್ರಿ ಕಾವಲುಗಾರರು ಸೇರಿ 250 ಹುದ್ದೆ ಖಾಲಿ ಇವೆ.  ಹಾಸ್ಟೆಲ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಚಿಂತನೆ ಇದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ  ಸಲ್ಲಿಸಲಾಗಿದೆ. 
–ಕುಮಾರ್‌ ಹನುಮಂತಪ್ಪ, ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ
 
**
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಶೇ 50ರಷ್ಟು ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿವೆ. ವಿಶಾಲ ಕಟ್ಟಡ ಬಾಡಿಗೆಗೆ ದೊರೆತ್ತಿಲ್ಲ. ಸೂಕ್ತ ನಿವೇಶನ ದೊರೆತರೆ ಸ್ವಂತ ಕಟ್ಟಡ ಕಟ್ಟಲಾಗುವುದು. 
– ಸೈಯದ್‌ ಮನ್ಸೂರ್‌ ಬಾಷಾ, ಜಿಲ್ಲಾ ಹಿಂದುಳಿದ ಕಲ್ಯಾಣ ಇಲಾಖೆ ಅಧಿಕಾರಿ 
 
**
ಜಿಲ್ಲೆಯಲ್ಲಿ 900 ಎಸ್‌ಟಿ ವಿದ್ಯಾರ್ಥಿಗಳಿಗೆ ಮಂಜೂರಾತಿ ಇದ್ದರೆ, 913 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಪ್ರಸ್ತುತ 12 ಹಾಸ್ಟೆಲ್‌ಗಳಿವೆ. ಇನ್ನೂ 12 ಹಾಸ್ಟೆಲ್‌ಗಳ ಅಗತ್ಯವಿದ್ದು, ಈ ಬಗ್ಗೆ ಸರ್ಕಾರಕ್ಕೆ  ಪ್ರಸ್ತಾವ ಸಲ್ಲಿಸಲಾಗಿದೆ. 
–ದೇವೇಂದ್ರಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ
 
**
ಶಾಮನೂರಿನಿಂದ ಹಾಸ್ಟೆಲ್‌ಗೆ ಬರುವಾಗ ಕೆಲ ಕಿಡಿಗೇಡಿಗಳು ಚುಡಾಯಿಸುತ್ತಾರೆ. ಹಾಸ್ಟೆಲ್‌ವರೆಗೆ ಸಿಟಿ ಸಾರಿಗೆ ಬಸ್‌ ಸೌಲಭ್ಯ ಕಲ್ಪಿಸಿಕೊಟ್ಟರೆ ಅನುಕೂಲವಾಗುತ್ತದೆ.
–ಅಶ್ವಿನಿ, ಹಾಸ್ಟೆಲ್‌ ವಿದ್ಯಾರ್ಥಿನಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT