ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರಳ, ಸಜ್ಜನಿಕೆಯ ಪಟಮಕ್ಕಿ ರತ್ನಾಕರ’

ತೀರ್ಥಹಳ್ಳಿ: ಮಾಜಿ ಶಾಸಕರ ನಿಧನಕ್ಕೆ ಸಾರ್ವಜನಿಕರ ಶ್ರದ್ಧಾಂಜಲಿ
Last Updated 12 ಜನವರಿ 2017, 11:31 IST
ಅಕ್ಷರ ಗಾತ್ರ
ತೀರ್ಥಹಳ್ಳಿ: ಮೆದುಳಿನ ರಕ್ತಸ್ರಾವದಿಂದ ಬುಧವಾರ ನಿಧನರಾದ ಮಾಜಿ ಶಾಸಕ ಪಟಮಕ್ಕಿ ರತ್ನಾಕರ ಅವರ ಪಾರ್ಥಿವ ಶರೀರದ ದರ್ಶನವನ್ನು ಸಾರ್ವಜನಿಕರು ಪಡೆದರು.
 
ತಾಲ್ಲೂಕು ಪಂಚಾಯ್ತಿ ಮುಂಭಾಗ ಆವರಣದಲ್ಲಿ ರತ್ನಾಕರ ಅವರ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಈ ಸಂದರ್ಭದಲ್ಲಿ ಸಮಾಜದ ಗಣ್ಯರು ಪಟಮಕ್ಕಿ ರತ್ನಾಕರ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.
 
ಪಟಮಕ್ಕಿ ರತ್ನಾಕರ ಅವರ ಕುರಿತು ಮಾತನಾಡಿದ ಅವರ ಒಡನಾಡಿಗಳು, ‘ಸಮಕಾಲೀನ ರಾಜಕೀಯ ನಾಯಕರು, ಸಂಘ ಸಂಸ್ಥೆಯ ಮಖ್ಯಸ್ಥರು ಸರಳ, ಸಜ್ಜನ ನಡವಳಿಕೆಯ ನಾಯಕನನ್ನು ಕಳೆದುಕೊಂಡಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
 
‘ ಮಾಜಿ ಶಾಸಕ ಪಟಮಕ್ಕಿ ರತ್ನಾಕರ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಸರಳತೆಗೆ ಅವರು ಹೆಸರಾಗಿದ್ದರು. ಬಡತನದ ಅರಿವಿದ್ದ ಅವರು ತಮ್ಮ ಬದುಕು ಇತರರಿಗೆ ಮಾದರಿ ಆಗಬೇಕು ಎಂಬಂತೆ ಬದುಕಿದ್ದರು. ಯಾವುದೇ ವಾಹನ ಬಳಸದೇ ಬಸ್‌ನಲ್ಲೇ ಪ್ರಯಾಣ ಮಾಡುವ ಪಟಮಕ್ಕಿ ಅವರು ತಮ್ಮ ಜತೆ  ಯಾವಾಗಲೂ ಪುಸ್ತಕ ಇಟ್ಟುಕೊಳ್ಳುತ್ತಿದ್ದರು’ ಎಂದು ಪರಿಚಿತರು ಅವರನ್ನು ಸ್ಮರಿಸಿದರು.
 
‘ಉತ್ತಮ ವಾಗ್ಮಿಯಾಗಿದ್ದ ಪಟಮಕ್ಕಿ ಒಳ್ಳೆಯ ಚಿಂತನೆಗಳಿಗೆ ಯಾವಾಗಲೂ ಮನಸ್ಸು, ಹೃದಯವನ್ನು ತೆರೆದಿಟ್ಟುಕೊಳ್ಳುವ ಸ್ವಭಾವದವರಾಗಿದ್ದರು. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಅವರ ಚಿಂತನೆಗಳಿಂದ ಪ್ರೇರೇಪಿತರಾಗಿದ್ದ ಪಟಮಕ್ಕಿ ರತ್ನಾಕರ ಅವರು, ಸದಾ ಸಮಾಜದ ಒಳಿತಿಗೆ ತುಡಿಯುವ ಸ್ವಭಾವ ಹೊಂದಿದ್ದರು’  ಎಂದು ಶ್ರದ್ಧಾಂಜಲಿ ಸಭೆಯಲ್ಲಿ ಅವರ ಕುರಿತು ಮಾತನಾಡಿದರು.
 
 ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಸಚಿವರಾದ ಕುಮಾರ್‌ ಬಂಗಾರಪ್ಪ, ಕಾಡಾ ಅಧ್ಯಕ್ಷ ಸುಂದರೇಶ್‌, ಮಾಜಿ ಶಾಸಕರಾದ ಕಡಿದಾಳ್‌ ದಿವಾಕರ್‌, ಡಾ.ಜಿ.ಡಿ.ನಾರಾಯಣಪ್ಪ, ವಿಧಾನಪರಿಷತ್‌ ಸದಸ್ಯ ಪ್ರಸನ್ನಕುಮಾರ್‌, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಂದೇಶ್‌ ಜವಳಿ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕಲಗೋಡು ರತ್ನಾಕರ, ಕೆ.ಬಿ.ಶ್ರೀನಿವಾಸ್‌, ಕಾಂಗ್ರೆಸ್‌ ಮುಖಂಡರಾದ ಬಿ.ಎ.ರಮೇಶ್‌ ಹೆಗ್ಡೆ, ಕೆಸ್ತೂರ್‌ ಮಂಜುನಾಥ್‌, ಟಿ.ಎಲ್‌. ಸುಂದರೇಶ್‌ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT