ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕನ ಪ್ರೇಮ ಪತ್ರಕ್ಕೆ ಅಕ್ಷರ ಚೌಕಟ್ಟು

Last Updated 12 ಜನವರಿ 2017, 19:30 IST
ಅಕ್ಷರ ಗಾತ್ರ

–ಎಸ್. ವಿಜಯಾ ಗುರುರಾಜ, ಬೆಂಗಳೂರು

ನಿಶ್ಚಿತಾರ್ಥ ಮುಗಿದಿದ್ದ ಅಕ್ಕನಿಗೆ ಪತ್ರ ಬರಿ ಎಂದು ಭಾವಿ ಬಾವ ಪಿರಿಪಿರಿ ಮಾಡುತ್ತಿದ್ದರು. ಅಕ್ಕ ಮಾತ್ರ ಭಾವಿಯ ಯಾವ ಪತ್ರಕ್ಕೂ ಉತ್ತರಿಸುತ್ತಲೇ ಇರಲಿಲ್ಲ. 4ನೇ ಕ್ಲಾಸು ಮುಗಿಯುವ ಹೊತ್ತಿಗೆ ಶಾಲೆಗೆ ನಮಸ್ಕಾರ ಹಾಕಿದ್ದ ಅಕ್ಕ ‘ನಂಗೆ ಬರೆಯೊಕ್ ಬರಲ್ಲ. ನೀನು ಅಷ್ಟೆಲ್ಲ ಕಥೆ ಪುಸ್ತಕ ಓದ್ತೀಯಲ್ಲ, ಪ್ಲೀಸ್ ನೀನೆ ಬರಿ’ ಎಂದು ನನ್ನ ಮುಂದೆ ಗೋಗರೆಯುತ್ತಿದ್ದಳು. ಅವಳೆದೆ ತುಡಿತಕ್ಕೆ ನನ್ನ ಪೆನ್ನು ದನಿಯಾಗಿತ್ತು.

ರೂಮಿನಲ್ಲಿ ಬಾಗಿಲು ಬಿಗಿದು ಮೊದಲು ಅವರ ಪತ್ರ ಓದು ಎಂದಾಗ ವಯಸ್ಸಿಗೆ ಬಂದಿದ್ದ ನನಗೆ ನಾಚಿಕೆಯಾಗಿತ್ತು. ಕಾಗದವನ್ನು ಬಿಡಿಸಿದೆ. ‘ಪ್ರೀತಿಯ ಜಯ, ಹೇಗಿದ್ದೀಯ ನಿನ್ನ ಉದ್ದನೇ ಕೂದಲಲ್ಲಿ ಎರಡು ಜಡೆ ಹಾಕಿಕೊ. ಆಗ ನೀನು ಥೇಟ್ ಸಿನಿಮಾ ನಟಿ ಮಂಜುಳಾ ಥರಾನೆ ಕಾಣ್ತೀಯ. ನೀನು ಯಾವಾಗ ಸಿಗುವೆ ರಾಣಿ, ನನ್ನ ನೀಲವೇಣಿ’ ಎಂಬುದು ಬಾವನ ಪತ್ರದ ಒಕ್ಕಣೆ.

ಅಕ್ಕ ಬರೆಸಿದ ಉತ್ತರ ಹೀಗಿತ್ತು... ‘ರ್ರೀ ಹೇಗಿದ್ದೀರಾ? ನಾನು ಚೆನ್ನಾಗಿದ್ದೀನಿ. ಇನ್ನು ಮೂರು ತಿಂಗಳು ಮದುವೆಗಾಗಿ ಕಾಯಿರಿ. ಆಗ ಸಿಗುತ್ತೇನೆ.  (ಸಣ್ಣಗೆ ಕದಿರು ಕಡ್ಡಿಯಂತೆ ಸಣ್ಣಗೆ ಬೆಳ್ಳಗಿದ್ದ ಭಾವನನ್ನು)  ನೀವು ಸಿನಿಮಾದ ಹೀರೊ ಅನಂತ್ ನಾಗ್ ಥರಾನೆ ಕಾಣ್ತೀರ. ಇಂತಿ ನಿಮ್ಮ ಜಯ...’ ಅಕ್ಕ ಬರೆದ ಪತ್ರಕ್ಕೆ ಅತ್ತ ಕಡೆಯಿಂದ ಉತ್ತರವೂ ಬಂತು.

‘ಚಿನ್ನ, ನಾನಿನ್ನು ಕಾಯಲಾರೆ ನಿಮ್ಮ ಮನೆಯವರು ನನ್ನ ಜೊತೆ ಸಿನಿಮಾಕ್ಕೂ ಕಳಿಸೋಲ್ಲವಂತೆ. ನಿನ್ನ ನೆನಪಲ್ಲಿ ನನಗೆ ನಿದ್ರೆಯೇ ಬರುತ್ತಿಲ್ಲ (ಅಕ್ಕನ ಕೆನ್ನೆಯಲ್ಲಿ ಅರುಣರಾಗ. ಅವಳ ಪ್ರೇಮಪತ್ರಕ್ಕೆ ಅಕ್ಷರಗಳ ಚೌಕಟ್ಟು ಹಾಕುತ್ತಿದ್ದ ನನ್ನ  ಮೈಯಲ್ಲೂ ಬಿಸಿ ನೆತ್ತರು ನುಗ್ಗಿ ಬಂದ ಅನುಭವ).

ಅಕ್ಕನ ಪತ್ರ ‘ರೀ, ನನ್ನ ಫೋಟೊ ನೋಡಿಕೊಂಡು ಕಾಲಕಳೆಯುತ್ತಿರಿ. ಮದುವೆಯ ದಿನಗಳು ಓಡೋಡಿ ಬರುತ್ತವೆ...’ ಅಕ್ಕನ ಅನುನಯದ ಒಕ್ಕಣಿಕೆಗೆ ಮತ್ತೆಂದೂ ಭಾವನ ಮರುಪತ್ರ ಬರಲೇ ಇಲ್ಲ. ಎರಡೂ ಕಡೆಯ ಹಿರಿಯರು ಕೊಡುಕೊಳ್ಳುವುದರಲ್ಲಿ  ಜಗಳವೆದ್ದ  ಅಸಮಧಾನದಿಂದ  ಮದುವೆ ಮುರಿದುಕೊಂಡಿದ್ದರು.

ಹೃದಯದಲ್ಲಿ ಗೂಡು ಕಟ್ಟಿಕೊಂಡಿದ್ದ ಅಕ್ಕ, ಬಾವನ ಪ್ರೀತಿ ಪ್ರೇಮ ಪತ್ರದಲ್ಲೇ ಮುಗಿದು ಹೋಯಿತು. ಭಗ್ನ ಪ್ರೇಮಕ್ಕೆ ಸಾಕ್ಷಿಯಾಗಿ ನನ್ನ ಪೆನ್ನ ಶಾಯಿ ಮುಗಿದಿತ್ತು. ಅಕ್ಕ ಜತನವಾಗಿ ಇರಿಸಿಕೊಂಡಿದ್ದ ಪತ್ರಗಳು ಮತ್ತೊಂದು ಗಂಡಿನ ಜೊತೆ ಮದುವೆಯಾದಾಗ ಬೆಂಕಿಗೆ ಆಹುತಿಯಾದವು. ನೆನಪುಗಳನ್ನು ಏನು ಮಾಡಿದಳೋ ತಿಳಿಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT